ಭಾನುವಾರ, ಫೆಬ್ರವರಿ 22, 2015

ಅವರೇಕೆ ಹಾಗೆ, ಮತ್ತೆ ಇವರೇಕೆ ಹೀಗೆ....

internet image
ಪರೀಕ್ಷೆಯಲ್ಲಿ ಕಡಿಮೆ ಅಂಕ: ವಿದ್ಯಾರ್ಥಿ ನೇಣಿಗೆ ಶರಣು...
ಮನೆಯಲ್ಲಿ ಬೈದರೆಂದು ಬಾವಿಗೆ ಹಾರಿದ ಬಾಲಕ...
ಪ್ರೇಮ ವೈಫಲ್ಯ: ಯುವ ಜೋಡಿ ಆತ್ಮಹತ್ಯೆ...
ಇದು ಇಂದು ನಾವು ದಿನನಿತ್ಯ ಸುದ್ದಿ ಪತ್ರಿಕೆಗಳಲ್ಲಿ ನೋಡುತ್ತಿರುವ ಹೆಡ್ಡಿಂಗ್‌ಗಳು.
ಹದಿಹರೆಯದ ಜೀವವೊಂದು ಆತ್ಮಹತ್ಯೆ ಮಾಡಿಕೊಳ್ಳದ ದಿನವೇ ಇಲ್ಲ ಎಂಬಷ್ಟರಮಟ್ಟಿಗೆ ಈ ಆತಂಕಕಾರಿ ಬೆಳವಣಿಗೆಗೆ ಬಂದು ನಿಂತಿದೆ.
ಯಾಕೆ ಹೀಗೆ? ಇಂದಿನ ಮಕ್ಕಳೇಕೆ ಅಷ್ಟು ದುರ್ಬಲ ಮನಸ್ಸಿನವರು?
ಮೊನ್ನೆ ಹಿರಿಯರೊಬ್ಬರು ಹೇಳುತ್ತಿದ್ದರು, ’ನಮ್ಮ ಕಾಲದಲ್ಲಿ ಹೀಗೆಲ್ಲಾ ಇರಲಿಲ್ಲ... ಆತ್ಮಹತ್ಯೆ ಅನ್ನೋದು ಮಹಾಪಾಪ ಎನ್ನುವ ಮನಸ್ಥಿತಿಯಿತ್ತು. ಅನಾರೋಗ್ಯದಲ್ಲಿ ಮೃತಪಡುತ್ತಿದ್ದರೇ ವಿನಹಾ ನಮ್ಮ ಕಾಲದ ಮಕ್ಕಳಾರೂ ಇಂತಹಾ ಕೆಲಸಕ್ಕೆ ಕೈ ಹಾಕುತ್ತಿರಲಿಲ್ಲ...’
ಹೌದು. ಹಿಂದೆ ಇಂತಹಾ ಪ್ರಕರಣಗಳು ಇಲ್ಲವೇ ಇಲ್ಲ ಎಂಬಷ್ಟರಮಟ್ಟಿಗೆ ಕಡಿಮೆ ಇದ್ದವು. ಅಂದಿನ ಕುಟುಂಬ ವ್ಯವಸ್ಥೆ ಇಂದಿಗಿಂತ ಬಲಿಷ್ಟವಾಗಿತ್ತು. ಅವಿಭಕ್ತ ಕುಟುಂಬಗಳಲ್ಲಿ ಅಜ್ಜ-ಅಜ್ಜಿಯಂತಹಾ ಹಿರಿಯರು ನಿತ್ಯ ಮಕ್ಕಳನ್ನು ಎದುರು ಕೂರಿಸಿಕೊಂಡು ನಮ್ಮ ಆಚರಣೆಗಳು, ಕಟ್ಟುಪಾಡುಗಳು, ಸಂಸ್ಕೃತಿ, ಪುರಾಣಗಳ ಪರಿಚಯ ಮಾಡಿಕೊಡುತ್ತಿದ್ದರು. ಇತಿಹಾಸ, ಪುರಾಣಗಳಲ್ಲಿ ವಿಜೃಂಭಿಸಿದ ಮಹಾನುಭಾವರ ಬದುಕಿನ ಚಿತ್ರಣ ಕಣ್ಣಿಗೆ ಕಟ್ಟಿಕೊಟ್ಟು ಉತ್ತಮ ಭವಿಷ್ಯ ರೂಪಿಸುವತ್ತ ಮಾರ್ಗದರ್ಶನ ನೀಡುತ್ತಿದ್ದರು. ಇದರ ಪರಿಣಾಮವಾಗಿ ಮಕ್ಕಳು ಸಹಜವಾಗಿಯೇ ಆತ್ಮವಿಶ್ವಾಸ ಬೆಳೆಸಿಕೊಳ್ಳುತ್ತಿದ್ದರು. ಎಲ್ಲರೂ ಒಗ್ಗಟ್ಟಿನಿಂದ, ತುಂಬು ಕುಟುಂಬದಲ್ಲಿ ಬಾಳುತ್ತಿದ್ದರಾದ್ದರಿಂದ ಧೈರ್ಯವೂ ಅವರ ಜೊತೆಗೂಡುತ್ತಿತ್ತು. ಹಿರಿಯರ ಮಾರ್ಗದರ್ಶನ, ಅಪ್ಪನ ಶಿಸ್ತು, ಅಮ್ಮನ ಮಮತೆ ಅವರನ್ನು ಇನ್ನಷ್ಟು ಬಲಿಷ್ಟರನ್ನಾಗಿಸುತ್ತಿತ್ತು.
ಆದರಿಂದು ಏನಾಗಿದೆ?
ಬೆಳಗಾಗೆದ್ದರೆ ಸ್ಕೂಲ್‌ಗೆ ಹೊರಡುವ ತರಾತುರಿ, ಸಂಜೆ ಮನೆಗೆ ಬಂದು ಬ್ಯಾಗ್ ಕಳಚಿಟ್ಟರೆ ಮತ್ತೆ ಟ್ಯೂಷನ್ನು ಅದು ಮುಗಿಸಿದರೆ ಹೋಂ ವರ್ಕು, ಬಳಿಕ ಕಂಪ್ಯೂಟರು, ಮಕ್ಕಳು ಇನ್ನಷ್ಟು ಜಾಣರಾಗಲು ಕರಾಟೆ, ಸಂಗೀತ, ನೃತ್ಯ, ಸೋರ್ಟ್ಸು, ಕೋಚಿಂಗು...
ಹಾಗಂತ ಇದು ತಪ್ಪು, ಹೀಗೆ ಮಾಡಬಾರದು ಎನ್ನಲು ಸಾಧ್ಯವಿಲ್ಲ. ಏಕೆಂದರೆ ಇಂದಿರುವುದು ಸ್ಪರ್ಧಾತ್ಮಕ ಜಗತ್ತು. ಇಲ್ಲಿ ಸ್ಪರ್ಧೆ ಇದ್ದರೆ ಮಾತ್ರ ಗೆಲುವು. ಯಾವುದೇ ಮಗುವಿನ ಹೆತ್ತವರು ತಮ್ಮ ಮಗು ಬದುಕಿನಲ್ಲಿ ಸೋಲಲಿ ಎಂದು ಬಯಸಲಾರರು. ಹಾಗಾಗಿ ಈ ಕಸರತ್ತೂ ಅನಿವಾರ್ಯವೇ...
ಇಂದು ನಮ್ಮ ಸುತ್ತ ಜರಗುವ ವಿದ್ಯಮಾನಗಳು ಕೂಡಾ ಮಕ್ಕಳ ಮನಸ್ಸು ದುರ್ಬಲಗೊಳಿಸಲು ಕಾರಣವಾಗುತ್ತಿದೆ. ಜಗತ್ತು ಓಡುತ್ತಿರುವ ವೇಗಕ್ಕೆ ಸಹಜವಾಗಿಯೇ ಕೆಲವು ಮಕ್ಕಳಿಗೆ ಹೊಂದಿಕೊಳ್ಳುವುದು ಕಷ್ಟವಾಗುತ್ತದೆ. ಅಂತವರನ್ನು ಪಕ್ಕನೆ ಗುರುತಿಸುವುದೂ ಸಾಧ್ಯವಿಲ್ಲ. ಕೇವಲ ಇಂತಹಾ ಘಟನೆಗಳಿಂದಷ್ಟೇ ಗೊತ್ತಾಗುತ್ತದೆ. ಆದರೆ ಅಷ್ಟರಲ್ಲಾಗಲೇ ಕಾಲ ಮಿಂಚಿರುತ್ತದೆ.
ಮಕ್ಕಳಿಗೆ ಮುಖ್ಯವಾಗಿ ಪ್ರೀತಿಯ ಅವಶ್ಯಕತೆಯಿರುತ್ತದೆ. ಮಾರ್ಗದರ್ಶನ ಬೇಕಿರುತ್ತದೆ. ಅದಕ್ಕಿಂತಲೂ ಮುಖ್ಯವಾಗಿ ಬಾಲ್ಯವನ್ನು ಮುಕ್ತವಾಗಿ ಅನುಭವಿಸುವ ಸ್ವಾತಂತ್ರ್ಯ ಬೇಕಿರುತ್ತದೆ.
ಮೆಟ್ಟಿಲನ್ನು ನಿಧಾನವಾಗಿ ಏರಲು ಯತ್ನಿಸುವ ಮಗುವಿಗೆ, ಇನ್ನೊಂದು ಸ್ಟೆಪ್ ಹತ್ತು ಮಗು ನಾನಿದ್ದೀನಿ ಅನ್ನೋ ತಂದೆಯ ಧೈರ್ಯದ ಮಾತು, ಜೋಪಾನ ಕಣೋ ಹುಷಾರು ಎನ್ನುವ ತಾಯಿಯ ಕಾಳಜಿ, ವೆರಿಗುಡ್... ವೆರಿಗುಡ್... ಎನ್ನುವ ತಾತನ ಪ್ರೋತ್ಸಾಹ ಹೇಗೆ ಸರಸರನೆ ತುದಿ ತಲುಪಲು ಹುಮ್ಮಸ್ಸು ನೀಡುತ್ತದೋ ಹಾಗೆಯೇ ಇಂದಿನ ಮಕ್ಕಳಿಗೆ ಎಲ್ಲಿ ಏನು ಕೊರತೆಯಾಗಿದೆ ಎಂಬ ಬಗ್ಗೆ ಪೋಷಕರು ಚಿಂತಿಸಿ, ಗುರುತಿಸಿ ಅವರಲ್ಲಿ ಧೈರ್ಯ, ಹುರುಪು ತುಂಬಿದರೆ ಖಂಡಿತವಾಗಿಯೂ ಇಂತಹಾ ಕೃತ್ಯಗಳು ಮರುಕಳಿಸದಂತೆ ತಡೆಯಬಹುದು.

ನಾವೆ ಸಾಗುತ್ತಿದೆ... ಮುಂದೆಲ್ಲೋ ಸುಂದರ ತೀರ ಸಿಕ್ಕೀತೆಂಬ ನಿರೀಕ್ಷೆಯಲ್ಲಿ!

internet image
ಆಸೆಗಳು ಅದೆಷ್ಟೋ ಇದ್ದವು...
ಹೆಗಲಿಗೆ ಸ್ಟೆತಾಸ್ಕೋಪ್ ಇಳಿಬಿಟ್ಟುಕೊಂಡು ತಿರುಗುತ್ತಿದ್ದವರನ್ನು ಕಂಡಾಗ ಡಾಕ್ಟರಾಗಬೇಕು ಅಂತನಿಸಿತ್ತು.
ಗ್ರಾಫು, ಸ್ಕೇಲು, ಪೆನ್ಸಿಲ್‌ಗಳ ನಡುವೆ ಕಳೆದುಹೋಗುವವರನ್ನು ಕಂಡಾಗ ಇಂಜಿನಿಯರ್ ಆಗಬೇಕು ಅಂತನಿಸಿತ್ತು. ಬದುಕಿಡೀ ಗೌರವ ಪಡೆದುಕೊಳ್ಳುವ ಮೇಸ್ಟ್ರರನ್ನು ಕಂಡು ನಾನೂ ಮೇಷ್ಟ್ರಾಗಬೇಕು ಅಂತನಿಸಿತ್ತು.
ಹೊಗೆ ಉಗುಳುತ್ತಾ ಸಾವಿರಾರು ಮಂದಿಯನ್ನು ಅಮ್ಮನ ಮಡಿಲಿನಂತೆ ಕೂರಿಸಿಕೊಂಡು ಕರೆದೊಯ್ಯುವ ರೈಲು ಕಂಡಾಗಲೆಲ್ಲಾ ಅದರ ಚಾಲಕನಾಗಬೇಕು ಅಂತ ಅನಿಸಿತ್ತು.
ಆದರೆ ಅದಾವುದೂ ಸಾಧ್ಯವಾಗಲೇ ಇಲ್ಲ.!
ಹಾಗಂತ ಆ ಬಗ್ಗೆ ನನ್ನನ್ನು ಯಾವ ದುಃಖವೂ ಕಾಡಿಲ್ಲ.
ಯಾಕೆಂದರೆ ನನಗೆ ಗೊತ್ತು. ಬದುಕೆನ್ನುವುದೇ ಹಾಗೆ. ನಾವೆ ಹತ್ತಿದ ಮೇಲೆ ನಮ್ಮ ಕೆಲಸ ಮುಗಿಯಿತು. ಅದ್ಯಾವ ಹೊತ್ತೋ? ಅದ್ಯಾವ ದಡವೋ? ಅದ್ಯಾವ ಸುಳಿಯೋ? ಬರೀ ಅದಕ್ಕಷ್ಟೇ ಗೊತ್ತು.
ಮೊನ್ನೆ ರೆಸ್ಟೊರೆಂಟೊಂದರಲ್ಲಿ ಕಿವಿಗೆ ಬಿದ್ದ ಮಾತಿದು.
’ಇಬ್ಬರು ಮಕ್ಕಳನ್ನು ಕಣ್ಣರೆಪ್ಪೆಯಂತೆ ಸಾಕಿದೆ. ಪ್ರೀತಿ, ಕಾಳಜಿ, ವಿದ್ಯೆ ಎಲ್ಲಾ ಕೊಟ್ಟೆ, ನನಗೀಗ ಎಪ್ಪತ್ತರ ಆಸುಪಾಸು. ಒಬ್ಬ ಮಗನೇನೋ ಉದ್ಯೋಗದಲ್ಲಿದ್ದಾನೆ. ಇನ್ನೊಬ್ಬನಿಗೆ ಉದ್ಯೋಗವೂ ಇಲ್ಲ. ಜವಾಬ್ದಾರಿಯೂ ಇಲ್ಲ. ಅವನ ಸ್ವಭಾವವೇ ವಿಚಿತ್ರ. ದುಡ್ಡನ್ನೇ ಜಗತ್ತು ಅಂತ ನಂಬಿದ್ದಾನೆ, ನಿತ್ಯ ದುಡ್ಡು... ದುಡ್ಡು... ದುಡ್ಡಷ್ಟೇ, ಅದಕ್ಕಾಗಿ ಏನು ಮಾಡಲೂ ಸಿದ್ಧ. ನಿಜಕ್ಕೂ ತುಂಬಾ ಕ್ರೂರ ಸ್ವಭಾವ ಆತನದು. ಇನ್ನೊಬ್ಬನಿಗೆ ಅವನದೇ ತಾಪತ್ರಯ. ನನಗಂತೂ ಮುಂದೆ ವೃದ್ಧರ ಆಶ್ರಮವೇ ಗತಿ ಅನಿಸುತ್ತದೆ...’
ಒಬ್ಬ ತಾಯಿ ತನ್ನ ಪಕ್ಕದಲ್ಲಿ ಕೂತಿದ್ದ ಇನ್ನೊಬ್ಬಾಕೆಯಲ್ಲಿ ದುಗುಡ ಹೇಳಿಕೊಳ್ಳುತ್ತಿದ್ದಳು. ಪಕ್ಕದಲ್ಲಿದ್ದಾಕೆ ಈ ಸಂಕಷ್ಟಕ್ಕೆ ನೂರೆಂಟು ಸಲಹೆ ನೀಡಿದರಾದರೂ ಯಾಕೋ ಆ ತಾಯಿ ಮನಸ್ಸು ಸಮಾಧಾನಗೊಂಡಂತೆ ಕಾಣಲಿಲ್ಲ.
ಮಾತು ಮುಂದುವರಿಯುತ್ತಲೇ ಇತ್ತು...
ಅಂದು ಕಚೇರಿಗೆ ವಾಪಸ್ಸಾದೆನಾದರೂ ಮನಸ್ಸಿಗೆ ಸಮಾಧಾನವಿರಲಿಲ್ಲ. ಕಿವಿಗಳಲ್ಲಿ ಆ ವೃದ್ಧೆಯ ಮಾತುಗಳೇ ಪ್ರತಿಧ್ವನಿಸುತ್ತಿತ್ತು. ಈ ಬಗ್ಗೆ ಯಾರಲ್ಲಾದರೂ ಚರ್ಚಿಸಲೇಬೇಕು ಅಂದುಕೊಂಡೆ. ಕಾಕತಾಳೀಯವೋ ಎಂಬಂತೆ ಸಂಜೆ ಪರಿಚಯದ ಮನೋವೈದ್ಯರೊಬ್ಬರು ಸಿಕ್ಕಿದರು.
ಹೌದು, ಅವರ ಮಗನಿಗಿರುವುದು ಖಾಯಿಲೆ.
Anti-Social or Psychopathic Personality Disorder ಖಾಯಿಲೆಯ ಹೆಸರು.
ಸ್ವಾರ್ಥಿಯಾಗಿರುವುದು ಇದರ ಮೊದಲ ಲಕ್ಷಣ. ತಮ್ಮ ಸುಖವನ್ನಷ್ಟೇ ಯೋಚಿಸುವ ಇವರು ಅದಕ್ಕಾಗಿ ಯಾರನ್ನು ಬಲಿಕೊಡಲೂ ಸಿದ್ಧರಾಗಿರುತ್ತಾರೆ. ತನ್ನ ಕುಟುಂಬ, ಸಂಬಂಧಗಳು, ಸಂಬಂಧಿಕರು, ಸಮಾಜ, ಅದರ ರೀತಿ ನೀತಿಗಳಿಗೆ ಇವರಲ್ಲಿ ಕವಡೆ ಕಿಮ್ಮತ್ತಿನ ಬೆಲೆಯಿಲ್ಲ. ಮೇಲ್ನೋಟಕ್ಕೆ ಸಭ್ಯ, ಸಜ್ಜನ ವ್ಯಕ್ತಿತ್ವ. ಆದರದು ಬರೀ ನಟನೆಯಷ್ಟೆ. ಸ್ನೇಹಿತರ ಗುಂಪೇ ಜೊತೆಗೆ ಇರುತ್ತಿದ್ದರೂ ಯಾರನ್ನೂ ಕ್ಷಣಕಾಲಕ್ಕೆ ನಂಬುವವರಲ್ಲ. ಟೀಕೆ, ಬೈಗುಳ, ಪೆಟ್ಟು... ಊಹೂಂ, ಇದ್ಯಾವುದಕ್ಕೂ ಜಗ್ಗುವವರಲ್ಲ. ಅದರ ಭಯವೂ ಇವರಿಗಿಲ್ಲ. ಪ್ರತಿಯೊಂದರಲ್ಲೂ ಲಾಭವನ್ನೇ ಹುಡುಕುವ ಜಾಯಮಾನ ಇವರದು. ಒಟ್ಟಿನಲ್ಲಿ ಸುಲಭಕ್ಕೆ ಬದಲಾಯಿಸಬಹುದಾದ ವ್ಯಕ್ತಿತ್ವ ಇವರದಲ್ಲ...
ಅವರು ಹೇಳುತ್ತಿದ್ದರೆ ಮನಸ್ಸು ಅದಾಗಲೇ ಲೆಕ್ಕಾಚಾರದಲ್ಲಿ ಮುಳುಗಿತು.
ಒಂದಿಷ್ಟು ಹೊತ್ತು ಮೌನದ ಬಳಿಕ ಕೇಳಿದೆ, ಇದಕ್ಕೆ ಪರಿಹಾರವೇ ಇಲ್ಲವಾ?
ಅವರೆಂದರು, ಈ ವ್ಯಕ್ತಿತ್ವ ಒಂದೆರಡು ದಿನಗಳಲ್ಲಿ ರೂಪುಗೊಳ್ಳುವಂತದ್ದಲ್ಲ. ಒಬ್ಬಾತನಿಗೆ ಈ ತೊಂದರೆ ಇದೆ ಅಂತ ಗೊತ್ತಾದರೆ ಶೀತ, ಜ್ವರದಷ್ಟು ಮಾಮೂಲಿಯಾಗಿ ವಾಸಿ ಮಾಡಲು ಇದಕ್ಕೆ ಯಾವುದೇ ಔಷಧಿಗಳಿಲ್ಲ. ತನ್ನಲ್ಲಿ ಸಮಸ್ಯೆಯಿದೆ, ತಾನು ಬದಲಾಗಬೇಕು ಎಂದು ರೋಗಿಗೆ ಅನಿಸಿದರೆ ಅದಕ್ಕೆ ಪೂರಕವಾಗಿ ಜೊತೆಗಿರುವವರ ಕಾಳಜಿ, ಪ್ರೋತ್ಸಾಹ ಸಿಕ್ಕಿದರೆ, ನಿಧಾನವಾಗಿ ನಿಯಂತ್ರಣಕ್ಕೆ ತರಬಹುದು. ಮೊದಲು ರೋಗಿಯ ವ್ಯಕ್ತಿತ್ವದಲ್ಲಿರುವ ದೋಷ ಗುರುತಿಸುವ ಕೆಲಸವಾಗಬೇಕು. ನಂತರ ಅವುಗಳದ್ದೊಂದು ಪಟ್ಟಿ ಮಾಡಬೇಕು. ಇವು ಯಾವ ಸನ್ನಿವೇಶ, ಸಂದರ್ಭಗಳಲ್ಲಿ ಅನಾವರಣಗೊಳ್ಳುತ್ತದೆ ಅನ್ನುವುದನ್ನು ಗಮನಿಸಬೇಕು. ಅದಕ್ಕೆ ಕಾರಣವಾಗುವ ಅಂಶಗಳೇನು ಎಂಬುದು ಗೊತ್ತಾಗಬೇಕು. ನಂತರ ಮನಃಶಾಸ್ತ್ರಜ್ಞರು, ಮನೋವೈದ್ಯರ ಸಲಹೆಯಂತೆ ಚಿಕಿತ್ಸೆ ನೀಡಬೇಕು. ಆದರೆ ಇಲ್ಲಿ ನೂರಕ್ಕೆ ನೂರು ಆತ ಸರಿಯಾದ ಅಂತೇನೂ ಹೇಳಲು ಬರುವುದಿಲ್ಲ...
ಹಾಗಂದ ಡಾಕ್ಟರು ನಕ್ಕು ನನ್ನ ಮುಖ ನೋಡಿದರು.! ನಾನು, ಇಲ್ಲ ಸುಮ್ನೆ ತಿಳ್ಕೊಳೋಣಾಂತ ಕೇಳಿದೆ ಎಂದು ಹೇಳಿ ಮಾತು ಬದಲಾಯಿಸಿದೆ.
ಇಂತಹಾ ಪ್ರಕರಣಗಳನ್ನು ನಾನೂ ಕಂಡಿದ್ದೇನೆ. ಒಬ್ಬನ ಖರಾಬ್ ವ್ಯಕ್ತಿತ್ವದಿಂದಾಗಿ ಒಂದು ಕುಟುಂಬದ ಅದಷ್ಟೂ ಮಂದಿ ಏನೇನೆಲ್ಲಾ ಪಡಿಪಾಟಲು ಪಡಬೇಕು ಅನ್ನುವುದರ ಅರಿವಿದೆ. ಇಲ್ಲಿ ಪ್ರಶ್ನೆ ಮೂಡುವುದೆಂದರೆ ಒಬ್ಬಾತ ಹೀಗಾಗಲು ಕಾರಣವೇನು? ಇಲ್ಲಿ ತಪ್ಪು ಯಾರದ್ದು?
ಈ ಬಗ್ಗೆ ಒಬ್ಬೊಬ್ಬರದ್ದು ಒಂದೊಂದು ವಾದವಿರಬಹುದು. ಆದರೆ ಒಬ್ಬ ಇಂತಹಾ ವ್ಯಕ್ತಿಯಿರುವ ಮನೆಯಲ್ಲಿರುತ್ತದಲ್ಲಾ ಅಶಾಂತಿ? ಅದು ಮಾತ್ರ ನಿಜಕ್ಕೂ ಘೋರ.
ಪಾಪ... ಈ ವೃದ್ಧೆಯದ್ದೂ ಅದೇ ಕಥೆಯಿರಬೇಕು. ಆಕೆಯನ್ನು ಕಂಡಾಗ ತೀರಾ ಸ್ಥಿತಿವಂತರಂತೆ ಕಾಣಿಸಲಿಲ್ಲ. ಹಾಗಾಗಿ ಸಹಜವಾಗಿಯೇ ಆ ಮನೆಯಲ್ಲಿ ಆರ್ಥಿಕ ಸಮಸ್ಯೆಗಳಿರುವುದು ನಿಚ್ಚಳ. ಆಕೆಗೊಂದಿಷ್ಟು ಆದಾಯವಿದ್ದರೆ ಸರಿ. ಇಲ್ಲವಾದರೆ? ಸಂಸಾರದ ನೊಗ ಬೀಳುವುದು ಇನ್ನೊಬ್ಬ ಮಗನ ಕುತ್ತಿಗೆಗೆ. ಆತನಾದರೋ ಉತ್ತಮ ಉದ್ಯೋಗದಲ್ಲಿದ್ದರೆ ಸರಿ. ಇಲ್ಲವಾದರೆ?
ಉತ್ತಮ ಉದ್ಯೋಗದಲ್ಲೇ ಇದ್ದಾನೆ ಅಂತಾನೇ ಅಂದುಕೊಳ್ಳೋಣ. ಉತ್ತಮ ಉದ್ಯೋಗವೆಂದರೆ ಜವಾಬ್ದಾರಿಗಳೂ ಬೆಟ್ಟದಷ್ಟಿರುತ್ತದಲ್ಲವೇ? ಇಂದು ಪ್ರತೀ ಕಂಪನಿಗಳೂ ಇನ್ನೊಂದು ಕಂಪನಿ ಜೊತೆ ಜಿದ್ದಿಗೆ ಬಿದ್ದಿರುತ್ತದಾದ್ದರಿಂದ ಸಹಜವಾಗಿಯೇ ತಮ್ಮ ಕಂಪನಿ ನಂ.೧ ಆಗಿಸುವ ಜವಾಬ್ದಾರಿ ಇರುತ್ತದೆ. ಈ ಜವಾಬ್ದಾರಿ, ಒತ್ತಡಗಳನ್ನು ಉದ್ಯೋಗಿಗಳ ಮೇಲೆ ಅನಿವಾರ್ಯವಾಗಿ ಹೇರಲಾಗುತ್ತದೆ. ದಿನಪೂರ್ತಿ ಕೆಲಸದ ಒತ್ತಡದ ನಡುವೆ ಕಳೆದ ಆತ ಒಂದಿಷ್ಟು ವಿಶ್ರಾಂತಿಗೆಂದು ಮನೆ ಸೇರಿದರೆ ಬರೀ ಹಣ.. ಹಣ... ಹಣ.. ಎಂಬ ಅಕ್ಷರಗಳು, ಜಗಳಗಳು ಕಿವಿಗೆ ಬಿದ್ದರೆ, ಮಾನಸಿಕ ಅಶಾಂತಿಗೆ ಬಿದ್ದು, ಆತ ತನ್ನ ಉದ್ಯೋಗ ಕರ್ತವ್ಯವನ್ನು ಸಮರ್ಥವಾಗಿ ನಿರ್ವಹಿಸಲು ಸಾಧ್ಯವೇ?
ಒಂದೆಡೆಯಲ್ಲಿ ರೋಗಿಯ ಈ ವಿಲಕ್ಷಣ ವರ್ತನೆಗಳಿಗೆ ಬೇಸತ್ತು ಸಂಬಂಧಿಕರು ಮೈಲಾಚೆಗೆ ನಡೆದುಬಿಟ್ಟಿರುತ್ತಾರೆ, ಮನೆಯ ಆರ್ಥಿಕ ಸ್ಥಿತಿಗತಿ ಎಕ್ಕುಟ್ಟಿ ಹೋಗಿರುತ್ತದೆ. ನೆಮ್ಮದಿಗಳೇ ಇಲ್ಲದೆ ಭವಿಷ್ಯ ಕತ್ತಲಾಗಿರುತ್ತದೆ.
ಖುದ್ದು ರೋಗಿಗೇ ತಾನು ಸರಿಯಾಗಬೇಕು ಎಂಬ ಇಚ್ಛೆ ಇಲ್ಲವಾದ್ದರಿಂದ ಚಿಕಿತ್ಸೆ ಕೊಡಿಸುವುದೂ ಸಾಧ್ಯವಿಲ್ಲ. ಪಲಾಯನವಾದ ಎಲ್ಲರ ಮನಸ್ಥಿತಿಗೆ ಒಗ್ಗುವುದಿಲ್ಲವಾದ್ದರಿಂದ ಎಲ್ಲಾ ಬಿಟ್ಟು ಹೊರಟುಬಿಡೋಣ ಎನ್ನುವುದೂ ಸಾಧ್ಯವಿಲ್ಲ. ಒಂದೆಡೆ ವೃದ್ಧ ತಾಯಿ, ಇನ್ನೊಂದೆಡೆ ವಿಕೃತ ಸ್ವಭಾವದ ಸಹೋದರ, ದೂರವಾಗಿರುವ ಬಂಧುಗಳೆಂಬ ಮಹಾಶಯರು... ಆತ ಕಂಗಾಲಾಗಲು ಇನ್ನೇನಾದರೂ ಬೇಕೇ ?
ಒಟ್ಟಿನಲ್ಲಿ ಆ ಕುಟುಂಬದ ಚಿತ್ರಣ ವೃದ್ಧೆ ಹೇಳಿದಂತೆ ನಿಜಕ್ಕೂ ಕಳವಳಕಾರಿಯೇ!
ಮತ್ತೆ ಆಲೋಚಿಸಿದೆ.
ಈ ಬದುಕು ಎಷ್ಟೊಂದು ವೈಚಿತ್ರ್ಯ ಹೊಂದಿದೆ ಎಂದು ಅಚ್ಚರಿಯಾಯಿತು. ತಪ್ಪು ಮಾಡುವವರು ಯಾರೋ, ಅದಕ್ಕೆ ಕಂದಾಯ ಕಟ್ಟುವವರು ಯಾರೋ! ಪರಿತಪಿಸುವವರು ಇನ್ಯಾರೋ. ಛೇ ಬದುಕಿಗೊಂದು ಅರ್ಥವೇ ಇಲ್ಲವಾ? ಅನಿಸಿತು. ತಕ್ಷಣವೇ ನನ್ನ ಬದುಕನ್ನೊಮ್ಮೆ ಅವಲೋಕಿಸಿದೆ....
ಇರುವುದೆಲ್ಲವ ಬಿಟ್ಟು ಇರದುದರೆಡೆಗೆ... ನನ್ನ ಆಸೆಗಳನ್ನು ನೆನೆದು ನಗು ಬಂತು. ಅಲ್ಲಿ ಅಂದುಕೊಂಡಿದ್ದು ಮಾತ್ರ ಆಗಿಲ್ಲ ಅನ್ನುವುದು ಬಿಟ್ಟರೆ ಮತ್ತೆಲ್ಲಾ ಓಕೆಯಾಗಿತ್ತು... ಜುಟ್ಟಿಗೆ ಮಲ್ಲಿಗೆ ಹೂವಿಲ್ಲದಿದ್ದರೂ, ಹೊಟ್ಟೆಗೆ ಹಿಟ್ಟಂತೂ ಖಂಡಿತಾ ಇತ್ತು.
ಅಂತೂ ಇಂತೂ ಬದುಕೆಂಬ ನಾವೆ ಮುಂದಕ್ಕೆ ಸಾಗುತ್ತಾ ಇದೆ... ಚಿಂತೆ ಇಲ್ಲದೆ ನೆಮ್ಮದಿಯಾಗಿ ಕೂತಿದ್ದೇನೆ.
ಸುಂದರ ತೀರವೊಂದು ಸಿಕ್ಕೀತು ಎಂಬ ನಿರೀಕ್ಷೆಯೊಂದಿಗೆ!

ಮತ್ತೆ ನೆನಪಾದ ಮಾಯಾವಿ!

internet image
ಅಂದು ನಮಗೆಲ್ಲಾ ಎಲ್ಲಿಲ್ಲದ ಸಂಭ್ರಮ!
ಮಾವ ಮನೆಗೆ ಭಾರೀ ಗಾತ್ರದ ಪೆಟ್ಟಿಗೆಯೊಂದನ್ನು ಏದುಸಿರುಬಿಡುತ್ತಾ ಹೊತ್ತು ತಂದಿದ್ದ.
ಅದೇನು? ನಮಗಾಗ ಬಿಲಿಯನ್ ಡಾಲರ್ ಪ್ರಶ್ನೆ. ನಮ್ಮ ಪಿಕಲಾಟದ ನಡುವೆಯೂ ಅದನ್ನು ಮೆಲ್ಲನೆ ರಟ್ಟಿನ ಬಾಕ್ಸ್ ನಿಂದ ಹೊರತೆಗೆದ ಆತ, ಎತ್ತರದ ಕಪಾಟಿನ ಮೇಲಿರಿಸಿ ಅದರ ಹಿಂಬದಿಯಿಂದ ದಾರವೊಂದನ್ನು ಮನೆಯ ಮಾಡಿನಲ್ಲಿ ಕಟ್ಟಿ ಒಳಬಂದು ಅದರಲ್ಲಿದ್ದ ಗುಂಡಿಯೊಂದನ್ನು ಅದುಮಿದ್ದ. ಮೊದಲಿಗೆ ಗರಗರ..ಗುರುಗುರು..ಅನ್ನುತ್ತಲೇ ಶುರವಾದ ಸ್ವರ ಮತ್ತೆ ಮೆಲ್ಲನೆ ಲಯ ಕಂಡುಕೊಂಡು ಚಿತ್ರಗೀತೆ ಹಾಡಲಾರಂಭಿಸಿತು. ಕೂತೂಹಲ ತಾಳಲಾರದೆ  ಕೇಳಿದಾಗ ಮಾವ ಅದನ್ನು ಪರಿಚಯ ಮಾಡಿಕೊಟ್ಟದ್ದು ಅದು ರೋಡಿಯೋ ಎಂದು!
ನನ್ನ ಸ್ಮೃತಿ ಪಟಲದಲ್ಲಿ ರೇಡಿಯೋ ಎಂಬ ವಸ್ತು ದಾಖಲುಗೊಂಡಿದ್ದು ಹಾಗೆ!
ಇದು ಸುಮಾರು ಇಪ್ಪತ್ತು ವರ್ಷಗಳ ಹಿಂದೆ, ನಮ್ಮೂರು ಇಂದಿನಂತೆ ಆಧುನಿಕತೆಗೆ ತೆರೆದುಕೊಂಡಿರಲಿಲ್ಲ. ಆಗೆಲ್ಲಾ ಮನರಂಜನೆಗೆ ರೇಡಿಯೋವೇ ಸಂಗಾತಿ. ಅಲ್ಲೊಂದು ಇಲ್ಲೊಂದು ಮನೆಗಳಲ್ಲಿ ಟೀವಿ ಇತ್ತಾದರೂ ಅದನ್ನೂ ಕಿಟಕಿಯಿಂದ ನೋಡುವುದೂ ನಮಗೆಲ್ಲ ಸಾಧ್ಯವಿರಲಿಲ್ಲ. ಆಗೇನಿದ್ದರೂ ಗಜಗಾತ್ರದ ರೇಡಿಯೋಗಷ್ಟೇ ಅಗ್ರಪೂಜೆ!
ಅಷ್ಟೇ ಅಲ್ಲ ಆಗ ಇಂದಿನಂತೆ ಆ ಎಫ್‌ಎಮ್ಮು, ಈ ಎಫ್‌ಎಮ್ಮು ಅಂತೆಲ್ಲಾ ಇದ್ದಿರಲಿಲ್ಲ. ಇದ್ದುದು ಒಂದೇ... ಅದು ಆಕಾಶವಾಣಿ. ವಿಚಿತ್ರ ಸದ್ದಿನ ನಡುವೆ ರೇಡಿಯೋದಲ್ಲಿ ಕೇಳಿಬರುತ್ತಿದ್ದ ವಾರ್ತೆ, ಚಿತ್ರಗೀತೆ, ಕೃಷಿರಂಗ... ಇಡೀ ಊರಿಗೆ ಅದ್ಭುತ ಮನರಂಜನೆ ನೀಡುವ ಸಂಗತಿಗಳಾಗಿದ್ದವು.
ಸುದ್ದಿಗಳ ಗಂಧಗಾಳಿಯೂ ಸುಳಿಯದ ನಮ್ಮೂರಿನಲ್ಲಿ ಆಗೆಲ್ಲಾ ರೋಡಿಯೋದಲ್ಲಿ ಬರುವ ವಾರ್ತೆಗಳೇ ಸಂಜೀವಿನಿ! ಅದರಲ್ಲಿ ಕೇಳುವ ಸುದ್ದಿಗಳೇ ನಂತರದ ಹೊತ್ತುಗಳಲ್ಲಿ ಗದ್ದೆ, ತೋಟ, ಹೊಟೇಲು, ಆಮ್ಲೇಟ್ ಅಂಗಡಿಗಳಲ್ಲಿ ದೊಡ್ಡ ಮಟ್ಟದ ಚರ್ಚೆಯ ವಸ್ತುಗಳಾಗುತ್ತಿದ್ದವು. ಸಂಜೆ ಕೇಳಿಬರುತ್ತಿದ್ದ ಚಿತ್ರಗೀತೆಗಳು, ಬುಧವಾರದ ಯಕ್ಷಗಾನ, ಕೃಷಿಕರಿಗೆ ಅಡಿಕೆ ಧಾರಣೆ, ಯುವಕರಿಗೆ ಯುವವಾಣಿ, ಸಂಸ್ಕೃತವಾರ್ತೆ, ಕೆಂಚನ ಕುರ್‍ಲ್ಲರಿ... ಹೀಗೆ ಸಾಕಾ, ಇನ್ನೇನಾದರೂ ಬೇಕಾ?? ಎಂದು ರೇಡಿಯೋ ನಮ್ಮನೇ ಪ್ರಶ್ನಿಸುತ್ತಿತ್ತು.
ಆಗಾಗ ಕೈಕೊಡುತ್ತಿದ್ದ ಈ ರೇಡಿಯೋವನ್ನು ರಿಪೇರಿಗಾಗಿ ಅಟೋ ರಿಕ್ಷಾದಲ್ಲಿ ಸಾಗಿಸುತ್ತಿದ್ದುದು, ರೀಪೇರಿಯವನು ಆ ಪೆಟ್ಟಿಗೆ ಬಿಚ್ಚುತ್ತಿದ್ದಾಗ ಅದರೊಳಗೇನಿದೆ ಎಂಬ ಸಹಜ ಕುತೂಹಲ, ಬರೀ ವಯರ್‌ಗಳು ಕೆಲವು ತಟ್ಟೆಗಳು, ಹೇಗೆ ಅಷ್ಟೇಲ್ಲಾ ಧ್ವನಿಹೊರಡಿಸುತ್ತವೆ ಎಂಬ ಅಚ್ಚರಿ... ಆಗ ನಮ್ಮದು.
ಹೀಗೆ ದಿನಗಳು ಉರುಳುತ್ತಲೇ ಇದ್ದವು. ಅದೊಂದು ದಿನ ನಮ್ಮ ರೇಡಿಯೋ ಇದ್ದಕ್ಕಿದ್ದಂತೆ ಕೈಕೊಟ್ಟಿತು. ಮತ್ತೆ ರಿಪೇರಿಯವನ ಆಗಮನವಾಯಿತು. ಅದನ್ನು ನಾಲ್ಕು ಜನ ಎತ್ತಿ ಮೆಲ್ಲನೆ ಅಟೋ ರಿಕ್ಷಾದೊಳಗಿಟ್ಟು ಅದೆಲ್ಲಿಗೋ ಹೊರಟು ಹೋದರು. ರಿಪೇರಿ ಆಯಿತಾ? ಇಲ್ಲವಾ? ಗೊತ್ತಾಗಲಿಲ್ಲ. ರೇಡಿಯೋ ಮಾತ್ರ ಮತ್ತೆ ಮನೆಗೆ ಬರಲೇ ಇಲ್ಲ.
ಇಂದು ರೇಡಿಯೋ ಇದ್ದ ಜಾಗದಲ್ಲಿ ಟೀವಿ ಬಂದು ಕೂತಿದೆ. ಚಿತ್ರಗೀತೆ, ವಾರ್ತೆ ಅದರಲ್ಲೂ ಬರುತ್ತಿದೆ. ಚಿತ್ರ ಸಮೇತ! ಕಣ್ಣಿಗೆ ಕಾಣದ ಈ ಮಾಯಾವಿ ಮಾತ್ರ ನನ್ನ ಮೊಬೈಲ್ ಫೋನ್‌ಗಷ್ಟೇ ಸೀಮಿತಗೊಂಡಿದೆ.
ಎಷ್ಟಾದರೂ ಬದಲಾವಣೆ ಜಗದ ನಿಯಮ ಅಲ್ಲವೇ!

ಆಕೆ ಮತ್ತೊಮ್ಮೆ ಓಡೋಡಿ ಬರುವ ಹೊತ್ತು...

internet image
ಕೈಯಲ್ಲಿ ಕಟ್ಟಿದ ರಾಖಿ ಇನ್ನೂ ಬಣ್ಣ ಕೂಡಾ ಮಾಸಿಲ್ಲ. ಆಗಲೇ ಮತ್ತೆ ರಾಖಿಹಬ್ಬ ಬಂದೇಬಿಟ್ಟಿದೆ.
ನಿನ್ನೆ ಮೊನ್ನೆಯಷ್ಟೇ ಮುದ್ದಿನ ತಂಗಿ ಓಡೋಡಿ ಬಂದು ಕೈಗೊಂದು ರಾಖಿ ಕಟ್ಟಿ ಮುಗುಳ್ನಕ್ಕ ನೆನಪು. ಈಗ ಅವಳು ಮತ್ತೆ ರಾಖಿ ಹಿಡಿದು ಬರುವ ಸರದಿ.
ದಿನಗಳು ಅದೆಷ್ಟು ಬೇಗನೇ ಉರುಳಿ ಹೋಗುತ್ತವಲ್ಲವೇ?
ರಾಖಿ ಹಬ್ಬದಂದು ಬಣ್ಣ ಬಣ್ಣದ ರಾಖಿ ಕಟ್ಟಿ ಖುಷಿಪಡುವ ಹೆಚ್ಚಿನ ಮಂದಿಗೆ ಹಬ್ಬದ ಹಿನ್ನೆಲೆ ಖಂಡಿತಾ ಗೊತ್ತಿರಲಾರದು. ನಮ್ಮ ಸಂಸ್ಕೃತಿಯಲ್ಲಿ ಸಹೋದರ-ಸಹೋದರಿ ಸಂಬಂಧಕ್ಕೆ ಪವಿತ್ರವಾದ ಸ್ಥಾನ ನೀಡಲಾಗಿದೆ. ಇದನ್ನು ಮತ್ತೆ ಮತ್ತೆ ನೆನಪಿಸುವ ಉದ್ದೇಶ ಈ ಹಬ್ಬದ್ದು. ರಾಖಿ ಕಟ್ಟಿಸಿಕೊಂಡ ಸಹೋದರನಿಗೆ ರಾಖಿ ಕಟ್ಟಿದ ಸಹೋದರಿಯನ್ನು ರಕ್ಷಿಸುವ ಹೊಣೆಯಿರುತ್ತದೆ. ಇತಿಹಾಸ ಕೆದಕಿದರೆ ರಜಪೂತರ ಕಾಲದಲ್ಲಿ ಈ ಹಬ್ಬ ಅತ್ಯಂತ ಮಹತ್ವ ಪಡೆದುಕೊಂಡಿದ್ದುದು ಕಂಡುಬರುತ್ತದೆ.
ರಾಖಿ ಹಬ್ಬದಂದು ಪುಟ್ಟ ಮಕ್ಕಳಿಂದ ಹಿಡಿದು ವೃದ್ಧರ ತನಕ ಎಲ್ಲರಿಗೂ ಸಂಭ್ರಮವೇ. ಕರಾವಳಿಯಲ್ಲಂತೂ ವಿವಿಧ ಸಂಘ, ಸಂಸ್ಥೆಗಳು ಮುತುವರ್ಜಿ ವಹಿಸಿ ಸಾಮೂಹಿಕವಾಗಿ ರಾಖಿ ಹಬ್ಬವನ್ನು ಆಚರಿಸಿಕೊಳ್ಳುತ್ತವೆ. ಪ್ರತೀ ವರ್ಷ ಆಚರಿಸಲ್ಪಡುವ ರಾಖಿ ಹಬ್ಬ ಅಥವಾ ರಕ್ಷಾ ಬಂಧನ ಸಹೋದರ ಸಹೋದರಿಯರ ಪವಿತ್ರ ಸಂಬಂಧದ ದ್ಯೋತಕ. ಈ ದಿನದಂದು ಸಹೋದರ-ಸಹೋದರಿಯರು ಎಲ್ಲೇ ಇದ್ದರೂ ಪರಸ್ಪರ ನೆನಪಿಸಿಕೊಳ್ಳುತ್ತಾರೆ.
ಅಂದಹಾಗೆ ಈ ಬಂಧನಕ್ಕೊಳಪಡಲು ಒಡಹುಟ್ಟಿದ ಸೋದರ-ಸೋದರಿಯರೇ ಆಗಬೇಕೆಂದೇನೂ ಇಲ್ಲ. ವರ್ಷಂಪ್ರತಿ ಅದೆಷ್ಟೋ ಮಂದಿಯನ್ನು ಈ ಹಬ್ಬ ಪರಸ್ಪರ ಸಹೋದರತೆಯ ಬಂಧ ಬೆಸೆದ ಉದಾಹರಣೆಗಳಿವೆ. ರಾಖಿ ಹಬ್ಬದಂದು ಸಹೋದರಿಯು ಸಹೋದರನ ಕೈಗೆ ರಾಖಿ ಕಟ್ಟಿ ತನ್ನ ಪ್ರೀತಿ ತೋರಿಸಿಕೊಳ್ಳುತ್ತಾಳೆ. ಸಹೋದರನೂ ಅಷ್ಟೇ ಆಕೆಯ ಪ್ರೀತಿಗೆ ಬದ್ಧನಾಗಿ ಸದಾ ಆಕೆಯ ಮಾನ, ಪ್ರಾಣಗಳಿಗೆ ರಕ್ಷಣೆ ಕೊಡುವ ಬದ್ಧತೆಯಿಂದ ರಾಖಿ ಕಟ್ಟಿಸಿಕೊಳ್ಳುತ್ತಾನೆ. ಆಕೆಯ ಬಾಯಿಗೆ ಸಿಹಿ ಇಟ್ಟು ಉಡುಗೊರೆಯನ್ನೂ ಕೊಡುತ್ತಾನೆ.
ಈ ಹಬ್ಬ ಸಮೀಪಿಸಿತೆಂದರೆ ಸಾಕು. ಎಲ್ಲಾ ಅಂಗಡಿಗಳಲ್ಲೂ ಬಣ್ಣಬಣ್ಣದ ವಿವಿಧ ಗಾತ್ರದ ರಾಖಿಗಳು ರಾರಾಜಿಸುತ್ತವೆ. ಒಂದು ರೂಪಾಯಿಯಿಂದ ಹಿಡಿದು ಸಾವಿರಾರು ರೂಪಾಯಿಗಳವರೆಗೂ ಈ ರಾಖಿಗಳು ದೊರೆಯುತ್ತದೆ.
ಇಂದಿನ ಮಕ್ಕಳಿಗೆ ಈ ಹಬ್ಬದ ಬಗ್ಗೆ ತಿಳಿಸಿ ಹೇಳುವವರೇ ಇಲ್ಲ ಎಂಬಂತಾಗಿದೆ. ’ರಾಖಿ’ ಎಂಬುದರ ಪಾವಿತ್ರ್ಯತೆ ಏನು, ಪ್ರಾಮುಖ್ಯತೆ ಏನು ಎಂಬುದೂ ತಿಳಿಯದೆ ಕೈ ತುಂಬಾ ರಾಖಿ ಕಟ್ಟಿಕೊಂಡು ಮೆರೆಯುವವರನ್ನೂ ನಾವು ಇಂದು ಕಾಣಬಹುದು.
ಪರಸ್ಪರ ತ್ಯಾಗ, ಸಹೋದರತೆ ದೃಷ್ಟಿಯಿಂದ ರಾಖಿ ಹಬ್ಬ ಆಚರಿಸಿಕೊಂಡರಷ್ಟೇ ಅದಕ್ಕೊಂದು ನಿಜವಾದ ಸಾರ್ಥಕತೆ ಬಂದೀತು.

ಅಡಿಕೆಯ ಕಳೆ ಕಳೆದೀತು ಕೊಳೆ ರೋಗ....

ಕರಾವಳಿ ಭಾಗದ ಅಡಿಕೆ ಕೃಷಿಕರೇ ಹಾಗೆ!
ಪ್ರತೀ ಬಾರಿ ಮಳೆಗಾಲ ಅರಂಭವಾಯಿತೆಂದರೆ ಸಾಕು, ಒಂದಷ್ಟು ಭಯ, ಆತಂಕ, ನಿರೀಕ್ಷೆಯೊಂದಿಗೇ ಅವರು ವರುಣನನ್ನು ಸ್ವಾಗತಿಸುತ್ತಾರೆ. ಅದಕ್ಕೆ ಕಾರಣವೂ ಇದೆ, ಅಡಿಕೆ ಕೃಷಿಯನ್ನು ಬೆಂಬಿಡದೆ ಕಾಡುವ ಕೊಳೆರೋಗಕ್ಕೂ ಮಳೆಗಾಲಕ್ಕೂ ಬಿಡಿಸಲಾರದ ನಂಟು. ವರ್ಷ ಪೂರ್ತಿ ಮಗುವಿನಂತೆ ಸಲಹಿದ ತಮ್ಮ ಬೆಳೆಗೆ, ಮಳೆ ಅದೆಲ್ಲಿ ಕಂಟಕ ತಂದಿಡುತ್ತದೋ ಎಂಬ ಪುಟ್ಟ ಭಯ ಅವರದ್ದು.
ಅಡಿಕೆ ಕೃಷಿಯನ್ನು ಬೆಂಬಿಡದೆ ಕಾಡುವ ಕೊಳೆರೋಗಕ್ಕೂ ಮಳೆಗಾಲಕ್ಕೂ ಬಿಡಿಸಲಾರದ ನಂಟು.
ಹೇಳಿಕೇಳಿ ದಕ್ಷಿಣ ಕನ್ನಡ ಜಿಲ್ಲೆಯ ಜೀವನಾಡಿ ಬೆಳೆ ಅಡಿಕೆ. ಇದರಲ್ಲಿ ಯಾವುದೇ ಸಂಶಯಕ್ಕೆ ಆಸ್ಪದವಿಲ್ಲ. ಈ ಭಾಗದ ಕೃಷಿಕರಿಗೆ ಆರ್ಥಿಕ ಹಾಗೂ ಸಾಮಾಜಿಕ ಸುಭ್ರದತೆ ಒದಗಿಸುವಲ್ಲಿ ಮುಖ್ಯ ಪಾತ್ರ ಈ ಅಡಿಕೆಯದ್ದೇ.
ಇಲ್ಲಿ ಸರಿಸುಮಾರು ೨೭,೬೪೫ ಹೆಕ್ಟೇರ್ ಗಳಿಗೂ ಹೆಚ್ಚಿನ ಭೂಮಿಯಲ್ಲಿ ಅಡಿಕೆ ಬೆಳೆ ಬೆಳೆಯಲಾಗುತ್ತಿದೆ. ಆರ್ಥಿಕ ಸಬಲತೆಗೆ ಯೋಗ್ಯವಾದ ಬೆಳೆ ಅಂತ ಹೇಳಬಹುದಾದರೂ ಇದೇನು ಅಷ್ಟು ಸಲೀಸಾಗಿ ಬೆಳೆಯುವ ಕೃಷಿ ಪ್ರಕಾರ ಅಲ್ಲ. ಈ ಭಾಗದಲ್ಲಿ ಅನೇಕ ವರ್ಷಗಳಿಂದ ಅಡಿಕೆ ಬೆಳೆಯುತ್ತಾ ಬರಲಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಮಾತ್ರ ಬದಲಾಗುತ್ತಿರುವ ಋತುಮಾನಕ್ಕೆ ಕಾಣಿಸಿಕೊಳ್ಳುತ್ತಿರುವ ಕೀಟ ಹಾಗೂ ರೋಗಗಳಿಂದಾಗಿ ಅಡಿಕೆ ಗುಣಮಟ್ಟ ಹಾಗೂ ಇಳುವರಿಯಲ್ಲಿ ತೀವ್ರ ಕುಸಿತ ಉಂಟಾಗುತ್ತಿರುವುದನ್ನು ಕಾಣುತ್ತಿದ್ದೇವೆ.
ಈಗಂತೂ ಮಳೆಗಾಲ. ಎಲ್ಲೆಡೆ ಅಡಿಕೆಗೆ ಕೊಳೆರೋಗದ್ದೇ ಆತಂಕ. ಮಳೆ ನೀರಿಗೆ ಸಾಮಾನ್ಯವಾದ ಈ ರೋಗ ಅಡಿಕೆ ಇಳುವರಿ ಮೇಲೆ ಮಾತ್ರ ತೀವ್ರ ದುಷ್ಪರಿಣಾಮ ಬಿರುತ್ತದೆ. ಈ ರೋಗ ತೋಟವೊಂದಕ್ಕೆ ಲಗ್ಗೆ ಇಟ್ಟಿತೆಂದರೆ ಇಳುವರಿಯಲ್ಲಿ ಶೇ.೫೦ ರಿಂದ ೯೦ ರಷ್ಟು ನಷ್ಟ ಉಂಟಾಯಿತೆಂದೇ ಅರ್ಥ.
ಕೊಳೆರೋಗದ ಲಕ್ಷಣ ಏನೆಂದರೆ...
ಮೊದಲಿಗೆ ಅಡಿಕೆ ಕಾಯಿಗಳ ಮೇಲೆ ಹಚ್ಚ ಹಸಿರು ಬಣ್ಣದ ಮಚ್ಚೆಗಳು ಕಾಣಿಸಿಕೊಳ್ಳುತ್ತದೆ. ನಂತರ ಇದೇ ಮಚ್ಚೆಗಳು ದೊಡ್ಡದಾಗಿ ಕಾಯಿಗಳ ಮೇಲ್ಬಾಗದಲ್ಲೂ ಆವರಿಸಿ ನಿಧಾನಕ್ಕೆ ಕೊಳೆಯುವಂತೆ ಮಾಡುತ್ತದೆ. ರೋಗದ ತೀವ್ರತೆ ಹೆಚ್ಚಾದಾಗ ಅಡಿಕೆ ಕಾಯಿಗಳು ದಟ್ಟ ಹಸಿರು ಬಣ್ಣಕ್ಕೆ ತಿರುಗಿ ನೋಡನೋಡುತ್ತಲೇ ಗೊಂಚಲಿನಿಂದ ಕಳಚಿ ಉದುರಿಹೋಗುತ್ತದೆ.
ಹರಡುವಿಕೆ ಹೇಗೆ?
ಕೊಳೆರೋಗ ಫೈಟಾಪ್ರತ್ ಆರಕೆ ಎಂಬ ಶಿಲೀಂದ್ರದಿಂದ ಹರಡುತ್ತದೆ. ಗಾಳಿ ಹಾಗೂ ಮಳೆ ಹನಿ ಮೂಲಕ ಆರೋಗ್ಯವಂತ ಕಾಯಿಗಳನ್ನು ಆವರಿಸಿಕೊಂಡು ನಾಲ್ಕೈದು ದಿನಗಳಲ್ಲಿ ಶಿಲೀಂದ್ರ ಹೆಚ್ಚಿ ರೋಗ ವ್ಯಾಪಿಸತೊಡಗುತ್ತದೆ. ಕಡಿಮೆ ಉಷ್ಣಾಂಶ, ಹೆಚ್ಚು ಮಳೆ ತೇವಾಂಶದಿಂದ ಕೂಡಿದ ವಾತಾವರಣ, ಒಟ್ಟಾಗಿ ಬರುವ ಮಳೆ ಬಿಸಿಲು ಈ ರೋಗ ಹರಡುವಿಕೆಗೆ ಅನುಕೂಲವಾಗಿರುತ್ತದೆ.
ಹತೋಟಿ ಹೇಗೆ?

ಕೊಳೆ ರೋಗ ತಗುಲಿದ ಕಾಯಿಗಳು, ಒಣಗಿದ ಗೊಂಚಲುಗಳನ್ನು ಮೊದಲು ತೆಗೆದು ನಾಶಪಡಿಸಬೇಕು. ಅಡಿಕೆ ಗೊನೆಗೆ ಪಾಲಿಥೀನ್ ಹೊದಿಕೆ ಕಟ್ಟುವುದರಿಂದಲೂ ರೋಗದ ಹತೋಟಿ ಸಾಧ್ಯ. ಮೂರು ಗ್ರಾಂ ತಾಮ್ರದ ಆಕ್ಸಿ ಕ್ಲೋರೈಡ್ ಪ್ರತೀ ಲೀಟರ್ ನೀರಿನಲ್ಲಿ ಅಥವಾ ಶೇಕಡಾ ಒಂದರ ಬೋರ್ಡೊ ದ್ರಾವಣವನ್ನು ಅಡಿಕೆ ಗೊನೆಗಳ ಮೇಲೆ ಸಂಪೂರ್ಣ ಒದ್ದೆಯಾಗುವಂತೆ ಸಿಂಪಡಿಸಬೇಕು. ಬಳಿಕ ೩೦ ರಿಂದ ೪೫ ದಿನಗಳ ಅಂತರದಲ್ಲಿ ಎರಡನೇ ಸಿಂಪಡಣೆ. ಒಂದು ವೇಳೆ ಮಳೆಗಾಲ ಮುಂದುವರಿದಲ್ಲಿ ಮೂರನೇ ಬಾರಿಯೂ ಸಿಂಪಡಸಬೇಕಾಗುವುದು. ರೋಗಾಣು ಮಣ್ಣಿನ ಪದರಲ್ಲೂ ಬದುಕುವುದರಿಂದ ಮಣ್ಣು ತೇವಾಂಶ ಇಲ್ಲದಂತೆ ನೋಡಿಕೊಳ್ಳಬೇಕು. ಈಗಂತೂ ಕೊಳೆರೋಗ ನಿವಾರಿಸಲು, ತೋಟಗಾರಿಕಾ ಇಲಾಖೆ ’ಹಾಟ್ ಕ್ಲಿನಿಕ್’ಗಳನ್ನು ಸ್ಥಾಪಿಸಿ, ಕೃಷಿಕರ ಸಹಾಯಕ್ಕೆ ನಿಂತಿದೆ.
ಬೋರ್ಡೋದ್ರಾವಣ...
ಬೋರ್ಡೋ ದ್ರಾವಣ ಅಪಾಯಕಾರಿಯಲ್ಲದ ಬಹಳ ಉಪಯುಕ್ತವಾದ ಶಿಲೀಂದ್ರ ನಾಶಕ. ಇದನ್ನು ವೈಜ್ಞಾನಿಕವಾಗಿ ತಯಾರಿಸಿದರೆ ಮಾತ್ರ ಸಸ್ಯ ರೋಗಗಳ ಸಮರ್ಪಕ ನಿರ್ವಹಣೆ ಸಾಧ್ಯ.
ಬೋರ್ಡೋ ದ್ರಾವಣ ತಯಾರಿಕೆಗೆ ಬೇಕಾದ ವಸ್ತುಗಳು ಮೈಲುತುತ್ತು ಒಂದು ಕೆ.ಜಿ, ಸುಣ್ಣ ಒಂದು ಕೆ.ಜಿ, ನೀರು ನೂರು ಲೀಟರ್, ೧೦ ಲೀಟರ್ ಸಾಮರ್ಥ್ಯದ ಎರಡು ಪ್ಲಾಸ್ಟಿಕ್ ಬಕೆಟ್, ೧೦೦ ಲೀಟರ್ ಸಾಮರ್ಥ್ಯದ ಒಂದು ಪ್ಲಾಸ್ಟಿಕ್ ಡ್ರಮ್.
ಒಂದು ಕೆ.ಜಿ. ಮೈಲುತುತ್ತನ್ನು ಸಂಪೂರ್ಣ ೧೦ಲೀಟರ್ ನೀರಿನಲ್ಲಿ ಕರಗಿಸಬೇಕು. ಒಂದು ಕೆ.ಜಿ ಸುಣ್ಣವನ್ನು ಮತ್ತೊಂದು ೧೦ ಲೀಟರ್ ನೀರಿನಲ್ಲಿ ಕರಗಿಸಬೇಕು. ಎರಡನ್ನು ಒಂದು ಪ್ಲಾಸ್ಟಿಕ್ ಡ್ರಮ್ ಗೆ ಸುರಿಯಬೇಕು. ಈಗ ಬೋರ್ಡೋ ದ್ರಾವಣ ಸಿದ್ಧ. ಇದು ಸರಿ ಇದೆಯೇ ಎಂದು ಪರೀಕ್ಷಿಸಲು ಶುದ್ಧವಾದ ಚಾಕು ಅಥವಾ ಬ್ಲೇಡ್‌ನ್ನು ದ್ರಾವಣದಲ್ಲಿ ಅದ್ದಿ ತೆಗೆದಲ್ಲಿ ಅದರ ಮೇಲೆ ಕಂದು ಅಥವಾ ಕೆಂಪು ಬಣ್ಣ ಕಂಡಬಂದಲ್ಲಿ ದ್ರಾವಣ ಆಮ್ಲಯುಕ್ತವಾಗಿದ್ದು, ಸಿಂಪಡಣೆಗೆಯೋಗ್ಯವಾಗಿಲ್ಲ ಎಂಬುದಾಗಿ ತಿಳಿಯಬೇಕು. ಇದನ್ನು ಸರಿಪಡಿಸಲು ಇನ್ನೂ ಸ್ವಲ್ಪ ಸುಣ್ಣ ತಿಳಿಯನ್ನು ದ್ರಾವಣಕ್ಕೆ ಸೇರಿಸಬೇಕು. ನಂತರ ಚಾಕೂ ಬ್ಲೇಡ್‌ನ್ನು ದ್ರಾವಣದಲ್ಲಿ ಅದ್ದಿದಾಗ ಅದು ಹೊಳಪಾಗಿದಲ್ಲಿ ದ್ರಾವಣ ಸಿಂಪಡಣೆಗೆ ಸೂಕ್ತ ಎಂದು ತಿಳಿಯುವುದು ಹಾಗೂ ಕೂಡಲೇ ದ್ರಾವಣವನ್ನು ಸಿಂಪಡಸಬೇಕು.
ಅಡಿಕೆ ಕೊಳೆರೋಗ ನಿಯಂತ್ರಿಸಲು ರೈತರು ಮೈಲುತುತ್ತು ಬಳಸಿದ್ದಲ್ಲಿ ತೋಟಗಾರಿಕಾ ಇಲಾಖೆಯಿಂದ ರಾಷ್ಟ್ರೀಯ ತೋಟಗಾರಿಕಾ ಮಿಷನ್, ಜಿಲ್ಲಾ ವಲಯ ಸಸ್ಯ ಸಂರಕ್ಷಣೆ ಯೋಜನೆ ಹಾಗೂ ರಾಜ್ಯ ವಲಯ ತೋಟಗಾರಿಕಾ ಬೆಳೆಗಳ ರೋಗ ಮತ್ತು ಕೀಟಗಳ ಸಮಗ್ರ ನಿಯಂತ್ರಣ ಯೋಜನೆಗಳಲ್ಲಿ ಶೇ.೫೦ರಷ್ಟು ಸಹಾಯಧನ ದೊರೆಯಲಿದೆ.
ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ಕರಾವಳಿ ಜಿಲ್ಲೆಗಳಲ್ಲಿ ಮಳೆ ಅತೀ ಹೆಚ್ಚು. ಹಾಗಾಗಿ ಅಡಿಕೆ ಬೆಳೆಗೆ ಕೊಳೆ ರೋಗ ಭೀತಿಯೂ ಹೆಚ್ಚು. ಆದರೆ ಸೂಕ್ತ ಮುನ್ನೆಚ್ಚರಿಕೆ ವಹಿಸಿಕೊಂಡಲ್ಲಿ ರೋಗಗಳನ್ನು ತಡೆಗಟ್ಟಿ ಉತ್ತಮ ಗುಣಮಟ್ಟದ ಅತಿಹೆಚ್ಚು ಇಳುವರಿ ಪಡೆಯಲು ಖಂಡಿತಾ ಸಾಧ್ಯವಿದೆ.

ಮಂಗಳವಾರ, ಫೆಬ್ರವರಿ 10, 2015

ಆನ್‌ಲೈನ್‌ನಲ್ಲಿ ಶುರು, ಆಫ್‌ಲೈನ್‌ನಲ್ಲಿ ಮುಕ್ತಾಯ!

internet photo
ದಿನಕ್ಕೊಂದು ಆಪಲ್.... ಎನ್ನುವ ಜಮಾನ ಹೆಚ್ಚೂಕಮ್ಮಿ ಕಳೆದೇ ಹೋಯ್ತು.
ಈಗೇನಿದ್ದರೂ ದಿನಕ್ಕೊಂದು ಆಪ್ (Apps) ಎಂಬ ಹೊಸ ಮಂತ್ರ!
ಹೌದು,
ಅಂಗೈಯಲ್ಲೇ ಅರಮನೆ ತೋರಿಸುವ ಸ್ಮಾರ್ಟ್‌ಫೋನ್‌ನಲ್ಲೀಗ ಈ ಆಪ್‌ (Apps) ಗಳದ್ದೇ ದರ್ಬಾರು.
ಅತ್ತಿತ್ತ ಸ್ವಲ್ಪ ಗಮನಿಸಿ ನೋಡಿ, ‘ಸ್ಮಾರ್ಟ್’ ಆಗಿ ಓಡಾಡಿಕೊಂಡಿರುವ ಇಂದಿನ ಯುವ ಪೀಳಿಗೆಯ ಲೈಫ್‌ಸ್ಟೈಲೇ ಬದಲಾಗಿದೆ. ಮಾತಿನ ಶೈಲಿಯೂ ಬದಲಾಗಿದೆ. ಗುರುತು ಪರಿಚಯ ಇಲ್ಲದವರನ್ನೂ ಅವರು ವಾಟ್ಸಪ್? ಎಂದು ಹುಬ್ಬೇರಿಸುತ್ತಾ, ಫೇಸ್‌ನಲ್ಲಿಯೇ ಬದುಕಿನ ಬುಕ್‌ನ್ನು ಕ್ಷಣಾರ್ಧದಲ್ಲಿ ಓದಿಬಿಡುತ್ತಾರೆ. ನಿಧಾನವಾಗಿ ಈ ಲೋಕದಲ್ಲಿ ಸಂಬಂಧಗಳ ವ್ಯಾಖ್ಯಾನ ಬದಲಾಗುತ್ತಿದೆ. ಕಣ್ಣಲ್ಲಿ ಇದುವರೆಗೆ ಕಂಡೇ ಇರದ ಅಪರಿಚಿತರನ್ನೂ ಜೀವಕ್ಕಿಂತ ಹೆಚ್ಚಾಗಿ ಹಚ್ಚಿಕೊಳ್ಳುತ್ತಾರೆ. ಇನ್ಯಾರಿಂದಲೋ ಮೋಸಹೋಗುತ್ತಾರೆ. ಮತ್ಯಾರಿಗೋ ನಿತ್ಯವೂ ಕೀಟಲೆ ನೀಡುತ್ತಾರೆ. ಹೊಸತೇನನ್ನೋ ಕಂಡು ಅಚ್ಚರಿಗೊಳ್ಳುತ್ತಾ, ನನ್ನ ಗೆಳೆಯರ ಬಳಗ ದೊಡ್ಡದಿದೆ ಎಂದು ಬೀಗುತ್ತಾರೆ. ಇರುವುದೆಲ್ಲವ ಬಿಟ್ಟು ಇರದುದಕ್ಕಾಗಿ ತುಡಿಯುತ್ತಾ, ಕಾರಣವೇ ಇಲ್ಲದೆ ಖುಷಿಯಾಗುತ್ತ್ತಾ, ಡಿಪ್ರೆಸ್ ಆಗುತ್ತಾ, ಸಂಬಂಧಗಳನ್ನು ಗಟ್ಟಿಗೊಳಿಸುತ್ತಿದ್ದೇವೆ ಎಂಬ ಭ್ರಮೆಯಲ್ಲಿಯೇ ದಿನಕಳೆಯುವ ಈ ಪಡ್ಡೆಗಳಿಗೆ ಇದುವೇ ಈಗಿನ ಹೊಸ ಅಡ್ಡೆ!
 ವಿ ಚಾಟ್, ಜಿ ಚಾಟ್, ಗೂಗಲ್ ಹ್ಯಾಂಗೌಟ್, ಸ್ಕೌಟ್, ಹೈಕ್, ಟೆಲಿಗ್ರಾಂ... ಇಲ್ಲಿ ಒಂದೇ ಎರಡೇ? ಹರಟುತ್ತಾ ಹರಟುತ್ತಾ ಅಪರಿಚಿತರನ್ನು ಪರಿಚಿತರಾಗಿಸುತ್ತಾ, ಪರಿಚಿತರನ್ನು ದೂರಮಾಡುತ್ತಾ ಸಾಗುವ ಈ ಆಪ್‌ಗಳ ಮೋಡಿಗೆ ಅವರೇ ಯಾಕೆ? ಎಂಥವರೂ ಮರುಳಾಗಲೇಬೇಕು.
ಹರಟೆ ಪ್ರಪಂಚ
ಆದರೆ ಅತಿಯಾದರೆ ಅಮೃತವೂ ವಿಷ ಎನ್ನುವ ಮಾತಿದೆ. ಅರಂಭದಲ್ಲಿ ತಮಾಷೆಗೆಂದು ತೆರೆದುಕೊಳ್ಳುವ ಈ ‘ಹರಟೆ ಪ್ರಪಂಚ’, ಎಚ್ಚರ ತಪ್ಪಿದರೆ ದಿನ  ವ್ಯಸನದತ್ತ ತಳ್ಳೀತು ಎಂದು ಎಚ್ಚರಿಸುತ್ತಾರೆ ಮನೋರೋಗ ತಜ್ಙರು. ಯಾವ ಕುಟುಂಬದಲ್ಲಿ ಮುಕ್ತತೆಗೆ ಅವಕಾಶವಿಲ್ಲವೋ ಅಲ್ಲಿ ಬೆಳೆದ ಮಕ್ಕಳು ಇಂಥಹಾ ಗೀಳಿಗೆ ಹೆಚ್ಚಾಗಿ ಬೀಳುತ್ತಾರೆ, ಅರಿವೇ ಇಲ್ಲದೆ ಈ ’ಸಾಂಕ್ರಾಮಿಕ ರೋಗ’ದ ಸುಳಿಗೆ ಸಿಕ್ಕುಬಿಡುತ್ತಾರೆ ಎಂಬ ವಾದ ಅವರದ್ದು. ಇದು ಸುಳ್ಳಲ್ಲ ಎಂಬುದಕ್ಕೆ ಇದೀಗ ಅಲ್ಲಲ್ಲಿ ತಲೆ ಎತ್ತುತ್ತಿರುವ ಸೋಶಿಯಲ್ ಡಿ-ಅಡಿಕ್ಷನ್ ಸೆಂಟರ್‌ಗಳು ಸಾಕ್ಷಿ ಹೇಳುತ್ತವೆ. ’ನೆಟ್’ನೊಳಕ್ಕೆ ಸಿಕ್ಕಿಹಾಕಿಕೊಂಡಿರುವವರನ್ನು ರಕ್ಷಿಸುವುದಕ್ಕಾಗಿಯೇ ಬೆಂಗಳೂರಿನ ನಿಮ್ಹಾನ್ಸ್‌ನಲ್ಲಿ ’ಸರ್ವೀಸ್ ಫಾರ್ ಹೆಲ್ದಿ ಯೂಸ್ ಆಫ್ ಟೆಕ್ನಾಲಜಿ ಸೆಂಟರ್’ ಸ್ಥಾಪನೆಯಾಗಿದೆ. ಅಸಮರ್ಪಕ ನಿದ್ದೆ, ಅಹಾರ ವೈರಾಗ್ಯ, ಕೀಲು ನೋವು, ಬೊಜ್ಜು, ರಕ್ತದೊತ್ತಡ... ಇವೆಲ್ಲ ಇಂಟರ್ನೆಟ್ ಆತಿ ಬಳಕೆದಾರರಿಗೆ ಸಿಗುವ ಉಚಿತ ಡೌನ್‌ಲೋಡ್‌ಗಳು!
‘ಅಡ್ಡೆ’ ಪರಿಣಾಮ!
ಇಂದು ಜಗತ್ತಿನಾದ್ಯಂತ ಸುಮಾರು ೧೭೬ ಮಿಲಿಯನ್ ಜನತೆ ಸೋಶಿಯಲ್ ನೆಟ್‌ವರ್ಕ್ ಚಟಕ್ಕೆ ಒಳಗಾಗಿದ್ದಾರೆ ಎನ್ನುತ್ತದೆ ಸಮೀಕ್ಷೆ. ದುರಂತವೆಂದರೆ, ಈ ಪೈಕಿ ಹತ್ತರಲ್ಲಿ ಎಂಟು ಮಂದಿಗೆ ಇದರಿಂದಾಗುವ ಆಪಾಯದ ಆರಿವೇ ಇಲ್ಲವಂತೆ. ನಮ್ಮಲ್ಲಿ ದಿನಕ್ಕೆ ಐದು ತಾಸು ಇವುಗಳಿಗೇ ಮೀಸಲಿಡುವ ಜನರೂ ಇದ್ದಾರಂತೆ. ಯಾರೂ ಆಗಬಹುದು ಈಗಲೇ ಮಾತನಾಡಬೇಕು, ಇನ್ಯಾರದ್ದೋ ಸ್ಟೇಟಸ್ ಅಪ್‌ಡೇಟ್ ಈ ಕ್ಷಣವೇ ನೋಡಬೇಕು ಎಂಬ ಆತುರ ಈ ಆಡಿಕ್ಷನ್‌ನ ಲಕ್ಷಣ. ಹಾಗಾಗಿ ಸ್ಮಾರ್ಟ್ ಫೋನ್ ಅವಲಂಬಿತರು ಪ್ರತೀ ೧೩ ನಿಮಿಷಕ್ಕೊಮ್ಮೆ ತಮ್ಮ ಫೋನ್ ಚೆಕ್ ಮಾಡುತ್ತಾರೆ ಎಂದು ಸಮೀಕ್ಷೆ ರಿಪೋರ್ಟ್ ಕೊಡುತ್ತದೆ!
ಇಂದು ಗೊತ್ತುಗುರಿಯಿಲ್ಲದೆ ಫ್ರೆಂಡ್ ರಿಕ್ವೆಸ್ಟ್ ಓಕೆ ಮಾಡುವ ಭರದಲ್ಲಿ ಪಕ್ಕದಲ್ಲಿಯೇ ಇರುವ ನಿಷ್ಕಲ್ಮಶ ಗೆಳೆತನ ಮರೆತುಹೋಗುತ್ತಿದೆ. ಫೋನ್  ಪರದೆಯಲ್ಲಿ ಹರಡಿಕೊಳ್ಳುವ ವೀಡಿಯೋ ಕ್ಲಿಪ್ಪಿಂಗ್ ಎಂಜಾಯ್ ಮಾಡುವ ಕ್ಷಣದಲ್ಲಿ ಮನೆಮಂದಿಯ ನೋವು ನೆನಪಾಗುವುದೇ ಇಲ್ಲ. ಯಾರದ್ದೋ ‘ಸಾಧನೆಗೆ’ ಲೈಕ್ ಒತ್ತುವ ಭರದಲ್ಲಿ ತಾನು ಸಾಧಿಸಬೇಕಾದ ಗುರಿ ಗುರುತಿಸುವುದೇ ಇಲ್ಲ. ಅಷ್ಟರಮಟ್ಟಿಗೆ ಮನಸ್ಸಿಗೆ ಮಂಕುಬೂದಿ ಎರಚುತ್ತಿದೆ ಈ ಆಪ್ ಲೋಕ!
ಪ್ರತೀ ಚಟುವಟಿಕೆ ದಾಖಲಾಗುತ್ತದೆ!
ಸಂಗಾತಿಯ ಅಯ್ಕೆಗೆ, ಬ್ರೇಕ್‌ಅಪ್‌ಗೆ, ಗೂಢಾಚಾರಿಕೆಗೆ.. ಹೀಗೆ ಥರಾವಳಿಯ ಆಪ್‌ಗಳು ಎಚ್ಚರ ತಪ್ಪಿದರೆ ಹೊಸ ಅನಾಹುತಗಳನ್ನು ಸೃಷ್ಟಿಸುತ್ತದೆ. ಇಲ್ಲಿ ಸೇಫ್ ಎನ್ನುವ ಪದಕ್ಕೆ ಅರ್ಥವೇ ಇಲ್ಲ. ಯಾವುದೇ ಕ್ಷಣದಲ್ಲಿ ನಿಮ್ಮ ಖಾಸಗಿ ಮಾಹಿತಿಗಳು ಸೋರಿಕೆಯಾಗಬಹುದು. ನಮ್ಮ ಚಟುವಟಿಕೆಗಳು ಯಾರಿಗೂ ತಿಳಿಯುವುದಿಲ್ಲ ಎಂದು ನೀವು ಅಂದುಕೊಂಡರೂ ಯಾವುದೋ ದೇಶದ ಯಾವುದೋ ಸರ್ವರ್‌ಗಳಲ್ಲಿ ಅದು ಕ್ಷಣ ಕ್ಷಣಕ್ಕೂ ದಾಖಲಾಗುತ್ತಿದೆ ಎಂಬುದು ನಮ್ಮ ಆರಿವಿನಲ್ಲಿರಬೇಕು. ಇನ್ನು ಎಲ್ಲಾ ಆಪ್‌ಗಳು ಅಪಾಯಕಾರಿ ಖಂಡಿತಾ ಅಲ್ಲ. ಬಹಳಷ್ಟು ಮಾಹಿತಿ ನೀಡುವ ಆಪ್‌ಗಳೂ ಇಲ್ಲಿವೆ. ಸುದ್ದಿಗಳು, ವಿಚಾರಗಳು, ವಿಕಿಪೀಡಿಯಾದಂತಹಾ ಮಾಹಿತಿಕೋಶಗಳು, ಮನೋರಂಜನೆಗೂ ಇಲ್ಲಿ ಬಹಳಷ್ಟು ಅವಕಾಶಗಳಿವೆ. ಆದರೆ ವಿವೇಚನಾ ಶಕ್ತಿ ಇಲ್ಲದಿದ್ದರೆ ನಾವೆಷ್ಟೇ ಸ್ಮಾರ್ಟ್ ಅಗಿದ್ದರೂ ಏನು ಪ್ರಯೋಜನ, ಅಲ್ಲವೇ?
ಫಿಯರ್ ಆಫ್ ಮಿಸ್ಸಿಂಗ್ ಔಟ್!
ಏಕಾಗ್ರತೆ ಕೊರತೆ, ಕುಂಠಿತವಗುವ ನೆನಪಿನ ಶಕ್ತಿ, ಖಿನ್ನತೆ, ಮಾನಸಿಕ ಒತ್ತಡ, ಕಣ್ಣು ನೋವು, ಯಾವುದೇ ನಿರ್ಧಾರ ತೆಗೆದುಕೊಳ್ಳಲಗದ ಸ್ಥಿತಿ... ಇವೆಲ್ಲವೂ ಸೋಶಿಯಲ್ ನೆಟ್‌ವರ್ಕ್ ಕೊಡುಗೆ. ಸೋಶಿಯಲ್ ನೆಟ್‌ವರ್ಕ್ ಅಪ್‌ಗಳಲ್ಲಿ ದಿನದ ಹೆಚ್ಚಿನ ಸಮಯ ಕಳೆಯದಿದ್ದರೆ ಸ್ನೇಹಿತರು ಕಳೆದುಹೋಗುತ್ತಾರೆ, ಮತ್ತೆಂದೂ ಅವರು ಸಿಗುವುದಿಲ್ಲ ಎಂಬ ಫಿಯರ್ ಆಫ್ ಮಿಸ್ಸಿಂಗ್ ಔಟ್ ಸಮಸ್ಯೆ ನಿಧಾನವಾಗಿ ಅವರಿಸಿಕೊಳ್ಳುತ್ತದೆ. ಒಂದಷ್ಟು ಹೊತ್ತು ಅದರಿಂದ ಹೊರಗಿದ್ದರೆ ಏನನ್ನೋ ಕಳೆದುಕೊಂಡ ಭಾವನೆ, ಅತ್ತ ಕಡೆಯಿಂದ ರಿಪ್ಲೈ ಬಾರದಿದ್ದರೆ ಶುರುವಾಗುವ ಹತಾಶೆ, ಖಿನ್ನತೆ. ಇದರಿಂದಾಗಿ ಬೇಳಗ್ಗೆ ಹಾಸಿಗೆಯಿಂದ ಎದ್ದಾಕ್ಷಣದಿಂದ ಶುರುವಾಗಿ ರಾತ್ರಿ ನಿದ್ದೆಗೆ ಜಾರುವರೆಗೆ ಈ ಗೀಳು ಮುಂದುವರಿಯುತ್ತದೆ ಎನ್ನುತ್ತಾರೆ ಮನೋರೋಗ ತಜ್ಙರು.
ಎಲ್ಲಾ ಮಾಯ, ಇಲ್ಲಿ...
ಅತಿಯಾದ ಸೋಶಿಯಲ್ ನೆಟ್‌ವರ್ಕ್ ವ್ಯಸನದಿಂದ ನಿಧಾನವಾಗಿ ಸ್ವಂತಿಕೆ ಮಾಯವಾಗುತ್ತದೆ. ವಿದ್ಯಾರ್ಥಿಗಳಲ್ಲಿ ಓದಿನ ಕುರಿತಾದ ಆಸಕ್ತಿ ಮಾಯವಾಗುತ್ತದೆ. ಕಚೇರಿಗಳಲ್ಲಿ ಉದ್ಯೋಗಿ ಈ ವ್ಯಸನಕ್ಕೆ ತುತ್ತಾಗಿದ್ದರೆ, ಉತ್ಪಾದನೆ ಗುಣಮಟ್ಟ ಮಾಯವಾಗುತ್ತದೆ. ಹೀಗಾಗಿಯೇ ಕೆಲವು ಕಚೇರಿಗಳ ಕಂಪ್ಯೂಟರ್‌ಗಳಲ್ಲಿ ಇಂದು ಸೋಷಿಯಲ್ ನೆಟ್‌ವರ್ಕ್‌ಗಳನ್ನೇ ’ಮಾಯ’ ಮಾಡಲಾಗಿದೆ. ಮನೆಗಳಲ್ಲಿಯೂ ಇಂತಹಾ ಮಾಧ್ಯಮಕ್ಕೆ ಹಲವರು ಕಡಿವಾಣ ಹಾಕಿದ್ದಾರೆ. ಕಂಪ್ಯೂಟರ್ ಮೌನವಾದರೇನಂತೆ, ಅಷ್ಟರಲ್ಲಾಗಲೇ ಸ್ಮಾರ್ಟ್ ಫೋನ್ ಸಣ್ಣದೊಂದು ಬೀಪ್ ಹೊರಡಿಸುತ್ತದೆ, ಸ್ಕ್ರೀನ್ ಅನ್ ಲಾಕ್‌ನತ್ತ ಬೆರಳು ಹೊರಳುತ್ತದೆ!
ಮುಖ ನೋಡಿ ಮಾತಾಡಿ!
ಮುಖ ನೋಡದೇ ಹರಟುವ ಅಪ್‌ಗಳದ್ದೇ ಒಂದು ತೂಕವದರೆ, ಇನ್ನು ಮುಖ ನೋಡುತ್ತಾ ಹರಟೆಹೊಡೆಯಲು ಕ್ವಿಕ್, ಫ್ರಿಂಗ್, ಓವೋ, ಟ್ಯಾಂಗೋ ಮೊದಲಾದವುಗಳದ್ದೇ ಒಂದು ತೂಕ. ಹಿಂದೆಲ್ಲಾ ಸಂಬಂಧಗಳಿಗೆ ಹೆಚ್ಚಿನ ಅರ್ಥವಿರುತ್ತಿತ್ತು. ನೋಟದಲ್ಲಿ ಅರಂಭವಗುವ ಪರಿಚಯ ನಿಧಾನವಾಗಿ ಪ್ರೀತಿಗೆ ತಿರುಗಿ ಹೊಸ ಬಾಂಧ್ಯವ್ಯ ಹುಟ್ಟು ಹಾಕುತ್ತಿತ್ತು.
 ಆದರೀಗ ಅಷ್ಟೆಲ್ಲಾ ಟೈಮ್ ಇಲ್ಲ. ಒಂದು ಮೆಸೇಜ್‌ನಲ್ಲಿ ಎಲ್ಲವೂ ಇತ್ಯರ್ಥವಾಗುತ್ತದೆ. ಆನ್‌ಲೈನ್‌ನಲ್ಲಿ ಶುರು, ಆಫ್‌ಲೈನ್‌ನಲ್ಲಿ ಮುಕ್ತಾಯ!
ಅದೇನೋ ಅಂತರಲ್ಲ, ಕಾಲಕ್ಕೆ ತಕ್ಕಂತೆ....

ದೇವರೇ ಒಲಿದಿದ್ದಾನೆ ಅಂತ ಆಕೆಗೇನು ಗೊತ್ತು?

ಕುಂತ್ರೂ ನಿಂತ್ರೂ ನಿಂದೇ ಧ್ಯಾನ,ಜೀವಕ್ಕಿಲ್ಲ ಸಮಾಧಾನ...
ಹಾಗಂತ ಗೊಣಗಿಕೊಂಡೇ ಮನೆ ಒಳಕ್ಕೆ ಕಾಲಿಟ್ಟರೆ, ಪೋಸ್ಟ್ ಮ್ಯಾನು ಇಟ್ಟು ಹೋಗಿದ್ದ ನಸುಗೆಂಪು ಬಣ್ಣದ ನಿನ್ನ ಪತ್ರ ಅಲ್ಲಿಂದಲೇ ಹಾಯ್ ಎಂದಿತ್ತು!
ನಿನ್ನ ಪತ್ರಗಳೇ ಹಾಗೆ! ಮನಸ್ಸಲ್ಲಿ ದುಗುಡ ತುಂಬಿಕೊಂಡಾಗ ಅದೆಲ್ಲಿಂದಲೋ ಥಟ್ ಅಂತ ಪ್ರತ್ಯಕ್ಷವಾಗಿಬಿಡುತ್ತವೆ. ಮುಳುಗುವವನಿಗೆ ಹುಲ್ಲು ಕಡ್ಡಿ ಸಿಕ್ಕಂತೆ. ಇಂದೂ ಕೂಡಾ ಹಾಗೆಯೇ ಬೆಳಬೆಳಗ್ಗೆ ಅದೇಕೋ ಸಿಟ್ಟು...
ಸಿಡಿಮಿಡಿಗೊಳ್ಳುತ್ತಲೇ, ಅಡುಗೆ ಮನೆ ತಲುಪಿದವಳಿಗೆ ಯಾಕೋ ಅಮ್ಮ ಕಾಣಲೇ ಇಲ್ಲ, ಯಾವಾಗಲೂ ಏಳು ಮಗಳೇ... ಅಂತ ರಾಗವೆಳೆಯುತ್ತಾ ಕೈಗೆ ಟೀ ಕಪ್ ಇಟ್ಟು ಎದ್ದು ಕೂರಿಸುತ್ತಿದ್ದ ಅಮ್ಮ ಇಂದು ಮಾತ್ರ ಗಂಟೆ ಎಂಟಾದರೂ ಗಾಯಬ್! ಸಿಟ್ಟು ಮತ್ತೆ ನೆತ್ತಿಗೇರಿತ್ತು. ಇದ್ದ ಬಿದ್ದ ಡಬ್ಬಿಗಳನ್ನೆಲ್ಲಾ ಓಪನ್ ಮಾಡ್ತಾ ನಂದೇ ಸ್ಟೈಲ್ ನಲ್ಲಿ ಟೀ ರೆಡಿ ಮಾಡಿದೆ. ಬಾಯಿಗಿಟ್ಟಾಗಲೇ ಗೊತ್ತಾಗಿದ್ದು, ಸಕ್ಕರೆ ಬದಲು ಹಾಕಿದ್ದು ಉಪ್ಪು ಅಂತ!
ಅಮ್ಮಾ  ಹೇಳ್ತಾನೇ ಇಱ್ತಾಳೆ ಗೊತ್ತಾ? ಅಡುಗೆ ಕಲೀ ಮಗಳೇ ಅಡುಗೆ ಕಲಿ, ಇಲ್ಲಾಂದ್ರೆ ಮದುವೆ ಆದ ಮೇಲೆ ಸಮಸ್ಯೆಯಾಗುತ್ತೇಂತ. ಅಷ್ಟರಲ್ಲಾಗಲೇ ಬರ್ಮುಡಾ ಮೇಲೊಂದು ಬನಿಯಾನು, ಹೆಗಲಿಗೊಂದು ಬೈರಾಸು ಹಾಕ್ಕೊಂಡು ಉಸ್ಸಾಪ್ಪಾ ಅಂತ ನೀನು ಸಾಂಬಾರ್ ಗೆ ಒಗ್ಗರಣೆಗೆ ಕೊಡೋ ದೃಶ್ಯ ಕಣ್ಣಮುಂದೆ ಸರಿದು ಹೋಗುತ್ತೆ. ಇಲ್ಲ ಅಂತದ್ದೇನು ಸಮಸ್ಯೆ ಬರಲ್ಲ ಬಿಡಮ್ಮ ಅಂತ ಕಣ್ಣು ಮಿಟುಕಿಸಿ ಹೇಳಿಬಿಡುತ್ತೇನೆ.
ಅಮ್ಮನದ್ದೊಂದು ವಿಷಾದದ ನೋಟ!
ಆದರೆ ಇಂದು ಹೇಳೋಕೆ ಅಮ್ಮಾ ಇರಲಿಲ್ಲ. ಪಕ್ಕದ ದೇವಸ್ಥಾನದಲ್ಲಿ ಪೂಜೆ ಅಂತ ಗೊತ್ತಾದರೆ ಸಾಕು ಹೊತ್ತು ನೋಡದೆ ಹೊರಟು ಬಿಡುತ್ತಾಳೆ. ಇಂದು ಕೂಡಾ ಪಕ್ಕದ ಮನೆ ಶಾಂತಮ್ಮ ಬನ್ರೀ ಹೋಗೋಣ ಅಂತ ಹೇಳಿದ್ರಂತೆ, ಮಗಳನ್ನು ಎಬ್ಬಿಸೋಕೂ ಮರ್‍ತು ಹೋಗಿಬಿಟ್ಟಿದ್ದಾಳೆ. ಪ್ರತಿ ಸಾರಿನೂ ಅಮ್ಮ ವಾಪಸ್ಸಾದಾಗ ನಾನು ಕೇಳ್ತೀನಿ ಏನು ಕೇಳಿಕ್ಕೊಂಡೆ ದೇವ್ರಲ್ಲಿ ಅಂತ. ನನ್ನ ಮುದ್ದು ಕೂಸಿಗೆ ಚಿನ್ನದಂತಾ ಗಂಡನನ್ನ ಕೊಡಪ್ಪಾ ಅಂತ ಕೇಳಿದೆ ಅಂತಾಳೆ ನನ್ನಮ್ಮ! ಆದರೆ ನಾನು ದೇವರನ್ನೇ ಪ್ರೀತಿಸ್ತಿದ್ದೀನಿ ಮತ್ತು ಆ ದೇವರು ನನಗೆ ಒಲಿದುಬಿಟ್ಟಿದ್ದಾನೆ ಅನ್ನೋದು ಪಾಪ ಆಕೆಗೇನು ಗೊತ್ತು?
’ಯಾರು ಬಂದಿರದ ಮನಸಲಿ
ನಿನ್ನ ಆಗಮನ ಈ ದಿನಾ
ನೀಡುವಾ ಮುನ್ನ ನಾನೆ
ಆಮಂತ್ರಣ....
’ಹೌದು ಕಣೋ ಯಾಕೋ ಪತ್ರ ಬಿಚ್ಚುತ್ತಿದ್ದಂತೆಯೇ ಈ ಹಾಡು ನೆನಪಾಯ್ತು. ಈ ಮುದ್ದು ಹುಡುಗಿಯ ಮುಗ್ದ ಹೃದಯದಲ್ಲಿ ನಿನ್ನಂತ ಗುಣವಂತ ಬಂದಾನೆಂಬ ನಿರೀಕ್ಷೆಯಾದರೂ ಇತ್ತಾ? ಪ್ರಾಯಕ್ಕೆ ಬಂದ ಪ್ರತಿ ಹುಡುಗಿ ತನ್ನ ಜೀವನದ ಬಗ್ಗೆ ನೂರೆಂಟು ಕನಸು ಕಾಣ್ತಾಳಂತೆ. ಆದರೆ ನನ್ನಲ್ಲಿ ಕನಸು ಕಾಣಲೂ ಬಿಡದೆ ಅದಕ್ಕೂ ಮುನ್ನವೇ ನೀನು ಬಂದೇ ಬಿಟ್ಟೆಯಲ್ಲೋ !
ಇಳಿ ಸಂಜೆವರೆಗೂ ಬಂಡೇ ಮೇಲೆ ಕೂತು ಎರಡೂ ಕಾಲನ್ನು ನೀರಿಗದ್ದಿ ನಿನ್ನ ಪತ್ರ ಓದುತ್ತಲೇ ಇದ್ದೆ. ನನ್ನ ಮೇಲೆ ಅದೆಂತಾ ಪರಿಣಾಮ ಬೀರುತ್ತೆ ಗೊತ್ತಾ ನಿನ್ನ ಪತ್ರ? ಮುಂಜಾನೆ ಎದ್ದಾಗಿನಿಂದಿದ್ದ ಸಿಡಿಮಿಡಿ ಪತ್ರ ಓದುತ್ತಿದ್ದಂತೆಯೇ ಮಂಗಮಾಯವಾಗಿಬಿಟ್ಟಿತ್ತು. ನನ್ನ ಹುಡುಗನಿಗೆ ಇಂದೇ ಉತ್ತರ ಬರೀಬೇಕು ಅಂತ ಓಡೋಡುತ್ತಲೇ ಮನೆಗೆ ವಾಪಾಸ್ಸು ಬಂದೆ.
ನಮ್ಮ ಹುಡುಗೀನ ನೋಡಿದ್ಯಾ? ಆ ಒಂದು ಲೆಟಱ್ರು ಕೈಗೆ ಸಿಕ್ಕರೆ ಸಾಕು ಮುಖ ಹುಣ್ಣಿಮೆ ಚಂದ್ರನಂತೆ ಅರಳಿ ಬಿಡುತ್ತದೆ. ಮೋಸ್ಟ್ಲಿ ಯಾರೋ ಹುಡುಗಂದಿರಬೇಕು. ಒಬ್ಳೇ ಇದ್ದಾಗ ಸ್ವಲ್ಪ ವಿಚಾರ್‍ಸು. ಇಬ್ರಿಗೂ ಒಪ್ಪಿಗೆ ಇದೆ ಅಂತಾದ್ರೆ ಮದುವೆ ಮಾಡೇ ಬಿಡೋಣ.... ಅಂತ ಅಪ್ಪ ಅಮ್ಮನಲ್ಲಿ ಹೇಳ್ತಿದ್ದುದು ಕಿವಿಗೆ ಬಿತ್ತು!
ಮನಸ್ಸು ಗರಿಬಿಚ್ಚಿದ ನವಿಲು! ನಾನಂತೂ ಓಕೆ ಅಂತೀನಿ. ನೀನು ಮಾತ್ರ ಇನ್ನೂ ಸ್ವಲ್ಪ ಸಾಂಬಾರು, ಪಲ್ಯ, ಪಾಯಸ... ಅಂತ ಎಲ್ಲಾ ಕಲಿತ್ಕೊಂಡು ಓಕೆ ಅನ್ನು.
ಏನಂತೀಯ?

ಅಡ್ಡಿಲ್ಲೆ ಅಡ್ಡಿಲ್ಲೆ... ಊರಲ್ಲಿ ಅಡ್ಡಾಡಿ ಬಂದ ಹೊತ್ತು...

ಒಂದೆಡೆ ಅಬ್ಬರಿಸುವ ಅರಬ್ಬೀ ಕಡಲು, ಇನ್ನೊಂದೆಡೆ ಹಸಿರು ಹಾಸಿ ಮಲಗಿದ ಸಹ್ಯಾದ್ರಿ ಪರ್ವತ ಶ್ರೇಣಿ,
ನಡುವಲ್ಲಿ ನಿತ್ಯ ಹರಿಧ್ವರ್ಣದ ಕಾಡುಗಳು...
ಕರ್ರಗಿನ ರಸ್ತೆಯಲ್ಲಿ ಮೋಟಾರು ಬೈಕು ಚಲಾಯಿಸುತ್ತಿದ್ದ ಗೆಳೆಯ ಹೇಳಿದ್ದ ’ಹೆಚ್ಚೆಂದರೆ ಇನ್ನೊಂದು ಹತ್ತು ವರ್ಷ. ಪ್ರಕೃತಿಯ ಈ ರುದ್ರ ರಮಣೀಯ ದೃಶ್ಯಗಳು, ಮಡಿಲಲ್ಲಿ ಅಡಗಿಸಿಟ್ಟ ಅದೆಷ್ಟೋ ರಹಸ್ಯಗಳು, ಸೂಕ್ಷ್ಮ ಜೀವ ವೈವಿಧ್ಯಗಳು ಅದೆಲ್ಲೋ ದೂರದೂರಲ್ಲಿ ಕೂತು ಸ್ಯಾಟಲೈಟ್ ಮ್ಯಾಪ್ ನೋಡಿ ಭೂಮಿ ಖರೀದಿಸುವ ಆಧುನಿಕ ಕುಬೇರರ ಪಾಲಾಗಲಿದೆ.... ನೋಡ ನೋಡುತ್ತಲೇ ನಾಶವಾಗಿ ಹೋಗಲಿದೆ....
ಅಂದು ನಾವಿದ್ದದ್ದು ಉತ್ತರ ಕನ್ನಡ ಜಿಲ್ಲೆಯ ಒಂದು ತಾಲೂಕು ಕೇಂದ್ರ ಕುಮಟಾ ಎಂಬಲ್ಲಿ.
ಹೆಚ್ಚೇನು ದೊಡ್ಡದಲ್ಲವಾದರೂ ಹೆಚ್ಚೂಕಮ್ಮಿ ಸುಮಾರು ೧೯ ಸಾವಿರ ಚದರ ಕಿಲೋ ಮೀಟರ್ ವಿಸ್ತೀರ್ಣ ಹೊಂದಿದೆ ಈ ತಾಲೂಕು. ಸಮುದ್ರ ಮಟ್ಟದಿಂದ ಕೇವಲ ಎರಡು ಮೀಟರ್ ಎತ್ತರ. ಪ್ರಕೃತಿ ಸೊಬಗಿಗೆ ಹೆಸರು ವಾಸಿ. ಇಲ್ಲಿ ಜನಸಂಖ್ಯೆ ಹೆಚ್ಚೆಂದರೆ ೨೯ ಸಾವಿರಗಳಷ್ಟು. ಹೊನ್ನಾವರದಿಂದ ಸುಮಾರು ೨೦ ಕಿ.ಮೀ.ನಷ್ಟು ದೂರದಲ್ಲಿರುವ ಕುಮಟಾ, ವನ್ನಲ್ಲಿ, ಕಾಗಲ, ಧಾರೇಶ್ವರ ಬೀಚ್  ಮೂಲಕ ಪ್ರಕೃತಿ ಪ್ರಿಯರನ್ನು ಆಕರ್ಷಿಸಿದರೆ, ಶಾಂತೇರಿ ಕಾಮಾಕ್ಷಿ ದೇವಾಲಯ, ಮಹಾಲಸ, ಹೆಗಡೆ, ಬಾಡಾದ ಅಮ್ಮನವರ ದೇವಾಲಯದ ಮೂಲಕ ಆಸ್ತಿಕರನ್ನು ತನ್ನತ್ತ ಸೆಳೆಯುತ್ತದೆ.
ಉತ್ತರ ಕನ್ನಡ ಜಿಲ್ಲೆ ಪ್ರಕೃತಿ ಸೌಂದರ್ಯಕ್ಕೆ ಹೆಸರು ವಾಸಿ.
ಸುಮಾರು ಮೂರು ಸಾವಿರ ವರ್ಷಗಳ ಇತಿಹಾಸವಿರುವ ಈ ಜಿಲ್ಲೆಯ ಭೂಭಾಗವನ್ನು ಕದಂಬ, ಬಾದಾಮಿಚಾಲುಕ್ಯ, ರಾಷ್ಟ್ರಕೂಟರು, ವಿಜಯನಗರದ ಅರಸರು, ಬಿಜಾಪುರ ಸುಲ್ತಾನರು, ಮರಾಠರು, ಮೊಘಲರು, ಪೋರ್ಚುಗೀಸರು ಆಳಿ ಹೋಗಿದ್ದಾರೆ. ಜಲಪಾತಗಳೇ ಹೆಚ್ಚಾಗಿರುವುದರಿಂದಲೋ ಏನೋ ಜಲಪಾತಗಳ ಜಿಲ್ಲೆ ಎಂದೂ ಇದಕ್ಕೆ ಹೆಸರಿದೆ. ಪಶ್ಚಿಮ ಘಟ್ಟ, ಅಣಶಿ ರಾಷ್ಚ್ರೀಯ ಉದ್ಯಾನವನ, ವನ್ಯಜೀವಿ ಪಾರ್ಕ್‌ಗಳು. ಕಡಲ ತೀರಗಳು, ದಾಂಡೇಲಿ ಅಭಯಾರಣ್ಯ ಪ್ರಾಚೀನ ದೇವಾಲಗಳು, ಕದಂಬರ ಬನವಾಸಿ, ಸೋಂದಾ, ಬೀಳಗಿ, ಮಿರ್ಜಾನ ಕೊಟೆ, ಗೋಕರ್ಣದ ಓಂ ಬೀಚ್, ಕುಡ್ಲೆ ಬೀಚ್, ಯಾಣ, ವಿಶ್ವದಲ್ಲೇ ಅತೀ ಎತ್ತರದ ಧ್ಯಾನಾಸಕ್ತ ಶಿವನ ಮೂರ್ತಿ... ಹೀಗೇ ಪಟ್ಟಿ ಮಾಡುತ್ತಾ ಹೋದರೆ ಹಾಳೆಗಳೇ ಸಾಲವು. ಬಳುಕುವ ಉಂಚಳ್ಳಿ ಜಲಪಾತ, ಸೊಬಗಿನ ಸಾತೊಡ್ಡಿ ಜಲಪಾತ, ಬೆಣ್ಣೆ ಹೊಳೆ ಜಲಪಾತ, ಅಣಶಿ ಜಲಪಾತ, ಲಾಲಗುಳಿ ಜಲಪಾತ, ಮಾಗೋಡು ಜಲಪಾತ, ಭಯ ಹುಟ್ಟಿಸುವ ಬುರುಡೆ ಜಲಪಾತ... ಹೀಗೆ ಇವುಗಳೂ ಬಹುಶಃ ಪಟ್ಟಿಗೆ ನಿಲುಕವು. ಮಳೆಗಾಲ ಬಂತೆಂದರೆ ಸಾಕು ಮೈದುಂಬಿಕೊಳ್ಳುವ ಇವುಗಳು ಒಳ್ಳೆಯ ಟ್ರೆಕ್ಕಿಂಗ್ ತಾಣಗಳೂ ಹೌದು. ಇಲ್ಲಿನ ಕಡಲ ಕಿನಾರೆಗಳೂ ಒಂದಕ್ಕಿಂತ ಒಂದು ಸುಂದರ.
ಇದರ ಪೈಕಿ ಒಂದಾದ ಕಾಗಲ ಬೀಚ್ ಗೆ ನಮ್ಮ ಭೇಟಿ ಅನಿರೀಕ್ಷಿತವಾಗಿಯೇ ಆಯಿತು. ಇಲ್ಲಿನ ಜೀವನದಿ ಅಘನಾಶಿನಿ ಅರಬ್ಬಿ ಕಡಲ ತೆಕ್ಕೆ ಸೇರುವ ಸ್ಥಳವಿದು. ಜಗತ್ತಿನ ಯಾವ ಮೂಲೆಯಲ್ಲಿಯೂ ಸಿಗದಂತಹಾ ಜೀವ ವೈವಿಧ್ಯ ಅಘನಾಶಿನಿ ನದಿ ತಟಗಳಲ್ಲಿ ಕಾಣಸಿಗುತ್ತವೆ. ಸಹಸ್ರಾರು ಕುಟುಂಬಗಳಿಗೆ ಜೀವನಾಧಾರವಾಗಿ, ಅಮ್ಮನಾಗಿರುವ ಈಕೆ ಜನರೊಂದಿಗೆ ಭವನಾತ್ಮಕ ಸಂಬಂಧವನ್ನು ಹೊಂದಿದ್ದಾಳೆ.
ಆದರೆ ಇತ್ತೀಚಿನ ಕೆಲವು ವರ್ಷಗಳಲ್ಲಿ ಆತಂಕವೆಂಬುದು ಸದ್ದಿಲ್ಲದೆ ಬಂದು ಇಲ್ಲಿನ ಅಮಾಯಕ, ಮುಗ್ಧ ಜನರ ಎದೆತಟ್ಟುತ್ತಿದೆ. ಅಘನಾಶಿನಿ ದಂಡೆಯಲ್ಲಿರುವ ಜನರ ತಲೆ ಮೇಲೆ ಆಗಾಗ ತೂಗು ಕತ್ತಿ ತೂಗುತ್ತಲೇ ಇದೆ. ಆಗಾಗ ಈ ನದಿಗೆ ಅಪಾಯವಾಗುವ ಸುದ್ದಿ ಕೇಳಿ ಬರುತ್ತದೆ. ಈಗ ಎಲ್ಲೆಡೆಯಂತೆ ಇಲ್ಲಿಗೂ ನಿಧಾನಕ್ಕೆ ಆಧುನಿಕತೆಯ ಗಾಳಿ ಬೀಸತೊಡಗಿದ್ದು, ದುಡ್ಡುಗಳಿಕೆಗೆ ಸೂಕ್ತ ವಾತಾವರಣ ಎಂದು ತಿಳಿದ ಅದೆಷ್ಟೋ ಉದ್ಯಮಿಗಳು, ಆಗರ್ಭ ಶ್ರೀಮಂತರು ದುಡ್ಡು ಗಳಿಕೆಗೆ ಈ ಪರಿಸರದತ್ತ ಕಣ್ಣಿಕ್ಕಿದ್ದಾರೆ. ಇಲ್ಲೇ ಪಕ್ಕದ ತದಡಿಯಲ್ಲಿ ಉಷ್ಣ ವಿದ್ಯುತ್ ಸ್ಥಾವರವೊಂದು ನೆಲೆಗೊಳ್ಳಲು ಶತಾಯಗತಾಯ ಅಣಿಯಾಗುತ್ತಿದೆ. ಕಡಲ ತಟಗಳಲ್ಲಿ ರಿಸೋರ್ಟು, ರಿಯಲೆಸ್ಟೇಟ್‌ಗಳ ನೆರಳು ಮೆಲ್ಲ ಮೆಲ್ಲನೆ ಬೀಳತೊಡಗಿದೆ. ಇಲ್ಲಿ ಬೃಹತ್ ಯೋಜನೆಗಳು ಕಾಲೂರಲು ನಿರಂತರವಾಗಿ ಯತ್ನಿಸುತ್ತಿದೆಯಾದರೂ, ಸ್ಥಳೀಯ ಪರಿಸರ ಪ್ರೇಮಿಗಳ ದಣಿವರಿಯದ ಹೋರಾಟಗಳು ಸದ್ಯದ ಮಟ್ಟಿಗೆ ಅವೆಲ್ಲವನ್ನು ಹಿಮ್ಮೆಟ್ಟಿಸಿವೆ. ಈ ನಡುವೆ ಅಘನಾಶಿನಿ ನದಿ ಹಾಗೂ ಸುತ್ತಲ ಪ್ರದೇಶಗಳನ್ನು ಜೀವ ವೈವಿಧ್ಯ ಸೂಕ್ಷ್ಮ ತಾಣವೆಂದು ಗುರುತಿಸಬೇಕು ಎಂಬ ಕೂಗು ಎಲ್ಲೆಡೆ ಕೇಳಿ ಬರುತ್ತಿದೆ. ಆದರೆ ಸರಕಾರ ನಂದಿಕೂರಿನಂತೆಯೇ ಇಲ್ಲೂ ವರ್ತಿಸುತ್ತದೆಯೇ ಎಂಬ ಆತಂಕವೂ ಇದ್ದೇ ಇದೆ.
ಪ್ರಾಕೃತಿಕವಾಗಿಯೇ ಸೊಬಗು ಹೊಂದಿರುವ ಉತ್ತರ ಕನ್ನಡವನ್ನು ಪ್ರವಾಸೋದ್ಯಮದ ಮೂಲಕ ಲಾಭದಾಯವಾಗಿಸುವುದು ಬಿಟ್ಟು ಹೊಗೆಯುಗುಳುವ ದೈತ್ಯ ಯೋಜನೆಗಳು ನಿಜಕ್ಕೂ ಸರಕಾರಕ್ಕೆ ಬೇಕಿದೆಯಾ? ಎಂಬ ಪ್ರಶ್ನೆ ಇಲ್ಲಿನವರಲ್ಲಿದೆ. ಆದರೆ ಗಮನಿಸಬೇಕಾದ ಅಂಶವೆಂದರೆ ಮುಖ್ಯವಾಗಿ ಪ್ರವಾಸೋದ್ಯಮ ಇಲ್ಲಿ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿಯಾಗಿಲ್ಲ. ಯಾವುದೇ ಸ್ಥಳಗಳಿಗೆ ಹೋಗಲು ಕನಿಷ್ಟ ಸೂಕ್ತ ರಸ್ತೆಯಾಗಲಿ, ಪ್ರವಾಸಿಗರಿಗೆ ತಂಗಲು ವ್ಯವಸ್ಥೆಯಾಗಲಿ ಇನ್ನೂ ಆಗಿಲ್ಲದ್ದು ನಿಜಕ್ಕೂ ವಿಪರ್ಯಾಸ.
ಆದರೆ ಏನೇ ಇರಲಿ.... ಇಲ್ಲಿನ ಸಾಗರಗಳು, ಜಲಪಾತ, ನದಿತೊರೆಗಳು, ಮಾತು ಮಾತಿಗೂ ಅಡ್ಡಿಲ್ಲೆ,... ಅಡ್ಡಿಲ್ಲೆ... ಅನ್ನೋ ಮುದ್ದಾದ ಭಾಷೆ, ಮುಗ್ದ ಮಂದಿ, ವಿಶೇಷ ತಿನಿಸುಗಳಾದ ಕಾಯಿರಣಿ, ತಂಬುಳಿ, ನೀರ್ ದೋಸೆ, ಹಸಿ, ಸಾಸಿಮೆ, ಮಲೆನಾಡು ಗಿಡ್ಡ ತಳಿಯ ಕ್ಷೀರ ಮತ್ತೆ ಮತ್ತೆ ಉತ್ತರ ಕನ್ನಡದತ್ತ ಕೈ ಬೀಸಿ ಕರೆಯುವುದಂತೂ ಸತ್ಯ.

ಸೋಮವಾರ, ಫೆಬ್ರವರಿ 9, 2015

ಇಲ್ಲಿ ವರಗಳಿಗೆ ಬಡಿದಿದೆ ಗರ!

ಇದ್ಯಾರ ಶಾಪ?
ಹವ್ಯಕ ಮಾಣಿಗಳು ಈಗ ತಲೆಕೆರೆದುಕೊಳ್ಳುತ್ತಿದ್ದಾರೆ...
ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ, ಕಾಸರಗೋಡು ಪರಿಸರಗಳಲ್ಲಿ ಹೆಚ್ಚಾಗಿ ಕಂಡು ಬರುವ ಈ ಪುಟ್ಟ ಹವ್ಯಕ ಸಮಾಜದಲ್ಲಿ ಇಂದು ಮುದುವೆ ಹೆಣ್ಣುಗಳೇ ಸಿಗುತ್ತಿಲ್ಲ!
ಯಾಕೆ ಹೀಗೆ?
ಉತ್ತರ ನೀಡುವುದು ಅಷ್ಟೇನೂ ಸುಲಭವಿಲ್ಲ.
ಸುಮಾರು ಮೂರನೇ ಶತಮಾನದಲ್ಲಿ ಕರ್ನಾಟಕಕ್ಕೆ ಕಾಲಿರಿಸಿದ ಈ ಬ್ರಾಹ್ಮಣ ಪಂಗಡ, ಮೊದಲಿನಿಂದಲೂ ಅಡಿಕೆ, ತೆಂಗು, ಭತ್ತ, ಏಲಕ್ಕಿ, ಕಾಳು ಮೆಣಸು... ಅಂತ ಬೆಳೆ ಬೆಳೆಯುತ್ತಾ  ನಿರುಪದ್ರವಿಗಳಾಗಿ ಜೀವಿಸುತ್ತಾ ಬಂದವರು. ಇವರಲ್ಲಿ ಕೆಲವು ಕುಟುಂಬಗಳು ಪೌರೋಹಿತ್ಯದತ್ತ ಒಲವು ತೋರಿದರೂ, ಬಹುಪಾಲು ಮಂದಿಗೆ ಇಂದಿಗೂ ಕೃಷಿಯೇ ಜೀವನಾಧಾರ.
ಸುಸಂಸ್ಕೃತರು, ಬುದ್ಧಿವಂತರು,  ಹೊಂದಿಕೊಂಡು ಹೋಗುವವರು, ಅಷ್ಟೇ ಅಲ್ಲ ಮಡಿವಂತಿಕೆ, ವೇದಮಂತ್ರ, ವಿದ್ಯಾಭ್ಯಾಸದಲ್ಲಿ ಎಂದೂ ಮುಂದಿರುವವರು ಎಂದು ಗುರುತಿಸಿಕೊಳ್ಳುವ  ಈ ಪಂಗಡ ಈಗ ಇದೇ ಕಾರಣಕ್ಕಾಗಿ  ಆತಂಕಕಾರಿ ಪರಿಸ್ಥಿತಿಯನ್ನು ತಂದುಕೊಂಡಿದೆ.
ಅದೊಂದು ಕಾಲವಿತ್ತು. ಮದುವೆಯಾಗುವ ಹುಡುಗ 30- 40 ಹುಡುಗಿ ನೋಡಿ ಬಳಿಕ ಅದರಲ್ಲೊಂದು ಆಯ್ಕೆ ಮಾಡಿ ಮದುವೆಯಾಗುತ್ತಿದ್ದ. ಆದರೀಗ? ಇಂದಿನ ಹುಡುಗರಿಗೆ ಈ ಆಯ್ಕೆಗಳೇ ಇಲ್ಲ! ಅಷ್ಟೇ ಯಾಕೆ? ಹುಟ್ಟಿಸಿದ ದೇವರು ತನಗೊಂದು ಹೆಣ್ಣನ್ನು ಸೃಷ್ಟಿಸಿರುತ್ತಾನೆ ಎಂಬ ಮಾತನ್ನು ನಂಬುವ ಸ್ಥಿತಿಯಲ್ಲಿಯೂ ಅವರಿಲ್ಲ. ಯಾಕೆಂದರೆ ದೃಷ್ಟಾಂತ ಕಣ್ಣೇದುರಿಗೇ ಇದೆ. ಇಲ್ಲಿ ಅದೆಷ್ಟೋ ನಲವತ್ತು ನಲವತ್ತೈದು ಮೀರಿದ ಯುವಕರೂ (!) ಇಂದು ಹೆಣ್ಣು ಸಿಗದೇ ಕೊನೆಗೆ ತಮ್ಮ ಮದುವೆಯ ಆಸೆಗೆ  ಡೈವೋರ್ಸ್ ಕೊಟ್ಟು ಬಿಟ್ಟಿದ್ದಾರೆ.
ಹುಡುಗ ಹಳ್ಳಿಯಲ್ಲಿದ್ದಾನೆ, ಕೃಷಿ ಮಾಡಿಕೊಂಡಿದ್ದಾನೆ, ಅಂಗಡಿ, ಸಣ್ಣಪುಟ್ಟ ವ್ಯವಹಾರ ಮಾಡಿಕೊಂಡಿದ್ದಾನೆ... ಎಂದಾದರೆ ಕನಿಷ್ಠ ಜಾತಕ ಕೇಳುವವರಿಗೂ ಹವ್ಯಕ ಸಮಾಜದಲ್ಲಿ ದಿಕ್ಕಿಲ್ಲ!
ಪ್ರತೀ ವಸ್ತು, ಪ್ರತಿ ವಿಚಾರದಲ್ಲೂ ಇಂದಿನ ಜಗತ್ತಿನಲ್ಲಿ ಅಪರಿಮಿತ ಆಯ್ಕೆಗಳಿರುವಾಗ, ಇದೊಂದರಲ್ಲಿ ಮಾತ್ರ ಇಲ್ಲಿನ ಮಾಣಿಗೆ ಊಹೂಂ... ಆಯ್ಕೆಗಳೇ ಕಾಣುತ್ತಿಲ್ಲ.
ಸಂಪ್ರದಾಯ,  ಮಡಿವಂತಿಕೆಗಳಿರುವ ಈ ಪಂಗಡದ ಹುಡುಗರಿಗೆ ಒಂದು ಕಾಲಕ್ಕೆ ಆಂತರ್ಜಾತಿ ಬಿಡಿ, ಬ್ರಾಹ್ಮಣರದ್ದೇ ಸಮುದಾಯವಾದ ಶಿವಳ್ಳಿ, ಕೋಟ, ಕರಾಡ ಮೊದಲಾದ ಪಂಗಡದಿಂದ ವಿವಾಹವಾಗುವುದೂ ಕನಸಿನ ಮಾತಾಗಿತ್ತು. ಹವ್ಯಕ ಪಂಗಡದಿಂದ ಹೊರಜಾತಿಯವರನ್ನು ಮದುವೆಯಾಗುವುದೆಂದರೆ ಸಮುದಾಯದ ಸಮಸ್ತರೂ ಉರಿದು ಬೀಳುತ್ತಿದ್ದರು. ಆದರೆ ಈಗ?
ಕಾಲ ಬದಲಾಗಿದೆ. ಕಾಲಕ್ಕೆ ತಕ್ಕಂತೆ ಕೋಲ ಕಟ್ಟಲೇ ಬೇಕು ಎಂಬುದನ್ನು ಇಲ್ಲಿ ಕೆಲವರು ಅರ್ಥ ಮಾಡಿಕೊಂಡಿದ್ದಾರೆ. ಪರಿಣಾಮ , ಈಗ ಕಟ್ಟಾ ಸಂಪ್ರದಾಯಸ್ತರೂ ಕೂಡಾ ಹುಡುಗಿ ಸಸ್ಯಹಾರಿಯಾಗಿದ್ದರೆ ಸಾಕಪ್ಪ... ಎನ್ನುವ ಮನೋಭಾವನೆಗೆ ಬಂದುಬಿಟ್ಟಿದ್ದಾರೆ.
ಇದಕ್ಕೆಲ್ಲ ಕಾರಣ ಆಧುನಿಕತೆಯ ಗಾಳಿ ಇಲ್ಲಿಗೂ ಸೋಕಿರುವುದಾ? ಗೊತ್ತಿಲ್ಲ.
ಆದರೆ ಇಂದಿನ ಹವ್ಯಕ ಹುಡುಗಿಯರು ತಮಗೆ ಸಾಫ್ಟ್ ವೇರ್ ಇಂಜಿನಿಯರು, ಡಾಕ್ಟರು, ಪೇಟೆಯಲ್ಲಿರುವವರೇ ಬೇಕು ಎನ್ನುವುದು ಗಮನಿಸಿದರೆ ಇಂತದ್ದೊಂದು ಅನುಮಾನ ಬಾರದಿರದು.
ಈ ನಡುವೆ ಬ್ರಾಹ್ಮಣ ಸಮುದಾಯಗಳಾದ ಶಿವಳ್ಳಿ, ಹವ್ಯಕ, ಕೋಟ, ಕರಾಡ... ಕುಟುಂಬಗಳ ನಡುವೆ ನೆಂಟಸ್ಥಿಕೆ ಬೆಳೆಯುತ್ತಿರುವುದು ಇತ್ತೀಚಿನ ಹೊಸ ಬೆಳವಣಿಗೆ, ಕೆಲವು ಕಡೆಗಳಲ್ಲಿ ಇದು ಇನ್ನೂ ಒಂದಿಷ್ಟು ಮುಂದಕ್ಕೆ ಹೋಗಿ ಕೊಂಕಣಿ, ಲಿಂಗಾಯುತರ ಕುಟುಂಬದ ನಡುವೆಯೂ ನೆಂಟಸ್ಥಿಕೆ ಕುದುರಿರುವುದು ಕಾಣಬಹುದು. ಇಂತಹ ನೆಂಟಸ್ಥಿಕೆಗಳಿಂದಲಾದರೂ ಮದುವೆ ಹೆಣ್ಣಿನ ಕೊರತೆ ನೀಗಿಸಲು ಈ ಸಮಾಜದ ಕೆಲವರು ಧೈರ್ಯ ತೋರಿರುವುದು ಮೆಚ್ಚುವಂತದ್ದೆ!
ಇವಿಷ್ಟು ಒಂದೆಡೆಯಾದರೆ, ಮ್ಯಾರೇಜ್ ಬ್ಯುರೋಗಳು, ದಲ್ಲಾಳಿಗಳ ಕಾರೋಬಾರುಗಳು ಇನ್ನೊಂದೆಡೆ.
ಇಂದು ಹವ್ಯಕ ಸಮಾಜದ ಮ್ಯಾರೇಜು ಬ್ಯೂರೋಗಳಲ್ಲಿ ಹೆಸರು ನೋಂದಾಯಿಸಬೇಕೆಂದರೆ ಕನಿಷ್ಠ ಸಾವಿರ ರೂ.ತೆರಬೇಕು. ದಲ್ಲಾಳಿಗಳಿಗೆ ಅದಕ್ಕೂ ಹೆಚ್ಚು ನೀಡಬೇಕು. ಇಷ್ಟನ್ನು ಮಾಡಿದರೂ ಒಂದು ಒಳ್ಳೆಯ ನೆಂಟಸ್ಥಿಕೆ ಕುದುರೀತೆಂಬ ಭರವಸೆಯಿಲ್ಲ. ಇಲ್ಲಿನ ಕೆಲವು ಬಯೋಡೇಟಾಗಳಲ್ಲಿ ಉತ್ತಮ ವರ/ವಧು ಸಿಗಲಿ ಅಂತ ಯರ್ರಾಬಿರ್ರಿ ಬರೆಯುವವರೂ ಇದ್ದಾರೆ. ಇಷ್ಟೆಲ್ಲಾ ಆಗಿ ಎಲ್ಲಾದರೂ ಅಜ್ಜಿ ಪುಣ್ಯಕ್ಕೆ ಪ್ರೊಫೈಲು ಓಕೆ ಆಯ್ತು ಇನ್ನು ಹುಡುಗಿ ಕಡೆಯವರನ್ನು ಮಾತಾಡಿಸೋದು ಅಂತ ಮುಂದೆ ಹೋದರೆ ಹೆಣ್ಣುಗಳ ಡಿಮ್ಯಾಂಡುಗಳೇ ಮಾಣಿಗಳ ತಲೆ ತಿರುಗಿಸಿಬಿಡುತ್ತದೆ.
ಜುಟ್ಟಿರುವವ ಬೇ‌ಡ... ಕೃಷಿ ಮಾಡುವವ ಬ್ಯಾಡ, ಅಪ್ಪ- ಅಮ್ಮ ನೊಟ್ಟಿಗೆ ಮನೆಯಲ್ಲಿರುವವನಾ.... ಅಯ್ಯೋ ಬ್ಯಾಡ.. ಹೀಗೆ. ಇದನ್ನೂ ದಾಟಿ ಮುಂದಕ್ಕೆ ಹೋದರೆ ವಧು ದಕ್ಷಿಣೆ! ಇಂದು ಮದುವೆಯಾಗುವುದಾದರೆ ಹೆಣ್ಣಿಗೆ ಕನಿಷ್ಠವೆಂದರೆ ಐದಾರು ಲಕ್ಷ ರೂ. ಕೊಡುವ ಪದ್ಧತಿಯೂ ಕೆಲವೆಡೆಗಳಲ್ಲಿ ಉಂಟು.
ಹಿಂಗಾದರೆ ಬಡಪಾಯಿ ಮಾಣಿ ಎಂತ ಮಾಡಿಯಾನು?
ಮೇಲ್ನೋಟಕ್ಕೆ ಈ ಸಮಸ್ಯೆಯ ಗಂಭೀರತೆ ಸುಲಭಕ್ಕೆ ಅರ್ಥವಾಗದಿದ್ದರೂ, ಹವ್ಯಕ ಹಿರಿತಲೆಗಳು ಕೂಡಾ ಈಗ ಇದನ್ನು ಒಪ್ಪುತ್ತಾರೆ. ಇದು ಕೇವಲ ಹವ್ಯಕರ ವಿಚಾರವಲ್ಲ. ಗಮನಿಸಿ ನೋಡಿದರೆ ಇಂದು  ಎಲ್ಲಾ ಜಾತಿಗಳಲ್ಲೂ ಈ ಸಮಸ್ಯೆಯಿದೆ. ಕರ್ನಾಟಕ ರಾಜ್ಯದ ಜನಗಣತಿಯಂತೆ ಗಂಡಿಗೆ ಸಮನಾಗಿ ಹೆಣ್ಣಿನ ಸಂಖ್ಯೆಯಿಲ್ಲದಿರುವುದು ಇದಕ್ಕೆ ಮುಖ್ಯ ಕಾರಣ.  ಕರಾವಳಿ ಹಾಗೂ ಮಲೆನಾಡಿನಲ್ಲಿ ಈ ಪರಿಸ್ಥಿತಿಯಂತೂ ತುಸು ಗಂಭೀರವಾಗಿಯೇ ಇದೆ.
ಹಾಗಾಗಿಯೋ ಏನೋ ಈಗ ಅಂತರ್ಜಾತಿ ವಿವಾಹದತ್ತ ಸಹಜವಾಗಿಯೇ ಒಲವು ಹರಿಯುತ್ತಿದೆ.
 ಮೊದಲಿನಂತೆ ಅಂತಾರ್ಜಾತಿ ಎಂದರೆ ಮುಖ ಸಿಂಡರಿಸುವ ಪ್ರವೃತ್ತಿ ಇಂದು ಕಡಿಮೆಯಾಗುತ್ತಿದೆ. ಪಕ್ಕಾ ಸಂಪ್ರದಾಯಸ್ಥರು ಕೂಡಾ ಅಂತರ್ಜಾತಿ ವಿವಾಹ ತಪ್ಪೇನು? ಎಂದು ಪ್ರಶ್ನಿಸುವ ಸ್ಥಿತಿಗೆ ಬಂದು ನಿಂತಿದ್ದಾರೆ.
 ಹೌದು ಒಂದು ರೀತಿಯಲ್ಲಿ ನೋಡುವುದಾದರೆ ಅಂತರ್ಜಾತಿ, ನೆಂಟಸ್ತಿಕೆಗಳು. ನಿಜಕ್ಕೂ ಒಳ್ಳೆಯ ಬೆಳವಣಿಗೆಯೇ. ಈ ರೀತಿಯ ಸಂಬಂಧ ಬೆಸುಗೆಗಳಿಂದಾಗಿ ಸಮಾಜದಲ್ಲಿ ಸಾವಿರಾರು ವರ್ಷಗಳಿಂದ ಬೇರುಬಿಟ್ಟಿರುವ ಅನಿಷ್ಟ ಜಾತಿ ಪದ್ಧತಿ ನಿರ್ಮೂಲನೆಗೆ ಇದು ಒಂದು ವ್ಯವಸ್ಥಿತ ವೇದಿಕೆಯಾಗುತ್ತದೆಂದರೆ...
ಅದರಲ್ಲಿ ತಪ್ಪೇನು?

ನಾರಾಯಣಹರಿಗೊಂದು ಥ್ಯಾಂಕ್ಸ್ !


ಇಂದು ವೈದ್ಯರ ದಿನ.
ವ್ಯಾಲೆಂಟೈನ್ಸ್ ಡೇ, ಫ್ರೆಂಡ್ ಶಿಪ್ ಡೇ, ಆ...ಡೇ, ಈ... ಡೇ ಅಂತೆಲ್ಲಾ ವಾರಕ್ಕೂ ಮುಂಚೆ ನೆನಪಿಸಿಕೊಳ್ಳುವ ನಮಗೆ ಅದ್ಯಾಕೋ ಏನೋ ಈ ಡಾಕ್ಟ್ ಱ್ಸ್ ಡೇ ನೆನಪಿಗೇ ಬರುವುದಿಲ್ಲ.
ಹೆಚ್ಚಿನ ಮಂದಿಗೆ ದೂರದಲ್ಲೆಲ್ಲೋ 'ಉಚಿತ ಆರೋಗ್ಯ ತಪಾಸಣಾ ಶಿಬಿರ' ಎಂಬ ದೊಡ್ಡ ಪ್ಲೆಕ್ಸ್ ಓದುವಾಗಲಷ್ಟೇ ಇದು ವೈದ್ಯರ ದಿನದ ಪ್ರಯುಕ್ತ ಹಮ್ಮಿಕೊಂಡ ಕಾರ್ಯಕ್ರಮ ಅನ್ನೋದು ತಿಳಿಯುತ್ತದೆ.
ಜುಲೈ 1 ವೈದ್ಯರ ದಿನವಲ್ಲವಾ... ಅನ್ನೋ ಅರಿವಾಗುತ್ತದೆ.
ಭಾರತದ ವೈದ್ಯಕೀಯ ಇತಿಹಾಸದಲ್ಲಿ ತನ್ನದೇ ಹೆಜ್ಜೆಗುರುತು ಮೂಡಿಸಿ ಹೋದ ಡಾ. ಬಿದಿನ್ ಚಂದ್ರಪಾಲ್ ಅವರ ಕೊಡುಗೆಗಳನ್ನು ಗೌರವಿಸುವ ಸಂಕೇತವಾಗಿ ನಮ್ಮಲ್ಲಿ ಪ್ರತೀ ಜುಲೈ 1ನ್ನು ವೈದ್ಯರ ದಿನವಾಗಿ ಆಚರಿಸಲಾಗುತ್ತದೆ.
ಅಷ್ಟೇ ಅಲ್ಲ ನಮ್ಮ ಜೀವನದಲ್ಲಿ ವೈದ್ಯರು ಎಷ್ಟು ಪ್ರಾಮುಖ್ಯರು ಮತ್ತು ಅವರ ಚಿಕಿತ್ಸೆಗಳು ನಮಗೆ ಎಷ್ಟು ಅಮೂಲ್ಯ ಎಂಬುದನ್ನು ನೆನಪಿಸಿಕೊಳ್ಳುವುದೂ ಇದರ ಹಿಂದಿರುವ ಉದ್ದೇಶ.
ಸುಮ್ಮನೆ ಯೋಚಿಸಿ ನೋಡಿ,
ವೈದ್ಯರು ನಮ್ಮ ಜೀವನದಲ್ಲಿ ಅದೆಷ್ಟು ಮುಖ್ಯ ಪಾತ್ರ ವಹಿಸುತ್ತಾರೆ ಎಂಬುದು ಅರಿವಾಗುತ್ತದೆ.
ದಿನಪೂರ್ತಿ ನಿದ್ದೆ ಬಂದರೂ ಅವರು ಬೇಕು, ಆಕಸ್ಮಾತ್ ನಿದ್ದೆ ಬರದಿದ್ದರೂ ಅವರು ಬೇಕು. ಮನಸ್ಸಿಗೆ ಹಿಂಸೆಯಾದರೆ, ಕಣ್ಣು ಕತ್ತಲೆ ಬಂದರೆ, ಕೈ-ಕಾಲು ಮುರಿದು ಹೋದರೆ, ನಡೆದಾಡಲು ಸಾಧ್ಯವಾಗದಿದ್ದರೆ, ಅಷ್ಟೇ ಯಾಕೆ ಕಣ್ಣಿಗೊಂದು ಪುಟ್ಟ ಕಸ ಬಿದ್ದರೂ ಅವರೇ ಬೇಕು. ಒಟ್ಟಿನಲ್ಲಿ ನಮ್ಮ ಬಾಳ ಬಂಡಿ ತಳ್ಳಲು ಅವರದ್ದೊಂದು ಕೈ ಇರಲೇಬೇಕು.
ಅದಕ್ಕೆ ಇರಬೇಕು 'ವೈದ್ಯೋ ನಾರಾಯಣೋ ಹರಿಃ' ಅನ್ನೋದು.
ರಾತ್ರಿ ಹಗಲು, ಹಸಿವು ನಿದ್ರೆಗಳ ಪರಿವೇ ಇಲ್ಲದೆ ಸದಾ ಇನ್ನೊಂದು ಜೀವವನ್ನು ಸುಖವಾಗಿಡಲು ಶ್ರಮಿಸುವ ಈ ವೈದ್ಯರು ಕೂಡಾ ನಮ್ಮ ನಿಮ್ಮಂತೆಯೇ ಮನುಷ್ಯ ಜೀವಿ. ಅವರಿಗೂ ಆರಾಮ ಬೇಕು, ಅವರಿಗೂ ಕುಟುಂಬ ಬೇಕು. ಅಷ್ಟೇ ಅಲ್ಲ ಮನಸ್ಸಿಗೊಂದಿಷ್ಟು ಮನರಂಜನೆ, ಕರ್ತವ್ಯದ ಏಕಾನತೆಯಿಂದ ಹೊರಬರಬೇಕು ಎಂಬ ಆಸೆ ಅವರಿಗೂ ಇರುತ್ತದೆ. ಚೋದ್ಯವೆಂದರೆ ಅದೆಲ್ಲವನ್ನೂ ಎದುರು ಕೂತ ರೋಗಿಯ ಕಂಡಾಗ ಅನಿವಾರ್ಯವಾಗಿ ಮರೆಯಲೇ ಬೇಕಾಗುತ್ತದೆ. ಮರೆಯುತ್ತಾರೆ ಕೂಡಾ.
ಸದಾ ಕಾಲ ನಮ್ಮ ಸುಖ-ಸಂತೋಷಗಳಿಗಾಗಿ ಶ್ರಮಿಸುವ ವೈದ್ಯರಿಗೂ ಒಂದಿಷ್ಟು ನೆಮ್ಮದಿ ನೀಡುವುದು ನಮ್ಮ ಬಳಿಯಲ್ಲಿ ಸಾಧ್ಯವಾಗಬೇಕು. ನಿಗದಿಪಡಿಸಿದ ಸಮಯಕ್ಕೆ ಭೇಟಿಯಾಗದಿರುವುದು, ವೈದ್ಯರು ರಜೆಯಲ್ಲಿ, ಪ್ರವಾಸದಲ್ಲಿರುವುದು ಗೊತ್ತಿದ್ದೂ ಪದೇ ಪದೇ ಅವರನ್ನು ಸಂಪರ್ಕಿಸುವುದು, ಹೊತ್ತಲ್ಲದ ಹೊತ್ತಿನಲ್ಲಿ ಅನಿವಾರ್ಯವಲ್ಲದಿದ್ದರೂ ಚಿಕಿತ್ಸೆಗಾಗಿ ಪೀಡಿಸುವುದು. ಉಡಾಫೆಯಿಂದ ವರ್ತಿಸುವುದು, ಅವರ ಸಹನೆ ಪರೀಕ್ಷಿಸುವುದು, ಇದೆಲ್ಲ ಮಾಡುವುದರಿಂದ ನಾವು ವೈದ್ಯರನ್ನು ದುರುಪಯೋಗಪಡಿಸಿಕೊಂಡಂತಾಗುತ್ತದೆ. ಇದು ಅಕ್ಷಮ್ಯವೂ ಹೌದು. ಯಾಕೆಂದರೆ ತುರ್ತು ಸಂದರ್ಭಗಳಲ್ಲಿ ಯಾವುದೇ ಹೊತ್ತಿನಲ್ಲಿ ಕರ್ತವ್ಯಕ್ಕೆ ತಲೆಬಾಗುವ ವೈದ್ಯರಿಗೆ ನಾವು ಆಭಾರಿಗಳಾಗಿರಬೇಕೇ ಹೊರತು ಎಂದಿಗೂ 'ಭಾರೀ'ಗಳಾಗಬಾರದು.
ಹೇಗೆ ಆಚರಿಸಿಕೊಳ್ಳಬಹುದು?
ನಮ್ಮ ಬದುಕಿನುದ್ದಕ್ಕೂ ಆಪತ್ಭಾಂಧವರಾಗಿರುವ ವೈದ್ಯರಿಗೆ ಅಂದವಾದ ಶುಭಾಶಯ ಪತ್ರವೊಂದನ್ನು ಕಳುಹಿಸಬಹುದು. ಅನುಮತಿಯೊಂದಿಗೆ ಅವರ ಮನೆಗೆ ಭೇಟಿಯಿತ್ತು ವೈಯಕ್ತಿಕ ಅಭಿನಂದನೆ ಸಲ್ಲಿಸಬಹುದು. ವಿಶೇಷ ಸಮಾರಂಭ ಏರ್ಪಡಿಸಿ ಅವರನ್ನು ಗೌರವಿಸಬಹುದು, ಆಸ್ಪತ್ರೆಗಳಿಗೆ ತೆರಳಿ ಸಿಹಿ ತಿನ್ನಿಸಬಹುದು.
ನಮ್ಮ ವೈದ್ಯರೆಂದರೆ...
ಹೌದು, ಇಂದು ಭಾರತೀಯ ವೈದ್ಯರು ತಮ್ಮ ಸಾಧನೆಗಳ ಮೂಲಕ ವಿಶ್ವದಲ್ಲಿಯೇ ಗುರುತಿಸಿಕೊಂಡಿದ್ದಾರೆ.
ಅತ್ಯಾಧುನಿಕ ಚಿಕಿತ್ಸೆಗಳು ಕೂಡಾ ಇಂದು ನಮ್ಮಲ್ಲಿ ಲಭ್ಯವಿದೆ ಎಂದರೆ ಅದರ ಹಿಂದೆ ನಿಜಕ್ಕೂ ನಮ್ಮ ವೈದ್ಯರ ಶ್ರಮವಿದೆ. ಹಾಗಾಗಿಯೇ ಉಳಿದೆಲ್ಲ ದಿನಾಚರಣೆಗಳಿಂದ ಒಂದಿಷ್ಟು ವಿಭಿನ್ನವಾಗಿ ವೈದ್ಯರ ದಿನವನ್ನು ಆಚರಿಸಿಕೊಳ್ಳಬೇಕಿದೆಯಲ್ಲದೇ,
ಈ ಮೂಲಕ ಅವರ ಕರ್ತವ್ಯ ಪ್ರಜ್ಞೆಯನ್ನು ಇನ್ನಷ್ಟು ಜಾಗೃತಗೊಳಿಸಬೇಕಿದೆ.
ಇನ್ನೂ ಏನೂ ಓದುತ್ತಾ ಕೂತಿದ್ದೀರಿ. ಹೊರಡಿ ಈಗಲೇ ನಿಮ್ಮ ಮೆಚ್ಚಿನ ಡಾಕ್ಟರ್ ಗೊಂದು 'ಹ್ಯಾಪೀ ಡಾಕ್ಟಱ್ಸ್ ಡೇ...' ಅಂದುಬಿಡಿ.
ಯಾವತ್ತೂ ನಿಮ್ಮ ಮುಖದ ನಗು ಅರಳಿಸುವ ಅವರು ನಿಮ್ಮಿಂದಲೂ ಒಂದಿಷ್ಟು ಹೊತ್ತು ನಗುವಂತಾಗಲಿ.!

ಬೆಂಬಲ ಆತನದ್ದೂ ಇರಲಿ...

ಪ್ರೀತಿಯ ಅಜ್ಜಾ, ಹ್ಯಾಪಿ ಬರ್ತ್ ಡೇ!
ನಿಜ ಹೇಳಬೇಕೆಂದರೆ ನಿಮ್ಮ ಬಗ್ಗೆ ನಾನೇನೂ ಹೆಚ್ಚಾಗಿ ತಿಳಿದುಕೊಂಡವನಲ್ಲ.
ಚಿಕ್ಕಂದಿನಲ್ಲಿ ನಿಮ್ಮ ಕುರಿತು ಕೇಳಿರುವ ನೆನಪೂ ಇಲ್ಲ. ಇತಿಹಾಸ ಅಷ್ಟೋ ಇಷ್ಟೋ ಓದಿಕೊಂಡಿದ್ದೇನಾದರೂ ಕ್ಷಮಿಸಿ, ಅದರಲ್ಲಿ ನಿಮ್ಮ ಬದುಕಿನ, ಹೋರಾಟದ, ತ್ಯಾಗದ, ಆದರ್ಶದ ನಡಿಗೆಯನ್ನು ನನಗಲ್ಲಿ ಗುರುತಿಸಲಾಗಿಲ್ಲ.
ಆದರೆ ಅಜ್ಜಾ...
ಕೆಲ ತಿಂಗಳ ಹಿಂದಷ್ಟೇ ನನ್ನಂತಹಾ ಅದೆಷ್ಟೋ ಮಂದಿಗೆ ನಿಮ್ಮ ಪರಿಚಯವಾಯ್ತು. ದೇಶದ ಕುರಿತಾಗಿ ನಿಮಗಿರುವ ಕಾಳಜಿ, ಭ್ರಷ್ಟಾಚಾರ ಒದ್ದೋಡಿಸಲು ನೀವು ಕಂಡುಕೊಂಡ ಸಾತ್ವಿಕ ದಾರಿ ಸಹಜವಾಗಿಯೇ ನನ್ನಲ್ಲಿ ಆಸಕ್ತಿ ಹುಟ್ಟಿಸಿತು.
ಅಣ್ಣಾ ಹಜಾರೆ.. ಅಣ್ಣಾ ಹಜಾರೆ... ಎಂದೇ ಜನ ಪಠಿಸುತ್ತಿದ್ದರೆ, ನಿಮ್ಮ ನಿಜ ನಾಮಧೇಯ ಡಾ. ಕಿಶನ್ ಬಾಬುರಾವ್ ಹಜಾರೆ ಎಂಬುದು ತಿಳಿಯಿತು. ಮಹಾರಾಷ್ಟ್ರದ ಅಹ್ಮದ್ ನಗರ ಜಿಲ್ಲೆಯ ರಾಲೇಗನ್ ಸಿದ್ಧಿ ಎಂಬ ಹಳ್ಳಿಯನ್ನು ಏಕಾಂಗಿಯಾಗಿ ಅಭಿವೃದ್ಧಿ ಮಾಡಿದ್ದಕ್ಕಾಗಿ ಸರಕಾರ ೧೯೯೨ರಲ್ಲಿ ನಿಮಗೆ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿದ್ದು ತಿಳಿದು ಹೆಮ್ಮೆ ಎನಿಸಿತು. ಅದಕ್ಕೂ ಹೆಚ್ಚಿನ ಹೆಮ್ಮೆ ಉಂಟಾಗಿದ್ದು, ನೀವು ಸೈನ್ಯದಲ್ಲಿ ಸೇವೆ ಸಲ್ಲಿಸಿದ್ದೀರಿ ಎಂಬುದು ತಿಳಿದು. ೧೯೬೨ರ ಚೀನೀ ಆಕ್ರಮಣ ಸಮಯದಲ್ಲಿ ಸೈನ್ಯ ಸೇರಿದ ನೀವು, ೧೯೬೨ ಹಾಗೂ ೧೯೬೫ ರ ಯುದ್ಧದಲ್ಲಿ ಪಾಲ್ಗೊಂಡು ದೇಶ ಪ್ರೇಮ ಎಂತದ್ದು ಎಂಬುದನ್ನು ನಿರೂಪಿಸಿಬಿಟ್ಟಿರಿ. ಭೇಷ್. ೧೯೯೮ರಲ್ಲಿ ಮಹಾರಾಷ್ಟ್ರ ಮಂತ್ರಿಯೋರ್ವರೊಂದಿಗೆ ಕಾನೂನು ವ್ಯಾಜ್ಯ ನಡೆದು ಬಂಧನಕ್ಕೊಳಗಾದಾಗ ಈ ದೇಶದ ಜನತೆ ಅದೆಷ್ಟು ನಿಮ್ಮನ್ನು ಪ್ರೀತಿಸಿ, ಬೆಂಬಲಿಸಿ ಬಿಡುಗಡೆಗೆ ಕಾರಣರಾದರೂ ಎಂಬುದನ್ನೂ ನಾನು ಕೇಳಿ ಬಲ್ಲೆ.
ಅಜ್ಜಾ...
ನಮ್ಮ ದೇಶದ ಅಭಿವೃದ್ಧಿಗೆ ಭ್ರಷ್ಟಾಚಾರವೆಂಬುದು ಯಾವ ರೀತಿಯಲ್ಲಿ ತಡೆಯೊಡ್ಡಿದೆ ಎಂಬುದನ್ನು ನಾವೆಲ್ಲರೂ ಅರಿತಿದ್ದೇವೆ. ಇಂದು ಮಕ್ಕಳು ಶಾಲೆಗೆ ಹೋಗಲು ಕೇಳುವುದಿಲ್ಲ ಎಂಬ ಕಾರಣಕ್ಕೆ ಕೈಗೆರಡು ಚಾಕ್ಲೆಟ್ ಕೊಡುವ ಮೂಲಕ ಅಲ್ಲಿಂದಲೇ ಲಂಚದ ಪಾಠ ಹೇಳಿಕೊಡಲಾಗುತ್ತಿದೆ. ಸರಕಾರಿ ಕಚೇರಿಗಳಲ್ಲಿ ಅದೆಷ್ಟು ಭ್ರಷ್ಟಾಚಾರ ವ್ಯಾಪಿಸಿದೆ ಎನ್ನುವುದು ಲೋಕಾಯುಕ್ತರ ತನಿಖೆಗಳೇ ಸಾಕ್ಷಿ ಹೇಳುತ್ತಿವೆ. ಲಂಚಾವತಾರ ಇಂದು ಹಲವು ಮನೆಗಳಿಗೆ ಕೊಳ್ಳಿ ಇಟ್ಟಿದೆ. ಇದನ್ನು ನಾವೂ ಬಲ್ಲೆವು. ಆದರೇನು ಮಾಡೋದು ಹೇಳಿ? ಆಗ ಹೇಳಿದ ಹಾಗೆ ಕಣ್ಣಿದ್ದೂ ಕುರುಡರು, ಬಾಯಿದ್ದೂ ಮೂಕರು... ದೇಶದಲ್ಲಿ ಇಂತವರ ಸಂಖ್ಯೆಯೇ ಅಧಿಕವಾಗಿದೆ.
ಜನ ಕಾಯುತ್ತಿದ್ದಾರೆ ಅಜ್ಜಾ,
ಈಗ ಅವರಿಗೊಂದು ನಾಯಕಬೇಕಿದೆ. ಧ್ವನಿ ಕಳೆದುಕೊಂಡವರಿಗೆ ಧ್ವನಿಯಾಗುವವರು ಬೇಕಿದೆ. ಹಾಗಾಗಿ ಇಂದು ತತ್ವ, ಆದರ್ಶಗಳನ್ನಿಟ್ಟುಕೊಂಡು ಒಬ್ಬಾತ ಮುಂದೆ ನಡೆದರೆ ಲಕ್ಷ, ಕೋಟಿ ಸಂಖ್ಯೆಯಲ್ಲಿ ಜನ ಕಿಂದರಿ ಜೋಗಿ ಹಿಂದೆ ಬಂದಂತೆ ನಡೆದು ಬರುತ್ತಾರೆ. ಲೋಕಾಯುಕ್ತರಿಗೆ ನೀಡಿದ ಬೆಂಬಲ, ನಿಮಗೆ ಸಿಕ್ಕ ಬೆಂಬಲ ಗಮನಿಸಿದರೆ ನಿಮಗೇ ಗೊತ್ತಾದೀತು.
ಮೊನ್ನೆ ಮೊನ್ನೆ ಭ್ರಷ್ಟಾಚಾರ ವಿರೋಧಿ ಲೋಕಪಾಲ ಮಸೂದೆ ಮಂಡನೆಗೆ ತಾವು ಪಟ್ಟು ಹಿಡಿದು ಉಪವಾಸ ಆರಂಭಿಸಿದಾಗ ದೇಶವೇ ನಿಮ್ಮ ಬೆಂಬಲಕ್ಕೆ ನಿಂತಿತು. ಮಾಧ್ಯಮಗಳು ಕೂಡಾ ಭರ್ಜರಿ ಪ್ರಚಾರ ನೀಡಿದವು, ಅಂತರ್ಜಾಲದ ತುಂಬೆಲ್ಲಾ ನಿಮ್ಮದೇ ಚರ್ಚೆ. ಗಣ್ಯರು, ಸಿನಿಮಾ ತಾರೆಯರು, ಕ್ರೀಡಾಪಟುಗಳು, ಜನಸಾಮಾನ್ಯರು ನಿಮ್ಮದೇ ಪರ ನಿಂತು ಬಿಟ್ಟಿರು. ಪರಿಣಾಮ ಏನಾಯಿತು ನೋಡಿ? ದೇಶದ ತುಂಬಾ ಮಿಂಚಿನ ಸಂಚಲನವಾಯಿತು. ಮಸೂದೆ ಮಂಡನೆಯಾಗಲೇಬೇಕೆಂಬ ಸಂದರ್ಭ ನಿರ್ಮಾಣವಾಯಿತು.
ಒಂದು ಗುರಿ ಇರಿಸಿ ಸಾತ್ವಿಕ ಹೋರಾಟಕ್ಕೆ ಧುಮುಕಿದ ನಿಮಗೆ ಎಂಥಾ ಯಶಸ್ಸು ದೊರಕಿತಲ್ಲವಾ ? ಮತ್ತೆ ಹೇಳುತ್ತಿದ್ದೇನೆ, ನಿಜಕ್ಕೂ ನಿಮ್ಮ ಬಗ್ಗೆ ಹೆಮ್ಮೆ ಎನಿಸುತ್ತದೆ.
ಆದರೆ ಒಂದು ಮಾತು.
ಹೂವಿನೊಂದಿಗೆ ದಾರವೂ ದೇವರ ಪಾದ ಸೇರಿತು ಎಂಬಂತೆ ನಿಮ್ಮ ಸಾತ್ವಿಕ ಹೋರಾಟ ಬೆಂಬಲಿಸುತ್ತೇನೆ ಎಂದು ಹೇಳುತ್ತಲೇ ಅದೆಷ್ಟೋ ಮಂದಿ ಇಂದು ದಿನ ಬೆಳಗಾವುದರ ಒಳಗೆ ಲೋಕ ಪ್ರಸಿದ್ಧರಾಗುತ್ತಿದ್ದಾರೆ. ಅಂತವರನ್ನು ಗುರುತಿಸುವುದು ಜನ ಸಾಮಾನ್ಯನಿಗೆ ಕಷ್ಟ ಸಾಧ್ಯ. ಈ ಬಗ್ಗೆ ನೀವು ಹುಷಾರಾಗಿರಬೇಕು. ಇಲ್ಲವಾದಲ್ಲಿ ಹೋರಾಟವೊಂದು ದಾರಿತಪ್ಪಿ ಹಳ್ಳ ಹಿಡಿಯುವ ಸಾಧ್ಯತೆಯಿದೆ. ಭಾರತದ ಲಕ್ಷಾಂತರ ಮಂದಿಯ ಕಣ್ಣಲ್ಲಿ ’ಹೀರೋ’ ಎನಿಸಿಕೊಂಡಿರುವ ನೀವು ಹಾಗೂ ನಿಮ್ಮ ಹೋರಾಟ ವ್ಯರ್ಥವಾಗುವುದು ಯಾರಿಗೂ ಸುತರಾಂ ಇಷ್ಟವಿಲ್ಲ. ಹಾಗಿರುವಾಗ ಯಾವುದೇ ಕಾರಣಕ್ಕೆ ನೀವಾಗಲಿ, ಹೋರಾಟವಾಗಲಿ ಕ್ಷುಲ್ಲಕ ಎನಿಸಿಕೊಳ್ಳಬಾರದು.
ಇಂದು ನಿಮ್ಮ ೭೪ನೇ ಹುಟ್ಟು ಹಬ್ಬ.
ಸಡಗರ, ಗೌಜಿ ಗದ್ದಲಗಳಿಗೆ ನೀವು ಅವಕಾಶ ಕೊಡುವುದಿಲ್ಲ ಎಂಬುದನ್ನು ಬಲ್ಲೆ,
ಅಂತೆಯೇ ಸಸಿ ನೆಡುವುದು, ರಕ್ತದಾನ, ರೋಗಿಗಳಿಗೆ ಹಣ್ಣುಹಂಪಲು ವಿತರಣೆಗಳು ನಡೆಯಲಿದೆ ಎಂಬುದನ್ನೂ ಕೇಳಿಬಲ್ಲೆ. ಪ್ರತಿವರ್ಷವೂ ತಮ್ಮ ಹುಟ್ಟೂರಲ್ಲಿ ಗಿಡನೆಡುವ ಮೂಲಕ ಹುಟ್ಟುಹಬ್ಬದ ಸಂಭ್ರಮ ಪಟ್ಟುಕೊಳ್ಳುತ್ತೀರಿ ಅನ್ನುವುದು ತಿಳಿದು ಭಲೇ ಖುಷಿಯಾಯಿತು.
ಅಂದ ಹಾಗೆ ಇಂದು ಕರಡು ರಚನೆಯ ಜಂಟಿ ಸಮಿತಿ ಸಭೆಯೂ ನಡೆಯುತ್ತಿದೆ. ಅದರಲ್ಲಿ ನೀವು ಪಾಲ್ಗೊಳ್ಳುತ್ತಿದ್ದೀರಿ.
ನಮ್ಮೆಲ್ಲರ ಉದ್ದೇಶ ಈಡೇರಲಿ, ಭಾರತ ಭ್ರಷ್ಟಾಚಾರ ಮುಕ್ತ ದೇಶವಾಗಲಿ. ಭಗವಂತ ನಿಮಗೆ ದೀರ್ಷಾಯುಷ್ಯ ನೀಡಲಿ,
ಎಲ್ಲಕ್ಕಿಂತ ಮಿಗಿಲಾಗಿ ಹೋರಾಟಕ್ಕೆ ಆತನದೂ ಬೆಂಬಲವಿರಲಿ.

ನಾಟ್ ಗುಡ್, ನಾಟ್ ಬ್ಯಾಡ್...

ನೋಡನೋಡುತ್ತಿದ್ದಂತೆಯೇ ಮಳೆಗಾಲದ ಒಂದು ತಿಂಗಳು ಅದಾಗಲೇ ಸರಿದು ಹೋಗಿದೆ.
ಈ ಅವಧಿಯಲ್ಲಿ ಹೇಳಿಕೊಳ್ಳುವಂತಹಾ ಯಾವುದೇ ಅನಾಹುತ ಕಾಣಿಸದಿರುವುದು ಸಮಾಧಾನದ ಸಂಗತಿ.
ಜೂನ್ ಮಧ್ಯಭಾಗದಲ್ಲಿ ಮಾಮೂಲಾಗಿ ಇರಬೇಕಿದ್ದ ಪ್ರವಾಹ ಸ್ಥಿತಿ ಈ ಬಾರಿ ಇಲ್ಲಿಯ ತನಕ ಉದ್ಭವಿಸಿಲ್ಲ.
ಮಳೆ ಇಲ್ಲ.. ಮಳೆ ಇಲ್ಲ ಎಂಬ ಕೂಗಿನ ನಡುವೆಯೂ  ಇಲ್ಲಿಯವರೆಗೆ ಸುರಿದ ಮಳೆಯ ಪ್ರಮಾಣ ಕಳೆದ ವರ್ಷಕ್ಕೆ ಸಮಾನಾಗಿಯೇ ಇರುವುದು ಇನ್ನೊಂದು ಸಮಾಧಾನ ತರುವ ಸಂಗತಿ.
ಈ ಬಾರಿ ಮಾನ್ಸೂನ್ ಆರಂಭಕ್ಕೂ ಮುನ್ನ ಅತಿಥಿಯಂತೆ ಬಂದು ಹೋದ ಒಂದೆರಡು ಮಳೆ, ಗುಡುಗು-ಸಿಡಿಲನ್ನು ಹಿಮ್ಮೇಳಕ್ಕಾಗಿ ಕರೆತಂದಿತ್ತು. ಅಲ್ಲದೆ ಇದರ ಆರ್ಭಟ ಹಲವೆಡೆಗಳಲ್ಲಿ ಜೀವ ಹಾನಿ, ಆಸ್ತಿ ಪಾಸ್ತಿ ನಾಶಕ್ಕೆ ಕಾರಣವಾಗಿದ್ದವು. ಬಿರುಗಾಳಿ, ಸುಂಟರ ಗಾಳಿಗಳಿಗೆ ದಕ್ಷಿಣ ಕನ್ನಡ, ಉಡುಪಿ ಎರಡೂ ಜಿಲ್ಲೆಗಳಲ್ಲಿ ಸ್ವಲ್ಪ ಮಟ್ಟಿನ ಹಾನಿ ಸಂಭವಿಸಿತ್ತು.
ಮಳೆ ಮರಗಿಡ ಮನೆಮಾರುಗಳಿಗೆ ಹಾನಿ ಎಸಗಿತ್ತು. ಇದನ್ನು ಕಂಡವರೆಲ್ಲ ಈ ಬಾರಿಯ ಮಾನ್ಸೂನ್ ಹೇಗಿರಬಹುದಪ್ಪಾ.. ಎಂದು ಆತಂಕಕ್ಕೊಳಗಾಗಿದ್ದರು.
ಆದರೆ ಬಂದ ಮಾನ್ಸೂನ್ ಅಷ್ಟೂ ಆತಂಕವನ್ನು ದೂರಮಾಡಿದೆ. ಯಾವುದೇ ಅಪಾಯವಿಲ್ಲದೆ ತಿಂಗಳೊಂದನ್ನು ಪೂರ್ತಿಗೊಳಿಸಿ ಮುಂದಡಿಯಿಟ್ಟಿದೆ. ರೋಹಿಣಿ, ಮೃಗಶಿರಾ ಮಳೆ ನಕ್ಷತ್ರದ ಪ್ರವೇಶವಾಗಿದ್ದರೂ ಯಾಕೋ ಮಾನ್ಸೂನ್ ಅಬ್ಬರ ಮಾತ್ರ ಕಾಣಿಸುತ್ತಿಲ್ಲ. ಕಳೆದ ಒಂದು ವಾರದಿಂದ ವಿರಳವಾಗಿದ್ದ ಮಳೆ ಬುಧವಾರದಿಂದ ಮತ್ತೆ ಬಿರುಸುಗೊಂಡಂತೆ ಕಂಡರೂ ಮರುದಿನವೇ ಕ್ಷೀಣಿಸಿ ಬಿಟ್ಟಿದೆ.
 ಜುಲೈ, ನಿರೀಕ್ಷೆಯಕಾಲ...
ಜೂನ್ 15 ರಿಂದ ಅಗಸ್ಟ್ 15 ರವರೆಗೆ ಹೇಳಿಕೇಳಿ ನಟ್ಟನಡುವೆ ಮಳೆಗಾಲ. ಹಿಂದೆಲ್ಲಾ ಆಕಾಶ ಭೂಮಿ ನಡುವೆ ಮಳೆ ಶರಪಂಜರ ಹೂಡುವ ಕಾಲ. ಮನೆಬಿಟ್ಟು ಹಿತ್ತಲಿಗಿಳಿಯಲೂ ಹಿಂದೆ ಮುಂದೆ ನೋಡಾ ಬೇಕಾದ ರೀತಿಯಲ್ಲಿ ಜನಜೀವನ ಅಸ್ತವ್ಯಸ್ತಗೊಳಿಸಿ ಬಿಡುವ ಸನ್ನಿವೇಶಗಳನ್ನು ಸೃಷ್ಟಿಸುವ ಕಾಲ.
ಆದರೆ ಈ ಬಾರಿ ಅಂತಹಾ ಮಳೆಯ ದೃಶ್ಯಗಳು ಕಂಡು ಬಂದಿಲ್ಲ. ದಿನನಿತ್ಯ ಬಿಸಿಲು ಮಳೆ ವಾತಾವರಣ ಇನ್ನೂ ಮುಂದುವರಿದಿದೆ.
ಈ ಬಾರಿಯ ಜುಲೈ ತಿಂಗಳು ನಿರೀಕ್ಷೆಯ ಕಾಲವಾಗಿದೆ. ರೈತಾಪಿ ಜನರು ಮಳೆ ರಾಯನ ಆಗಮನಕ್ಕೆ ಕಾತರಿಸಿದ್ದಾರೆ.
ಇದುವರೆಗೆ  ದಕ್ಷಿಣಕನ್ನಡ ಜಿಲ್ಲೆಯಲ್ಲಿ ಸರಿಸುಮಾರು 794.7 ಮಿ.ಮೀ ಮಳೆಯಾಗಿದೆ. ಕಳೆದ ಬಾರಿ ಈ ಅವಧಿಯಲ್ಲಿ 629.5 ಮಿ.ಮೀ ಮಾತ್ರ ಮಳೆಯಾಗಿತ್ತು.
ಒಟ್ಟಾರೆಯಾಗಿ ನಾಟ್ ಗುಡ್, ನಾಟ್ ಬ್ಯಾಡ್ ಅನ್ನುವಂತೆ ಸಾಗುತ್ತಿದೆ ಈ ಮಳೆಗಾಲ.

ಸಂಪತ್ತು ಸಿಕ್ಕಿದೆ, ಮುಂದೇನು?

ಚಿನ್ನ, ಮುತ್ತು, ರತ್ನ, ವಜ್ರ, ವೈಢೂರ್ಯ...
ಏನುಂಟು ಏನಿಲ್ಲ? ಎಂಬಂತೆ ಅಗೆದಷ್ಟು ಸಿಕ್ಕಿತು ಅನರ್ಘ್ಯ ಆಭರಣಗಳು.
ಇವೆಲ್ಲವನ್ನು ಅಳೆದು ತೂಗಿ ನೋಡುವಷ್ಟರಲ್ಲಿ ತಿರುಪತಿ ತಿಮ್ಮಪ್ಪನಿಂದಲೂ ತಿರುವನಂತಪುರದ ಶ್ರೀ ಅನಂತಪದ್ಮನಾಭ ಸ್ವಾಮಿಯೇ ಶ್ರೀಮಂತ ಅನ್ನಿಸಿಕೊಂಡಿದ್ದಾನೆ!
ಅಲ್ಲಿ ಇದುವೆರೆಗೆ ಸಿಕ್ಕಿದ ಸೊತ್ತುಗಳ ಮೌಲ್ಯವೇ ಲಕ್ಷ ಕೋಟಿ ರೂ.ಗಳಿಗೂ ಮಿಕ್ಕಿದೆ. ಶೋಧ ಇನ್ನೂ ಬಾಕಿ ಉಳಿದಿದೆ. ಒಟ್ಟು ಆಸ್ತಿಯ ವಿವರ ಮುಂದೆ ಗೊತ್ತಾಗಬೇಕಿದೆ.
ಈ ಸಂಪತ್ತಿನ ಬಗ್ಗೆ ತಿಳಿಯದ ಹಿನ್ನೆಲೆಯಲ್ಲಿ ಈ ಬಗ್ಗೆ ತಲೆಕೆಡಿಸಿಕೊಳ್ಳದ ಕೇರಳ ಸರಕಾರ ಈಗ ಲೆಕ್ಕ ಕಂಡು ಬೆಚ್ಚಿಬಿದ್ದಿದೆ. ಅನಂತನ ಈ ಸಂಪತ್ತನ್ನು ಕಾಯುವುದೆಂತು? ಇದು ಸದ್ಯ ಅದರ ಮುಂದಿರುವ ಚಿಂತೆ.
ರಕ್ಷಣೆಯ ಕುರಿತಾಗಿ ತಿರುವನಂತಪುರದ ಎಸ್ಪಿ ಈಗಾಗಲೇ ತಮ್ಮ ಅಸಹಾಯಕತೆಯನ್ನು ತೋಡಿಕೊಂಡಿದ್ದಾರೆ. ನಮ್ಮಲ್ಲಿರುವ ಪೊಲೀಸ್ ಬಲಕ್ಕೆ ಈ ಪರಿಯ ಸಂಪತ್ತನ್ನು ಕಾಯುವ ತರಬೇತಿಯಿಲ್ಲ. ವಿಶೇಷ ಶಸಸ್ತ್ರ ಪಡೆಯನ್ನು ಒದಗಿಸಿ ಎಂದು ಸರಕಾರವನ್ನು ಒತ್ತಾಯಿಸಿದ್ದಾರೆ.
ಸದ್ಯ ದೇವಸ್ಥಾನದ ಇಂಚಿಂಚೂ ಸಿಸಿ ಟೀವಿ ಅಳವಡಿಸಲಾಗಿದೆಯಾದರೂ ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿರುವ ಅನಂತನ ಅನಂತ ಸಂಪತ್ತಿನ ಮೇಲೆ ಅಪಾಯದ ತೂಗುಕತ್ತಿಯಂತೂ ತೂಗುತ್ತಲೇ ಇದೆ.
ಈ ಸಂಪತ್ತು ಹಲವು ತೆರನಾದ ಚರ್ಚೆಗೆ ಗ್ರಾಸವಾಗಿದೆ. ಒಂದೆಡೆ ಇದು ಯಾರಿಗೆ ಸೇರಬೇಕು ಎಂಬ ಚರ್ಚೆ, ಇನ್ನೊಂದೆಡೆ ಇದರ ರಕ್ಷಣೆ ಹೇಗೆ ಎಂಬ ಚರ್ಚೆ, ಮತ್ತೊಂದೆಡೆ ಮುಂದಕ್ಕೆ ಇದನ್ನು ಏನು ಮಾಡಬೇಕು ಎಂಬ ಚರ್ಚೆ. ಈ ನಡುವೆ ಇತಿಹಾಸಕಾರರು ತಮ್ಮೆಲ್ಲಾ ದಾಖಲೆಗಳನ್ನು ತಿರುವತೊಡಗಿದ್ದಾರೆ. ಈ ಸಂಪತ್ತಿನ ಕ್ರೋಢೀಕರಣವಾಗಿದ್ದು ಹೇಗೆ? ಕುತೂಹಲ ಅವರದ್ದು.
ಮುಂದೇನು?
ತಿರುವನಂತಪುರದ ಶ್ರೀ ಅನಂತಪದ್ಮನಾಭ ಸ್ವಾಮಿ ದೇವಸ್ಥಾನದಲ್ಲಿ ಸಿಕ್ಕಿರುವ ಈ ಅಗಾಧ ಐಶ್ವರ್ಯ ಏನಾಗಲಿದೆ?
ಇದು ಸದ್ಯ ಎಲ್ಲರನ್ನೂ ಕಾಡುತ್ತಿರುವ ಪ್ರಶ್ನೆ.
ಹಿಂದೆಲ್ಲಾ ರಾಜ ಮಹಾರಾಜರು ತಾವು ಯುದ್ಧಕ್ಕೆ ತೆರಳುವಾಗಲೋ, ತಮ್ಮ ಮೇಲೆ ಯಾರಾದರೂ ಯುದ್ಧ ಸಾರಿದಾಗಲೋ ಅಥವಾ ರಾಜ್ಯಕ್ಕೆ ಸಂಕಷ್ಟ ಬಂದ ಕಾಲಕ್ಕಿರಲಿ ಎಂದೋ ಆಭರಣಗಳನ್ನು ಅಲ್ಲಲ್ಲಿ ಹೂತಿಡುತ್ತಿದ್ದರು. ಹಾಗೆಯೇ ತಿರುವಾಂಕೂರಿನ ರಾಜರು ದೇಶದಲ್ಲಿ ಬ್ರಿಟೀಷರ ಪ್ರಾಬಲ್ಯ ಹೆಚ್ಚುತ್ತಿರುವುದನ್ನು ಗಮನಿಸಿ ಸಕಲ ಐಶ್ವರ್ಯಗಳನ್ನು ನೆಲಮಾಳಿಗೆಯಲ್ಲಿಟ್ಟು ಬೀಗ ಜಡಿದಿರಬಹುದೆಂಬ ವಾದ ಹುರುಳಿಲ್ಲದ್ದೇನಲ್ಲ. ಅದೇನೇ ಇದ್ದರೂ ಇಂದು ಜಡಿತೆ ಮಾಡಿದಾಗ ಈ ಪ್ರಮಾಣದಲ್ಲಿ ಸಂಪತ್ತು ದೊರಕಿದ್ದಂತೂ ನಿಜ. ಆದರಿದು ನಂದರಾಯರ ಬದುಕು ನರಿನಾಯಿ ಪಾಲಾಯಿತು ಎಂಬಂತಾಗಬಾರದು. ಸುಪ್ರೀಂಕೋರ್ಟ್ ಉಸ್ತುವಾರಿಕೆಯಲ್ಲೇ ಇದರ ಮುಂದಿನ ವಿಲೇವಾರಿಯೂ ಆಗಬೇಕಿದೆ.
ಆಸ್ತಿಕರ ವಾದ ಏನೇ ಇದ್ದರೂ ದೇಶದಲ್ಲಿರುವ ಬಡತನ, ವಿದೇಶದಲ್ಲಿ ನಾವು ಮಾಡಿಕೊಂಡಿರುವ ಸಾಲ, ಅಭಿವೃದ್ಧಿ ಕಾರ್ಯಗಳಿಗೆ ಹಣದ ಅಡಚಣೆ ನಿವಾರಿಸಲು ಇದರಲ್ಲಿ ಕೆಲವಂಶವನ್ನು ವಿನಿಯೋಗಿಸುವುದು ತಪ್ಪಲ್ಲ ಎನ್ನುವುದು ಕೆಲವರ ವಾದ. ಬೆಲೆ ಕಟ್ಟಲಾಗದ ಮೂರ್ತಿಗಳು, ವೈಢೂರ್ಯಗಳು, ರತ್ನಗಳು, ದೇವರ ಸೊತ್ತುಗಳು, ಅತ್ಯಂತ ಪುರಾತನ ಎನ್ನಬಹುದಾದ ಮೂರ್ತಿಗಳನ್ನು ಸುರಕ್ಷಿತವಾಗಿ ಸಂರಕ್ಷಿಸಿಟ್ಟಿಕೊಂಡು, ಉಳಿದಂತೆ ಅಲ್ಲಿ ಸಿಕ್ಕಿರುವ ಉಂಗುರಗಳು, ಚಿನ್ನದ ದಾರಗಳು, ಚಿನ್ನದ ಗಟ್ಟಿಗಳನ್ನು ಬಳಸಿಕೊಳ್ಳಬಹುದಲ್ಲವೇ ಎನ್ನುವುದು ಅವರ ಪ್ರಶ್ನೆ.
ಬಹಳ ಪ್ರಾಚೀನವಾದ ಅಪೂರ್ವ ವಸ್ತುಗಳನ್ನು ಖಂಡಿತವಾಗಿಯೂ ಸಂರಕ್ಷಿಸಬೇಕು. ಹಾಗಂತ ತುಂಬಾ ಭಾವನಾತ್ಮಕವೂ ಸರಿಯಲ್ಲ. ಇಂದು ದೇಶದಲ್ಲಿ ಶ್ರೀಸಾಮಾನ್ಯ ಬದುಕಲು ಅಕ್ಷರಶಃ ಹೋರಾಟಕ್ಕಿಳಿಯುವಂತಾಗಿದೆ. ಡಾಲರ್ ನ ಮುಂದೆ ರೂಪಾಯಿ ಮೊಣಕಾಲೂರಿ ಕುಳಿತು ಅದೆಷ್ಟೋ ಕಾಲವಾಗಿ ಹೋಗಿದೆ. ಇಂದು ಕೆಲವು ಸ್ವಾಮಿಗಳ, ಬಾಬಗಳ ಆಶ್ರಮದಲ್ಲಿ, ಇಂತಹಾ ದೇವಸ್ಥಾನಗಳಲ್ಲಿ ಸಂಪತ್ತು ಹೇರಳವಾಗಿ ಸಿಗುತ್ತಲೇ ಇದೆ. ಇದು ಅವರ ಸಂಪತ್ತು, ಇವರ ಸಂಪತ್ತು ಎನ್ನುವುದಕ್ಕಿಂತ ಇದು ದೇಶದ ಸಂಪತ್ತು ಎಂದು ಪರಿಗಣಿಸುವುದು ಸೂಕ್ತ. ಯಾಕೆಂದರೆ ಆ ಕಾಲದ ಅವಶ್ಯಕತೆಗಳು ಹಾಗಿದ್ದವು. ಎಲ್ಲೆಲ್ಲೂ ಸಮೃದ್ಧಿ ಇದ್ದ ಕಾರಣ ಉಳಿದ ಧನಕನಕಗಳನ್ನು ಹೀಗೆ ತೆಗೆದಿರಿಸುತ್ತಿದ್ದರು. ಈಗಿನ ಅವಶ್ಯಕತೆಗಳು ಬೇರೆ ರೀತಿಯದಾಗಿದೆ. ಇಂದು ಜನಸಾಮಾನ್ಯ ಹಣಕ್ಕಾಗಿ ಬೆವರು ರಕ್ತ ಒಂದು ಮಾಡಬೇಕಾಗಿದೆ. ಆದ್ದರಿಂದ ಇದನ್ನೆಲ್ಲ ಸೂಕ್ತ ಕ್ರಮದಲ್ಲಿ ವಿನಿಯೋಗಿಸಿದರೆ ಪ್ರತಿ ಬಡವನ ಬದುಕಲ್ಲೂ ಒಂದಿಷ್ಟು ನೆಮ್ಮದಿ ಇಣುಕದೇ?
ಇದು ಅವರ ವಾದದ ಮುಂದುವರಿಕೆ.
ಇನ್ನೊಂದು ವಾದವೆಂದರೆ ಹಿಂದೂಗಳ ಪವಿತ್ರ ಕ್ಷೇತ್ರಗಳಲ್ಲೊಂದಾದ ಈ ದೇವಸ್ಥಾನದ ಸಂಪತ್ತನ್ನು ಕಡ್ಡಾಯವಾಗಿ ಸಂರಕ್ಷಿಸಿಡಲೇಬೇಕು ಎನ್ನುವುದು. ಭಾರತದ ಪ್ರಾಚೀನ ಸಮೃದ್ಧಿಗೆ ಬೆಳಕು ಚೆಲ್ಲುವ ಈ ಆಸ್ತಿಗಳಿಗೆ ಎಂದೂ ಬೆಲೆಕಟ್ಟಲು ಹೋಗಬಾರದು. ಅದನ್ನು ಬೇರೆಯದಕ್ಕೆ ವಿನಿಯೋಗಿಸಲೂಬಾರದು. ಇಂದು ಪ್ರತಿಯೊಂದು ದೇಶದ್ಲಲಿಯೂ ಪ್ರಾಚೀನ ಕುರುಹುಗಳನ್ನು ಜತನದಿಂದ ಕಾಪಿಡುತ್ತಾರೆ. ಹಾಗೆಯೇ ನಮ್ಮಲ್ಲೂ ಆಗಬೇಕು. ಅಲ್ಲದೆ ಒಂದು ಧರ್ಮದ ಭಾವನೆಗೆ ಸೀಮಿತವಾದ ಈ ವಿಚಾರದಲ್ಲಿ ಸರಕಾರ ಯಾವತ್ತಿಗೂ ತಲೆಹಾಕಬಾರದು ಎನ್ನುವುದು.
ವಾದ-ಪ್ರತಿವಾದ ಏನೇ ಇರಲಿ, ನ್ಯಾಯಾಲಯದ ಆದೇಶದಂತೆ ಇಂದು ದೇವಸ್ಥಾನದ ಕೊಠಡಿ ತೆರೆದಾಗಿದೆ. ಅಗಾಧ ಸಂಪತ್ತು ದೊರಕಿದ್ದೂ ಆಗಿದೆ. ದೇಶ-ವಿದೇಶಗಳಲ್ಲಿ ಇದೇ ವಿಚಾರವಾಗಿ ಚರ್ಚೆಗಳಾಗುತ್ತಿದೆ. ಸಂಪತ್ತಿನಲ್ಲೇ ಇಂದು ದೇವರುಗಳನ್ನು ಯಾರು ಮೇಲು, ಯಾರು ಕೀಳು ಎಂದು ಅಳತೆಗೆ ಹಚ್ಚಲಾಗುತ್ತಿದೆ.
ಇದೆಲ್ಲಾ ಕೆಲವೇ ದಿನ...?
ಜನರ ನೆನಪು ಶಕ್ತಿ ಕಡಿಮೆ ಅನ್ನುತ್ತಾರೆ. ಒಂದು ಸುದ್ದಿಯನ್ನು ಹೆಚ್ಚು ದಿನಗಳ ಕಾಲ ನೆನಪಿಟ್ಟುಕೊಳ್ಳುವ ಶಕ್ತಿ ಅವರಲ್ಲಿಲ್ಲ. ಎಲ್ಲಾ ಸುದ್ದಿಗಳಂತೆ ದೂರದ ಕೇರಳದಿಂದ ಕೇಳಿಬಂದಿರುವ ಈ ಸುದ್ದಿಯೂ ಕ್ರಮೇಣ ಮರೆತೇ ಹೋಗುತ್ತದೆ.
ಕೆಲವೇ ದಿನಗಳ ಹಿಂದೆ ಅಬ್ಬರದಿಂದ ಕೇಳಿಬಂದ ಸಾಯಿಬಾಬಾರ ಆಸ್ತಿ ಕುರಿತ ಲೆಕ್ಕ ಇಂದು ಮರೆತೇಹೋದಂತೆ...
ಆದರೆ ಯಾವುದೇ ಕಾರಣಕ್ಕೂ ಈ ಸಂಪತ್ತಿನಲ್ಲಿ ತೃಣ ಮಾತ್ರದಷ್ಟು ಪೋಲಾಗಬಾರದು. ಕಳ್ಳಕಾಕರ, ಭ್ರಷ್ಟರ ಪಾಲಾಗಬಾರದು. ಇದರ ಪ್ರತಿಯೊಂದು ಕಣವೂ ಸದ್ವಿನಿಯೋಗವಾಗಬೇಕು. ಆಗಷ್ಟೇ ಎಲ್ಲರಿಗೂ ಸಮಾಧಾನ,
ಅನಂತಪದ್ಮನಾಭನಿಗೂ.!

ಮತ್ತೆ ಆಸೆ ಚಿಗುರಿಸಿದೆ ಪುನರ್ವಸು...

ಕೃಷಿಕನ ಮುಖದಲ್ಲಿ ಈಗ ಮಂದಹಾಸ.!
ಅದಕ್ಕೆ ಕಾರಣ ಮತ್ತೆ ಆಸೆ ಚಿಗುರಿಸಿದ ಮಳೆ.
ಈ ಮಂದಹಾಸ ಹಾಗೆಯೇ ಉಳಿಯುತ್ತಾ? ಗೊತ್ತಿಲ್ಲ.
ಯಾಕೆಂದರೆ ಜುಲೈ ತಿಂಗಳ ಪ್ರಥಮಾರ್ಧದಲ್ಲಿ ಮಳೆಯಿಲ್ಲದೆ ಕೃಷಿಕ ವಸ್ತುಶಃ ಕಂಗೆಟ್ಟಿದ್ದ. ಕೃಷಿ ಚಟುವಟಿಕೆಗಳಿಗೆ ಮಳೆ ಅಭಾವದ ಭೀತಿ ಕಾಡಿತ್ತು. ಜೂನ್ ಕೊನೆಯ ವಾರದಲ್ಲಿ ಬಿರುಸಾಗಿ ಬಂದು, ಬಂದಷ್ಟೇ ವೇಗವಾಗಿ ಹೋಗಿದ್ದ ಮಳೆ, ಮತ್ತೆ ಮರಳಿ ಬಾರದೆ ಆತಂಕದ ಸ್ಥಿತಿ ನಿರ್ಮಾಣವಾಗಿತ್ತು.
ಆದರೆ ಎದುರಿಗಿದ್ದುದು ಪುನರ್ವಸು ನಕ್ಷತ್ರ. ಆರಂಭದಲ್ಲಿ ಭಾರೀ ಮಳೆ ನಿರೀಕ್ಷಿಸಲಾಗಿತ್ತು. ಮಾತ್ರವಲ್ಲ ಹವಾಮಾನ ವರದಿಗಳೂ ಕೂಡಾ ಬಿರುಸಿನ ಮಳೆಯದ್ದೇ ಸಂಕೇತ ನೀಡಿದ್ದವು. ಆದರೆ ಜುಲೈ ತಿಂಗಳಿನಲ್ಲಿ ಕಳೆದು ಹೋದ ಹತ್ತು ದಿನಗಳು ಕೂಡಾ ಎಲ್ಲಾ ಲೆಕ್ಕಾಚಾರಗಳನ್ನು ಬುಡಮೇಲುಗೊಳಿಸಿದ್ದವು. ಭೂಮಿ ಮಳೆಯಿಲ್ಲದೆ ಒಣಗಿ ನಿಂತಿತ್ತು. ಮಳೆ ನೀರಿನ ಆಶ್ರಯದಲ್ಲೇ ಅರಳಬೇಕಿದ್ದ ಕೃಷಿ ಚಟುವಟಿಕೆಗಳು ಆತಂಕಿತಗೊಂಡಿದ್ದವು. ಅನೇಕ ಕಡೆಗಳಲ್ಲಿ ನಾಟಿ ಬಿತ್ತನೆ ಮೇಲೂ ಇದರ ಪರಿಣಾಮ ಗಾಢವಾಗಿದ್ದವು.
ಈ ಎಲ್ಲಾ ಆತಂಕಗಳ ನಡುವೆ ನಿನ್ನೆ ಸಂಜೆಯಿಂದ ಮತ್ತೆ ಮಳೆಗಾಲದ ಚಿತ್ರಣ ಬಿಚ್ಚಿಕೊಂಡಿದೆ. ಎಲ್ಲೆಡೆ ಉತ್ತಮ ಮಳೆ ಸುರಿಯುತ್ತಿದೆ.
ಎಲ್ಲರಿಗೂ ತಿಳಿದಿರುವಂತೆ ಪುನರ್ವಸು ಮತ್ತು ಪುಷ್ಯ ಪೂರ್ತಿಯಾಗಿ ಮಳೆಯ ನಕ್ಷತ್ರಗಳು. ಉಳಿದಿರುವ ಇಪ್ಪತ್ತೆರಡು ದಿನಗಳಲ್ಲಿ ಉತ್ತಮ ಮಳೆಯಾದರೆ ಮಾತ್ರ ಈ ಬಾರಿಯ ಮಳೆಗಾಲ ಪರಿಪೂರ್ಣವಾಗುತ್ತದೆ. ಯಾಕೆಂದರೆ ಆರ್ದ್ರಾ, ಪುನರ್ವಸು, ಪುಷ್ಯ, ಆಶ್ಲೇಷ ನಕ್ಷತ್ರ ಹೊರತುಪಡಿಸಿದರೆ ಮತ್ತೆ ಭರವಸೆಯ ಮಳೆಗಳು ಸುರಿಯುವುದಿಲ್ಲ. ಹಾಗಾಗಿ ಇವಿಷ್ಟು ದಿನಗಳಲ್ಲಿ ಮಳೆ ಸುರಿದರೆ ಬಂತು. ಸಮೃದ್ಧ ಮಳೆಯಾಗದಿದ್ದರೆ ಬೇಸಿಗೆಯಲ್ಲಿ ಮತ್ತೆ ಖಾಲಿ ಕೊಡ... ಮೈಲುಗಟ್ಟಲೆ ನಡಿಗೆ!
ಹಾಗೆ ನೋಡಿದರೆ ಈ ಬಾರಿ ಕರಾವಳಿಯಲ್ಲಿ ಮಳೆಗಾಲದ ತೀವ್ರತೆ ಕಡಿಮೆ. ಈ ಬಾರಿ ನೆರೆ ಪರಿಸ್ಥಿತಿ ಜಿಲ್ಲೆಯಲ್ಲಿ ಕಂಡುಬಂದಿಲ್ಲ. ನದಿಗಳು ಉಕ್ಕುವುದು, ತಗ್ಗುಪ್ರದೇಶ ಜಲಾವೃತವಾಗುವುದು, ಶಾಲಾ ಕಾಲೇಜುಗಳಿಗೆ ರಜೆ ನೀಡುವುದು, ಗಂಜಿ ಕೇಂದ್ರ ಸ್ಥಾಪಿಸುವುದು, ದೋಣಿಗಳಲ್ಲಿ ರಕ್ಷಣಾ ಕಾರ್ಯ, ಜನಜೀವನ ಅಸ್ತವ್ಯಸ್ತಗೊಳ್ಳುವುದು.. ಇದ್ಯಾವುದೇ ಚಿತ್ರಣ ಈ ಬಾರಿ ಕಾಣಿಸಿಲ್ಲ. ಜಿಲ್ಲೆಯ ಮಟ್ಟಿಗೆ ಒಂದೆರಡು ಸಲವಾದರೂ ಈ ಪರಿಸ್ಥಿತಿ ಕಂಡುಬರದಿದ್ದರೆ ಮಳೆಗಾಲದ ಬಿರುಸು ಇಲ್ಲವೆಂದೇ ಅರ್ಥ. ಈ ಬಾರಿ ಯಾವುದೇ ಅನಾಹುತ ಸೃಷ್ಟಿಯಾಗಿಲ್ಲ ಎಂಬುದು ಸಮಾಧಾನ ಕೊಡುವಂತಿದ್ದರೂ, ಇತ್ತೀಚಿನ ದಿನಗಳಲ್ಲಿ ಯಾಕೋ ಮಳೆಗಾಲದ ಠೀವಿ-ಠಾಕು, ಅಬ್ಬರಗಳು ಕ್ಷೀಣಗೊಳ್ಳುತ್ತಿದೆ ಎನ್ನುವುದು ಮಾತ್ರ ಸ್ಪಷ್ಟ.
ಹೌದು, ಮಳೆಗಾಲ ಎಂಬುದರ ವ್ಯಾಖ್ಯಾನ ನಿಧಾನವಾಗಿ ಬದಲಾಗುತ್ತಿದೆ. ದಿನಗಟ್ಟಲೆ ಕತ್ತಲು ಕವಿದು ಹನಿ ಕಡಿಯದೆ ಸುರಿಯುತ್ತಿದ್ದ ಮಳೆ ಇಂದು ಬರೀ ನೆನಪಷ್ಟೇ. ಗುಡುಗು, ಮಿಂಚು ಮತ್ತು ಅದರ ಪ್ರಭಾವಕ್ಕೆ ಸೃಷ್ಟಿಯಾಗುವ ಸಸ್ಯಗಳು, ಜೀವಿಗಳು ಈಗ ಇತಿಹಾಸ.
ಕೃಷಿ ಚಟುವಟಿಕೆಗಳಿಂದ ಜನ ಇಂದು ದೂರವಾಗಿದ್ದಾರೆ. ಜಿಲ್ಲೆಯಲ್ಲಿ ವ್ಯಾಪಕವಾಗಿ ಕೃಷಿ ವಿಸ್ತಾರವಿದ್ದ ಕಾಲದಲ್ಲಿ ಜನ ಮಳೆಗಾಗಿ ತಪಸ್ಸು ಮಾಡುತ್ತಿದ್ದರು, ಹರಕೆ ಹೊರುತ್ತಿದ್ದರು, ಪೂಜೆ, ಪ್ರಾರ್ಥನೆ ನಡೆಸುತ್ತಿದ್ದರು. ಆದರೆ ಇತ್ತೀಚೆಗೆ ಏನಾಗಿದೆ? ಜಾಗತೀಕರಣಕ್ಕೆ ಒಡ್ಡಿಕೊಂಡು ಬದಲಾದ ಪರಿಸ್ಥಿತಿಯಲ್ಲಿ ಮಣ್ಣಿನ ನಂಟನ್ನು ಕಳೆದುಕೊಂಡ ಜನ, ಔದ್ಯಮಿಕ ನಂಟಿನತ್ತ ಹೊರಳಿದ್ದಾರೆ. ಹಾಗಾಗಿ ಇಂದು ಮಳೆ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುತ್ತಿಲ್ಲ. ಮಳೆ ಎಂದರೆ ತಾತ್ಸಾರ, ಮಳೆ ಎಂದರೆ ಉದಾಸೀನ. ಒಂದರೆಡು ಮಳೆ ಬಂದರೂ ಕೂಡಾ 'ಏನಪ್ಪಾ ಮಳೆಗಾಲ... ಒಮ್ಮೆ ಮಳೆ ನಿಲ್ಲಬಾರದೇ...' ಎಂದು ಚಡಪಡಿಸುತ್ತಾರೆ.
ಬರೀ ಹಣದ ಹಿಂದೆ ಬಿದ್ದಿರುವ ಇಂದಿನ ಮಂದಿಗೆ ಮಳೆ ಬೇಡ ನಿಜ. ಆದರೆ ಈಗಲೂ ಕೃಷಿ ಆಸಕ್ತಿ ಉಳಿಸಿಕೊಂಡು ಪರಂಪರೆ ಮುಂದುವರಿಸುವ ಇನ್ನೂ ಅದೆಷ್ಟೋ ರೈತರಿಗೆ ಮಳೆಯಂತೂ ಸಮೃದ್ಧವಾಗಿ ಬರಲೇಬೇಕು. ನೀರಿಲ್ಲದಿದ್ದರೆ ಅನ್ನವಿಲ್ಲ, ಅನ್ನವಿಲ್ಲದಿದ್ದರೆ ಬದುಕಿಲ್ಲ. ಇವೆರಡನ್ನೂ ಕಳೆದುಕೊಳ್ಳುತ್ತಿದ್ದೇವೆ ಎಂಬ ಅರಿವಿಲ್ಲದೆ ಬುದ್ಧಿಭ್ರಮಣೆಗೊಳಗಾದ ಜನಕ್ಕೆ ಪ್ರಕೃತಿಯೂ ಕೂಡಾ ಈ ಮೂಲಕ ತನ್ನದೇ ಚಾಲಾಕಿ ನಡೆ ತೋರಿಸುತ್ತಿದೆಯೇ?
ಏನೇ ಆದರೂ ಪ್ರಕೃತಿಯ ಉಳಿವಿಗೆ ಪ್ರಾಣಿ, ಪಕ್ಷಿಗಳ ಬದುಕಿಗೆ, ಹಸಿರು ಕಾಡುಗಳ ರಕ್ಷಣೆಗಾಗಿಯಾದರೂ ಮಳೆ ಬಂದೇ ಬರುತ್ತದೆ. ಆದರೆ ಅದು ಮನುಷ್ಯನ ಮರ್ಜಿಗೆ ಸರಿಯಾಗಿ ಇರಲಾರದು ಅಷ್ಟೇ. ಕಳೆದ ಕೆಲ ವರ್ಷಗಳ ಮಳೆಗಾಲದಲ್ಲಿ ಇಂತಹದ್ದೊಂದು ಸೂಚನೆ ಮತ್ತು ಪಾಠವನ್ನು ಪ್ರಕೃತಿ ತೋರಿಸಿಕೊ‌ಡುತ್ತಲೇ ಬಂದಿದೆ.
ದುರಂತವೆಂದರೆ ಮನುಷ್ಯ ಮಾತ್ರ ಬುದ್ಧಿ ಕಲಿತಿಲ್ಲ.
ವಿಪರ್ಯಾಸವೆನ್ನುವುದು ಇದಕ್ಕೇ ಅಲ್ಲವೇ?

ವ್ಯವಸ್ಥೆಯೊಂದಿಗೆ ರಾಜಿ ಎಂದರೆ...

ವ್ಯವಸ್ಥೆಯೊಂದಿಗೆ ರಾಜಿ ಮಾಡಿಕೊಂಡು ಬದುಕುವುದು ಎಂದರೆ ಬಹುಶಃ ಹೀಗೆಯೇ ಇರಬೇಕು.
ದೇಶವನ್ನೇ ಬೆಚ್ಚಿಬೀಳಿಸುವ ಬಾಂಬ್ ಸ್ಫೋಟ ಪಕ್ಕದಲ್ಲೇ ಘಟಿಸಿದ್ದರೂ, ಮಾರನೇ ದಿನ ಏನೂ ನಡೆದೇ ಇಲ್ಲವೇನೋ ಎಂಬಂತೆ ಮುಂಬೈ ಮತ್ತೆ ಸಹಜ ಸ್ಥಿತಿಗೆ ಮರಳಿದೆ.
'ಸುಮ್ಮನೆ ಸರಕಾರವನ್ನು ಒತ್ತಾಯಿಸುವುದರಲ್ಲಿ ಏನು ಪ್ರಯೋಜನವಿದೆ? ಪಾರ್ಲಿಮೆಂಟ್ ಮೇಲೆಯೇ ದಾಳಿ ನಡೆದಾಗಲೂ ಅದಕ್ಕೆ ಏನೂ ಮಾಡಲಾಗಲಿಲ್ಲ. ನಾವೇನಿದ್ದರೂ ಆಮ್ ಆದ್ಮಿ, ಆಮ್ ಆದ್ಮಿಯಾಗಿಯೇ ಉಳಿದುಬಿಟ್ಟಿದ್ದೇವೆ...' ಹೀಗೆಂದು ನಿರಾಸೆ ವ್ಯಕ್ತಪಡಿಸುತ್ತಾರೆ ಸೂರ್ಯಕುಮಾರ್ ಪುರೋಹಿತ್.
ಅವರು ಮುಂಬೈ ಮೇಲೆ ನಡೆದ ಮೂರು ಬಾಂಬ್ ದಾಳಿಗಳನ್ನು ಕಂಡಿದ್ದಾರೆ. ಅವರದು ಅಂಗಡಿ ವ್ಯಾಪಾರ.
ಮೊನ್ನೆ ತಮ್ಮ ಅಂಗಡಿಗಿಂತ ಕೇವಲ ಐವತ್ತು ಅಡಿಗಳಷ್ಟು ದೂರದಲ್ಲಿ ಒಂದು ಸ್ಫೋಟ ನಡೆದಿದೆ. ಆದರೆ ಇಂದು ಅವರು ಎಂದಿನಂತೆ ಅಂಗಡಿ ತೆರೆದು ವ್ಯಾಪಾರ ನಡೆಸುತ್ತಿರುವುದು ಕಂಡುಬರುತ್ತಿದೆ.
ಅದಕ್ಕೋ ಏನೋ ಮುಂಬೈಯನ್ನು ಮಾಯಾನಗರಿ ಎನ್ನುವುದು.
ಇಲ್ಲಿ ದಿಕ್ಕಿಲ್ಲದ ದರಬೇಶಿಗಳಿಂದ ಹಿಡಿದು, ಅಂತಸ್ತಿನ ಮೇಲೆ ಅಂತಸ್ತು ಪೇರಿಕೊಂಡು ಸುಖದ ಸುಪ್ಪತ್ತಿಗೆಯಲ್ಲಿ ಕಳೆದುಹೋದ ಆಧುನಿಕ ಕುಬೇರರನ್ನು ಒಂದೇ ಪಟ್ಟಣದಲ್ಲಿ ಕಾಣಬಹುದು. ಮುಂಬೈ ಯಾರನ್ನೂ ತಿರಸ್ಕರಿಸುವುದಿಲ್ಲ. ಬಂದಷ್ಟೂ ಮಂದಿಯನ್ನು ತನ್ನ ತೆಕ್ಕೆಗೆಳೆದುಕೊಳ್ಳುತ್ತಲೇ ಇದೆ.
ಇಲ್ಲಿ ಬದುಕು ಎಂದರೆ ಹೋರಾಟ. ನಿತ್ಯ ಹೊಡೆದಾಡಲೇಬೇಕು. ಅದು ವ್ಯವಸ್ಥೆಯೊಂದಿಗಿರಬಹುದು, ವೃತ್ತಿಯೊಂದಿಗಿರಬಹುದು, ದ್ವೇಷ ಸಾಧಿಸುವವರೊಂದಿಗಿರಬಹುದು, ಪ್ರತಿಷ್ಠೆಗೇ ಇರಬಹುದು ಅಥವಾ ಕರುಳು ಹಿಂಡುವ ಹಸಿವಿನೊಂದಿಗಿರಬಹುದು, ಹೊಡೆದಾಡುತ್ತಲೇ ಇರಬೇಕು. ಅದು ಅನಿವಾರ್ಯವೂ ಕೂಡಾ.
ಇದೆಲ್ಲದರ ನಡುವೆಯೂ ಇಲ್ಲಿನ ಅಮಾಯಕರು ನರಮೇಧದಂತಹ ಕೃತ್ಯಗಳನ್ನು ಸಹಿಸಿಕೊಳ್ಳಲೇಬೇಕು.
ಆದರೆ ಇಂದು ಮುಂಬೈಯನ್ನು ನೋಡಿ, ಅಲ್ಲಿ ಎಲ್ಲವೂ ಎಂದಿನಂತೆಯೇ ಇದೆ. ಮಕ್ಕಳು ನಿರಾತಂಕದಿಂದ ಶಾಲೆಗೆ ತೆರಳುತ್ತಿದ್ದಾರೆ. ನೌಕರಿಗೆ ತೆರಳುವವರು, ಪಾನ್ ವಾಲಾಗಳು, ಡಬ್ಬಾವಾಲಾಗಳು, ದಿನಸಿ ಅಂಗಡಿಗಳು, ಚಿತ್ರಮಂದಿರಗಳು ಎಂದಿನಂತೆ ವ್ಯವಹಾರ ಮಾಡುತ್ತಿವೆ. ಹಾಲು, ದಿನಪತ್ರಿಕೆ ಮೊದಲಾದ ಅಗತ್ಯ ವಸ್ತುಗಳೂ ಅಭಾಧಿತ. ಮುಂಬೈಗರ ಮುಖದಲ್ಲಿ ಈಗ ಭಯ ಕಾಣಿಸುತ್ತಿಲ್ಲ. ಆದರೆ ಆಕ್ರೋಶವಿದೆ, ವ್ಯವಸ್ಥೆಯ ಮೇಲೆ ಜಿಗುಪ್ಸೆಯಿದೆ. ಅದೆಲ್ಲವನ್ನೂ ಈ ದುರಂತಗಳಂತೆಯೇ ಅವರು ಮೌನವಾಗಿ ನುಂಗಿಕೊಂಡಿದ್ದಾರೆ.
ಯಾಕೆಂದರೆ ಅವರು ಮತ್ತದೇ ಆಮ್ ಆದ್ಮಿ!
ಮುಂಬೈಗರನ್ನು ಮೆಚ್ಚಬೇಕಿರುವುದೂ ಇದೇ ಕಾರಣಕ್ಕೆ. ಯಾಕೆಂದರೆ ಅವರಲ್ಲಿ ಛಲವಿದೆ. ಅದುಮಿಟ್ಟಷ್ಟು ಪುಟಿದೇಳುವ ಹಠವಿದೆ. ಅವರಿಗೆ ಗೊತ್ತು. ಅವರನ್ನು ಕಾಯುವವರು ಯಾರೂ ಇಲ್ಲ. ಅಥವಾ ಕಾಯುವವರು ಬರುತ್ತಾರೆಂದು ಕಾದು ಕುಳಿತುಕೊಳ್ಳುವುದೂ ಇಲ್ಲ.
ಈಸ ಬೇಕು, ಇದ್ದು ಜೈಸಬೇಕು. ಈ ಮಾತನ್ನೂ ಅವರು ಅರ್ಥ ಮಾಡಿಕೊಂಡಿದ್ದಾರೆ!

ನೋಡಿ ನಿರ್ಮಲ ಜಲ ಸಮೀಪದಿ...

ಕರಾವಳಿಗೂ ಯಕ್ಷಗಾನಕ್ಕೂ ಅದೇನೋ ಅವಿನಾಭಾವ ಸಂಬಂಧ. ಮಳೆ ನಿಂತು ಹೋದರೂ ಹನಿ ನಿಲ್ಲಲಿಲ್ಲ ಎಂಬಂತೆ ಯಕ್ಷಗಾನ ದೊಡ್ಡ ಮೇಳಗಳು ರಜೆ ಘೋಷಿಸಿ ಕಲಾವಿದರು ಮನೆಯತ್ತ ಹೆಜ್ಜೆ ಹಾಕಿದರೂ ನಮ್ಮಲ್ಲಿ ಯಕ್ಷಮಾತೆಯ ಗೆಜ್ಜೆಯ ನಿನಾದ ಮಾತ್ರ ನಿಲ್ಲುವುದಿಲ್ಲ.
ಮಳೆಗಾಲದಲ್ಲಿ  ಸಾಮಾನ್ಯವಾಗಿ ದೊಡ್ಡದೊಡ್ಡ ಮೇಳಗಳಿಗೆ ರಜೆಯ ಕಾಲ. ಹಾಗಾಗಿ ದೊಡ್ಡ ಮೇಳಗಳ ಅನುಪಸ್ಥಿತಿಯಲ್ಲಿ  ಯಕ್ಷಸೇವೆಯಲ್ಲಿ ತೊಡಗುವುದೇ ಈ ಚಿಕ್ಕಮೇಳ.
ಏನಿದು ಚಿಕ್ಕಮೇಳ?
ಚಿಕ್ಕ ಮೇಳ ಎಂದರೆ ಯಕ್ಷಗಾನ ಮೇಳದ ಕಿರು ರೂಪ. ದೊಡ್ಡ ಮೇಳಗಳಲ್ಲಿ ಇರುವಷ್ಟು ಕಲಾವಿದರು ಇದರಲಿಲ್ಲ. ಇಲ್ಲಿ ಭಾಗವತರು, ಚೆಂಡೆವಾದಕರು, ಮದ್ದಳೆಯವರು , ಶೃತಿಗಾರ ಹಾಗೂ ಇಬ್ಬರು ವೇಷದಾರಿಗಳಷ್ಟೇ ಯಕ್ಷಗಾನ ನಡೆಸಿಕೊಡುತ್ತಾರೆ. ವ್ಯತ್ಯಾಸವೆಂದರೆ ಒಂದು ಪ್ರಸಂಗವನ್ನೂ ಪೂರ್ತಿಯಾಗಿ ಆಡಿತೋರಿಸುವುದು ಇಲ್ಲಿ ಸಾಧ್ಯವಿಲ್ಲ. ಚಿಕ್ಕಮೇಳಗಳು ಯಾವುದಾದರೊಂದು ಪೌರಾಣಿಕ ಪ್ರಸಂಗದ ಆಯ್ದ ಭಾಗವನ್ನಷ್ಟೇ ಇಲ್ಲಿ ನಿರೂಪಿಸುತ್ತಾರೆ.
ಈ ಚಿಕ್ಕ ಮೇಳಗಳ ಕಲಾಸೇವೆ ಏನಿದ್ದರೂ ಮುಖ್ಯವಾಗಿ ಶ್ರೀಕೃಷ್ಣ ಜನ್ಮಾಷ್ಟಮಿ, ಗಣೇಶ ಚತುರ್ಥಿ, ನವರಾತ್ರಿ ಸಂದರ್ಭದಲ್ಲಿ. ಈ ಸಮಯದಲ್ಲಿ ಕಲಾವಿದರ ಪುಟ್ಟ ತಂಡವೊಂದು ರೂಪುಗೊಳ್ಳುತ್ತದೆ. ಬಳಿಕ ತಮ್ಮ ಕಲಾ ಪ್ರಕಾರಗಳೊಂದಿಗೆ ಹೊರಟು ಒಂದಷ್ಟು ಮನೆಗಳನ್ನು ಗುರುತಿಸಿ ಹಿಂದಿನ ದಿನ ಅವರಿಂದ ಆಮಂತ್ರಣ ಪಡೆದುಕೊಳ್ಳಲಾಗುತ್ತದೆ. ಕಾರ್ಯಕ್ರಮದ ಪ್ರಯುಕ್ತ ಗಣಪತಿ ಸ್ವಸ್ತಿಕಕ್ಕೆ ಬೇಕಾಗುವ ಕೆಲವೇ ವಸ್ತುಗಳ ಪಟ್ಟಿ ಬರೆದುಕೊಟ್ಟು ಸಂಜೆ ಇಂತಹಾ ಸಮಯಕ್ಕೆ ಬರುವುದಾಗಿ ಹೇಳಿ ಅಲ್ಲಿಂದ ವಿದಾಯ ಕೋರುತ್ತದೆ. ನಂತರ ಮಾರನೇ ದಿನ ನಿಗದಿತ ಸಮಯಕ್ಕೆ ಅಲ್ಲಿ ಯಕ್ಷ ಝೆಂಕಾರ ಅನುರಣಿಸುತ್ತದೆ.
ಎಲ್ಲರಿಗೂ ಸಂಭ್ರಮ!
ಮನೆಯೊಳಗೆ ಯಕ್ಷಗಾನ ನಡೆದರೆ ಅದು ಶುಭಪ್ರದ ಎನ್ನುವುದು ನಮ್ಮಲ್ಲಿ ಹಿಂದಿನಿಂದಲೂ ಇರುವ ನಂಬಿಕೆ. ಇಂದಿಗೂ ಹಲವು ಮನೆಗಳಲ್ಲಿ ಯಕ್ಷಗಾನ ಬಯಲಾಟ ಆಡಿಸುವ ಪದ್ದತಿಯಿದೆ. ಯಕ್ಷಗಾನ ಆಡಿಸುತ್ತೇನೆ ಎಂದು ಹೊತ್ತ ಎಷ್ಟೋ ಹರಿಕೆಗಳು ಫಲನೀಡಿದ ಉದಾಹಣೆಗಳೂ ನಮ್ಮ ಮುಂದಿದೆ. ಹಾಗಾಗಿ ಅದೇ ಕಲಾಪ್ರಕಾರವಾಗಿರುವ ಈ ಚಿಕ್ಕ ಮೇಳಗಳು ಮನೆಗೆ ಆಗಮಿಸಿದಾಗ ಸಹಜವಾಗಿಯೇ ಮನೆಯ ಹಿರಿಕಿರಿಯರಾದಿ ಎಲ್ಲರೂ ಸಂಭ್ರಮ ಪಡುತ್ತಾರೆ.
ಸುಮಾರು ಅರ್ಧಗಂಟೆಗಳಷ್ಟು ಕಾಲ ಈ ಯಕ್ಷಗಾನ ಜರುಗುತ್ತದೆ. ಪ್ರದರ್ಶನದ ಬಳಿಕ ಇಷ್ಟಾನುಸಾರ ನೀಡಿದ ಕಾಣಿಕೆ ಪ‌ಡೆಯುವ ಈ ಚಿಕ್ಕಮೇಳಗಳು ಮುಂದೆ ಇನ್ನೊಂದು ಮನೆಯತ್ತ ಸಾಗುತ್ತದೆ.
ಪ್ರಸ್ತುತ ಚಿತ್ರದಲ್ಲಿರುವ ತಂಡ ಮಂದಾರ್ತಿ ಶ್ರೀ ದುರ್ಗಾ ಪರಮೇಶ್ವರಿ ಯಕ್ಷಗಾನ ಮಂಡಳಿಯ ಕಲಾವಿದರದ್ದು. ಇಲ್ಲಿ ಭಾಗವತರಾಗಿ ಅಶೋಕ ಕುಂದರ್ ಅಲ್ಲೂರು, ಮದ್ದಲೆಯಲ್ಲಿ ಮಹಾಬಲ ಬುಕ್ಕಿಗುಡ್ಡೆ, ಶ್ರುತಿಯಲ್ಲಿ ನಾಗರಾಜ ಸಿದ್ಧಾಪುರ, ಕಲಾವಿದರಾದ ಜಯರಾಮ ಶಂಕರ ನಾರಾಯಣ, ಸ್ತ್ರೀವೇಷದಲ್ಲಿ ವಿಶ್ವನಾಥ ಕಿರಾಡಿಯವರಿದ್ದಾರೆ. ಚಿಕ್ಕಮೇಳದ ಮೆನೇಜರ್ ಪ್ರಭಾಕರ್ ನಾಯಕ್ ನಂಚಾರು ಹಾಗೂ ಯಜಮಾನರು ದಿನಕರ ಕುಂದರ್ ನಡೂರು ಮಂದಾರ್ತಿ.
ಇತ್ತೀಚಿನ ದಿನಗಳಲ್ಲಿ ಬಯಲಾಟ ನೋಡುವ ವ್ಯವಧಾನ ನಮ್ಮಲ್ಲಿ ಕಡಿಮೆಯಾಗುತ್ತಿದೆ. ಅಂತದ್ದರ ನಡುವೆ ಇಂತಹಾ ಯಕ್ಷಗಾನದ ಸಾರವನ್ನು ತಿಳಿಸುವ ಚಿಕ್ಕಮೇಳಗಳು ಈ ರೀತಿಯಲ್ಲಿ ಶ್ಲಾಘನೀಯ ಕೆಲಸ ಮಾಡುತ್ತಿದೆ. ಇಂದಿನ ಪ್ರಬಲ ಮಾಧ್ಯಮವಾಗಿ ರೂಪುಗೊಂಡಿರುವ ಟೀವಿ ವಾಹಿನಿಗಳಲ್ಲಿ ಮೂಡಿ ಬರುವ ರಿಯಾಲಿಟಿ ಶೋ, ಧಾರಾವಾಹಿ ಇನ್ನೊಂದು ಮತ್ತೊಂದರ ನಡುವೆ ಕರಾವಳಿಯ ಗಂಡುಕಲೆ ಯಕ್ಷಗಾನ ಅಪಾಯದಂಚಿನಲ್ಲಿರುವುದಂತೂ ಸತ್ಯ
ಯುವಜನತೆ ಇಂತಹಾ ಪ್ರಯತ್ನಗಳಿಗೆ ಪ್ರೋತ್ಸಾಹ ನೀಡುವಂತಾಗಬೇಕು. ಈ ಲೇಖನಕ್ಕೆ ಚಿತ್ರಗಳನ್ನು ಒದಗಿಸಿದವರು ಸಚಿನ್ ಬಾರಕೂರು. ಮಾಹಿತಿ ನೀಡಿದವರು ವಿಜಯ್ ಬಾರಕೂರು.
ಅವರಿಗೆ ಕೃತಜ್ಞತೆಗಳು.

ಅದಕ್ಕೋ ಏನೋ, ದೇವರಿಗೂ ಮುನ್ನ ನಿನ್ನ ನೆನಪಾಗುತ್ತದೆ!

ಪುಟ್ಟಾ!
ಮಳೆಯ ಮೊದಲ ಹನಿ ಓಡೋಡಿ ಬಂದು ಮುತ್ತಿಕ್ಕಿದಾಗ ಖುಷಿಯಲ್ಲಿ ಇಳೆ ಅರಳಿ ನಿಲ್ಲುವಂತೆ, ಈ ಪತ್ರ ನಿನ್ನ ಕೈಸೋಕಿದಾಗ ಕಣ್ಣಲ್ಲೊಂದು ಮಿಂಚು ಸರಿದಾಡಿ ತುಟಿಯಲ್ಲೊಂದು ನಗೆ ಅರಳಿದರೆ ನಾನು ಧನ್ಯ.
ಅಂಥಾ ವಿಶೇಷವೇನಿಲ್ಲ. ಯಾಕೋ ಬೆಳಗ್ಗಿನಿಂದಲೇ ವಿಪರೀತ ಅನ್ನುವಷ್ಟು ನಿನ್ನ ನೆನಪು. ಯಾಕೆ ಹೀಗೆ? ಗೊತ್ತಾಗುತ್ತಿಲ್ಲ. ಪ್ರೀತಿಯಲ್ಲಿ ಹೀಗೇನಾ ಅಂತ ಮನವನ್ನು ಕೇಳಿದರೆ ಮೊದಲ ಪ್ರೀತಿಯಾದ್ದರಿಂದ ಪಾಪ ಅದಕ್ಕೂ ಉತ್ತರ ಗೊತ್ತಿಲ್ಲ.
ಗಗನವೇ ಬಾಗಿ
ಭುವಿಯನು ಕೇಳಿದಾ ಹಾಗೆ...
ಕಡಲು ಕರೆದಂತೆ
ನದಿಯನು, ಭೇಟಿಗೆ...

ಅದೆಷ್ಟು ಆಕಸ್ಮಿಕವಾಗಿತ್ತಲ್ಲವೇ ನಮ್ಮ ಭೇಟಿ. ಒಂದೇ ಊರು, ಒಂದೇ ದಾರಿ, ಒಂದೇ ಕಾಲೇಜು... ಹೀಗಿದ್ದರೂ ಅದೆಷ್ಟು ದಿನಗಳನ್ನು ಅಪರಿಚಿತರಂತೆ ಕಳೆದುಬಿಟ್ಟೆವು ನೋಡು. ನೆನಪಿಸಿಕೊಂಡರೆ ಇಂದು ನಗೆಯುಕ್ಕುತ್ತದೆ.
ಯಾರೂ ಬಂದಿರದ ಮನಸಲಿ
ನಿನ್ನ ಆಗಮನ ಈ ದಿನ...
ನೀಡುವಾ ಮುನ್ನ
ನಾನೇ ಆಮಂತ್ರಣ...

ಹೌದು ಪುಟ್ಟಾ, ನನಗಿಂದೂ ನೆನಪಿದೆ. ತಿಳಿನೀಲಿ ಜೀನ್ಸಿನ ಮೇಲೊಂದು ಟೀ ಶರ್ಟು ಹಾಕ್ಕೊಂಡು ನೀನಂದು ಕಾಡಾನೆಯಂತೆ ಕ್ಲಾಸ್ ರೂಮೊಳಗೆ ನುಗ್ಗಿದ್ದೆ. ಇಲ್ಲಿ ವಿನು ಯಾರು? ಅಂತ ನೀನು ಕೇಳುತ್ತಿದ್ದರೆ ಕೂತಲ್ಲೇ ನನಗೆ ಸಣ್ಣ ನಡುಕ. ಅಂದು ಕ್ಲಾಸ್ ರೂಮ್ ಪೂರ್ತಿ ನನ್ನನ್ನೇ ನೋಡಿತ್ತು. ಸೀದಾ ಹತ್ತಿರಕ್ಕೆ ಬಂದವನೇ ಹೊರಗೆ ಯಾರೋ ಕರೀತಿದ್ದಾರೆ ನೋಡಿ ಅಂತ ಹೇಳಿ ನನ್ನ ರಿಪ್ಲೈಗೂ ಕಾಯದೆ ಬಿರುಗಾಳಿಯಂತೆ ನೀನು ನಡೆದುಹೋಗಿದ್ದೆ.
ಜೀವನ, ಈ ಕ್ಷಣ
ಶುರುವಾದಂತಿದೆ...
ಕನಸಿನ ಊರಿನ
ಕದ ತೆರೆಯುತ್ತಿದೆ...

ನಿಜ ಹೇಳುತ್ತೇನೆ ಕೇಳು. ಅಂದು ನೀನು ಏನು ಹೇಳಿ ಹೋದೆ ಅನ್ನುವುದು ಪಕ್ಕದ ಗೆಳತಿಯೇ ಹೇಳಬೇಕಾಯಿತು! ಯಾಕೆ ಗೊತ್ತಾ? ನಾನು ನಿನ್ನ ಮತ್ತು ಬರೀ ನಿನ್ನನ್ನಷ್ಟೇ ನೋಡುತ್ತಾ ಕೂತಿದ್ದೆ. ಅಂದ ಹಾಗೆ ನನ್ನಲ್ಲಿ ಪ್ರೀತಿ ಹುಟ್ಟಿದ್ದು ಅಲ್ಲೇನಾ? ಗೊತ್ತಿಲ್ಲ.
ಅಂದು ಕ್ಲಾಸ್ ರೂಮ್ ನಿಂದ ಹೊರಗೆ ಬಂದರೆ ಅಲ್ಲಿ ಚಿಕ್ಕಪ್ಪ ನಿಂತಿದ್ದರು. ನಿನ್ನ ಅಪ್ಪನಿಗೆ ಹುಷಾರಿಲ್ಲ. ಆಸ್ಪತ್ರೆಗೆ ಅಡ್ಮಿಟ್ ಮಾಡಿದ್ದೀವಿ. ಸಾಧ್ಯವಾದರೆ ಈಗಲೇ ಹೊರಟು ಬಾ ಅಂದರು. ಅಂದೂ ಕೂಡಾ ಇಂದಿನ ಹಾಗೆಯೇ. ಕುಂಭದ್ರೋಣ ಮಳೆ. ಬಸ್ ಸ್ಟಾಪ್ ನ ವರೆಗೆ ನಡೆಯೋಣವೆಂದರೆ ಗುಡುಗು ಸಿಡಿಲಿನ ಭಯ. ಕ್ಷಣಕಾಲ ಏನು ಮಾಡಲಿ ಅಂತಾನೇ ತೋಚಲಿಲ್ಲ. ಆದರೆ, ಅದೆಲ್ಲಿದ್ದೆಯೋ ಮಹರಾಯ ನೀನು? ಬಿರಬಿರನೆ ಬಂದವನೇ ನಡಿ... ಅಂತಷ್ಟೇ ಹೇಳಿ ಹೆಗಲಿಗೆ ಜಾಕೆಟ್ ತೊಡಿಸಿ ಬೈಕಲ್ಲಿ ಕೂರಿಸ್ಕೊಂಡು ಹೊರಟೇ ಬಿಟ್ಟಿದ್ದೆ. ಕಣ್ಣುಮುಚ್ಚಿ ತೆರೆಯುವಷ್ಟರಲ್ಲಿ ಆಸ್ಪತ್ರೆ ಕಣ್ಣೆದುರಿಗಿತ್ತು. ಅಚ್ಚರಿಯೆಂದರೆ ಖುದ್ದು ಅಪ್ಪನೇ ಬಂದು ಹಾಯ್ ಮಗಳೇ... ಅಂದಿದ್ದರು. ಬರೀ ಸುಸ್ತು ಇತ್ತು ಕಣಮ್ಮ... ಇವರೆಲ್ಲ ಗಾಬರಿಯಾಗಿ ಬೇಡಬೇಡವೆಂದರೂ ಇಲ್ಲಿಗೆ ಎಳ್ಕೊಂಡು ಬಂದ್ರು, ನೀನ್ಯಾಕೆ ಅಷ್ಟೊಂದು ಗಾಬರಿಯಾದೆ ಅಂತ ಅವರು ಕೇಳುತ್ತಿದ್ದರೆ, ಇಲ್ಲಪ್ಪಾ... ನನಗಿಂತ ಗಾಬರಿ ಈ ಹುಡುಗನಿಗಾಗಿತ್ತು ಅನ್ನಬೇಕು ಅನಿಸಿತು. ನಿಜ ಹೇಳು ಅದಾಗಲೇ ನಿಂಗೂ ನನ್ನ ಮೇಲೆ ಪ್ರೀತಿ ಹುಟ್ಟಿತ್ತಲ್ವಾ?
ಅಳಬೇಕು ಒಮ್ಮೆ
ಅಂತ ಅನಿಸಿದೆ
ಖುಷಿಯೀಗ ಮೇರೆಮೀರಿ...
ಮಧುಮಾಸದಂತೆ ಕೈ ಚಾಚಿದೆ
ಹಸಿರಾಯ್ತು ನನ್ನ ದಾರಿ...

ಅಂದು ನೀನು ನನಗೆ ಎಷ್ಟು ಇಷ್ಟವಾಗಿದ್ದೆ ಅಂದರೆ ನಿನ್ನ ಕೈಗೊಂದು ಮುತ್ತಿಕ್ಕಿ ಐ ಲವ್ ಯೂ ಅನ್ನಬೇಕು ಅನ್ನಿಸಿತ್ತು. ನಂತರದ್ದು ಅದೆಷ್ಟು ಸುಂದರ ದಿನಗಳಾದವಲ್ಲವಾ ನಮ್ಮ ಬದುಕಲ್ಲಿ? ದಿನಾ ಭೇಟಿಯಾಗುತ್ತಿದ್ದೆವು, ದಾರಿಗುಂಟ ಮಾತು, ನೀನು ಮಾತಾಡುತ್ತಲೇ ಇದ್ದೆ, ನಾನು ಬರೀ ಕೇಳುತ್ತಾ ನಿಲ್ಲುತ್ತಿದ್ದೆ.
ಸಾವಿನ ಅಂಚಿನ
ಬದುಕಂತಾದೆ ನೀ...
ಸಾವಿರ ಸೂರ್ಯರ
ಬೆಳಕಂತಾದೆ ನೀ...

ನೋಡ ನೋಡುತ್ತಲೇ ಬದುಕು ಬದಲಾಗಿ ಹೋಯಿತು ನೋಡು, ಒಣಗಿ ಹೋದ ಮರ ಮತ್ತೆ ಚಿಗುರೊಡೆದಂತೆ. ಬದುಕಿನ ಅದಷ್ಟೂ ದುಃಖ, ಸಂತೋಷಗಳನ್ನು ಹಂಚಿಕೊಳ್ಳಲು, ಸೋತಾಗ ಕೈ ಹಿಡಿದು, ಗೆದ್ದಾಗ ಕೈ ತಟ್ಟಿ ಜೊತೆಗಿರಲು ಜೊತೆಗಾರನೋರ್ವ ಸಿಕ್ಕಂತಾಯಿತು. ಮೆಲ್ಲಮೆಲ್ಲನೆ ಬದುಕಲ್ಲೊಂದು ಕನಸು, ಗುರಿ ಸ್ಪಷ್ಟವಾಗತೊಡಗಿತು.
ಕೊನೆಯಾಸೆ ಒಂದೆ
ಈ ಜೀವಕೆ...
ನಿನ್ನ ಕೂಡಿ ಬಾಳಬೇಕು...
ಪ್ರತಿ ಜನ್ಮದಲ್ಲೂ ನೀ ಹೀಗೆಯೇ
ನನ್ನ ಪ್ರೀತಿ ಮಾಡಬೇಕು...

ಹೌದು ಕಣೋ, ಅದೆಷ್ಟು ದೂರದ ಹಾದಿ ಜೊತೆಯಾಗಿ ನಡೆದು ಬಂದೆವು. ಹಿಂದಿರುಗಿ ನೋಡಿದರೆ ನೋವಿಗಿಂತ ನಲಿವುಗಳೇ ಹೆಚ್ಚಿವೆ. ಕಾರಣವಿಷ್ಟೇ ಹುಡುಗ ನಿಜಕ್ಕೂ ಒಳ್ಳೆಯವ. ಪ್ರೀತಿಗೆ ನಿಜವಾದ ಅರ್ಥದಂತಿರುವವ. ಅದಕ್ಕೋ ಏನೋ ದಿನಾ ಬೆಳಗ್ಗೆ ಎದ್ದಾಗ ದೇವರಿಗೂ ಮುನ್ನ ನೀನೇ ನೆನಪಾಗುತ್ತೀಯ! ಏನೇ ಇರಲಿ, ಮತ್ತೊಮ್ಮೆ ಹೇಳುತ್ತೇನೆ ಕೇಳು, ನಾನು ನಿನ್ನ ಪ್ರೀತಿಸ್ತಿದ್ದೀನಿ, ಪ್ರೀತಿಸುತ್ತೀನಿ ಮತ್ತು ಪ್ರೀತಿಸುತ್ತಲೇ ಇರುತ್ತೀನಿ.
ಹುಚ್ಚು ಹುಡುಗಿ ಅಂತೀಯಾ?

ನೋ ವನ್ ಈಸ್ ಪರ್ಫೆಕ್ಟ್...

ಕಲಿತುಕೊಳ್ಳುವಂತದ್ದು ಅದೆಷ್ಟಿದೆ!
ಮೈಮೇಲಿರುವ ಮಚ್ಚೆಯೋ, ಬಿಳಿಯಾದ ತಲೆಗೂದಲೋ, ಉದುರಿಹೋದ ಹಲ್ಲೋ ನೆನೆದುಕೊಂಡು ನಾವು ಜೀವಮಾನ ಪೂರ್ತಿ ಕೊರಗುತ್ತಿರುತ್ತೇವೆ.
ಆದರೆ ಇಲ್ಲೊಂದು ನಾಯಿಯಿದೆ ನೋಡಿ, ಭಲೇ ಚೂಟಿ.
ಎರಡು ಕಾಲಿನಲ್ಲಿ ನಡೆಯಲು ಶುರು ಮಾಡಿದರೆ ನಮ್ಮಕ್ಕಿಂತ ಸ್ಪೀಡು, ತುಂಬಿದ ಕ್ಲಾಸ್ ರೂಮ್ ಗೆ ದಿಢೀರನೆ ನುಗ್ಗಿ ಡ್ಯಾನ್ಸ್ ಮಾಡುತ್ತೆ. ಮುಚ್ಚಿದ್ದ ಬಾಗಿಲನ್ನು ದಢಾರನೆ ಓಪನ್ ಮಾಡಿ ನಡೆದುಬಿಡುತ್ತೆ. ಹಸಿವಾದರೆ ತನ್ನ ಆಹಾರ ತಾನೇ ಹುಡುಕಿ ತಿನ್ನುತ್ತದೆ. ನೆಟ್ಟಗೆ ನಿಂತು ಥೇಟು ಮನುಷ್ಯನಂತೆಯೇ ಅನುಕರಣೆ ಮಾಡುತ್ತದೆ. ತರಲೆಗೂ ಏನೂ ಕಮ್ಮಿ ಇಲ್ಲ...
ಆದರೆ... ಈ ಪ್ರಾಣಿಗೆ ಮುಂದಿನೆರಡು ಕೈಗಳೇ ಇಲ್ಲ... ಹಾಗಂತ ಅದೇನಾದರೂ ಕೊರಗುತ್ತಾ? ಊಟ ತಿಂಡಿ ಬಿಡುತ್ತಾ? ಡಿಪ್ರೆಸ್ ಆಗುತ್ತಾ? ಆತ್ಮಹತ್ಯೆಗೆ ಯತ್ನಿಸುತ್ತಾ? ತನ್ನನ್ನು ತಾನೇ ಬೈಕೊಳ್ಳುತ್ತಾ?
ಊಹೂಂ, ಖಂಡಿತಾ ಇಲ್ಲ. ಯಾಕಂದ್ರೆ ಅದಕ್ಕೆ ಗೊತ್ತು....
ಜೀನಾ ಯಹಾ.. ಮರ್ ನಾ ಯಹಾ.. ಇಸ್ಕೇ ಸಿವಾ ಜಾನಾ ಕಹಾ...?

ನಾವೆ ಸಾಗುತ್ತಿದೆ... ತೀರದ ನಿರೀಕ್ಷೆಯಲ್ಲಿ!

ಆಸೆಗಳು ಅದೆಷ್ಟೋ ಇದ್ದವು...
ಹೆಗಲಿಗೆ ಸ್ಟೆತಾಸ್ಕೋಪ್ ಇಳಿಬಿಟ್ಟುಕೊಂಡು ತಿರುಗುತ್ತಿದ್ದವರನ್ನು ಕಂಡಾಗ ಡಾಕ್ಟರಾಗಬೇಕು ಅಂತನಿಸಿತ್ತು.
ಗ್ರಾಫು, ಸ್ಕೇಲು, ಪೆನ್ಸಿಲ್ ಗಳ ನಡುವೆ ಕಳೆದುಹೋಗುವವರನ್ನು ಕಂಡಾಗ ಇಂಜಿನಿಯರ್ ಆಗಬೇಕು ಅಂತನಿಸಿತ್ತು. ಬದುಕಿಡೀ ಗೌರವ ಪಡೆದುಕೊಳ್ಳುವ ಮೇಸ್ಟ್ರರನ್ನು ಕಂಡು ನಾನೂ ಮೇಷ್ಟ್ರಾಗಬೇಕು ಅಂತನಿಸಿತ್ತು.
ಹೊಗೆ ಉಗುಳುತ್ತಾ ಸಾವಿರಾರು ಮಂದಿಯನ್ನು ಅಮ್ಮನ ಮಡಿಲಿನಂತೆ ಕೂರಿಸಿಕೊಂಡು ಕರೆದೊಯ್ಯುವ ರೈಲು ಕಂಡಾಗಲೆಲ್ಲಾ ಅದರ ಚಾಲಕನಾಗಬೇಕು ಅಂತ ಅನಿಸಿತ್ತು.
ಆದರೆ ಅದಾವುದೂ ಸಾಧ್ಯವಾಗಲೇ ಇಲ್ಲ.!
ಹಾಗಂತ ಆ ಬಗ್ಗೆ ನನ್ನನ್ನು ಯಾವ ದುಃಖವೂ ಕಾಡಿಲ್ಲ.
ಯಾಕೆಂದರೆ ನನಗೆ ಗೊತ್ತು. ಬದುಕೆನ್ನುವುದೇ ಹಾಗೆ. ನಾವೆ ಹತ್ತಿದ ಮೇಲೆ ನಮ್ಮ ಕೆಲಸ ಮುಗಿಯಿತು. ಅದ್ಯಾವ ಹೊತ್ತೋ? ಅದ್ಯಾವ ದಡವೋ? ಅದ್ಯಾವ ಸುಳಿಯೋ? ಬರೀ ಅದಕ್ಕಷ್ಟೇ ಗೊತ್ತು.
ಮೊನ್ನೆ ರೆಸ್ಟೊರೆಂಟೊಂದರಲ್ಲಿ ಕಿವಿಗೆ ಬಿದ್ದ ಮಾತಿದು.
'ನನ್ನ ಇಬ್ಬರು ಮಕ್ಕಳನ್ನು ಬಂಗಾರದಂತೆ ಸಾಕಿದೆ. ಪ್ರೀತಿ, ವಿಶ್ವಾಸ, ವಿದ್ಯೆ ಎಲ್ಲಾ ಕೊಟ್ಟಿದ್ದೇನೆ. ನನಗೀಗ ಎಪ್ಪತ್ತರ ಆಸುಪಾಸು. ಒಬ್ಬ ಮಗನೇನೋ ಉದ್ಯೋಗದಲ್ಲಿದ್ದಾನೆ. ಇನ್ನೊಬ್ಬನಿಗೆ ಉದ್ಯೋಗವೂ ಇಲ್ಲ. ಜವಾಬ್ದಾರಿಯೂ ಇಲ್ಲ. ಒಟ್ಟಿನಲ್ಲಿ ಪೋಲಿ ಬಿದ್ದು ಹೋಗಿದ್ದಾನೆ. ಅವನ ಸ್ವಭಾವವೇ ವಿಚಿತ್ರ. ದುಡ್ಡನ್ನೇ ಜಗತ್ತು ಅಂತ ನಂಬಿದ್ದರಿಂದ ನಿತ್ಯ ದುಡ್ಡು... ದುಡ್ಡು... ದುಡ್ಡಷ್ಟೇ ಅವನ ಬೇಡಿಕೆ. ಅದಕ್ಕಾಗಿ ಏನು ಮಾಡಲೂ ಸಿದ್ಧ. ನಿಜಕ್ಕೂ ತುಂಬಾ ಕ್ರೂರ ಸ್ವಭಾವ ಆತನದು. ಇನ್ನೊಬ್ಬನಿಗೆ ಅವನದೇ ತಾಪತ್ರಯ. ನನಗಂತೂ ಮುಂದೆ ವೃದ್ಧರ ಆಶ್ರಮವೇ ಗತಿ ಅನಿಸುತ್ತದೆ...'
ಒಬ್ಬ ತಾಯಿ ತನ್ನ ಪಕ್ಕದಲ್ಲಿ ಕೂತಿದ್ದ ಇನ್ನೊಬ್ಬಾಕೆಯಲ್ಲಿ ದುಗುಡ ಹೇಳಿಕೊಳ್ಳುತ್ತಿದ್ದಳು. ಪಕ್ಕದಲ್ಲಿದ್ದಾಕೆ ಈ ಸಂಕಷ್ಟಕ್ಕೆ ನೂರೆಂಟು ಸಲಹೆ ನೀಡಿದರಾದರೂ ಯಾಕೋ ಆ ತಾಯಿ ಮಾತ್ರ ಸಮಾಧಾನಗೊಂಡಂತೆ ಕಾಣಲಿಲ್ಲ.
ಮಾತು ಮುಂದುವರಿಯುತ್ತಲೇ ಇತ್ತು.
ಅಂದು ಸೀದಾ ಕಚೇರಿಗೆ ವಾಪಸ್ಸಾದೆನಾದರೂ ಮನಸ್ಸಿಗೆ ಸಮಾಧಾನವಿರಲಿಲ್ಲ. ಕಿವಿಗಳಲ್ಲಿ ಆ ವೃದ್ಧೆಯ ಮಾತುಗಳೇ ಪ್ರತಿಧ್ವನಿಸುತ್ತಿತ್ತು. ಈ ಬಗ್ಗೆ ಯಾರಲ್ಲಾದರೂ ಚರ್ಚಿಸಲೇಬೇಕು ಅಂದುಕೊಂಡೆ. ಕಾಕತಾಳೀಯವೋ ಎಂಬಂತೆ ಸಂಜೆ ಪರಿಚಯದ ಮನೋವೈದ್ಯರೊಬ್ಬರು ಸಿಕ್ಕಿದರು.

ಹೌದು, ಅವರ ಮಗನಿಗಿರುವುದು ಖಾಯಿಲೆ.
Anti-Social or Psychopathic Personality Disorder ಖಾಯಿಲೆಯ ಹೆಸರು.
ಅತ್ಯಂತ ಸ್ವಾರ್ಥಿಯಾಗಿರುವುದು ಇದರ ಮೊದಲ ಲಕ್ಷಣ. ತಮ್ಮ ಸುಖವನ್ನಷ್ಟೇ ಯೋಚಿಸುವ ಇವರು ಅದಕ್ಕಾಗಿ ಯಾರನ್ನು ಬಲಿಕೊಡಲೂ ಸಿದ್ಧರಾಗಿರುತ್ತಾರೆ. ತನ್ನ ಕುಟುಂಬ, ಸಂಬಂಧಗಳು, ಸಂಬಂಧಿಕರು, ಸಮಾಜ, ಅದರ ರೀತಿ ನೀತಿಗಳಿಗೆ  ಇವರಲ್ಲಿ ಕವಡೆ ಕಿಮ್ಮತ್ತಿನ ಬೆಲೆಯಿಲ್ಲ. ಮೇಲ್ನೋಟಕ್ಕೆ ಸಭ್ಯ, ಸಜ್ಜನ ವ್ಯಕ್ತಿತ್ವ. ಆದರದು ಬರೀ ನಟನೆಯಷ್ಟೆ. ಸ್ನೇಹಿತರ ಗುಂಪೇ ಜೊತೆಗೆ ಇರುತ್ತಿದ್ದರೂ ಯಾರನ್ನೂ ಕ್ಷಣಕಾಲಕ್ಕೆ ನಂಬುವವರಲ್ಲ. ಟೀಕೆ, ಬೈಗುಳ, ಪೆಟ್ಟು... ಊಹೂಂ, ಇದ್ಯಾವುದಕ್ಕೂ ಜಗ್ಗುವವರಲ್ಲ. ಅದರ ಭಯವೂ ಇವರಿಗಿಲ್ಲ. ಪ್ರತಿಯೊಂದರಲ್ಲೂ ಲಾಭವನ್ನೇ ಹುಡುಕುವ ಜಾಯಮಾನ ಇವರದು. ಒಟ್ಟಿನಲ್ಲಿ ಸುಲಭಕ್ಕೆ ಬದಲಾಯಿಸಬಹುದಾದ ವ್ಯಕ್ತಿತ್ವ ಇವರದಲ್ಲ.
ಅವರು ಹೇಳುತ್ತಿದ್ದರೆ ಮನಸ್ಸು ಅದಾಗಲೇ ಲೆಕ್ಕಾಚಾರದಲ್ಲಿ ಮುಳುಗಿತು.
ಒಂದಿಷ್ಟು ಹೊತ್ತು ಮೌನದ ಬಳಿಕ ಕೇಳಿದೆ, ಇದಕ್ಕೆ ಪರಿಹಾರವೇ ಇಲ್ಲವಾ?
ಅವರೆಂದರು, ಈ ವ್ಯಕ್ತಿತ್ವ ಒಂದೆರಡು ದಿನಗಳಲ್ಲಿ ರೂಪುಗೊಳ್ಳುವಂತದ್ದಲ್ಲ. ಒಬ್ಬಾತನಿಗೆ ಈ ತೊಂದರೆ ಇದೆ ಅಂತ ಗೊತ್ತಾದರೆ ಶೀತ, ಜ್ವರದಷ್ಟು ಮಾಮೂಲಿಯಾಗಿ ವಾಸಿ ಮಾಡಲು ಇದಕ್ಕೆ ಯಾವುದೇ ಔಷಧಿಗಳಿಲ್ಲ. ತನ್ನಲ್ಲಿ ಸಮಸ್ಯೆಯಿದೆ, ತಾನು ಬದಲಾಗಬೇಕು ಎಂದು ರೋಗಿಗೆ ಅನಿಸಿದರೆ ಅದಕ್ಕೆ ಪೂರಕವಾಗಿ ಜೊತೆಗಿರುವವರ ಕಾಳಜಿ, ಪ್ರೋತ್ಸಾಹ ಸಿಕ್ಕಿದರೆ ನಿಧಾನವಾಗಿ ನಿಯಂತ್ರಣಕ್ಕೆ ತರಬಹುದು. ಮೊದಲು ರೋಗಿಯ ವ್ಯಕ್ತಿತ್ವದಲ್ಲಿರುವ ದೋಷ ಗುರುತಿಸುವ ಕೆಲಸವಾಗಬೇಕು. ನಂತರ ಅವುಗಳದ್ದೊಂದು ಪಟ್ಟಿ ಮಾಡಬೇಕು. ಇವು ಯಾವ ಸನ್ನಿವೇಶ, ಸಂದರ್ಭಗಳಲ್ಲಿ ಅನಾವರಣಗೊಳ್ಳುತ್ತದೆ ಅನ್ನುವುದನ್ನು ಗಮನಿಸಬೇಕು. ಅದಕ್ಕೆ ಕಾರಣವಾಗುವ ಅಂಶಗಳೇನು ಎಂಬುದು ಗೊತ್ತಾಗಬೇಕು. ನಂತರ ಮನಃಶಾಸ್ತ್ರಜ್ಞರು, ಮನೋವೈದ್ಯರ ಸಲಹೆಯಂತೆ ಚಿಕಿತ್ಸೆ ನೀಡಬೇಕು. ಆದರೆ ಇಲ್ಲಿ ನೂರಕ್ಕೆ ನೂರು ಆತ ಸರಿಯಾದ ಅಂತೇನೂ ಹೇಳಲು ಬರುವುದಿಲ್ಲ...
ಹಾಗಂದ ಡಾಕ್ಟರು ನಕ್ಕು ನನ್ನ ಮುಖ ನೋಡಿದರು.! ನಾನು, ಇಲ್ಲ ಸುಮ್ನೆ ತಿಳ್ಕೊಳೋಣಾಂತ ಕೇಳಿದೆ ಎಂದು ಹೇಳಿ ಮಾತು ಬದಲಾಯಿಸಿದೆ.
ಇಂತಹಾ ಪ್ರಕರಣಗಳನ್ನು ನಾನೂ ಕಂಡಿದ್ದೇನೆ. ಒಬ್ಬನ ಖರಾಬ್ ವ್ಯಕ್ತಿತ್ವದಿಂದಾಗಿ ಒಂದು ಕುಟುಂಬದ ಅದಷ್ಟೂ ಮಂದಿ ಏನೇನೆಲ್ಲಾ ಪಡಿಪಾಟಲು ಪಡಬೇಕು ಅನ್ನುವುದರ ಅರಿವಿದೆ. ಇಲ್ಲಿ ಪ್ರಶ್ನೆ ಮೂಡುವುದೆಂದರೆ ಒಬ್ಬಾತ ಹೀಗಾಗಲು ಕಾರಣವೇನು? ಇಲ್ಲಿ ತಪ್ಪು ಯಾರದ್ದು?
ಈ ಬಗ್ಗೆ ಒಬ್ಬೊಬ್ಬರದ್ದು ಒಂದೊಂದು ವಾದವಿರಬಹುದು. ಆದರೆ ಒಬ್ಬ ಇಂತಹಾ ವ್ಯಕ್ತಿಯಿರುವ ಮನೆಯಲ್ಲಿರುತ್ತದಲ್ಲಾ ಅಶಾಂತಿ? ಅದು ಮಾತ್ರ ನಿಜಕ್ಕೂ ಘೋರ.
ಪಾಪ... ಈ ವೃದ್ಧೆಯದ್ದೂ ಅದೇ ಕಥೆಯಿರಬೇಕು. ಆಕೆಯನ್ನು ಕಂಡಾಗ ತೀರಾ ಸ್ಥಿತಿವಂತರಂತೆ ಕಾಣಿಸಲಿಲ್ಲ. ಹಾಗಾಗಿ ಸಹಜವಾಗಿಯೇ ಆ ಮನೆಯಲ್ಲಿ ಆರ್ಥಿಕ ಸಮಸ್ಯೆಗಳಿರುವುದು ನಿಚ್ಚಳ. ಆಕೆಗೊಂದಿಷ್ಟು ಆದಾಯವಿದ್ದರೆ ಸರಿ. ಇಲ್ಲವಾದರೆ? ಸಂಸಾರದ ನೊಗ ಬೀಳುವುದು ಇನ್ನೊಬ್ಬ ಮಗನ ಕುತ್ತಿಗೆಗೆ. ಆತನಾದರೋ ಉತ್ತಮ ಉದ್ಯೋಗದಲ್ಲಿದ್ದರೆ ಸರಿ. ಇಲ್ಲವಾದರೆ?
ಉತ್ತಮ ಉದ್ಯೋಗದಲ್ಲೇ ಇದ್ದಾನೆ ಅಂದುಕೊಳ್ಳೋಣ. ಉತ್ತಮ ಉದ್ಯೋಗವೆಂದರೆ ಜವಾಬ್ದಾರಿಗಳೂ ಬೆಟ್ಟದಷ್ಟಿರುತ್ತದಲ್ಲವೇ? ಇಂದು ಪ್ರತೀ ಕಂಪನಿಗಳೂ ಇನ್ನೊಂದು ಕಂಪನಿ ಜೊತೆ ಜಿದ್ದಿಗೆ ಬಿದ್ದಿರುತ್ತದಾದ್ದರಿಂದ ಸಹಜವಾಗಿಯೇ ತಮ್ಮ ಕಂಪನಿ ನಂ.1 ಆಗಿಸುವ ಜವಾಬ್ದಾರಿ ಇರುತ್ತದೆ. ಈ ಜವಾಬ್ದಾರಿ, ಒತ್ತಡಗಳನ್ನು ಉದ್ಯೋಗಿಗಳ ಮೇಲೆ ಅನಿವಾರ್ಯವಾಗಿ ಹೇರಲಾಗುತ್ತದೆ. ದಿನಪೂರ್ತಿ ಕೆಲಸದ ಒತ್ತಡದ ನಡುವೆ ಕಳೆದ ಆತ ಒಂದಿಷ್ಟು ವಿಶ್ರಾಂತಿಗೆಂದು ಮನೆ ಸೇರಿದರೆ ಬರೀ ಹಣ.. ಹಣ... ಹಣ.. ಎಂಬ ಅಕ್ಷರಗಳು, ಜಗಳಗಳು ಕಿವಿಗೆ ಬಿದ್ದರೆ, ಮಾನಸಿಕ ಅಶಾಂತಿಗೆ ಬಿದ್ದು, ತನ್ನ ಉದ್ಯೋಗ ಕರ್ತವ್ಯವನ್ನು ಸಮರ್ಥವಾಗಿ ನಿರ್ವಹಿಸಲು ಸಾಧ್ಯವೇ?
ಒಂದೆಡೆಯಲ್ಲಿ ರೋಗಿಯ ಈ ವಿಲಕ್ಷಣ ವರ್ತನೆಗಳಿಗೆ ಬೇಸತ್ತು ಸಂಬಂಧಿಕರು ಮೈಲಾಚೆಗೆ ನಡೆದುಬಿಟ್ಟಿರುತ್ತಾರೆ, ಮನೆಯ ಆರ್ಥಿಕ ಸ್ಥಿತಿಗತಿ ಎಕ್ಕುಟ್ಟಿ ಹೋಗಿರುತ್ತದೆ. ನೆಮ್ಮದಿಗಳೇ ಇಲ್ಲದೆ ಭವಿಷ್ಯ ಕತ್ತಲಾಗಿರುತ್ತದೆ.
ಖುದ್ದು ರೋಗಿಗೇ ತಾನು ಸರಿಯಾಗಬೇಕು ಎಂಬ ಇಚ್ಛೆ ಇಲ್ಲವಾದ್ದರಿಂದ ಚಿಕಿತ್ಸೆ ಕೊಡಿಸುವುದೂ ಸಾಧ್ಯವಿಲ್ಲ. ಪಲಾಯನವಾದ ಎಲ್ಲರ ಮನಸ್ಥಿತಿಗೆ ಒಗ್ಗುವುದಿಲ್ಲವಾದ್ದರಿಂದ ಎಲ್ಲಾ ಬಿಟ್ಟು ಹೊರಟುಬಿಡೋಣ ಎನ್ನುವುದೂ ಸಾಧ್ಯವಿಲ್ಲ. ಒಂದೆಡೆ ವೃದ್ಧ ತಾಯಿ, ಇನ್ನೊಂದೆಡೆ ವಿಕೃತ ಸ್ವಭಾವದ ಸಹೋದರ, ದೂರವಾಗಿರುವ ಬಂಧುಗಳೆಂಬ ಮಹಾಶಯರು... ಆತ ಕಂಗಾಲಾಗಲು ಇನ್ನೇನಾದರೂ ಬೇಕೇ ?
ಒಟ್ಟಿನಲ್ಲಿ ಆ ಕುಟುಂಬದ ಚಿತ್ರಣ ವೃದ್ಧೆ ಹೇಳಿದಂತೆ ನಿಜಕ್ಕೂ ಕಳವಳಕಾರಿಯೇ!
ಮತ್ತೆ ಆಲೋಚಿಸಿದೆ.
ಈ ಬದುಕು ಎಷ್ಟೊಂದು ವೈಚಿತ್ರ್ಯ ಹೊಂದಿದೆ ಎಂದು ಅಚ್ಚರಿಯಾಯಿತು. ತಪ್ಪು ಮಾಡುವವರು ಯಾರೋ, ಕಂದಾಯ ಕಟ್ಟುವವರು ಯಾರೋ! ಪರಿತಪಿಸುವವರು ಇನ್ಯಾರೋ. ಛೇ ಬದುಕಿಗೊಂದು ಅರ್ಥವೇ ಇಲ್ಲವಾ? ಅನಿಸಿತು. ತಕ್ಷಣವೇ ನನ್ನ ಬದುಕನ್ನೊಮ್ಮೆ ಅವಲೋಕಿಸಿದೆ....
ಇರುವುದೆಲ್ಲವ ಬಿಟ್ಟು ಇರದುದರೆಡೆಗೆ... ನನ್ನ ಆಸೆಗಳನ್ನು ನೆನೆದು ನಗು ಬಂತು.
ಅಲ್ಲಿ ಅಂದುಕೊಂಡಿದ್ದು ಮಾತ್ರ ಆಗಿಲ್ಲ ಅನ್ನುವುದು ಬಿಟ್ಟರೆ ಮತ್ತೆಲ್ಲಾ ಸಮಾಧಾನಕರವಾಗಿತ್ತು, ಸುಖಕರವಾಗಿತ್ತು. ಜುಟ್ಟಿಗೆ ಮಲ್ಲಿಗೆ ಹೂವಿಲ್ಲದಿದ್ದರೂ, ಹೊಟ್ಟೆಗೆ ಹಿಟ್ಟಂತೂ ಖಂಡಿತಾ ಇತ್ತು.
ಅಂತೂ ನಾವೆ ಮುಂದಕ್ಕೆ ಸಾಗುತ್ತಾ ಇದೆ... ಅದರಲ್ಲಿ ನೆಮ್ಮದಿಯಾಗಿ ಕೂತಿದ್ದೇನೆ.
ಸುಂದರ ತೀರವೊಂದು ಸಿಕ್ಕೀತು ಎಂಬ ನಿರೀಕ್ಷೆಯೊಂದಿಗೆ!

ಉಸಿರನ್ನು ಎಂದಾದರೂ ಮರೆಯಲು ಸಾಧ್ಯವಾ?

ಅದೆಲ್ಲಿದ್ದೀಯ ಪಾಪು?
ನಟ್ಟ ನಡುರಾತ್ರಿಯಲ್ಲಿ ಬಂದು ಮನಸ್ಸಿಗೆ ಖುಷಿಕೊಟ್ಟು ಹೋದ ಮಿಂಚು ಹುಳದಂತೆ...
ಸುಡು ಬಿಸಿಲಿನ ನಡುವೆ ಹಾದು ಹೋದ ತಂಗಾಳಿಯಂತೆ..
ಸುಂದರ ಹೂವಿನ ಮೇಲೆ ಮುದುಡಿ ಕುಳಿತು ಮಾಯವಾದ ಇಬ್ಬನಿಯ ಹನಿಯಂತೆ..
ಎಲ್ಲಿ ಹೋದೆ?
ಕಂಡಿಲ್ಲ ಯಾರೂ
ಆ ದೇವರನ್ನು
ಇರಬಹುದೋ ಏನೋ
ನಿನ್ನಂತೆ ಅವನು...

ಇಂದು ಯಾಕೋ ನೀನು ಬಿಟ್ಟೂ ಬಿಡದೆ ನೆನಪಾಗುತ್ತಿದ್ದೀಯ. ನೆನಪಾದಾಗಲೆಲ್ಲ ನನ್ನ ಕಣ್ಣು ಹನಿಗೂಡುತ್ತದೆ.
ಹೇಳು ಎಲ್ಲಿದ್ದೀಯ?
ಇಷ್ಟಕ್ಕೂ ನಿನ್ನನ್ನು ನೋಡದೆಯೇ ಅಷ್ಟೊಂದು ಸ್ನೇಹ, ಬಾಂಧವ್ಯ ಬೆಳೆದಿದ್ದು ಹೇಗೆ ಅನ್ನೋದು ನನ್ನಲ್ಲಿ ಇಂದಿಗೂ ಉತ್ತರಿಸಲಾಗದ ಪ್ರಶ್ನೆಯಾಗಿಯೇ ಉಳಿದಿದೆ. ಅಕ್ಷರಗಳು ಅದೆಂತಾ ಮೈತ್ರಿ ತಂದಿತ್ತವಲ್ಲಾ ನಮ್ಮಲ್ಲಿ?
ನಿನ್ನ ಅಕ್ಷರಗಳು ಮಾತಾಡುತ್ತಿದ್ದರೆ ಮನಸು ಅರಳಿಬಿಡುತ್ತಿತ್ತು. ನೀನು ಬರೆಯುತ್ತಿದ್ದ ಅಕ್ಷರಗಳು ಕಣ್ಣರಳಿಸುವಂತೆ ಮಾಡುತ್ತಿದ್ದವು. ಮುಖದಲ್ಲೊಂದು ನಗು ಮೂಡಿಸುತ್ತಿದ್ದವು. ಬದುಕಿಗೆ ದಾರಿ ತೋರುತ್ತಿದ್ದವು...
ಆದರಿಂದು?
ಅಕ್ಷರಗಳು ಮೂಕವಾಗಿ ಬಿಟ್ಟಿದೆ. ಅದು ಮಾತಾಡುತ್ತಿಲ್ಲ. ಮೌನ ಮನಸ್ಸನ್ನು ಕೊಲ್ಲುತ್ತಿದೆ. ಹೇಳು ಪಾಪು, ಅದೆಲ್ಲಿ ಮರೆಯಾದೆ?
ಮಾತುಗಳು ನನ್ನಲ್ಲೂ ಉಳಿದ್ದವು. ಬಹುಷಃ ನಿನ್ನನ್ನು ಉಳಿದುಕೊಂಡಿದ್ದಿರಬೇಕು. ಮಾತು ಮುಂದುವರಿಸೋಣವೆಂದರೆ ಭಗವಂತ ಯಾಕೋ ಅದಕ್ಕೆ ಅವಕಾಶವೇ ನೀಡಲಿಲ್ಲ. ಅವನು ತುಂಬಾ ಕೆಟ್ಟವನಾ?
ಕೆಲವೊಮ್ಮೆ ಹಾಗಂತ ಸಂಶಯ ಕಾಡುತ್ತದೆ.
ತೂ ಬತಾ ಹೋ ಕಹಾಂ
ಇಸ್ ನಶೀಲೀ ರಾತ್ ಮೇ
ಮಾನೇನಾ ಮೇರಾದಿಲ್ ದಿವಾನಾ..

ಕಳೆದು ಹೋದ ದಿನಗಳು ಮತ್ತೆ ಬರಲಾರದಾ ಗೆಳತಿ? ಉಳಿದು ಹೋದ ಮಾತುಗಳನ್ನು ಆಡಲಿಕ್ಕಾದರೂ? ನನಗೆ ಗೊತ್ತು ಅದು ಸಾಧ್ಯವಿಲ್ಲವೆಂದು. ಆದರೂ ಪುರಾಣದ ಕಥೆಗಳಲ್ಲಿ ನಡೆದು ಹೋಗುವ ಪವಾಡಗಳಂತೆ ..?
ಹುಚ್ಚು ಕಲ್ಪನೆ ಕಂಡು ಮನಸ್ಸು ನಗುತ್ತದೆ.
ಗೆಳೆಯಾ ಎಂದರೆ
ಅದಕೂ ಹತ್ತಿರ
ಇನಿಯಾ ಎಂದರೆ
ಅದಕೂ ಎತ್ತರ...

ಈಗ ಅಂದುಕೊಳ್ಳುತ್ತಿದ್ದೇನೆ, ಇಷ್ಟಕ್ಕೂ ಈ ನಮ್ಮ ಸ್ನೇಹ ನಿನಗೆ ಬೇಸರವಾಗಿ ಬಿಟ್ಟಿತೇನೋ ಎಂದು? ಅದೇ ಮಾತು, ಅದೇ ಸಮಾಧಾನಗಳು ನೀರಸ ಎನಿಸಿತೇನೋ.. ಒಂದು ಮಾತೂ ಹೇಳದೆ ನಡೆದು ಬಿಟ್ಟೆಯಲ್ಲಾ, ಇದೇ ಕಾರಣ ನೀಡಿ ಮನಸ್ಸಿಗೆ ಸಮಾಧಾನ ಮಾಡಿಬಿಡುತ್ತೇನೆ.
ಇರಲಿ,
ಬರುವಾಗ ಭಗವಂತನಲ್ಲಿ ಕೇಳಿಕೊಂಡು ಬಂದದ್ದೇ ಅಷ್ಟು ದಿನಗಳನ್ನಾಗಿರಬಹುದು. ಇಂದು ನಿನ್ನ ನೆನಪುಗಳಷ್ಟೇ ಉಳಿದುಕೊಂಡಿದೆ. ನಿನ್ನನ್ನು ಕಸಿದುಕೊಂಡಂತೆ ನೆನಪುಗಳನ್ನು ಯಾರು ಕಸಿದುಕೊಳ್ಳುತ್ತಾರೆ ಹೇಳು? ಅದು ಸಾಧ್ಯವಿಲ್ಲ.
ನಿನ್ನ ನೆನಪು ಶಾಶ್ವತ. ಅದಕ್ಕೆ ಮರೆವಿಲ್ಲ.
ಯಾಕೆಂದರೆ ಉಸಿರನ್ನು ಎಂದಾದರೂ ಮರೆಯಲು ಸಾಧ್ಯವಾ?

ಕೆಟ್ಟಾ ಕೊಳಕು ಬಟ್ಟೆ... ಕೈಯಲ್ಲಿ ತಟ್ಟೆ...

ಎಲ್ಲಿದ್ರೋ ಇಲ್ಲೀ ತನಕ...
ಅದೆಲ್ಲಿಂದ ಬಂದ್ರಪ್ಪಾ....
ಅವರನ್ನು ಕಂಡಾಗಲೆಲ್ಲ ಹೀಗೆ ಅನ್ನಿಸುವುದುಂಟು.
ಎಣ್ಣೆ ನೀರು ಕಾಣದ ತಲೆ, ಕೆಟ್ಟಾ ಕೊಳಕು ಬಟ್ಟೆ, ಕೈಯಲ್ಲಿ ತಬಲವೋ, ಹಾರ್ಮೊನಿಯಮ್ಮೋ, ತಟ್ಟೆಯೋ ಹಿಡಿದು ಪುಟ್ಟ, ಪುಟ್ಟ ಕಂದಮ್ಮಗಳೊಂದಿಗೆ ಬಸ್ ಸ್ಟ್ಯಾಂಡೋ, ರಸ್ತೆ ಬದಿಯಲ್ಲೋ ಕಂಡು ಬರುವ ಇವರು ಬಸ್ ಪ್ರಯಾಣಿಕರ, ದಾರಿಹೋಕರ, ಕಂಡ ಕಂಡವರ ಕೈಕಾಲು ಹಿಡಿದು ಚಿಲ್ಲರೆ ಗಿಟ್ಟಿಸಿಕೊಳ್ಳುವುದನ್ನು ಕಂಡಾಗ ಎಂತವರಿಗೂ ಕರುಳು ಚುರುಕ್ಕೆನ್ನದಿರದು.
ಇವರಲ್ಲಿ ಹೆಂಗಸರು, ಗಂಡಸರು, ವೃದ್ಧರು, ಮಕ್ಕಳು ಮರಿಗಳು ಎನ್ನುವ ಬೇಧವಿಲ್ಲ. ಎಲ್ಲರೂ ವೃತ್ತಿಯಲ್ಲಿ ಸರಿ ಸಮಾನರು. ಎಲ್ಲರ ಬಾಯಲ್ಲೂ ಭವತಿ ಭಿಕ್ಷಾಂದೇಹಿ...
ಇಂದು ಉಡುಪಿ ಮಂಗಳೂರಿನಂತ ಊರಿನಲ್ಲಿ ಐನೂರಕ್ಕೂ ಅಧಿಕ ಮಂದಿ ಭಿಕ್ಷುಕರಿದ್ದಾರೆ. ಇವರ ಪೈಕಿ ಗಂಡಸರು ಹಾರ್ಮೊನಿಯಂ, ತಬಲ ಹಿಡಿದು ಮನೆಮನೆ ತಿರುಗಿದರೆ, ಹೆಂಗಸರು, ಮಕ್ಕಳನ್ನೂ ತಮ್ಮ ವೃತ್ತಿಗೆ ತೊಡಗಿಸಿಕೊಳ್ಳುತ್ತಾರೆ. ಇನ್ನುಳಿದ ಹಸುಗೂಸುಗಳು ನಗರದುದ್ದಕ್ಕೂ ಸ್ವಂತಂತ್ರವಾಗಿ ಓಡಾಡಿಕೊಂಡಿರುತ್ತವೆ. ಸಾಮಾನ್ಯವಾಗಿ ಹುಬ್ಬಳ್ಳಿ ಕೊಪ್ಪಳ ಮೊದಲಾದೆಡೆಗಳಿಂದ ವಲಸೆ ಬರುವ ಇವರು ಸಾಮಾನ್ಯವಾಗಿ ಒಂದೇ ಪರಿಸರದಲ್ಲಿ ಬಿಡಾರ ಹುಡುತ್ತಾರೆ. ನಸುಕಿನಲ್ಲೇ ತಮ್ಮ ’ಡ್ಯೂಟಿ’ ಗಿಳಿದರೇ ಕತ್ತಲಾಗುವಷ್ಟರಲ್ಲಿ ಕನಿಷ್ಟ ೨೦೦ರಿಂದ ೩೦೦ ರೂ.ಗಳ ವರೆಗೆ ಸಂಪಾದಿಸುತ್ತಾರೆ.
ಗಂಡಸರು, ಹೆಂಗಸರ ವಿಚಾರ ಒತ್ತಟ್ಟಿಗಿರಲಿ. ಇನ್ನೂ ಜಗವರಿಯದ ಇವರ ಮಕ್ಕಳ ಗತಿ?
ಅಲ್ಲಮ್ಮ... ಮಕ್ಕಳನ್ನು ಶಾಲೆಗೆ ಕಳುಹಿಸದೆ ಭಿಕ್ಷೆಗೆ ಕಳುಹಿಸುತ್ತಿದ್ದೀಯಲ್ಲಾ ತಪ್ಪಲ್ಲೇ? ಅಂತ ಪ್ರಶ್ನಿಸಿದರೆ. ಹಂಗಾದ್ರೆ ನಾವೂ ಊಟ ಮಾಡೋದು ಬ್ಯಾಡ್ವಾ? ಅನ್ನೋ ಸಿದ್ಧ ಉತ್ತರ ಅವರಿಂದ ಸಿಗುತ್ತದೆ. ಇನ್ನು ಮಕ್ಕಳನ್ನು ಕೇಳಿದರೆ ಅದ್ಯಾವುದೋ ಶಾಲೆಯ ಹೆಸರು ಹೇಳಿ, ಅಲ್ಲಿಗೆ ಹೋಗುತ್ತೇವೆ ಎಂದು ಫಣಂಗನೆ ಮಾಯವಾಗುತ್ತಾರೆ. ಬರಿಗಾಲಿನಲ್ಲಿ ನಗರವಿಡೀ ಸುತ್ತಾಟ, ಹಸಿವಾದಾಗ ಸಿಕ್ಕಿದ್ದನ್ನು ಹೆಕ್ಕಿ ತಿನ್ನುವ, ಸಿಕ್ಕಸಿಕ್ಕಲ್ಲಿ ನೀರು ಕುಡಿದು ದಾಹ ತೀರಿಸಿಕೊಳ್ಳುವ ಈ ಪುಟಾಣಿಗಳ ಬದುಕು ಇಷ್ಟರಲ್ಲೇ ಮುರುಟಿ ಹೋಗಬೇಕಾ?
ಮಕ್ಕಳಿಗಾಗಿ ಸರಕಾರದ ಬಿಸಿಯೂಟ, ಹಾಲು, ಮೊಟ್ಟೆ, ಸೈಕಲ್ಲು, ಸರ್ವಶಿಕ್ಷಾ ಅಭಿಯಾನ, ಮತ್ತೆ ಶಾಲೆಗೆ ಕರೆತರುವ ಯೋಜನೆಗಳೆಲ್ಲ ಇವರನ್ಯಾಕೆ ಮುಟ್ಟುತ್ತಿಲ್ಲ? ಇನ್ನು ಸರಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ... ಅದೂ ಕೂಡಾ ಈ ಬಗ್ಗೆ ಗಂಭೀರ ಚಿಂತನೆ ನಡೆಸಿದಂತೆ ಕಂಡುಬರುತ್ತಿಲ್ಲ, ಭಿಕ್ಷಾಟನೆ ಕಾನೂನು ರೀತಿಯಲ್ಲಿ ಅಪರಾಧ. ಒಂದು ವೇಳೆ ಭಿಕ್ಷುಕರು ಕಂಡು ಬಂದರೆ ಅವರನ್ನು ಪುನರ್ವಸತಿ ಕೇಂದ್ರಕ್ಕೆ ದಾಖಲಿಸಲಾಗುತ್ತದೆ. ಅಚ್ಚರಿಯೆಂದರೆ ಇಲ್ಲಿ ಅದ್ಯಾವುದೂ ನಡೆಯುತ್ತಿಲ್ಲ. ಉಡುಪಿ-ಮಂಗಳೂರಿನಲ್ಲಿ ಈ ವಲಸೆ ಮಂದಿ ಕಳೆದ ೨೦ ವರ್ಷಗಳಿಂದ ನೆಲೆಸಿದ್ದಾರಾದರೂ ಇಲ್ಲಿಯ ಮಕ್ಕಳಿನ್ನೂ ಅಕ್ಷರ ಕಂಡಿಲ್ಲ ಎನ್ನುವುದು ಸತ್ಯ.
ಪ್ರಗತಿ ಪಥದಲ್ಲಿದ್ದೇವೆ ಎಂದು ಕರೆಯಿಸಿಕೊಳ್ಳುವ ನಮ್ಮಬುದ್ಧಿವಂತರ ಜಿಲ್ಲೆಯಲ್ಲಿ ಈ ಭಿಕ್ಷಟನೆಯಲ್ಲಿ ತೊಡಗಿರುವವರ ಮತ್ತು ಅವರ ಮಕ್ಕಳ ಭವಿಷ್ಯದ ಕುರಿತು ಚಿಂತಿಸುವವರೇ ಇಲ್ಲ.
ಇದು ದುರಾದಷ್ಟವಲ್ಲದೆ ಇನ್ನೇನು?

ನಮ್ಮ ಪೇಪರಿನ ಭಟ್ಟರೆಂದರೆ....

ಸಾದಾ ಅಂಗಿ, ಅಚ್ಚ ಬಿಳಿಬಣ್ಣದ ಲುಂಗಿ, ಮುಖದಲ್ಲಿ ಒಂದಿಷ್ಟು ಕುರುಚಲು ಗಡ್ಡ, ಬಲದ ಕೈಯಲ್ಲಿ ಅಂದಿನ ದಿನಪತ್ರಿಕೆಗಳು, ಜೊತೆಗಿಷ್ಟು ದಾಖಲೆ, ಟಿಪ್ಪಣಿಗಳು...
ಎಡ ಕೈಯಲ್ಲಿ ಲುಂಗಿ ತುದಿ ಹಿಡಿದುಕೊಂಡರೆ ನಡಿಗೆಗೆ ಕ್ಷಣಾರ್ಧದಲ್ಲಿ ಬಿರುಸು!
ಅಂದಹಾಗೆ ಮೊದಲ ಬಾರಿಗೆ ವ್ಯಕ್ತಿ ನನಗೆ ಕಾಣಸಿಕ್ಕಿದ್ದು ಕಾರ್ಕಳ ಬಸ್ ನಿಲ್ದಾಣದಲ್ಲಿ. ಕಂಡ ಅರೆ ಕ್ಷಣದಲ್ಲಿಯೇ ಕುತೂಹಲ ಮೂಡಿಸಿದ್ದು ಅವರ ವ್ಯಕ್ತಿತ್ವ.
ನಾನು ಪ್ರತೀ ಬಾರಿ ಕಾರ್ಕಳಕ್ಕೆ ಭೇಟಿ ನೀಡಿದಾಗಲೂ ಅವರು ಒಂದಲ್ಲಾ ಒಂದು ಕಡೆಯಲ್ಲಿ ಕಣ್ಣಿಗೆ ಬಿದ್ದೇ ಬೀಳುತ್ತಿದ್ದರು. ಯಾಕೋ ಏನೋ, ಅದೊಂದು ದಿನ ಮಾತ್ರ ಕುತೂಹಲ ತಡೆಯಲಾರದೆ ಪಕ್ಕದ ಅಂಗಡಿಯೊಂದರಲ್ಲಿ ’ಅವರ್‍ಯಾರು? ಏನು ಕೆಲಸ?’ ಎಂದು ಅಮಾಯಕನಂತೆ ಕೇಳಿದ್ದೆ.
’ಆರೆನ್ ಗೊತ್ತುಜ್ಜಾ...? ಆರ್ ನಮ್ಮ ಪೇಪರ್‍ದ ಭಟ್ರು, ಈದ್ ದ ಪದ್ಮಾಕರ ಭಟ್ರು’ (ಅವರನ್ನು ಗೊತ್ತಿಲ್ವಾ? ಅವರು ನಮ್ಮ ಪೇಪರಿನ ಭಟ್ರು. ಈದುವಿನ ಪದ್ಮಾಕರ ಭಟ್ರು...) ಎಂದು ಥಟ್ಟನೆ ಉತ್ತರ ಸಿಕ್ಕಿತ್ತು.
ಅಷ್ಟು ಕೇಳಿದ್ದೇ ತಡ, ಕುತೂಹಲ ತಡೆಯಲಾರದೆ ನೇರವಾಗಿ ಅವರನ್ನು ಭೇಟಿಯಾಗಿಯೇಬಿಟ್ಟೆ. ಮುಂದಿನ ಕೆಲವೇ ಕ್ಷಣಗಳಲ್ಲಿ ನಮ್ಮ ನಡುವೆ ಸ್ನೇಹ ಕುದುರಿತು. ದಿನಗಳುರುಳಿದಂತೇ ಒಡನಾಟವೂ ಹೆಚ್ಚಾಯಿತು...
ಈ ನಡುವೆ ಅಚಾನಕ್ ಆಗಿ ಭೇಟಿಯಾಗಿದ್ದು  ಸ್ಥಳೀಯ ಯುವ ಪತ್ರಕರ್ತನನ್ನು.
ನಮ್ಮ ಮಾತಿನ ನಡುವೆ ಇದೇ ಪದ್ಮಾಕರ ಭಟ್ಟರ ವಿಚಾರ ಬಂತು. ತಕ್ಷಣ ಅವರು ಹೇಳಿದ್ದಿಷ್ಟು...
’ಚಿಕ್ಕಂದಿನಿಂದಲೂ ಅವರ ಮೇಲೊಂದು ಕುತೂಹಲ. ಅವರ ವೃತ್ತಿಯೇನು ಎಂಬುದು ನನ್ನ ತಿಳುವಳಿಕೆಗೆ ಬಂದದ್ದು ಹೈಸ್ಕೂಲ್ ಮೆಟ್ಟಿಲು ಏರಿದ ಮೇಲಷ್ಟೇ. ಅವರ ವ್ಯಕ್ತಿತ್ವ, ಸಮಾಜದಲ್ಲಿ ಅವರ ಸ್ಥಾನಮಾನ, ಜನ ಅವರನ್ನು ಗೌರವಿಸುವ ರೀತಿ ಗಮನಿಸಿದ ನನಗೆ ಆಗಲೇ ಪತ್ರಿಕೋದ್ಯಮದ ಕುರಿತು ಸಣ್ಣ ಆಸಕ್ತಿ ಹುಟ್ಟಿಕೊಂಡಿತು. ಅವರು ದಿನಾಲೂ ನಮ್ಮ ಮನೆ ಮುಂದಿನ ದಾರಿಯಲ್ಲಿ ನಡೆದು ಹೋಗುತ್ತಿದ್ದರೆ, ನನ್ನದೊಂದು ಕುತೂಹಲದ ಕಣ್ಣು ಮಾತ್ರ ಅವರ ಮೇಲಿರುತ್ತಿತ್ತು. ನಮ್ಮ ಪದ್ಮಾಕರ ಭಟ್ರೇ ಹಾಗೆ. ಕುತೂಹಲದ ವ್ಯಕ್ತಿ. ನಾನು ಕಂಡ ದಿನದಿಂದ ಅವರು ಎಂತಹವರೊಂದಿಗೂ ಸಿಡುಕಿಟ್ಟು ಮಾತಾಡಿದ್ದೇ ಇಲ್ಲ. ಅವರು ಕಾರ್ಕಳದ ಬಸ್ಸಿಳಿದು ಈದು ಮಾರ್ಗದಲ್ಲಿ ನಡೆಯುವ ಸ್ಟೈಲೇ ಬೇರೆ ಇತ್ತು. ಒಂದು ಕೈಯಲ್ಲಿ ದಿನದ ಎಲ್ಲ ಪತ್ರಿಕೆಗಳ ಕಟ್ಟಿದ್ದರೆ, ಇನ್ನೊಂದು ಕೈ ಅವರ ಲುಂಗಿಯನ್ನು ನೆಲದಲ್ಲಿ ಎಳೆಯದ ರೀತಿ ಹಿಡಿದಿಡುತ್ತಿತ್ತು. ಮುಂದೆ ಅವರ ಜೊತೆ ನಾನು ಪರಿಚಯ ಬೆಳೆಸಿಕೊಂಡೆ. ಕಾರಣ ಪತ್ರಿಕೋದ್ಯಮದ ಸೆಳೆತ. ಪತ್ರಕರ್ತರ್‍ಯಾರು ಪತ್ರಿಕೋದ್ಯಮದ ಗುಟ್ಟು ಬಿಟ್ಟುಕೊಡುವುದಿಲ್ಲ ಎಂದು ಯಾರೋ ನನ್ನಲ್ಲಿ ಹೇಳಿದ್ದರು. ಅದೇ ನಾನು ಹೆದರಿಕೆಯಿಂದ ಭಟ್ರ ಜೊತೆ ಮಾತನಾಡಿದರೆ, ಅವರು ನೀನೂ ಕೂಡಾ ಪತ್ರಿಕೆಗಳಿಗೆ ಬರೆಯಬಹುದು ಎಂದು ತುಂಬು ಉತ್ಸಾಹದಿಂದ ಪ್ರೇರೇಪಿಸಿದರು! ಈ ಭಟ್ರು ಬಿಜೆಪಿಯಲ್ಲಿ ಪ್ರಚಾರ ಭಾಷಣ ಮಾಡುತ್ತಿದ್ದರು ಎಂದು ಕೇಳಿದ್ದೆ. ಹಾಗೆಂದು ಅವರು ಬಿಜೆಪಿಯವರೂ ಅಲ್ಲ, ಕಾಂಗ್ರೆಸಿನವರೂ ಅಲ್ಲ. ಕಮ್ಯೂನಿಷ್ಟಂತೂ ಖಂಡಿತ ಅಲ್ಲ. ಅವರ ರಾಜಕೀಯ ನಿಲುವೇ ಒಂದು ಅಚ್ಚರಿ. ಒಮ್ಮೊಮ್ಮೆ ಕಟ್ಟಾ ಕಮ್ಯೂನಿಷ್ಟರಂತೆ ಮಾತನಾಡುವ ಪದ್ಮಾಕರ ಭಟ್ರು-ಮತ್ತೊಮ್ಮೆ ಇಲ್ಲ, ಇವರು ಆರೆಸೆಸ್ಸ್ ಇರಬೇಕು ಎಂಬಂತೆ ಭಾಸವಾಗುತ್ತಾರೆ. ಭಟ್ರು ಎಷ್ಟು ಸಿಂಪಲ್ ಎಂದರೆ, ಈಗ ಬೇಕಾದರೂ ಒಂದು ಫ್ಯಾಮಿಲಿ ದಿನಕ್ಕೆ ೩೦ ರೂಪಾಯಿಯಲ್ಲಿ ದಿನದೂಡಬಹುದು ಎಂದು ವಾದಿಸುತ್ತಾರೆ. ಅವರ ವಾದ ಒಂದು ರೀತಿಯಲ್ಲಿ ಸರಿಯೇ ಹೌದು ಎಂದು ಅವರೊಂದಿಗಿದ್ದಾಗ ಖಂಡಿತಾ ಅನಿಸುತ್ತದೆ...
ಇಷ್ಟು ಹೇಳುತ್ತಿದ್ದರೆ, ಯುವ ಪತ್ರಕರ್ತನ ಮುಖದಲ್ಲಿ ಅಚ್ಚರಿ ಇನ್ನೂ ಉಳಿದಿತ್ತು!
 ಈದು ಸುತ್ತಮುತ್ತಲಿನ (ನಾರಾವಿ-ಹೊಸ್ಮಾರು) ಜನಕ್ಕೆ ಭಟ್ರು ವಿನಯವಂತ ಎಂಬುದೂ ಗೊತ್ತಿದೆ. ಹಾಗೆಯೇ ಕೋಪಕ್ಕೆ ಬಿದ್ದರೆ ಭಟ್ರು ಏನು ಬೇಕಾದರೂ ಮಾಡಿಯಾರೂ ಎಂಬ ಹೆದರಿಕೆಯೂ ಇದೆ. ಆದರೆ ಆ ಕೋಪವನ್ನು ಅಲ್ಲಿನ ಜನರ್‍ಯಾರೂ ಇದುವರೆಗೆ ಕಂಡದ್ದು ನಾ ಕಾಣೆ.! ಸ್ವಲ್ಪವೇ ಪರಿಚಯವಿದ್ದರೂ ಸಾಕು, ಭಟ್ರು ನಯವಿನಯತೆಯಿಂದ ಮಾತಾಡಲು ಶುರುವಿಡುತ್ತಾರೆ. ಅವರು ಕರೆದು ಮಾತಾಡುವವರೆಂದರೆ ಬಡವರೇ ಆಗಿರುತ್ತಾರೆ. ಇಲ್ಲವಾದಲ್ಲಿ ಕೃಷಿಕರು. ಅವರೊಂದಿಗೆ ಕೃಷಿಯ ಬಗ್ಗೆ, ಮಳೆ, ನುಸಿರೋಗದ ಬಗ್ಗೆ ಮಾತಾಡುತ್ತಲೇ ಅವಷ್ಟನ್ನೂ ಮನದಲ್ಲೇ ಸ್ಟೋರ್ ಮಾಡಿಕೊಳ್ಳುತ್ತಾರೆ. ನಂತರ ಕಾರ್ಕಳಕ್ಕೆ ಬಂದು ವಿವರವಾಗಿ ಬರೆದು ಪತ್ರಿಕಾ ಕಚೇರಿಗೆ ಫ್ಯಾಕ್ಸ್ ಮಾಡಿಬಿಡುತ್ತಾರೆ. ಅಲ್ಲಿಗೆ ಹಳ್ಳಿಯ ಕೃಷಿಕನೊಬ್ಬನ ಅಳಲು ಮರುದಿನ ಮುಖ್ಯಮಂತ್ರಿಯೇ ಓದಿ ತಿಳಿದುಕೊಳ್ಳುವಂತೆ ಮಾಡುತ್ತಾರೆ ಪದ್ಮಾಕರ ಭಟ್ರು.!
ಇವತ್ತಿಗೂ ಭಟ್ರಿಗೆ ಕೃಷಿ, ಹಳ್ಳಿ, ತಮ್ಮದೇ ಊರಾದ ಈದು ಇದರ ಬಗ್ಗೆ ಕುತೂಹಲ ಹಾಗೂ ಆಸಕ್ತಿ ಹಾಗೇ ಉಳಿದುಕೊಂಡಿದೆ. ಇಂದಿಗೂ ಜನ ಅವರನ್ನು ಗುರುತಿಸುತ್ತಾರೆ, ಗೌರವಿಸುತ್ತಾರೆ, ಎದುರು ಸಿಕ್ಕಿದರೆ ಆತ್ಮೀಯವಾಗಿ ಮಾತನಾಡಿಸುತ್ತಾರೆ. ಯೋಗಕ್ಷೇಮ ವಿಚಾರಿಸುತ್ತಾರೆ.
ಒಬ್ಬ ಪತ್ರಕರ್ತನಿಗೆ ಇದಕ್ಕಿಂತ ಸಾರ್ಥಕತೆ ಇನ್ನೇನು ಬೇಕು?
ಅಲ್ವಾ?

ಎರಡೇ ದಿನಕ್ಕೆ ನೆನಪುಗಳ ಮೆರವಣಿಗೆ!


ಊಹುಂ,
ಇನ್ನೂ ಸಾಧ್ಯವೇ ಇಲ್ಲ ಕಣೆ!
ನಿನ್ನ ಮುಖ ನೋಡೋದು ಬಿಡು, ಕನಿಷ್ಟ ಇನ್ನೊಂದು ತಿಂಗಳು ನಿನ್ನಲ್ಲೊಂದು ಅಕ್ಷರ ಮಾತೂ ಆಡಬಾರದು ಅಂತ ಡಿಸೈಡ್ ಮಾಡಿ ಇಂದಿಗೆ ಬರೋಬ್ಬರಿ ಎರಡು ದಿನಗಳೇ ಉರುಳಿ ಹೋಗಿವೆ...
ಸಾಧ್ಯವಾಗುತ್ತಿಲ್ಲ ಕಣೆ, ಕುಂತ್ರೂ ನಿಂದೇ ಧ್ಯಾನ, ನಿಂತ್ರೂ ನಿಂದೇ ಧ್ಯಾನ, ಮಾತನಾಡದಿದ್ರೆ ಸತ್ತೇ ಹೋಗ್ತೀನೇನೋ ಅನ್ಸುತ್ತೆ. ಅದೆಂತಾ ಮೋಡಿ ಮಾಡಿ ಬಿಟ್ಟಿದ್ದೀಯೇ ಹುಡುಗಿ?
ಆಯೇ ಹೊ ಮೇರಿ ಜಿಂದಗೀ ಮೇ
ತುಮ್ ಬಹಾರ್ ಬನ್ ಕೆ...
ನಿಜ ಹೇಳಲಾ? ನೀನಷ್ಟು ಕೋಪಿಸಿಕೊಳ್ಳುವ ತಪ್ಪು ನಾನೇನೂ ಮಾಡಿರಲಿಲ್ಲ. ನೀನು ಎಷ್ಟೊಂದು ನನ್ನ ಪ್ರೀತಿಸುತ್ತಿದ್ದೀಯ ಅನ್ನೋದು ನನಗೆ ಅರ್ಥವಾಗುತ್ತೆ. ಆದರೂ ಮನಸಿನೊಳಗೆ ಅದೇನೋ ಒಂದು ಸಂಶಯದ ಹುಳ ಹೊರಳಾಡಿದ ಅನುಭವ. ನೀನು ಪಕ್ಕದ ಮನೆ ಹುಡುಗನ ಮುಂದೆ ಚಿಂಪಾಂಜಿಯಂತೆ ಹಲ್ಲು ಕಿರಿದು ಮಾತನಾಡಿದಾಗಲೆಲ್ಲ ಅದೆಲ್ಲೋ ಮನದಾಳದಲ್ಲಿ ಕ್ರೋಧಾಗ್ನಿ ಧಗಧಗಿಸುತ್ತಿತ್ತು. ಅದೆಲ್ಲಿ ನೀನು ನನ್ನ ತೋಳುಗಳಿಂದ ಜಾರಿ ಹೋಗುತ್ತೀಯೋ ಅನ್ನುವ ದಿಗಿಲಾಗುತ್ತಿತ್ತು. ಆ ಕ್ಷಣಕ್ಕೆ ಜಾತ್ರೆಯ ನಡುವಲ್ಲಿ ಅಮ್ಮನ ಸೆರಗು ತಪ್ಪಿಹೋದ ಮಗುವಿನಂತೆ ನಾನು ತಬ್ಬಿಬಾಗಿ ಬಿಡುತ್ತಿದ್ದೆ. ರೂಮಿನ ಕದವಿಕ್ಕಿ ಕುಳಿತು ಕಣ್ಣೀರಾಗುತ್ತಿದ್ದೆ.  ಆದರೆ ನೀನು?
ಮೈ ಪ್ಯಾರ್ ಕಾ ರಾಹೀ ಹೂಂ,
ತೇರಿ ಜುಲ್ಫ್ ಕೆ ಸಾಯೇ ಮೇ
ಕುಛ್ ದೇರ್ ಠೆಹರ್ ಜಾವೂಂ..?
ಅದೆಷ್ಟು ಬೇಗನೆ ಮನದ ದುಗುಡ ಅರ್ಥ ಮಾಡಿಕೊಳ್ಳುತ್ತಿಯೇ!
ಅದೆಲ್ಲೇ ಇದ್ದರೂ ಹುಡುಕಾಡಿ ಬಂದು ಎರಡೇ ಎರಡು ಅಕ್ಷರದ ಮಾತಿನಲ್ಲಿ ಮತ್ತೆ ಮನಸ್ಸು ಅರಳಿಸುವಂತೆ ಮಾಡಿ ಬಿಡುತ್ತಿದ್ದೆ. ಅದೆಲ್ಲಿಂದ ಸಿದ್ಧಿಸಿತೇ ಈ ವಿದ್ಯೆ? ಆದರೆ ಮೊನ್ನೆ ಮಾತ್ರ ಯಾಕೋ ಅದು ನಡೆಯಲಿಲ್ಲ. ಆಗಷ್ಟೇ ಅಂಚೆಮಾಮ ಕೈಯಲ್ಲೊಂದು ಲೆಟಱ್ರು ಹಿಡಿದು ಮನೆಗೆ ಬಂದಿದ್ದ. ಅಚ್ಚ ಬಿಳಿ ಬಣ್ಣದ ಲಕೋಟೆ ಕಂಡಾಗ, ನಿನ್ನದೇ ತರಲೆ ಕೆಲಸ ಇರಬಹುದು ಅಂದುಕೊಂಡೆ. ಆದರೆ ಲಕೋಟೆ ಹರಿದಾಗ ಒಳಗಿದ್ದುದು ಬಹುಕಾಲದ ಕನಸಾದ ಉದ್ಯೋಗದ ಅಪಾಯಿಂಟ್ ಮೆಂಟ್ ಲೆಟಱ್ರು. ಕ್ಷಣ ಕಾಲ ಸ್ವರ್ಗವೇ ಧರೆಗಿಳಿದು ಬಂತೇನೋ ಅನ್ನುವ ಅನುಭವ. ಮೂಲೆಯಲ್ಲಿ ಎತ್ತಿಟ್ಟಿದ್ದ ಸೈಕಲ್ ಹೊರಗೆಳೆದವನೇ ಒಂದೇ ಸಮನೆ ಪೆಡಲ್ ಕುಟ್ಟತೊಡಗಿದೆ. ಕಣ್ಣೆದುರಲ್ಲಿ ಬರೀ ನೀನೆಂದರೆ ನೀನಷ್ಟೇ ಇದ್ದೆ.
ನಿಮ್ಮ ಮನೆ ಮುಂದಿನ ತಿರುವು ದಾಟುತ್ತಲೇ ನನ್ನ ಲೆಕ್ಕಾಚಾರವೂ ತಿರುವು ಮುರುವಾಯಿತು ನೋಡು. ಮತ್ತದೇ ಚಿಂಪಾಂಜಿ ನಗೆ, ಎದುರಲ್ಲಿ ಆ ಮುಠ್ಠಾಳ. ಹೇಗಾಗಿರಬೇಡ ಹೇಳು?
ಯಾರ ಯಾರ ಸೇರಿಸುವೆಯೋ
ಯಾರೂ ಅರಿಯರು,
ಯಾರ ನಗಿಸಿ ಅಳಿಸುವೆಯೋ
ಯಾರು ಬಲ್ಲರು?
 ಮನೆಗೆ ಬಂದವನೇ ಹಾಗಂತ ಒಂದು ಪುಟ್ಟ ಚೀಟಿಯಲ್ಲಿ ಬರೆದು ಮಡಚಿ ಪೋಸ್ಟ್ ಡಬ್ಬಿಯ ಬಾಯಿಗಿಟ್ಟು ಬಂದೆ. ಕರೆಕ್ಟಾಗಿ ಮಾರನೇ ದಿನಕ್ಕೇ ಚಿತ್ತೈಸಿತಲ್ಲಾ ನಿನ್ನ ಸವಾರಿ! ಎರಡು ನಗು, ತೊಂಭತ್ತ ಎಂಟು ಸ್ಸಾರಿ, ಒಂದಿಷ್ಟು ಕೋಪ, ನಡುನಡುವೆ ಮೌನದ ಬಳಿಕ ನಮ್ಮ ನಡುವೆ ರಾಜಿ ಸಂಧಾನವೂ ಆಗಿಹೋಯಿತು. ಆದರೆ ಆವತ್ತೆ ನಿರ್ಧಾರ ಮಾಡಿಬಿಟ್ಟೆ. ಮುಂದಿನ ಒಂದು ತಿಂಗಳು ನಿನ್ನೊಂದಿಗೆ ಟೂ!
ಈಗ ನಿರ್ಧಾರಕ್ಕೆ ಎರಡು ದಿನ ಕಳೆದು ಹೋಗಿದೆ. ಅದಾಗಲೇ ನೆನಪುಗಳ ಮೆರವಣಿಗೆ.
ಅದೆಷ್ಟೇ ಮನಸ್ಸನ್ನು ಹದ್ದು ಬಸ್ತಿನಲ್ಲಿಡಲು ಯತ್ನಿಸಿದರೂ ಸಾಧ್ಯವಾಗುತ್ತಿಲ್ಲ ಕಣೆ. ನಿನ್ನ ನೋಡಲೇ ಬೇಕು. ಮಾತಾಡಲೇ ಬೇಕು ಅಂತ ಅದು ಹಠ ಹಿಡಿದು ಕೂತುಬಿಟ್ಟಿದೆ. ಏನು ಹೇಳಲಿ ಅದಕ್ಕೆ?
ಈಗ ನಾಚಿಕೆ, ಮಾನ, ಮಾರ್ಯಾದೆ ಎಲ್ಲಾ ಬಿಟ್ಟು ಕೇಳುತ್ತಿದ್ದೇನೆ.
ನಾನು ರಾಜಿ, ನೀನು ರಾಜಿಯಾ?

ನೇಚರ್ರೇ ನಮ್ಮ ಟೀಚರ್ರಾಗಿದ್ದ ಹೊತ್ತು...


ಗಿರಿ ಸಿರಿ ನೆಲ ಹೊಲ...
ನೇಚರೇ ನಮ್ ಟೀಚರು...
ಟೀವಿಯಲ್ಲಿ ಈ ಹಾಡು ಕಂಡಾಗ ನೆನಪುಗಳು ಸರಿದು ಹೋದದ್ದು ಹತ್ತಿಪ್ಪತ್ತು ವರ್ಷಗಳ ಹಿಂದಕ್ಕೆ...
ಆಗ ನಮ್ಮೂರು ಇಂದಿನಂತೆ ಕಾಂಕ್ರೀಟ್ ಕಾಡಾಗಿರಲಿಲ್ಲ. ಮನೆ ಸುತ್ತ ಎತ್ತ ತಿರುಗಿದರೂ ಬರೀ ಹಸಿರು ಮತ್ತು ಹಸಿರಷ್ಟೇ ಇತ್ತು.
ಆಗೆಲ್ಲಾ ಮಳೆಗಾಲ ಬಂತೆಂದರೆ ನಮಗೆಲ್ಲಾ ಖುಷಿಯೋ ಖುಷಿ. ಧೋ ಎಂದು ಸುರಿಯುತ್ತಿದ್ದ ಮಳೆಗೆ ಮನೆಯಲ್ಲಿ ಹರಿದುಬರುತ್ತಿದ್ದ ಬೈಗುಳವನ್ನು ಕಿವಿಗೆ ಹಾಕಿಕೊಳ್ಳದೆ ಅಂಗಿ-ಚೆಡ್ಡಿ ಸಿಕ್ಕಿಸಿಕೊಂಡು ನಾವೊಂದಿಷ್ಟು ಗೆಳೆಯರು ಹನಿಯ ಏಟನ್ನೂ ಲೆಕ್ಕಿಸದೆ ಹೊರಟು ಬಿಡುತ್ತಿದ್ದೆವು. ಹೊಲ ಗದ್ದೆ, ಚಿಕ್ಕಪುಟ್ಟ ಝರಿ, ತೊರೆಗಳು, ಅಲ್ಲಲ್ಲಿ ಹರಿದು ಹೋಗುತ್ತಿದ್ದ ಸ್ಫಟಿಕ ಸ್ವಚ್ಛ ನೀರು... ಕಣ್ಣೆದುರಿಗೆ ನಮಗಾಗಿ ಒಂದು ಅದ್ಭುತ ಲೋಕ ಸೃಷ್ಟಿಸಿಕೊಡುತ್ತಿತ್ತು. ಮಳೆ ಬಿದ್ದೊಡನೇ ಅರಳಿಕೊಳ್ಳುವ ಅದ್ಯಾವುದೋ ಹೂವುಗಳು, ಅಲ್ಲೊಂದು ಇಲ್ಲೊಂದು ಉಳಿದುಕೊಂಡ ಕುಂಟಾಲಕಾಯಿ, ಮೊಳಕೆಯೊಡೆದ ಗೇರುಬೀಜ, ಹರಿದುಬರುವ ಒಸರು ನೀರಲ್ಲಿ ಪಟಪಟನೆ ಬಾಲ ಬಡಿಯುವ ಹೆಸರೇ ಇಲ್ಲದ ಮೀನು... ಒಂದಾ ಎರಡಾ?
ಗೊತ್ತೇ ಆಗದಂತೆ ಅಡಗಿಸಿಕೊಂಡು ತರುತ್ತಿದ್ದ ಚೊಂಬುಗಳಲ್ಲಿ ಮೀನು ಹಿಡಿಯುವ ಕಸರತ್ತು. ಸಣ್ಣ ಸಣ್ಣ ನೀರಿನ ಹರಿವಿಗೆ ಅಣೆಕಟ್ಟು(!) ಕಟ್ಟುವ ಕೆಲಸ, ಅಬ್ಬ, ಎಷ್ಟೊಂದು ಶ್ರದ್ಧೆ ಇತ್ತಲ್ಲವಾ ಆಗ?
ಸುತ್ತಮುತ್ತ ತುಂಬಿ ಹರಿಯುತ್ತಿದ್ದ ಹಳ್ಳ, ತೊರೆಗಳಲ್ಲಿ ಈಜಾಡುತ್ತಾ, ಮೈ ಮೇಲೆ ನೀರೆರಚಿಕೊಳ್ಳುತ್ತಾ, ಕಾಗದದ ದೋಣಿ ಅದೆಷ್ಟು ದೂರ ಹೋಗುತ್ತದೆ ಅಂತ ನಮ್ಮಲ್ಲೇ ಪರಸ್ಪರ ಜಿದ್ದಿಗೆ ಬೀಳುತ್ತಿದ್ದ ಆ ಕ್ಷಣಗಳು ಛೇ... ಮತ್ತೊಮ್ಮೆ  ಬದುಕಲ್ಲಿ ಬರಲಾರದೇ? ಎಂದು ಹಳಹಳಿಸುತ್ತೇನೆ.
ಇಂದಿನ ಮಕ್ಕಳಿಗೆ ಇದನ್ನೆಲ್ಲಾ ಹೇಳಿದರೆ ನಗುತ್ತಾರೆ. ಯಾವ ಓಬೀರಾಯನ ಕಾಲದಲ್ಲಿದ್ದೀರಾ... ಅಂತ ಕೇಳುತ್ತಾರೆ.
ಅವರ ತಪ್ಪೇನಿಲ್ಲ. ಅವರು ಇಂದು ಕಂಪ್ಯೂಟರ್ ಯುಗದಲ್ಲಿದ್ದಾರೆ. ಅಪ್ಪ-ಅಮ್ಮಂದಿರ ವಿಶೇಷ ಕಾಳಜಿಯಡಿ ಬೆಳೆಯುತ್ತಿದ್ದಾರೆ. ಅವರಿಗಿಂದು ನೋಡಬೇಕೆಂದರೂ ಕಣ್ಣೆದುರು ಹಳ್ಳಿಗಳೇ ಸಿಗುತ್ತಿಲ್ಲ. ಇನ್ನು ಝರಿ ತೊರೆಗಳು... ಅದು ಚಿತ್ರದಲ್ಲಿ ಮಾತ್ರ.. ಅವರೇನಿದ್ದರೂ ಸ್ಕೂಲು, ಟ್ಯೂಷನ್ನು, ಸಂಗೀತ ಕ್ಲಾಸು, ಕರಾಟೆ, ರಿವಿಜನ್ನು, ಸ್ಪೆಷಲ್ ಕ್ಲಾಸು ಅಂತ ಬ್ಯುಸೀ! ಮಳೆಗಾಲದಲ್ಲಿ ಅಲ್ಲೊಮ್ಮೆ ಇಲ್ಲೊಮ್ಮೆ ನೀರು ನಿಂತಿದ್ದು ಅವರಿಗೆ ಕಾಣಸಿಕ್ಕರೂ ಕ್ಷಣಕಾಲದಲ್ಲಿ ನಗರಪಾಲಿಕೆಯೋ ಪುರಸಭೆಯೋ ಅದನ್ನು ರಿಪೇರಿ ಮಾಡಿ ಸ್ವಚ್ಛಗೊಳಿಸಿರುತ್ತದೆ. ಮಳೆಗಾಲದ ಹಳ್ಳಿ ಹೀಗಿತ್ತು... ಎಂದು ಅವರಿಗೆ ವರ್ಣಿಸುವುದಾದರೂ ಹೇಗೆ?
ನಮ್ಮ ಬಾಲ್ಯದಲ್ಲಿ ಸಾಂತಣಿ, ಪುಳಿಂಕಟೆ, ಹೆಬ್ಬಲಸಿನ ಬೀಜ, ಖಾರ ಹಪ್ಪಳ, ಸಿಹಿ ಹಪ್ಪಳ, ಮಾಂಬಳ, ಹಲಸಿನ ಸೋಳೆ, ಉಪ್ಪು ನೀರಿನ ಮಾವು, ಹಲಸು ಎಂದೆಲ್ಲ ತಯಾರಾಗುತ್ತಿತ್ತು. ಇವೆಲ್ಲಾ ಮಳೆಗಾಲದ ವಿಶೇಷ ಖಾದ್ಯಗಳು.
ಇಂದು ಬಣ್ಣ ಬಣ್ಣದ ಲಕೋಟೆಯೊಳಗಿನ ಚಿಪ್ಸು, ಪಿಜ್ಜಾ, ಬರ್ಗರ್ ಗಳು, ಸಾಸ್, ಕೆಚಪ್ಪು, ಬ್ರೆಡ್ಡು ರೋಸ್ಟುಗಳಲ್ಲಿ ವರ್ಷದ ಮುನ್ನೂರ ಅರವತ್ತೈದು ದಿನ ಕಳೆಯುವ ಮಕ್ಕಳಿಗೆ ಅದರ ರುಚಿ ಹೇಗಿತ್ತು ಎಂದು ವಿವರಿಸುವುದು ಸಾಧ್ಯವೇ?
ಮಳೆ ಹನಿಗಳಿಗೆ ಮೈಬಿಚ್ಚಿ ಅದ್ಭುತ ಅನುಭವ ಪಡೆಯುವ ಅವಕಾಶ ಇಂದು ಬೇಕೆಂದರೂ ಅವರಿಗೆ ದಕ್ಕುತ್ತಿಲ್ಲ. ಅವರ ಆಟಗಳೇನಿದ್ದರೂ ಕಂಪ್ಯೂಟರ್, ಮೊಬೈಲ್ ಗಳಿಗಷ್ಟೇ ಸೀಮಿತವಾಗಿದೆ.
ಮತ್ತೆ ಯಾರಿಗೆ ಗೊತ್ತು? ಅಂದು ನಾವು ಕಾಗದದ ಹಾಳೆಯನ್ನು ಒಂದೊಂದಾಗಿ ಮಡಚಿ ದೋಣಿ ಮಾಡಿ ನೀರಿಗದ್ದುವಾಗ ಸಿಗುತ್ತಿದ್ದ ಖುಷಿ ಇಂದು ಕಂಪ್ಯೂಟರ್ ಎದುರು ಕೂತು  ಬೈಕ್ , ಕಾರ್ ರೇಸ್, ಫಜಲ್ಸ್ ... ಅಂತ ಆಡುವುದರ ಮುಂದೆ ಏನೂ ಅಲ್ಲ ಎಂದು ಇಂದಿನ ಮಕ್ಕಳು ಹೇಳಲೂಬಹುದು!
ಕಾಲಾಯ.... ಅಲ್ವೇ?

ಭಾನುವಾರ, ಫೆಬ್ರವರಿ 8, 2015

ತೆಕ್ಕೆಗೆ ಬಿದ್ದಾಗಲೆಲ್ಲ ಆತ ನೆನಪಾಗುತ್ತಾನೆ!


ನೀವು ಏನೇ ಹೇಳಿ,
ಚಿಟಪಟ...ಚಿಟಪಟ.. ಅಂತ ಒಂದೇ ಸಮನೆ ಸುರಿಯುವ ಈ ಜಡಿಮಳೆ ನೋಡುತ್ತಾ, ಕಿಟಕಿ ಬದಿಯಲ್ಲೊಂದು ಛೇರ್ ಎಳೆದುಕೊಂಡು, ಕೈಯಲ್ಲಿ ಬಿಸ್ಸಿ, ಬಿಸಿ ಕಾಫೀ ಕಪ್ ಹಿಡಿದು,  ’ಜನಜೀವನ ಅಸ್ತವ್ಯಸ್ತ’, ’ಕರಾವಳಿಯಲ್ಲಿ ಮುಸಲಧಾರೆ’, ’ತಗ್ಗು ಪ್ರದೇಶ ಜಲಾವೃತ’, ’ಕೃತಕ ನೆರೆ’... ಅಂತ ಪೇಪರ್ ಹೆಡ್ಡಿಂಗ್ ಓದೋ ಮಜಾನೇ ಬೇರೆ. ನನಗಂತೂ ಮಳೆ ಅಂದರೆ ನನಗಂತೂ ತುಂಬಾ ಇಷ್ಟ.
ಯಾಕೋ ಗೊತ್ತಿಲ್ಲ ಈ ಮಳೆಯಲ್ಲಿ ನೆನೆಯೋದು ನನ್ನ ಹವ್ಯಾಸಗಳಲ್ಲಿ ಒಂದು.
ನನ್ನ ಪಾಲಿಗೆ ಮಳೆ ಅಂದರೆ ನೆನಪು, ಮಳೆ ಎಂದರೆ ದುಃಖ, ಮಳೆ ಅಂದರೆ ಸಂಭ್ರಮ, ಮಳೆ ಅಂದರೆ ಗೆಳೆಯ...
ಸುರಿಯುವ ಹನಿಯಲ್ಲಿ ಸಾಗುತ್ತಾ ಸಾಗುತ್ತಾ... ಬಾಲ್ಯದ ಆ ಸುಂದರ ದಿನಗಳಿಗೆ ಗುಡ್ ಬೈ ಹೇಳಿ ಅದ್ಯಾವಾಗ ದೊಡ್ಡವನಾದೆನೋ ತಿಳಿಯಲಿಲ್ಲ. ಚಿಕ್ಕಂದಿನಲ್ಲಿ ಅಮ್ಮ ಮೈತುಂಬ ರೇನ್ ಕೋಟ್ ಹಾಕಿಸಿ, ತಲೆಗೊಂದು ಮಂಕೀಕ್ಯಾಪ್ ಜೊತೆಗೆ ರೈನ್ ಕೋಟಿನ ಟೊಪ್ಪಿಯನ್ನೂ ಹಾಕಿ ಮಳೆಯಲ್ಲಿ ಒಂದಿಂಚೂ ನೆನೆಯದಂತೆ ಜೋಪಾನವಾಗಿ ಶಾಲೆಗೆ ಕರೆದುಕೊಂಡು ಹೋಗುತ್ತಿದ್ದುದ್ದು ನಿನ್ನೆ ಮೊನ್ನೆ ಅಲ್ವಾ ಅಂತ ಅನಿಸುತ್ತಿದೆ.
ಮುಂದೆ ನೋಡ ನೋಡುತ್ತಲೇ ರೈನ್ ಕೋಟ್ ಬದಲಿಗೆ ಕೊಡೆ ಬಂತು. ಅದರಲ್ಲೂ ಹೈಸ್ಕೂಲ್ ಮೆಟ್ಟಿಲೇರಿದ ಮೇಲಂತೂ ಅದಕ್ಕೂ ವಿದಾಯ ಹೇಳಿ ಮಳೆಯಲ್ಲೇ ನೆನೆದುಕೊಂಡು ಆಕ್ಸಿ...ಆಕ್ಸಿ.. ಅಂತ ಸೀನುವುದು ಅಭ್ಯಾಸವಾಯಿತು. ನಮ್ಮ ಅವಸ್ಥೆ ನೋಡಿ ಲೆಕ್ಕದ ಮೇಸ್ಟ್ರು ಗರಂ ಆಗುತ್ತಿದ್ದರಲ್ಲದೆ ಬೆನ್ನಿಗೊಂದಿಷ್ಟು ಬಿಸಿ ಮುಟ್ಟಿಸಿ ಬುದ್ದಿವಾದ ಹೇಳುತ್ತಿದ್ದರು. ಆ ಕ್ಷಣಕ್ಕೆ ಹೇಳಿದ್ದೆಲ್ಲದಕ್ಕೂ ಓಕೆ...  ಶಾಲೆ ಬಿಟ್ಟಿತೆಂದರೆ ಛೇ..ಛೇ...ಈ ಮಳೆಗೆ ಕೊಡೆ ಯಾಕೆ? ಪ್ರೈಮರಿ ಸ್ಕೂಲ್‌ನ ಚೆಡ್ಡಿ ದಿನದಿಂದ ಕಾಲೇಜ್‌ನ ಜೀನ್ಸುವರೆಗೂ ಮಳೆಯೊಂದಿಗೇ ನನ್ನ ಬದುಕು ನಡೆದು ಬಂದಿದೆ. ಬಾಲ್ಯದ ತುಂಟಾಟ, ಕೀಟಲೆ, ಚೇಷ್ಟೆಗಳು ಮಳೆಯೊಂದಿಗೆ ನೆನಪಾಗಿ ದಾಖಲಾಗಿ ಭದ್ರವಾಗಿ ಉಳಿದುಕೊಂಡಿದೆ.

ಚಾರ್ಲಿ ಚಾಪ್ಲೀನ್ ಒಂದು ಕಡೆ ಹೇಳುತ್ತಾನೆ, ಮಳೆಯಲ್ಲಿ ನೆನಯೋದು ಅಂದರೆ ನನಗೆ ತುಂಬಾ ಇಷ್ಟ. ಯಾಕೆಂದರೆ ಅಲ್ಲಿ ಕಣ್ಣುಗಳು ಅಳುತ್ತಿರುವುದು ಬೇರೆಯವರಿಗೆ ಕಾಣಿಸುವುದೇ ಇಲ್ಲ.. ಎಷ್ಟೊಂದು ನಿಜ ಅಲ್ವಾ?
ಇಂದು ಇದೆಲ್ಲವನ್ನು ದಾಟಿ ಉದ್ಯೋಗ ಸೇರಿಕೊಂಡಿದ್ದೇನೆ. ಖಾಸಗಿ ಕಂಪೆನಿಗಳ ಉದ್ಯೋಗವೆಂದರೆ ಹಾಗೆಯೆ, ಅಲ್ಲಿ ಕಟ್ಟುನಿಟ್ಟಾದ ನಿಯಮಗಳಿರುತ್ತದೆ. ಡ್ರೆಸ್ ಕೋಡ್ ಇರುತ್ತದೆ. ತುಂಬಾ ’ನೀಟ್’ ಆಗಿರಬೇಕಾಗುತ್ತದೆ. ಬಾಲ್ಯದ, ಯೌವನದ ತುಂಟಾಟಗಳೆಲ್ಲ ನೆನಪಾಗಿ ಮತ್ತೆ ಮಳೆಯ ತೆಕ್ಕೆಗೆ ಬಿದ್ದುಬಿಡಬೇಕು ಅಂತ ಅನಿಸುತ್ತಾದರೂ, ಬರೀ ಕಿಟಕಿ ಬದಿಯಿಂದ ನೀರ ಹನಿ ನೋಡುವುದಕ್ಕಷ್ಟೇ ಆಸೆ ಸೀಮಿತಗೊಳ್ಳುತ್ತದೆ.
ಸಾಗರದಂತಹಾ ಜೀವನದಲ್ಲಿ ನೆನಪುಗಳೆಂಬ ಪ್ರತೀ ಅಲೆಯೂ ಕ್ಷಣ ಕ್ಷಣ ದಡಕ್ಕೆ ಅಪ್ಪಳಿಸುತ್ತಾ ಕಣ್ಣಮುಂದೆ ನೂರಾರು ಮಧುರ ಕ್ಷಣಗಳನ್ನು ಹೊತ್ತು ತರುತ್ತದೆ. ಯಾಕೋ ಗೊತ್ತಿಲ್ಲ, ಪ್ರತಿ ಬಾರಿಯೂ ಮಳೆ ಸುರಿದಾಗ ನಾನು ಮತ್ತೆ ಖುಷಿಪಡುತ್ತೇನೆ. ಹಾಗೆ ಕೆಲವೊಮ್ಮೆ ಆಸೆ ತೀರದೆ ಮಳೆಯ ತೆಕ್ಕೆಗೆ ಬಿದ್ದಾಗಲೆಲ್ಲ ಚಾರ್ಲಿಚಾಪ್ಲೀನ್ ನೆನಪಾಗುತ್ತಾನೆ!