ಸೋಮವಾರ, ಫೆಬ್ರವರಿ 9, 2015

ವ್ಯವಸ್ಥೆಯೊಂದಿಗೆ ರಾಜಿ ಎಂದರೆ...

ವ್ಯವಸ್ಥೆಯೊಂದಿಗೆ ರಾಜಿ ಮಾಡಿಕೊಂಡು ಬದುಕುವುದು ಎಂದರೆ ಬಹುಶಃ ಹೀಗೆಯೇ ಇರಬೇಕು.
ದೇಶವನ್ನೇ ಬೆಚ್ಚಿಬೀಳಿಸುವ ಬಾಂಬ್ ಸ್ಫೋಟ ಪಕ್ಕದಲ್ಲೇ ಘಟಿಸಿದ್ದರೂ, ಮಾರನೇ ದಿನ ಏನೂ ನಡೆದೇ ಇಲ್ಲವೇನೋ ಎಂಬಂತೆ ಮುಂಬೈ ಮತ್ತೆ ಸಹಜ ಸ್ಥಿತಿಗೆ ಮರಳಿದೆ.
'ಸುಮ್ಮನೆ ಸರಕಾರವನ್ನು ಒತ್ತಾಯಿಸುವುದರಲ್ಲಿ ಏನು ಪ್ರಯೋಜನವಿದೆ? ಪಾರ್ಲಿಮೆಂಟ್ ಮೇಲೆಯೇ ದಾಳಿ ನಡೆದಾಗಲೂ ಅದಕ್ಕೆ ಏನೂ ಮಾಡಲಾಗಲಿಲ್ಲ. ನಾವೇನಿದ್ದರೂ ಆಮ್ ಆದ್ಮಿ, ಆಮ್ ಆದ್ಮಿಯಾಗಿಯೇ ಉಳಿದುಬಿಟ್ಟಿದ್ದೇವೆ...' ಹೀಗೆಂದು ನಿರಾಸೆ ವ್ಯಕ್ತಪಡಿಸುತ್ತಾರೆ ಸೂರ್ಯಕುಮಾರ್ ಪುರೋಹಿತ್.
ಅವರು ಮುಂಬೈ ಮೇಲೆ ನಡೆದ ಮೂರು ಬಾಂಬ್ ದಾಳಿಗಳನ್ನು ಕಂಡಿದ್ದಾರೆ. ಅವರದು ಅಂಗಡಿ ವ್ಯಾಪಾರ.
ಮೊನ್ನೆ ತಮ್ಮ ಅಂಗಡಿಗಿಂತ ಕೇವಲ ಐವತ್ತು ಅಡಿಗಳಷ್ಟು ದೂರದಲ್ಲಿ ಒಂದು ಸ್ಫೋಟ ನಡೆದಿದೆ. ಆದರೆ ಇಂದು ಅವರು ಎಂದಿನಂತೆ ಅಂಗಡಿ ತೆರೆದು ವ್ಯಾಪಾರ ನಡೆಸುತ್ತಿರುವುದು ಕಂಡುಬರುತ್ತಿದೆ.
ಅದಕ್ಕೋ ಏನೋ ಮುಂಬೈಯನ್ನು ಮಾಯಾನಗರಿ ಎನ್ನುವುದು.
ಇಲ್ಲಿ ದಿಕ್ಕಿಲ್ಲದ ದರಬೇಶಿಗಳಿಂದ ಹಿಡಿದು, ಅಂತಸ್ತಿನ ಮೇಲೆ ಅಂತಸ್ತು ಪೇರಿಕೊಂಡು ಸುಖದ ಸುಪ್ಪತ್ತಿಗೆಯಲ್ಲಿ ಕಳೆದುಹೋದ ಆಧುನಿಕ ಕುಬೇರರನ್ನು ಒಂದೇ ಪಟ್ಟಣದಲ್ಲಿ ಕಾಣಬಹುದು. ಮುಂಬೈ ಯಾರನ್ನೂ ತಿರಸ್ಕರಿಸುವುದಿಲ್ಲ. ಬಂದಷ್ಟೂ ಮಂದಿಯನ್ನು ತನ್ನ ತೆಕ್ಕೆಗೆಳೆದುಕೊಳ್ಳುತ್ತಲೇ ಇದೆ.
ಇಲ್ಲಿ ಬದುಕು ಎಂದರೆ ಹೋರಾಟ. ನಿತ್ಯ ಹೊಡೆದಾಡಲೇಬೇಕು. ಅದು ವ್ಯವಸ್ಥೆಯೊಂದಿಗಿರಬಹುದು, ವೃತ್ತಿಯೊಂದಿಗಿರಬಹುದು, ದ್ವೇಷ ಸಾಧಿಸುವವರೊಂದಿಗಿರಬಹುದು, ಪ್ರತಿಷ್ಠೆಗೇ ಇರಬಹುದು ಅಥವಾ ಕರುಳು ಹಿಂಡುವ ಹಸಿವಿನೊಂದಿಗಿರಬಹುದು, ಹೊಡೆದಾಡುತ್ತಲೇ ಇರಬೇಕು. ಅದು ಅನಿವಾರ್ಯವೂ ಕೂಡಾ.
ಇದೆಲ್ಲದರ ನಡುವೆಯೂ ಇಲ್ಲಿನ ಅಮಾಯಕರು ನರಮೇಧದಂತಹ ಕೃತ್ಯಗಳನ್ನು ಸಹಿಸಿಕೊಳ್ಳಲೇಬೇಕು.
ಆದರೆ ಇಂದು ಮುಂಬೈಯನ್ನು ನೋಡಿ, ಅಲ್ಲಿ ಎಲ್ಲವೂ ಎಂದಿನಂತೆಯೇ ಇದೆ. ಮಕ್ಕಳು ನಿರಾತಂಕದಿಂದ ಶಾಲೆಗೆ ತೆರಳುತ್ತಿದ್ದಾರೆ. ನೌಕರಿಗೆ ತೆರಳುವವರು, ಪಾನ್ ವಾಲಾಗಳು, ಡಬ್ಬಾವಾಲಾಗಳು, ದಿನಸಿ ಅಂಗಡಿಗಳು, ಚಿತ್ರಮಂದಿರಗಳು ಎಂದಿನಂತೆ ವ್ಯವಹಾರ ಮಾಡುತ್ತಿವೆ. ಹಾಲು, ದಿನಪತ್ರಿಕೆ ಮೊದಲಾದ ಅಗತ್ಯ ವಸ್ತುಗಳೂ ಅಭಾಧಿತ. ಮುಂಬೈಗರ ಮುಖದಲ್ಲಿ ಈಗ ಭಯ ಕಾಣಿಸುತ್ತಿಲ್ಲ. ಆದರೆ ಆಕ್ರೋಶವಿದೆ, ವ್ಯವಸ್ಥೆಯ ಮೇಲೆ ಜಿಗುಪ್ಸೆಯಿದೆ. ಅದೆಲ್ಲವನ್ನೂ ಈ ದುರಂತಗಳಂತೆಯೇ ಅವರು ಮೌನವಾಗಿ ನುಂಗಿಕೊಂಡಿದ್ದಾರೆ.
ಯಾಕೆಂದರೆ ಅವರು ಮತ್ತದೇ ಆಮ್ ಆದ್ಮಿ!
ಮುಂಬೈಗರನ್ನು ಮೆಚ್ಚಬೇಕಿರುವುದೂ ಇದೇ ಕಾರಣಕ್ಕೆ. ಯಾಕೆಂದರೆ ಅವರಲ್ಲಿ ಛಲವಿದೆ. ಅದುಮಿಟ್ಟಷ್ಟು ಪುಟಿದೇಳುವ ಹಠವಿದೆ. ಅವರಿಗೆ ಗೊತ್ತು. ಅವರನ್ನು ಕಾಯುವವರು ಯಾರೂ ಇಲ್ಲ. ಅಥವಾ ಕಾಯುವವರು ಬರುತ್ತಾರೆಂದು ಕಾದು ಕುಳಿತುಕೊಳ್ಳುವುದೂ ಇಲ್ಲ.
ಈಸ ಬೇಕು, ಇದ್ದು ಜೈಸಬೇಕು. ಈ ಮಾತನ್ನೂ ಅವರು ಅರ್ಥ ಮಾಡಿಕೊಂಡಿದ್ದಾರೆ!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ