ಸೋಮವಾರ, ಫೆಬ್ರವರಿ 9, 2015

ನಾವೆ ಸಾಗುತ್ತಿದೆ... ತೀರದ ನಿರೀಕ್ಷೆಯಲ್ಲಿ!

ಆಸೆಗಳು ಅದೆಷ್ಟೋ ಇದ್ದವು...
ಹೆಗಲಿಗೆ ಸ್ಟೆತಾಸ್ಕೋಪ್ ಇಳಿಬಿಟ್ಟುಕೊಂಡು ತಿರುಗುತ್ತಿದ್ದವರನ್ನು ಕಂಡಾಗ ಡಾಕ್ಟರಾಗಬೇಕು ಅಂತನಿಸಿತ್ತು.
ಗ್ರಾಫು, ಸ್ಕೇಲು, ಪೆನ್ಸಿಲ್ ಗಳ ನಡುವೆ ಕಳೆದುಹೋಗುವವರನ್ನು ಕಂಡಾಗ ಇಂಜಿನಿಯರ್ ಆಗಬೇಕು ಅಂತನಿಸಿತ್ತು. ಬದುಕಿಡೀ ಗೌರವ ಪಡೆದುಕೊಳ್ಳುವ ಮೇಸ್ಟ್ರರನ್ನು ಕಂಡು ನಾನೂ ಮೇಷ್ಟ್ರಾಗಬೇಕು ಅಂತನಿಸಿತ್ತು.
ಹೊಗೆ ಉಗುಳುತ್ತಾ ಸಾವಿರಾರು ಮಂದಿಯನ್ನು ಅಮ್ಮನ ಮಡಿಲಿನಂತೆ ಕೂರಿಸಿಕೊಂಡು ಕರೆದೊಯ್ಯುವ ರೈಲು ಕಂಡಾಗಲೆಲ್ಲಾ ಅದರ ಚಾಲಕನಾಗಬೇಕು ಅಂತ ಅನಿಸಿತ್ತು.
ಆದರೆ ಅದಾವುದೂ ಸಾಧ್ಯವಾಗಲೇ ಇಲ್ಲ.!
ಹಾಗಂತ ಆ ಬಗ್ಗೆ ನನ್ನನ್ನು ಯಾವ ದುಃಖವೂ ಕಾಡಿಲ್ಲ.
ಯಾಕೆಂದರೆ ನನಗೆ ಗೊತ್ತು. ಬದುಕೆನ್ನುವುದೇ ಹಾಗೆ. ನಾವೆ ಹತ್ತಿದ ಮೇಲೆ ನಮ್ಮ ಕೆಲಸ ಮುಗಿಯಿತು. ಅದ್ಯಾವ ಹೊತ್ತೋ? ಅದ್ಯಾವ ದಡವೋ? ಅದ್ಯಾವ ಸುಳಿಯೋ? ಬರೀ ಅದಕ್ಕಷ್ಟೇ ಗೊತ್ತು.
ಮೊನ್ನೆ ರೆಸ್ಟೊರೆಂಟೊಂದರಲ್ಲಿ ಕಿವಿಗೆ ಬಿದ್ದ ಮಾತಿದು.
'ನನ್ನ ಇಬ್ಬರು ಮಕ್ಕಳನ್ನು ಬಂಗಾರದಂತೆ ಸಾಕಿದೆ. ಪ್ರೀತಿ, ವಿಶ್ವಾಸ, ವಿದ್ಯೆ ಎಲ್ಲಾ ಕೊಟ್ಟಿದ್ದೇನೆ. ನನಗೀಗ ಎಪ್ಪತ್ತರ ಆಸುಪಾಸು. ಒಬ್ಬ ಮಗನೇನೋ ಉದ್ಯೋಗದಲ್ಲಿದ್ದಾನೆ. ಇನ್ನೊಬ್ಬನಿಗೆ ಉದ್ಯೋಗವೂ ಇಲ್ಲ. ಜವಾಬ್ದಾರಿಯೂ ಇಲ್ಲ. ಒಟ್ಟಿನಲ್ಲಿ ಪೋಲಿ ಬಿದ್ದು ಹೋಗಿದ್ದಾನೆ. ಅವನ ಸ್ವಭಾವವೇ ವಿಚಿತ್ರ. ದುಡ್ಡನ್ನೇ ಜಗತ್ತು ಅಂತ ನಂಬಿದ್ದರಿಂದ ನಿತ್ಯ ದುಡ್ಡು... ದುಡ್ಡು... ದುಡ್ಡಷ್ಟೇ ಅವನ ಬೇಡಿಕೆ. ಅದಕ್ಕಾಗಿ ಏನು ಮಾಡಲೂ ಸಿದ್ಧ. ನಿಜಕ್ಕೂ ತುಂಬಾ ಕ್ರೂರ ಸ್ವಭಾವ ಆತನದು. ಇನ್ನೊಬ್ಬನಿಗೆ ಅವನದೇ ತಾಪತ್ರಯ. ನನಗಂತೂ ಮುಂದೆ ವೃದ್ಧರ ಆಶ್ರಮವೇ ಗತಿ ಅನಿಸುತ್ತದೆ...'
ಒಬ್ಬ ತಾಯಿ ತನ್ನ ಪಕ್ಕದಲ್ಲಿ ಕೂತಿದ್ದ ಇನ್ನೊಬ್ಬಾಕೆಯಲ್ಲಿ ದುಗುಡ ಹೇಳಿಕೊಳ್ಳುತ್ತಿದ್ದಳು. ಪಕ್ಕದಲ್ಲಿದ್ದಾಕೆ ಈ ಸಂಕಷ್ಟಕ್ಕೆ ನೂರೆಂಟು ಸಲಹೆ ನೀಡಿದರಾದರೂ ಯಾಕೋ ಆ ತಾಯಿ ಮಾತ್ರ ಸಮಾಧಾನಗೊಂಡಂತೆ ಕಾಣಲಿಲ್ಲ.
ಮಾತು ಮುಂದುವರಿಯುತ್ತಲೇ ಇತ್ತು.
ಅಂದು ಸೀದಾ ಕಚೇರಿಗೆ ವಾಪಸ್ಸಾದೆನಾದರೂ ಮನಸ್ಸಿಗೆ ಸಮಾಧಾನವಿರಲಿಲ್ಲ. ಕಿವಿಗಳಲ್ಲಿ ಆ ವೃದ್ಧೆಯ ಮಾತುಗಳೇ ಪ್ರತಿಧ್ವನಿಸುತ್ತಿತ್ತು. ಈ ಬಗ್ಗೆ ಯಾರಲ್ಲಾದರೂ ಚರ್ಚಿಸಲೇಬೇಕು ಅಂದುಕೊಂಡೆ. ಕಾಕತಾಳೀಯವೋ ಎಂಬಂತೆ ಸಂಜೆ ಪರಿಚಯದ ಮನೋವೈದ್ಯರೊಬ್ಬರು ಸಿಕ್ಕಿದರು.

ಹೌದು, ಅವರ ಮಗನಿಗಿರುವುದು ಖಾಯಿಲೆ.
Anti-Social or Psychopathic Personality Disorder ಖಾಯಿಲೆಯ ಹೆಸರು.
ಅತ್ಯಂತ ಸ್ವಾರ್ಥಿಯಾಗಿರುವುದು ಇದರ ಮೊದಲ ಲಕ್ಷಣ. ತಮ್ಮ ಸುಖವನ್ನಷ್ಟೇ ಯೋಚಿಸುವ ಇವರು ಅದಕ್ಕಾಗಿ ಯಾರನ್ನು ಬಲಿಕೊಡಲೂ ಸಿದ್ಧರಾಗಿರುತ್ತಾರೆ. ತನ್ನ ಕುಟುಂಬ, ಸಂಬಂಧಗಳು, ಸಂಬಂಧಿಕರು, ಸಮಾಜ, ಅದರ ರೀತಿ ನೀತಿಗಳಿಗೆ  ಇವರಲ್ಲಿ ಕವಡೆ ಕಿಮ್ಮತ್ತಿನ ಬೆಲೆಯಿಲ್ಲ. ಮೇಲ್ನೋಟಕ್ಕೆ ಸಭ್ಯ, ಸಜ್ಜನ ವ್ಯಕ್ತಿತ್ವ. ಆದರದು ಬರೀ ನಟನೆಯಷ್ಟೆ. ಸ್ನೇಹಿತರ ಗುಂಪೇ ಜೊತೆಗೆ ಇರುತ್ತಿದ್ದರೂ ಯಾರನ್ನೂ ಕ್ಷಣಕಾಲಕ್ಕೆ ನಂಬುವವರಲ್ಲ. ಟೀಕೆ, ಬೈಗುಳ, ಪೆಟ್ಟು... ಊಹೂಂ, ಇದ್ಯಾವುದಕ್ಕೂ ಜಗ್ಗುವವರಲ್ಲ. ಅದರ ಭಯವೂ ಇವರಿಗಿಲ್ಲ. ಪ್ರತಿಯೊಂದರಲ್ಲೂ ಲಾಭವನ್ನೇ ಹುಡುಕುವ ಜಾಯಮಾನ ಇವರದು. ಒಟ್ಟಿನಲ್ಲಿ ಸುಲಭಕ್ಕೆ ಬದಲಾಯಿಸಬಹುದಾದ ವ್ಯಕ್ತಿತ್ವ ಇವರದಲ್ಲ.
ಅವರು ಹೇಳುತ್ತಿದ್ದರೆ ಮನಸ್ಸು ಅದಾಗಲೇ ಲೆಕ್ಕಾಚಾರದಲ್ಲಿ ಮುಳುಗಿತು.
ಒಂದಿಷ್ಟು ಹೊತ್ತು ಮೌನದ ಬಳಿಕ ಕೇಳಿದೆ, ಇದಕ್ಕೆ ಪರಿಹಾರವೇ ಇಲ್ಲವಾ?
ಅವರೆಂದರು, ಈ ವ್ಯಕ್ತಿತ್ವ ಒಂದೆರಡು ದಿನಗಳಲ್ಲಿ ರೂಪುಗೊಳ್ಳುವಂತದ್ದಲ್ಲ. ಒಬ್ಬಾತನಿಗೆ ಈ ತೊಂದರೆ ಇದೆ ಅಂತ ಗೊತ್ತಾದರೆ ಶೀತ, ಜ್ವರದಷ್ಟು ಮಾಮೂಲಿಯಾಗಿ ವಾಸಿ ಮಾಡಲು ಇದಕ್ಕೆ ಯಾವುದೇ ಔಷಧಿಗಳಿಲ್ಲ. ತನ್ನಲ್ಲಿ ಸಮಸ್ಯೆಯಿದೆ, ತಾನು ಬದಲಾಗಬೇಕು ಎಂದು ರೋಗಿಗೆ ಅನಿಸಿದರೆ ಅದಕ್ಕೆ ಪೂರಕವಾಗಿ ಜೊತೆಗಿರುವವರ ಕಾಳಜಿ, ಪ್ರೋತ್ಸಾಹ ಸಿಕ್ಕಿದರೆ ನಿಧಾನವಾಗಿ ನಿಯಂತ್ರಣಕ್ಕೆ ತರಬಹುದು. ಮೊದಲು ರೋಗಿಯ ವ್ಯಕ್ತಿತ್ವದಲ್ಲಿರುವ ದೋಷ ಗುರುತಿಸುವ ಕೆಲಸವಾಗಬೇಕು. ನಂತರ ಅವುಗಳದ್ದೊಂದು ಪಟ್ಟಿ ಮಾಡಬೇಕು. ಇವು ಯಾವ ಸನ್ನಿವೇಶ, ಸಂದರ್ಭಗಳಲ್ಲಿ ಅನಾವರಣಗೊಳ್ಳುತ್ತದೆ ಅನ್ನುವುದನ್ನು ಗಮನಿಸಬೇಕು. ಅದಕ್ಕೆ ಕಾರಣವಾಗುವ ಅಂಶಗಳೇನು ಎಂಬುದು ಗೊತ್ತಾಗಬೇಕು. ನಂತರ ಮನಃಶಾಸ್ತ್ರಜ್ಞರು, ಮನೋವೈದ್ಯರ ಸಲಹೆಯಂತೆ ಚಿಕಿತ್ಸೆ ನೀಡಬೇಕು. ಆದರೆ ಇಲ್ಲಿ ನೂರಕ್ಕೆ ನೂರು ಆತ ಸರಿಯಾದ ಅಂತೇನೂ ಹೇಳಲು ಬರುವುದಿಲ್ಲ...
ಹಾಗಂದ ಡಾಕ್ಟರು ನಕ್ಕು ನನ್ನ ಮುಖ ನೋಡಿದರು.! ನಾನು, ಇಲ್ಲ ಸುಮ್ನೆ ತಿಳ್ಕೊಳೋಣಾಂತ ಕೇಳಿದೆ ಎಂದು ಹೇಳಿ ಮಾತು ಬದಲಾಯಿಸಿದೆ.
ಇಂತಹಾ ಪ್ರಕರಣಗಳನ್ನು ನಾನೂ ಕಂಡಿದ್ದೇನೆ. ಒಬ್ಬನ ಖರಾಬ್ ವ್ಯಕ್ತಿತ್ವದಿಂದಾಗಿ ಒಂದು ಕುಟುಂಬದ ಅದಷ್ಟೂ ಮಂದಿ ಏನೇನೆಲ್ಲಾ ಪಡಿಪಾಟಲು ಪಡಬೇಕು ಅನ್ನುವುದರ ಅರಿವಿದೆ. ಇಲ್ಲಿ ಪ್ರಶ್ನೆ ಮೂಡುವುದೆಂದರೆ ಒಬ್ಬಾತ ಹೀಗಾಗಲು ಕಾರಣವೇನು? ಇಲ್ಲಿ ತಪ್ಪು ಯಾರದ್ದು?
ಈ ಬಗ್ಗೆ ಒಬ್ಬೊಬ್ಬರದ್ದು ಒಂದೊಂದು ವಾದವಿರಬಹುದು. ಆದರೆ ಒಬ್ಬ ಇಂತಹಾ ವ್ಯಕ್ತಿಯಿರುವ ಮನೆಯಲ್ಲಿರುತ್ತದಲ್ಲಾ ಅಶಾಂತಿ? ಅದು ಮಾತ್ರ ನಿಜಕ್ಕೂ ಘೋರ.
ಪಾಪ... ಈ ವೃದ್ಧೆಯದ್ದೂ ಅದೇ ಕಥೆಯಿರಬೇಕು. ಆಕೆಯನ್ನು ಕಂಡಾಗ ತೀರಾ ಸ್ಥಿತಿವಂತರಂತೆ ಕಾಣಿಸಲಿಲ್ಲ. ಹಾಗಾಗಿ ಸಹಜವಾಗಿಯೇ ಆ ಮನೆಯಲ್ಲಿ ಆರ್ಥಿಕ ಸಮಸ್ಯೆಗಳಿರುವುದು ನಿಚ್ಚಳ. ಆಕೆಗೊಂದಿಷ್ಟು ಆದಾಯವಿದ್ದರೆ ಸರಿ. ಇಲ್ಲವಾದರೆ? ಸಂಸಾರದ ನೊಗ ಬೀಳುವುದು ಇನ್ನೊಬ್ಬ ಮಗನ ಕುತ್ತಿಗೆಗೆ. ಆತನಾದರೋ ಉತ್ತಮ ಉದ್ಯೋಗದಲ್ಲಿದ್ದರೆ ಸರಿ. ಇಲ್ಲವಾದರೆ?
ಉತ್ತಮ ಉದ್ಯೋಗದಲ್ಲೇ ಇದ್ದಾನೆ ಅಂದುಕೊಳ್ಳೋಣ. ಉತ್ತಮ ಉದ್ಯೋಗವೆಂದರೆ ಜವಾಬ್ದಾರಿಗಳೂ ಬೆಟ್ಟದಷ್ಟಿರುತ್ತದಲ್ಲವೇ? ಇಂದು ಪ್ರತೀ ಕಂಪನಿಗಳೂ ಇನ್ನೊಂದು ಕಂಪನಿ ಜೊತೆ ಜಿದ್ದಿಗೆ ಬಿದ್ದಿರುತ್ತದಾದ್ದರಿಂದ ಸಹಜವಾಗಿಯೇ ತಮ್ಮ ಕಂಪನಿ ನಂ.1 ಆಗಿಸುವ ಜವಾಬ್ದಾರಿ ಇರುತ್ತದೆ. ಈ ಜವಾಬ್ದಾರಿ, ಒತ್ತಡಗಳನ್ನು ಉದ್ಯೋಗಿಗಳ ಮೇಲೆ ಅನಿವಾರ್ಯವಾಗಿ ಹೇರಲಾಗುತ್ತದೆ. ದಿನಪೂರ್ತಿ ಕೆಲಸದ ಒತ್ತಡದ ನಡುವೆ ಕಳೆದ ಆತ ಒಂದಿಷ್ಟು ವಿಶ್ರಾಂತಿಗೆಂದು ಮನೆ ಸೇರಿದರೆ ಬರೀ ಹಣ.. ಹಣ... ಹಣ.. ಎಂಬ ಅಕ್ಷರಗಳು, ಜಗಳಗಳು ಕಿವಿಗೆ ಬಿದ್ದರೆ, ಮಾನಸಿಕ ಅಶಾಂತಿಗೆ ಬಿದ್ದು, ತನ್ನ ಉದ್ಯೋಗ ಕರ್ತವ್ಯವನ್ನು ಸಮರ್ಥವಾಗಿ ನಿರ್ವಹಿಸಲು ಸಾಧ್ಯವೇ?
ಒಂದೆಡೆಯಲ್ಲಿ ರೋಗಿಯ ಈ ವಿಲಕ್ಷಣ ವರ್ತನೆಗಳಿಗೆ ಬೇಸತ್ತು ಸಂಬಂಧಿಕರು ಮೈಲಾಚೆಗೆ ನಡೆದುಬಿಟ್ಟಿರುತ್ತಾರೆ, ಮನೆಯ ಆರ್ಥಿಕ ಸ್ಥಿತಿಗತಿ ಎಕ್ಕುಟ್ಟಿ ಹೋಗಿರುತ್ತದೆ. ನೆಮ್ಮದಿಗಳೇ ಇಲ್ಲದೆ ಭವಿಷ್ಯ ಕತ್ತಲಾಗಿರುತ್ತದೆ.
ಖುದ್ದು ರೋಗಿಗೇ ತಾನು ಸರಿಯಾಗಬೇಕು ಎಂಬ ಇಚ್ಛೆ ಇಲ್ಲವಾದ್ದರಿಂದ ಚಿಕಿತ್ಸೆ ಕೊಡಿಸುವುದೂ ಸಾಧ್ಯವಿಲ್ಲ. ಪಲಾಯನವಾದ ಎಲ್ಲರ ಮನಸ್ಥಿತಿಗೆ ಒಗ್ಗುವುದಿಲ್ಲವಾದ್ದರಿಂದ ಎಲ್ಲಾ ಬಿಟ್ಟು ಹೊರಟುಬಿಡೋಣ ಎನ್ನುವುದೂ ಸಾಧ್ಯವಿಲ್ಲ. ಒಂದೆಡೆ ವೃದ್ಧ ತಾಯಿ, ಇನ್ನೊಂದೆಡೆ ವಿಕೃತ ಸ್ವಭಾವದ ಸಹೋದರ, ದೂರವಾಗಿರುವ ಬಂಧುಗಳೆಂಬ ಮಹಾಶಯರು... ಆತ ಕಂಗಾಲಾಗಲು ಇನ್ನೇನಾದರೂ ಬೇಕೇ ?
ಒಟ್ಟಿನಲ್ಲಿ ಆ ಕುಟುಂಬದ ಚಿತ್ರಣ ವೃದ್ಧೆ ಹೇಳಿದಂತೆ ನಿಜಕ್ಕೂ ಕಳವಳಕಾರಿಯೇ!
ಮತ್ತೆ ಆಲೋಚಿಸಿದೆ.
ಈ ಬದುಕು ಎಷ್ಟೊಂದು ವೈಚಿತ್ರ್ಯ ಹೊಂದಿದೆ ಎಂದು ಅಚ್ಚರಿಯಾಯಿತು. ತಪ್ಪು ಮಾಡುವವರು ಯಾರೋ, ಕಂದಾಯ ಕಟ್ಟುವವರು ಯಾರೋ! ಪರಿತಪಿಸುವವರು ಇನ್ಯಾರೋ. ಛೇ ಬದುಕಿಗೊಂದು ಅರ್ಥವೇ ಇಲ್ಲವಾ? ಅನಿಸಿತು. ತಕ್ಷಣವೇ ನನ್ನ ಬದುಕನ್ನೊಮ್ಮೆ ಅವಲೋಕಿಸಿದೆ....
ಇರುವುದೆಲ್ಲವ ಬಿಟ್ಟು ಇರದುದರೆಡೆಗೆ... ನನ್ನ ಆಸೆಗಳನ್ನು ನೆನೆದು ನಗು ಬಂತು.
ಅಲ್ಲಿ ಅಂದುಕೊಂಡಿದ್ದು ಮಾತ್ರ ಆಗಿಲ್ಲ ಅನ್ನುವುದು ಬಿಟ್ಟರೆ ಮತ್ತೆಲ್ಲಾ ಸಮಾಧಾನಕರವಾಗಿತ್ತು, ಸುಖಕರವಾಗಿತ್ತು. ಜುಟ್ಟಿಗೆ ಮಲ್ಲಿಗೆ ಹೂವಿಲ್ಲದಿದ್ದರೂ, ಹೊಟ್ಟೆಗೆ ಹಿಟ್ಟಂತೂ ಖಂಡಿತಾ ಇತ್ತು.
ಅಂತೂ ನಾವೆ ಮುಂದಕ್ಕೆ ಸಾಗುತ್ತಾ ಇದೆ... ಅದರಲ್ಲಿ ನೆಮ್ಮದಿಯಾಗಿ ಕೂತಿದ್ದೇನೆ.
ಸುಂದರ ತೀರವೊಂದು ಸಿಕ್ಕೀತು ಎಂಬ ನಿರೀಕ್ಷೆಯೊಂದಿಗೆ!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ