ಸೋಮವಾರ, ಫೆಬ್ರವರಿ 9, 2015

ಮತ್ತೆ ಆಸೆ ಚಿಗುರಿಸಿದೆ ಪುನರ್ವಸು...

ಕೃಷಿಕನ ಮುಖದಲ್ಲಿ ಈಗ ಮಂದಹಾಸ.!
ಅದಕ್ಕೆ ಕಾರಣ ಮತ್ತೆ ಆಸೆ ಚಿಗುರಿಸಿದ ಮಳೆ.
ಈ ಮಂದಹಾಸ ಹಾಗೆಯೇ ಉಳಿಯುತ್ತಾ? ಗೊತ್ತಿಲ್ಲ.
ಯಾಕೆಂದರೆ ಜುಲೈ ತಿಂಗಳ ಪ್ರಥಮಾರ್ಧದಲ್ಲಿ ಮಳೆಯಿಲ್ಲದೆ ಕೃಷಿಕ ವಸ್ತುಶಃ ಕಂಗೆಟ್ಟಿದ್ದ. ಕೃಷಿ ಚಟುವಟಿಕೆಗಳಿಗೆ ಮಳೆ ಅಭಾವದ ಭೀತಿ ಕಾಡಿತ್ತು. ಜೂನ್ ಕೊನೆಯ ವಾರದಲ್ಲಿ ಬಿರುಸಾಗಿ ಬಂದು, ಬಂದಷ್ಟೇ ವೇಗವಾಗಿ ಹೋಗಿದ್ದ ಮಳೆ, ಮತ್ತೆ ಮರಳಿ ಬಾರದೆ ಆತಂಕದ ಸ್ಥಿತಿ ನಿರ್ಮಾಣವಾಗಿತ್ತು.
ಆದರೆ ಎದುರಿಗಿದ್ದುದು ಪುನರ್ವಸು ನಕ್ಷತ್ರ. ಆರಂಭದಲ್ಲಿ ಭಾರೀ ಮಳೆ ನಿರೀಕ್ಷಿಸಲಾಗಿತ್ತು. ಮಾತ್ರವಲ್ಲ ಹವಾಮಾನ ವರದಿಗಳೂ ಕೂಡಾ ಬಿರುಸಿನ ಮಳೆಯದ್ದೇ ಸಂಕೇತ ನೀಡಿದ್ದವು. ಆದರೆ ಜುಲೈ ತಿಂಗಳಿನಲ್ಲಿ ಕಳೆದು ಹೋದ ಹತ್ತು ದಿನಗಳು ಕೂಡಾ ಎಲ್ಲಾ ಲೆಕ್ಕಾಚಾರಗಳನ್ನು ಬುಡಮೇಲುಗೊಳಿಸಿದ್ದವು. ಭೂಮಿ ಮಳೆಯಿಲ್ಲದೆ ಒಣಗಿ ನಿಂತಿತ್ತು. ಮಳೆ ನೀರಿನ ಆಶ್ರಯದಲ್ಲೇ ಅರಳಬೇಕಿದ್ದ ಕೃಷಿ ಚಟುವಟಿಕೆಗಳು ಆತಂಕಿತಗೊಂಡಿದ್ದವು. ಅನೇಕ ಕಡೆಗಳಲ್ಲಿ ನಾಟಿ ಬಿತ್ತನೆ ಮೇಲೂ ಇದರ ಪರಿಣಾಮ ಗಾಢವಾಗಿದ್ದವು.
ಈ ಎಲ್ಲಾ ಆತಂಕಗಳ ನಡುವೆ ನಿನ್ನೆ ಸಂಜೆಯಿಂದ ಮತ್ತೆ ಮಳೆಗಾಲದ ಚಿತ್ರಣ ಬಿಚ್ಚಿಕೊಂಡಿದೆ. ಎಲ್ಲೆಡೆ ಉತ್ತಮ ಮಳೆ ಸುರಿಯುತ್ತಿದೆ.
ಎಲ್ಲರಿಗೂ ತಿಳಿದಿರುವಂತೆ ಪುನರ್ವಸು ಮತ್ತು ಪುಷ್ಯ ಪೂರ್ತಿಯಾಗಿ ಮಳೆಯ ನಕ್ಷತ್ರಗಳು. ಉಳಿದಿರುವ ಇಪ್ಪತ್ತೆರಡು ದಿನಗಳಲ್ಲಿ ಉತ್ತಮ ಮಳೆಯಾದರೆ ಮಾತ್ರ ಈ ಬಾರಿಯ ಮಳೆಗಾಲ ಪರಿಪೂರ್ಣವಾಗುತ್ತದೆ. ಯಾಕೆಂದರೆ ಆರ್ದ್ರಾ, ಪುನರ್ವಸು, ಪುಷ್ಯ, ಆಶ್ಲೇಷ ನಕ್ಷತ್ರ ಹೊರತುಪಡಿಸಿದರೆ ಮತ್ತೆ ಭರವಸೆಯ ಮಳೆಗಳು ಸುರಿಯುವುದಿಲ್ಲ. ಹಾಗಾಗಿ ಇವಿಷ್ಟು ದಿನಗಳಲ್ಲಿ ಮಳೆ ಸುರಿದರೆ ಬಂತು. ಸಮೃದ್ಧ ಮಳೆಯಾಗದಿದ್ದರೆ ಬೇಸಿಗೆಯಲ್ಲಿ ಮತ್ತೆ ಖಾಲಿ ಕೊಡ... ಮೈಲುಗಟ್ಟಲೆ ನಡಿಗೆ!
ಹಾಗೆ ನೋಡಿದರೆ ಈ ಬಾರಿ ಕರಾವಳಿಯಲ್ಲಿ ಮಳೆಗಾಲದ ತೀವ್ರತೆ ಕಡಿಮೆ. ಈ ಬಾರಿ ನೆರೆ ಪರಿಸ್ಥಿತಿ ಜಿಲ್ಲೆಯಲ್ಲಿ ಕಂಡುಬಂದಿಲ್ಲ. ನದಿಗಳು ಉಕ್ಕುವುದು, ತಗ್ಗುಪ್ರದೇಶ ಜಲಾವೃತವಾಗುವುದು, ಶಾಲಾ ಕಾಲೇಜುಗಳಿಗೆ ರಜೆ ನೀಡುವುದು, ಗಂಜಿ ಕೇಂದ್ರ ಸ್ಥಾಪಿಸುವುದು, ದೋಣಿಗಳಲ್ಲಿ ರಕ್ಷಣಾ ಕಾರ್ಯ, ಜನಜೀವನ ಅಸ್ತವ್ಯಸ್ತಗೊಳ್ಳುವುದು.. ಇದ್ಯಾವುದೇ ಚಿತ್ರಣ ಈ ಬಾರಿ ಕಾಣಿಸಿಲ್ಲ. ಜಿಲ್ಲೆಯ ಮಟ್ಟಿಗೆ ಒಂದೆರಡು ಸಲವಾದರೂ ಈ ಪರಿಸ್ಥಿತಿ ಕಂಡುಬರದಿದ್ದರೆ ಮಳೆಗಾಲದ ಬಿರುಸು ಇಲ್ಲವೆಂದೇ ಅರ್ಥ. ಈ ಬಾರಿ ಯಾವುದೇ ಅನಾಹುತ ಸೃಷ್ಟಿಯಾಗಿಲ್ಲ ಎಂಬುದು ಸಮಾಧಾನ ಕೊಡುವಂತಿದ್ದರೂ, ಇತ್ತೀಚಿನ ದಿನಗಳಲ್ಲಿ ಯಾಕೋ ಮಳೆಗಾಲದ ಠೀವಿ-ಠಾಕು, ಅಬ್ಬರಗಳು ಕ್ಷೀಣಗೊಳ್ಳುತ್ತಿದೆ ಎನ್ನುವುದು ಮಾತ್ರ ಸ್ಪಷ್ಟ.
ಹೌದು, ಮಳೆಗಾಲ ಎಂಬುದರ ವ್ಯಾಖ್ಯಾನ ನಿಧಾನವಾಗಿ ಬದಲಾಗುತ್ತಿದೆ. ದಿನಗಟ್ಟಲೆ ಕತ್ತಲು ಕವಿದು ಹನಿ ಕಡಿಯದೆ ಸುರಿಯುತ್ತಿದ್ದ ಮಳೆ ಇಂದು ಬರೀ ನೆನಪಷ್ಟೇ. ಗುಡುಗು, ಮಿಂಚು ಮತ್ತು ಅದರ ಪ್ರಭಾವಕ್ಕೆ ಸೃಷ್ಟಿಯಾಗುವ ಸಸ್ಯಗಳು, ಜೀವಿಗಳು ಈಗ ಇತಿಹಾಸ.
ಕೃಷಿ ಚಟುವಟಿಕೆಗಳಿಂದ ಜನ ಇಂದು ದೂರವಾಗಿದ್ದಾರೆ. ಜಿಲ್ಲೆಯಲ್ಲಿ ವ್ಯಾಪಕವಾಗಿ ಕೃಷಿ ವಿಸ್ತಾರವಿದ್ದ ಕಾಲದಲ್ಲಿ ಜನ ಮಳೆಗಾಗಿ ತಪಸ್ಸು ಮಾಡುತ್ತಿದ್ದರು, ಹರಕೆ ಹೊರುತ್ತಿದ್ದರು, ಪೂಜೆ, ಪ್ರಾರ್ಥನೆ ನಡೆಸುತ್ತಿದ್ದರು. ಆದರೆ ಇತ್ತೀಚೆಗೆ ಏನಾಗಿದೆ? ಜಾಗತೀಕರಣಕ್ಕೆ ಒಡ್ಡಿಕೊಂಡು ಬದಲಾದ ಪರಿಸ್ಥಿತಿಯಲ್ಲಿ ಮಣ್ಣಿನ ನಂಟನ್ನು ಕಳೆದುಕೊಂಡ ಜನ, ಔದ್ಯಮಿಕ ನಂಟಿನತ್ತ ಹೊರಳಿದ್ದಾರೆ. ಹಾಗಾಗಿ ಇಂದು ಮಳೆ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುತ್ತಿಲ್ಲ. ಮಳೆ ಎಂದರೆ ತಾತ್ಸಾರ, ಮಳೆ ಎಂದರೆ ಉದಾಸೀನ. ಒಂದರೆಡು ಮಳೆ ಬಂದರೂ ಕೂಡಾ 'ಏನಪ್ಪಾ ಮಳೆಗಾಲ... ಒಮ್ಮೆ ಮಳೆ ನಿಲ್ಲಬಾರದೇ...' ಎಂದು ಚಡಪಡಿಸುತ್ತಾರೆ.
ಬರೀ ಹಣದ ಹಿಂದೆ ಬಿದ್ದಿರುವ ಇಂದಿನ ಮಂದಿಗೆ ಮಳೆ ಬೇಡ ನಿಜ. ಆದರೆ ಈಗಲೂ ಕೃಷಿ ಆಸಕ್ತಿ ಉಳಿಸಿಕೊಂಡು ಪರಂಪರೆ ಮುಂದುವರಿಸುವ ಇನ್ನೂ ಅದೆಷ್ಟೋ ರೈತರಿಗೆ ಮಳೆಯಂತೂ ಸಮೃದ್ಧವಾಗಿ ಬರಲೇಬೇಕು. ನೀರಿಲ್ಲದಿದ್ದರೆ ಅನ್ನವಿಲ್ಲ, ಅನ್ನವಿಲ್ಲದಿದ್ದರೆ ಬದುಕಿಲ್ಲ. ಇವೆರಡನ್ನೂ ಕಳೆದುಕೊಳ್ಳುತ್ತಿದ್ದೇವೆ ಎಂಬ ಅರಿವಿಲ್ಲದೆ ಬುದ್ಧಿಭ್ರಮಣೆಗೊಳಗಾದ ಜನಕ್ಕೆ ಪ್ರಕೃತಿಯೂ ಕೂಡಾ ಈ ಮೂಲಕ ತನ್ನದೇ ಚಾಲಾಕಿ ನಡೆ ತೋರಿಸುತ್ತಿದೆಯೇ?
ಏನೇ ಆದರೂ ಪ್ರಕೃತಿಯ ಉಳಿವಿಗೆ ಪ್ರಾಣಿ, ಪಕ್ಷಿಗಳ ಬದುಕಿಗೆ, ಹಸಿರು ಕಾಡುಗಳ ರಕ್ಷಣೆಗಾಗಿಯಾದರೂ ಮಳೆ ಬಂದೇ ಬರುತ್ತದೆ. ಆದರೆ ಅದು ಮನುಷ್ಯನ ಮರ್ಜಿಗೆ ಸರಿಯಾಗಿ ಇರಲಾರದು ಅಷ್ಟೇ. ಕಳೆದ ಕೆಲ ವರ್ಷಗಳ ಮಳೆಗಾಲದಲ್ಲಿ ಇಂತಹದ್ದೊಂದು ಸೂಚನೆ ಮತ್ತು ಪಾಠವನ್ನು ಪ್ರಕೃತಿ ತೋರಿಸಿಕೊ‌ಡುತ್ತಲೇ ಬಂದಿದೆ.
ದುರಂತವೆಂದರೆ ಮನುಷ್ಯ ಮಾತ್ರ ಬುದ್ಧಿ ಕಲಿತಿಲ್ಲ.
ವಿಪರ್ಯಾಸವೆನ್ನುವುದು ಇದಕ್ಕೇ ಅಲ್ಲವೇ?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ