ಸೋಮವಾರ, ಫೆಬ್ರವರಿ 9, 2015

ಇಲ್ಲಿ ವರಗಳಿಗೆ ಬಡಿದಿದೆ ಗರ!

ಇದ್ಯಾರ ಶಾಪ?
ಹವ್ಯಕ ಮಾಣಿಗಳು ಈಗ ತಲೆಕೆರೆದುಕೊಳ್ಳುತ್ತಿದ್ದಾರೆ...
ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ, ಕಾಸರಗೋಡು ಪರಿಸರಗಳಲ್ಲಿ ಹೆಚ್ಚಾಗಿ ಕಂಡು ಬರುವ ಈ ಪುಟ್ಟ ಹವ್ಯಕ ಸಮಾಜದಲ್ಲಿ ಇಂದು ಮುದುವೆ ಹೆಣ್ಣುಗಳೇ ಸಿಗುತ್ತಿಲ್ಲ!
ಯಾಕೆ ಹೀಗೆ?
ಉತ್ತರ ನೀಡುವುದು ಅಷ್ಟೇನೂ ಸುಲಭವಿಲ್ಲ.
ಸುಮಾರು ಮೂರನೇ ಶತಮಾನದಲ್ಲಿ ಕರ್ನಾಟಕಕ್ಕೆ ಕಾಲಿರಿಸಿದ ಈ ಬ್ರಾಹ್ಮಣ ಪಂಗಡ, ಮೊದಲಿನಿಂದಲೂ ಅಡಿಕೆ, ತೆಂಗು, ಭತ್ತ, ಏಲಕ್ಕಿ, ಕಾಳು ಮೆಣಸು... ಅಂತ ಬೆಳೆ ಬೆಳೆಯುತ್ತಾ  ನಿರುಪದ್ರವಿಗಳಾಗಿ ಜೀವಿಸುತ್ತಾ ಬಂದವರು. ಇವರಲ್ಲಿ ಕೆಲವು ಕುಟುಂಬಗಳು ಪೌರೋಹಿತ್ಯದತ್ತ ಒಲವು ತೋರಿದರೂ, ಬಹುಪಾಲು ಮಂದಿಗೆ ಇಂದಿಗೂ ಕೃಷಿಯೇ ಜೀವನಾಧಾರ.
ಸುಸಂಸ್ಕೃತರು, ಬುದ್ಧಿವಂತರು,  ಹೊಂದಿಕೊಂಡು ಹೋಗುವವರು, ಅಷ್ಟೇ ಅಲ್ಲ ಮಡಿವಂತಿಕೆ, ವೇದಮಂತ್ರ, ವಿದ್ಯಾಭ್ಯಾಸದಲ್ಲಿ ಎಂದೂ ಮುಂದಿರುವವರು ಎಂದು ಗುರುತಿಸಿಕೊಳ್ಳುವ  ಈ ಪಂಗಡ ಈಗ ಇದೇ ಕಾರಣಕ್ಕಾಗಿ  ಆತಂಕಕಾರಿ ಪರಿಸ್ಥಿತಿಯನ್ನು ತಂದುಕೊಂಡಿದೆ.
ಅದೊಂದು ಕಾಲವಿತ್ತು. ಮದುವೆಯಾಗುವ ಹುಡುಗ 30- 40 ಹುಡುಗಿ ನೋಡಿ ಬಳಿಕ ಅದರಲ್ಲೊಂದು ಆಯ್ಕೆ ಮಾಡಿ ಮದುವೆಯಾಗುತ್ತಿದ್ದ. ಆದರೀಗ? ಇಂದಿನ ಹುಡುಗರಿಗೆ ಈ ಆಯ್ಕೆಗಳೇ ಇಲ್ಲ! ಅಷ್ಟೇ ಯಾಕೆ? ಹುಟ್ಟಿಸಿದ ದೇವರು ತನಗೊಂದು ಹೆಣ್ಣನ್ನು ಸೃಷ್ಟಿಸಿರುತ್ತಾನೆ ಎಂಬ ಮಾತನ್ನು ನಂಬುವ ಸ್ಥಿತಿಯಲ್ಲಿಯೂ ಅವರಿಲ್ಲ. ಯಾಕೆಂದರೆ ದೃಷ್ಟಾಂತ ಕಣ್ಣೇದುರಿಗೇ ಇದೆ. ಇಲ್ಲಿ ಅದೆಷ್ಟೋ ನಲವತ್ತು ನಲವತ್ತೈದು ಮೀರಿದ ಯುವಕರೂ (!) ಇಂದು ಹೆಣ್ಣು ಸಿಗದೇ ಕೊನೆಗೆ ತಮ್ಮ ಮದುವೆಯ ಆಸೆಗೆ  ಡೈವೋರ್ಸ್ ಕೊಟ್ಟು ಬಿಟ್ಟಿದ್ದಾರೆ.
ಹುಡುಗ ಹಳ್ಳಿಯಲ್ಲಿದ್ದಾನೆ, ಕೃಷಿ ಮಾಡಿಕೊಂಡಿದ್ದಾನೆ, ಅಂಗಡಿ, ಸಣ್ಣಪುಟ್ಟ ವ್ಯವಹಾರ ಮಾಡಿಕೊಂಡಿದ್ದಾನೆ... ಎಂದಾದರೆ ಕನಿಷ್ಠ ಜಾತಕ ಕೇಳುವವರಿಗೂ ಹವ್ಯಕ ಸಮಾಜದಲ್ಲಿ ದಿಕ್ಕಿಲ್ಲ!
ಪ್ರತೀ ವಸ್ತು, ಪ್ರತಿ ವಿಚಾರದಲ್ಲೂ ಇಂದಿನ ಜಗತ್ತಿನಲ್ಲಿ ಅಪರಿಮಿತ ಆಯ್ಕೆಗಳಿರುವಾಗ, ಇದೊಂದರಲ್ಲಿ ಮಾತ್ರ ಇಲ್ಲಿನ ಮಾಣಿಗೆ ಊಹೂಂ... ಆಯ್ಕೆಗಳೇ ಕಾಣುತ್ತಿಲ್ಲ.
ಸಂಪ್ರದಾಯ,  ಮಡಿವಂತಿಕೆಗಳಿರುವ ಈ ಪಂಗಡದ ಹುಡುಗರಿಗೆ ಒಂದು ಕಾಲಕ್ಕೆ ಆಂತರ್ಜಾತಿ ಬಿಡಿ, ಬ್ರಾಹ್ಮಣರದ್ದೇ ಸಮುದಾಯವಾದ ಶಿವಳ್ಳಿ, ಕೋಟ, ಕರಾಡ ಮೊದಲಾದ ಪಂಗಡದಿಂದ ವಿವಾಹವಾಗುವುದೂ ಕನಸಿನ ಮಾತಾಗಿತ್ತು. ಹವ್ಯಕ ಪಂಗಡದಿಂದ ಹೊರಜಾತಿಯವರನ್ನು ಮದುವೆಯಾಗುವುದೆಂದರೆ ಸಮುದಾಯದ ಸಮಸ್ತರೂ ಉರಿದು ಬೀಳುತ್ತಿದ್ದರು. ಆದರೆ ಈಗ?
ಕಾಲ ಬದಲಾಗಿದೆ. ಕಾಲಕ್ಕೆ ತಕ್ಕಂತೆ ಕೋಲ ಕಟ್ಟಲೇ ಬೇಕು ಎಂಬುದನ್ನು ಇಲ್ಲಿ ಕೆಲವರು ಅರ್ಥ ಮಾಡಿಕೊಂಡಿದ್ದಾರೆ. ಪರಿಣಾಮ , ಈಗ ಕಟ್ಟಾ ಸಂಪ್ರದಾಯಸ್ತರೂ ಕೂಡಾ ಹುಡುಗಿ ಸಸ್ಯಹಾರಿಯಾಗಿದ್ದರೆ ಸಾಕಪ್ಪ... ಎನ್ನುವ ಮನೋಭಾವನೆಗೆ ಬಂದುಬಿಟ್ಟಿದ್ದಾರೆ.
ಇದಕ್ಕೆಲ್ಲ ಕಾರಣ ಆಧುನಿಕತೆಯ ಗಾಳಿ ಇಲ್ಲಿಗೂ ಸೋಕಿರುವುದಾ? ಗೊತ್ತಿಲ್ಲ.
ಆದರೆ ಇಂದಿನ ಹವ್ಯಕ ಹುಡುಗಿಯರು ತಮಗೆ ಸಾಫ್ಟ್ ವೇರ್ ಇಂಜಿನಿಯರು, ಡಾಕ್ಟರು, ಪೇಟೆಯಲ್ಲಿರುವವರೇ ಬೇಕು ಎನ್ನುವುದು ಗಮನಿಸಿದರೆ ಇಂತದ್ದೊಂದು ಅನುಮಾನ ಬಾರದಿರದು.
ಈ ನಡುವೆ ಬ್ರಾಹ್ಮಣ ಸಮುದಾಯಗಳಾದ ಶಿವಳ್ಳಿ, ಹವ್ಯಕ, ಕೋಟ, ಕರಾಡ... ಕುಟುಂಬಗಳ ನಡುವೆ ನೆಂಟಸ್ಥಿಕೆ ಬೆಳೆಯುತ್ತಿರುವುದು ಇತ್ತೀಚಿನ ಹೊಸ ಬೆಳವಣಿಗೆ, ಕೆಲವು ಕಡೆಗಳಲ್ಲಿ ಇದು ಇನ್ನೂ ಒಂದಿಷ್ಟು ಮುಂದಕ್ಕೆ ಹೋಗಿ ಕೊಂಕಣಿ, ಲಿಂಗಾಯುತರ ಕುಟುಂಬದ ನಡುವೆಯೂ ನೆಂಟಸ್ಥಿಕೆ ಕುದುರಿರುವುದು ಕಾಣಬಹುದು. ಇಂತಹ ನೆಂಟಸ್ಥಿಕೆಗಳಿಂದಲಾದರೂ ಮದುವೆ ಹೆಣ್ಣಿನ ಕೊರತೆ ನೀಗಿಸಲು ಈ ಸಮಾಜದ ಕೆಲವರು ಧೈರ್ಯ ತೋರಿರುವುದು ಮೆಚ್ಚುವಂತದ್ದೆ!
ಇವಿಷ್ಟು ಒಂದೆಡೆಯಾದರೆ, ಮ್ಯಾರೇಜ್ ಬ್ಯುರೋಗಳು, ದಲ್ಲಾಳಿಗಳ ಕಾರೋಬಾರುಗಳು ಇನ್ನೊಂದೆಡೆ.
ಇಂದು ಹವ್ಯಕ ಸಮಾಜದ ಮ್ಯಾರೇಜು ಬ್ಯೂರೋಗಳಲ್ಲಿ ಹೆಸರು ನೋಂದಾಯಿಸಬೇಕೆಂದರೆ ಕನಿಷ್ಠ ಸಾವಿರ ರೂ.ತೆರಬೇಕು. ದಲ್ಲಾಳಿಗಳಿಗೆ ಅದಕ್ಕೂ ಹೆಚ್ಚು ನೀಡಬೇಕು. ಇಷ್ಟನ್ನು ಮಾಡಿದರೂ ಒಂದು ಒಳ್ಳೆಯ ನೆಂಟಸ್ಥಿಕೆ ಕುದುರೀತೆಂಬ ಭರವಸೆಯಿಲ್ಲ. ಇಲ್ಲಿನ ಕೆಲವು ಬಯೋಡೇಟಾಗಳಲ್ಲಿ ಉತ್ತಮ ವರ/ವಧು ಸಿಗಲಿ ಅಂತ ಯರ್ರಾಬಿರ್ರಿ ಬರೆಯುವವರೂ ಇದ್ದಾರೆ. ಇಷ್ಟೆಲ್ಲಾ ಆಗಿ ಎಲ್ಲಾದರೂ ಅಜ್ಜಿ ಪುಣ್ಯಕ್ಕೆ ಪ್ರೊಫೈಲು ಓಕೆ ಆಯ್ತು ಇನ್ನು ಹುಡುಗಿ ಕಡೆಯವರನ್ನು ಮಾತಾಡಿಸೋದು ಅಂತ ಮುಂದೆ ಹೋದರೆ ಹೆಣ್ಣುಗಳ ಡಿಮ್ಯಾಂಡುಗಳೇ ಮಾಣಿಗಳ ತಲೆ ತಿರುಗಿಸಿಬಿಡುತ್ತದೆ.
ಜುಟ್ಟಿರುವವ ಬೇ‌ಡ... ಕೃಷಿ ಮಾಡುವವ ಬ್ಯಾಡ, ಅಪ್ಪ- ಅಮ್ಮ ನೊಟ್ಟಿಗೆ ಮನೆಯಲ್ಲಿರುವವನಾ.... ಅಯ್ಯೋ ಬ್ಯಾಡ.. ಹೀಗೆ. ಇದನ್ನೂ ದಾಟಿ ಮುಂದಕ್ಕೆ ಹೋದರೆ ವಧು ದಕ್ಷಿಣೆ! ಇಂದು ಮದುವೆಯಾಗುವುದಾದರೆ ಹೆಣ್ಣಿಗೆ ಕನಿಷ್ಠವೆಂದರೆ ಐದಾರು ಲಕ್ಷ ರೂ. ಕೊಡುವ ಪದ್ಧತಿಯೂ ಕೆಲವೆಡೆಗಳಲ್ಲಿ ಉಂಟು.
ಹಿಂಗಾದರೆ ಬಡಪಾಯಿ ಮಾಣಿ ಎಂತ ಮಾಡಿಯಾನು?
ಮೇಲ್ನೋಟಕ್ಕೆ ಈ ಸಮಸ್ಯೆಯ ಗಂಭೀರತೆ ಸುಲಭಕ್ಕೆ ಅರ್ಥವಾಗದಿದ್ದರೂ, ಹವ್ಯಕ ಹಿರಿತಲೆಗಳು ಕೂಡಾ ಈಗ ಇದನ್ನು ಒಪ್ಪುತ್ತಾರೆ. ಇದು ಕೇವಲ ಹವ್ಯಕರ ವಿಚಾರವಲ್ಲ. ಗಮನಿಸಿ ನೋಡಿದರೆ ಇಂದು  ಎಲ್ಲಾ ಜಾತಿಗಳಲ್ಲೂ ಈ ಸಮಸ್ಯೆಯಿದೆ. ಕರ್ನಾಟಕ ರಾಜ್ಯದ ಜನಗಣತಿಯಂತೆ ಗಂಡಿಗೆ ಸಮನಾಗಿ ಹೆಣ್ಣಿನ ಸಂಖ್ಯೆಯಿಲ್ಲದಿರುವುದು ಇದಕ್ಕೆ ಮುಖ್ಯ ಕಾರಣ.  ಕರಾವಳಿ ಹಾಗೂ ಮಲೆನಾಡಿನಲ್ಲಿ ಈ ಪರಿಸ್ಥಿತಿಯಂತೂ ತುಸು ಗಂಭೀರವಾಗಿಯೇ ಇದೆ.
ಹಾಗಾಗಿಯೋ ಏನೋ ಈಗ ಅಂತರ್ಜಾತಿ ವಿವಾಹದತ್ತ ಸಹಜವಾಗಿಯೇ ಒಲವು ಹರಿಯುತ್ತಿದೆ.
 ಮೊದಲಿನಂತೆ ಅಂತಾರ್ಜಾತಿ ಎಂದರೆ ಮುಖ ಸಿಂಡರಿಸುವ ಪ್ರವೃತ್ತಿ ಇಂದು ಕಡಿಮೆಯಾಗುತ್ತಿದೆ. ಪಕ್ಕಾ ಸಂಪ್ರದಾಯಸ್ಥರು ಕೂಡಾ ಅಂತರ್ಜಾತಿ ವಿವಾಹ ತಪ್ಪೇನು? ಎಂದು ಪ್ರಶ್ನಿಸುವ ಸ್ಥಿತಿಗೆ ಬಂದು ನಿಂತಿದ್ದಾರೆ.
 ಹೌದು ಒಂದು ರೀತಿಯಲ್ಲಿ ನೋಡುವುದಾದರೆ ಅಂತರ್ಜಾತಿ, ನೆಂಟಸ್ತಿಕೆಗಳು. ನಿಜಕ್ಕೂ ಒಳ್ಳೆಯ ಬೆಳವಣಿಗೆಯೇ. ಈ ರೀತಿಯ ಸಂಬಂಧ ಬೆಸುಗೆಗಳಿಂದಾಗಿ ಸಮಾಜದಲ್ಲಿ ಸಾವಿರಾರು ವರ್ಷಗಳಿಂದ ಬೇರುಬಿಟ್ಟಿರುವ ಅನಿಷ್ಟ ಜಾತಿ ಪದ್ಧತಿ ನಿರ್ಮೂಲನೆಗೆ ಇದು ಒಂದು ವ್ಯವಸ್ಥಿತ ವೇದಿಕೆಯಾಗುತ್ತದೆಂದರೆ...
ಅದರಲ್ಲಿ ತಪ್ಪೇನು?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ