ಸೋಮವಾರ, ಫೆಬ್ರವರಿ 9, 2015

ನೋಡಿ ನಿರ್ಮಲ ಜಲ ಸಮೀಪದಿ...

ಕರಾವಳಿಗೂ ಯಕ್ಷಗಾನಕ್ಕೂ ಅದೇನೋ ಅವಿನಾಭಾವ ಸಂಬಂಧ. ಮಳೆ ನಿಂತು ಹೋದರೂ ಹನಿ ನಿಲ್ಲಲಿಲ್ಲ ಎಂಬಂತೆ ಯಕ್ಷಗಾನ ದೊಡ್ಡ ಮೇಳಗಳು ರಜೆ ಘೋಷಿಸಿ ಕಲಾವಿದರು ಮನೆಯತ್ತ ಹೆಜ್ಜೆ ಹಾಕಿದರೂ ನಮ್ಮಲ್ಲಿ ಯಕ್ಷಮಾತೆಯ ಗೆಜ್ಜೆಯ ನಿನಾದ ಮಾತ್ರ ನಿಲ್ಲುವುದಿಲ್ಲ.
ಮಳೆಗಾಲದಲ್ಲಿ  ಸಾಮಾನ್ಯವಾಗಿ ದೊಡ್ಡದೊಡ್ಡ ಮೇಳಗಳಿಗೆ ರಜೆಯ ಕಾಲ. ಹಾಗಾಗಿ ದೊಡ್ಡ ಮೇಳಗಳ ಅನುಪಸ್ಥಿತಿಯಲ್ಲಿ  ಯಕ್ಷಸೇವೆಯಲ್ಲಿ ತೊಡಗುವುದೇ ಈ ಚಿಕ್ಕಮೇಳ.
ಏನಿದು ಚಿಕ್ಕಮೇಳ?
ಚಿಕ್ಕ ಮೇಳ ಎಂದರೆ ಯಕ್ಷಗಾನ ಮೇಳದ ಕಿರು ರೂಪ. ದೊಡ್ಡ ಮೇಳಗಳಲ್ಲಿ ಇರುವಷ್ಟು ಕಲಾವಿದರು ಇದರಲಿಲ್ಲ. ಇಲ್ಲಿ ಭಾಗವತರು, ಚೆಂಡೆವಾದಕರು, ಮದ್ದಳೆಯವರು , ಶೃತಿಗಾರ ಹಾಗೂ ಇಬ್ಬರು ವೇಷದಾರಿಗಳಷ್ಟೇ ಯಕ್ಷಗಾನ ನಡೆಸಿಕೊಡುತ್ತಾರೆ. ವ್ಯತ್ಯಾಸವೆಂದರೆ ಒಂದು ಪ್ರಸಂಗವನ್ನೂ ಪೂರ್ತಿಯಾಗಿ ಆಡಿತೋರಿಸುವುದು ಇಲ್ಲಿ ಸಾಧ್ಯವಿಲ್ಲ. ಚಿಕ್ಕಮೇಳಗಳು ಯಾವುದಾದರೊಂದು ಪೌರಾಣಿಕ ಪ್ರಸಂಗದ ಆಯ್ದ ಭಾಗವನ್ನಷ್ಟೇ ಇಲ್ಲಿ ನಿರೂಪಿಸುತ್ತಾರೆ.
ಈ ಚಿಕ್ಕ ಮೇಳಗಳ ಕಲಾಸೇವೆ ಏನಿದ್ದರೂ ಮುಖ್ಯವಾಗಿ ಶ್ರೀಕೃಷ್ಣ ಜನ್ಮಾಷ್ಟಮಿ, ಗಣೇಶ ಚತುರ್ಥಿ, ನವರಾತ್ರಿ ಸಂದರ್ಭದಲ್ಲಿ. ಈ ಸಮಯದಲ್ಲಿ ಕಲಾವಿದರ ಪುಟ್ಟ ತಂಡವೊಂದು ರೂಪುಗೊಳ್ಳುತ್ತದೆ. ಬಳಿಕ ತಮ್ಮ ಕಲಾ ಪ್ರಕಾರಗಳೊಂದಿಗೆ ಹೊರಟು ಒಂದಷ್ಟು ಮನೆಗಳನ್ನು ಗುರುತಿಸಿ ಹಿಂದಿನ ದಿನ ಅವರಿಂದ ಆಮಂತ್ರಣ ಪಡೆದುಕೊಳ್ಳಲಾಗುತ್ತದೆ. ಕಾರ್ಯಕ್ರಮದ ಪ್ರಯುಕ್ತ ಗಣಪತಿ ಸ್ವಸ್ತಿಕಕ್ಕೆ ಬೇಕಾಗುವ ಕೆಲವೇ ವಸ್ತುಗಳ ಪಟ್ಟಿ ಬರೆದುಕೊಟ್ಟು ಸಂಜೆ ಇಂತಹಾ ಸಮಯಕ್ಕೆ ಬರುವುದಾಗಿ ಹೇಳಿ ಅಲ್ಲಿಂದ ವಿದಾಯ ಕೋರುತ್ತದೆ. ನಂತರ ಮಾರನೇ ದಿನ ನಿಗದಿತ ಸಮಯಕ್ಕೆ ಅಲ್ಲಿ ಯಕ್ಷ ಝೆಂಕಾರ ಅನುರಣಿಸುತ್ತದೆ.
ಎಲ್ಲರಿಗೂ ಸಂಭ್ರಮ!
ಮನೆಯೊಳಗೆ ಯಕ್ಷಗಾನ ನಡೆದರೆ ಅದು ಶುಭಪ್ರದ ಎನ್ನುವುದು ನಮ್ಮಲ್ಲಿ ಹಿಂದಿನಿಂದಲೂ ಇರುವ ನಂಬಿಕೆ. ಇಂದಿಗೂ ಹಲವು ಮನೆಗಳಲ್ಲಿ ಯಕ್ಷಗಾನ ಬಯಲಾಟ ಆಡಿಸುವ ಪದ್ದತಿಯಿದೆ. ಯಕ್ಷಗಾನ ಆಡಿಸುತ್ತೇನೆ ಎಂದು ಹೊತ್ತ ಎಷ್ಟೋ ಹರಿಕೆಗಳು ಫಲನೀಡಿದ ಉದಾಹಣೆಗಳೂ ನಮ್ಮ ಮುಂದಿದೆ. ಹಾಗಾಗಿ ಅದೇ ಕಲಾಪ್ರಕಾರವಾಗಿರುವ ಈ ಚಿಕ್ಕ ಮೇಳಗಳು ಮನೆಗೆ ಆಗಮಿಸಿದಾಗ ಸಹಜವಾಗಿಯೇ ಮನೆಯ ಹಿರಿಕಿರಿಯರಾದಿ ಎಲ್ಲರೂ ಸಂಭ್ರಮ ಪಡುತ್ತಾರೆ.
ಸುಮಾರು ಅರ್ಧಗಂಟೆಗಳಷ್ಟು ಕಾಲ ಈ ಯಕ್ಷಗಾನ ಜರುಗುತ್ತದೆ. ಪ್ರದರ್ಶನದ ಬಳಿಕ ಇಷ್ಟಾನುಸಾರ ನೀಡಿದ ಕಾಣಿಕೆ ಪ‌ಡೆಯುವ ಈ ಚಿಕ್ಕಮೇಳಗಳು ಮುಂದೆ ಇನ್ನೊಂದು ಮನೆಯತ್ತ ಸಾಗುತ್ತದೆ.
ಪ್ರಸ್ತುತ ಚಿತ್ರದಲ್ಲಿರುವ ತಂಡ ಮಂದಾರ್ತಿ ಶ್ರೀ ದುರ್ಗಾ ಪರಮೇಶ್ವರಿ ಯಕ್ಷಗಾನ ಮಂಡಳಿಯ ಕಲಾವಿದರದ್ದು. ಇಲ್ಲಿ ಭಾಗವತರಾಗಿ ಅಶೋಕ ಕುಂದರ್ ಅಲ್ಲೂರು, ಮದ್ದಲೆಯಲ್ಲಿ ಮಹಾಬಲ ಬುಕ್ಕಿಗುಡ್ಡೆ, ಶ್ರುತಿಯಲ್ಲಿ ನಾಗರಾಜ ಸಿದ್ಧಾಪುರ, ಕಲಾವಿದರಾದ ಜಯರಾಮ ಶಂಕರ ನಾರಾಯಣ, ಸ್ತ್ರೀವೇಷದಲ್ಲಿ ವಿಶ್ವನಾಥ ಕಿರಾಡಿಯವರಿದ್ದಾರೆ. ಚಿಕ್ಕಮೇಳದ ಮೆನೇಜರ್ ಪ್ರಭಾಕರ್ ನಾಯಕ್ ನಂಚಾರು ಹಾಗೂ ಯಜಮಾನರು ದಿನಕರ ಕುಂದರ್ ನಡೂರು ಮಂದಾರ್ತಿ.
ಇತ್ತೀಚಿನ ದಿನಗಳಲ್ಲಿ ಬಯಲಾಟ ನೋಡುವ ವ್ಯವಧಾನ ನಮ್ಮಲ್ಲಿ ಕಡಿಮೆಯಾಗುತ್ತಿದೆ. ಅಂತದ್ದರ ನಡುವೆ ಇಂತಹಾ ಯಕ್ಷಗಾನದ ಸಾರವನ್ನು ತಿಳಿಸುವ ಚಿಕ್ಕಮೇಳಗಳು ಈ ರೀತಿಯಲ್ಲಿ ಶ್ಲಾಘನೀಯ ಕೆಲಸ ಮಾಡುತ್ತಿದೆ. ಇಂದಿನ ಪ್ರಬಲ ಮಾಧ್ಯಮವಾಗಿ ರೂಪುಗೊಂಡಿರುವ ಟೀವಿ ವಾಹಿನಿಗಳಲ್ಲಿ ಮೂಡಿ ಬರುವ ರಿಯಾಲಿಟಿ ಶೋ, ಧಾರಾವಾಹಿ ಇನ್ನೊಂದು ಮತ್ತೊಂದರ ನಡುವೆ ಕರಾವಳಿಯ ಗಂಡುಕಲೆ ಯಕ್ಷಗಾನ ಅಪಾಯದಂಚಿನಲ್ಲಿರುವುದಂತೂ ಸತ್ಯ
ಯುವಜನತೆ ಇಂತಹಾ ಪ್ರಯತ್ನಗಳಿಗೆ ಪ್ರೋತ್ಸಾಹ ನೀಡುವಂತಾಗಬೇಕು. ಈ ಲೇಖನಕ್ಕೆ ಚಿತ್ರಗಳನ್ನು ಒದಗಿಸಿದವರು ಸಚಿನ್ ಬಾರಕೂರು. ಮಾಹಿತಿ ನೀಡಿದವರು ವಿಜಯ್ ಬಾರಕೂರು.
ಅವರಿಗೆ ಕೃತಜ್ಞತೆಗಳು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ