ಸೋಮವಾರ, ಫೆಬ್ರವರಿ 9, 2015

ನೇಚರ್ರೇ ನಮ್ಮ ಟೀಚರ್ರಾಗಿದ್ದ ಹೊತ್ತು...


ಗಿರಿ ಸಿರಿ ನೆಲ ಹೊಲ...
ನೇಚರೇ ನಮ್ ಟೀಚರು...
ಟೀವಿಯಲ್ಲಿ ಈ ಹಾಡು ಕಂಡಾಗ ನೆನಪುಗಳು ಸರಿದು ಹೋದದ್ದು ಹತ್ತಿಪ್ಪತ್ತು ವರ್ಷಗಳ ಹಿಂದಕ್ಕೆ...
ಆಗ ನಮ್ಮೂರು ಇಂದಿನಂತೆ ಕಾಂಕ್ರೀಟ್ ಕಾಡಾಗಿರಲಿಲ್ಲ. ಮನೆ ಸುತ್ತ ಎತ್ತ ತಿರುಗಿದರೂ ಬರೀ ಹಸಿರು ಮತ್ತು ಹಸಿರಷ್ಟೇ ಇತ್ತು.
ಆಗೆಲ್ಲಾ ಮಳೆಗಾಲ ಬಂತೆಂದರೆ ನಮಗೆಲ್ಲಾ ಖುಷಿಯೋ ಖುಷಿ. ಧೋ ಎಂದು ಸುರಿಯುತ್ತಿದ್ದ ಮಳೆಗೆ ಮನೆಯಲ್ಲಿ ಹರಿದುಬರುತ್ತಿದ್ದ ಬೈಗುಳವನ್ನು ಕಿವಿಗೆ ಹಾಕಿಕೊಳ್ಳದೆ ಅಂಗಿ-ಚೆಡ್ಡಿ ಸಿಕ್ಕಿಸಿಕೊಂಡು ನಾವೊಂದಿಷ್ಟು ಗೆಳೆಯರು ಹನಿಯ ಏಟನ್ನೂ ಲೆಕ್ಕಿಸದೆ ಹೊರಟು ಬಿಡುತ್ತಿದ್ದೆವು. ಹೊಲ ಗದ್ದೆ, ಚಿಕ್ಕಪುಟ್ಟ ಝರಿ, ತೊರೆಗಳು, ಅಲ್ಲಲ್ಲಿ ಹರಿದು ಹೋಗುತ್ತಿದ್ದ ಸ್ಫಟಿಕ ಸ್ವಚ್ಛ ನೀರು... ಕಣ್ಣೆದುರಿಗೆ ನಮಗಾಗಿ ಒಂದು ಅದ್ಭುತ ಲೋಕ ಸೃಷ್ಟಿಸಿಕೊಡುತ್ತಿತ್ತು. ಮಳೆ ಬಿದ್ದೊಡನೇ ಅರಳಿಕೊಳ್ಳುವ ಅದ್ಯಾವುದೋ ಹೂವುಗಳು, ಅಲ್ಲೊಂದು ಇಲ್ಲೊಂದು ಉಳಿದುಕೊಂಡ ಕುಂಟಾಲಕಾಯಿ, ಮೊಳಕೆಯೊಡೆದ ಗೇರುಬೀಜ, ಹರಿದುಬರುವ ಒಸರು ನೀರಲ್ಲಿ ಪಟಪಟನೆ ಬಾಲ ಬಡಿಯುವ ಹೆಸರೇ ಇಲ್ಲದ ಮೀನು... ಒಂದಾ ಎರಡಾ?
ಗೊತ್ತೇ ಆಗದಂತೆ ಅಡಗಿಸಿಕೊಂಡು ತರುತ್ತಿದ್ದ ಚೊಂಬುಗಳಲ್ಲಿ ಮೀನು ಹಿಡಿಯುವ ಕಸರತ್ತು. ಸಣ್ಣ ಸಣ್ಣ ನೀರಿನ ಹರಿವಿಗೆ ಅಣೆಕಟ್ಟು(!) ಕಟ್ಟುವ ಕೆಲಸ, ಅಬ್ಬ, ಎಷ್ಟೊಂದು ಶ್ರದ್ಧೆ ಇತ್ತಲ್ಲವಾ ಆಗ?
ಸುತ್ತಮುತ್ತ ತುಂಬಿ ಹರಿಯುತ್ತಿದ್ದ ಹಳ್ಳ, ತೊರೆಗಳಲ್ಲಿ ಈಜಾಡುತ್ತಾ, ಮೈ ಮೇಲೆ ನೀರೆರಚಿಕೊಳ್ಳುತ್ತಾ, ಕಾಗದದ ದೋಣಿ ಅದೆಷ್ಟು ದೂರ ಹೋಗುತ್ತದೆ ಅಂತ ನಮ್ಮಲ್ಲೇ ಪರಸ್ಪರ ಜಿದ್ದಿಗೆ ಬೀಳುತ್ತಿದ್ದ ಆ ಕ್ಷಣಗಳು ಛೇ... ಮತ್ತೊಮ್ಮೆ  ಬದುಕಲ್ಲಿ ಬರಲಾರದೇ? ಎಂದು ಹಳಹಳಿಸುತ್ತೇನೆ.
ಇಂದಿನ ಮಕ್ಕಳಿಗೆ ಇದನ್ನೆಲ್ಲಾ ಹೇಳಿದರೆ ನಗುತ್ತಾರೆ. ಯಾವ ಓಬೀರಾಯನ ಕಾಲದಲ್ಲಿದ್ದೀರಾ... ಅಂತ ಕೇಳುತ್ತಾರೆ.
ಅವರ ತಪ್ಪೇನಿಲ್ಲ. ಅವರು ಇಂದು ಕಂಪ್ಯೂಟರ್ ಯುಗದಲ್ಲಿದ್ದಾರೆ. ಅಪ್ಪ-ಅಮ್ಮಂದಿರ ವಿಶೇಷ ಕಾಳಜಿಯಡಿ ಬೆಳೆಯುತ್ತಿದ್ದಾರೆ. ಅವರಿಗಿಂದು ನೋಡಬೇಕೆಂದರೂ ಕಣ್ಣೆದುರು ಹಳ್ಳಿಗಳೇ ಸಿಗುತ್ತಿಲ್ಲ. ಇನ್ನು ಝರಿ ತೊರೆಗಳು... ಅದು ಚಿತ್ರದಲ್ಲಿ ಮಾತ್ರ.. ಅವರೇನಿದ್ದರೂ ಸ್ಕೂಲು, ಟ್ಯೂಷನ್ನು, ಸಂಗೀತ ಕ್ಲಾಸು, ಕರಾಟೆ, ರಿವಿಜನ್ನು, ಸ್ಪೆಷಲ್ ಕ್ಲಾಸು ಅಂತ ಬ್ಯುಸೀ! ಮಳೆಗಾಲದಲ್ಲಿ ಅಲ್ಲೊಮ್ಮೆ ಇಲ್ಲೊಮ್ಮೆ ನೀರು ನಿಂತಿದ್ದು ಅವರಿಗೆ ಕಾಣಸಿಕ್ಕರೂ ಕ್ಷಣಕಾಲದಲ್ಲಿ ನಗರಪಾಲಿಕೆಯೋ ಪುರಸಭೆಯೋ ಅದನ್ನು ರಿಪೇರಿ ಮಾಡಿ ಸ್ವಚ್ಛಗೊಳಿಸಿರುತ್ತದೆ. ಮಳೆಗಾಲದ ಹಳ್ಳಿ ಹೀಗಿತ್ತು... ಎಂದು ಅವರಿಗೆ ವರ್ಣಿಸುವುದಾದರೂ ಹೇಗೆ?
ನಮ್ಮ ಬಾಲ್ಯದಲ್ಲಿ ಸಾಂತಣಿ, ಪುಳಿಂಕಟೆ, ಹೆಬ್ಬಲಸಿನ ಬೀಜ, ಖಾರ ಹಪ್ಪಳ, ಸಿಹಿ ಹಪ್ಪಳ, ಮಾಂಬಳ, ಹಲಸಿನ ಸೋಳೆ, ಉಪ್ಪು ನೀರಿನ ಮಾವು, ಹಲಸು ಎಂದೆಲ್ಲ ತಯಾರಾಗುತ್ತಿತ್ತು. ಇವೆಲ್ಲಾ ಮಳೆಗಾಲದ ವಿಶೇಷ ಖಾದ್ಯಗಳು.
ಇಂದು ಬಣ್ಣ ಬಣ್ಣದ ಲಕೋಟೆಯೊಳಗಿನ ಚಿಪ್ಸು, ಪಿಜ್ಜಾ, ಬರ್ಗರ್ ಗಳು, ಸಾಸ್, ಕೆಚಪ್ಪು, ಬ್ರೆಡ್ಡು ರೋಸ್ಟುಗಳಲ್ಲಿ ವರ್ಷದ ಮುನ್ನೂರ ಅರವತ್ತೈದು ದಿನ ಕಳೆಯುವ ಮಕ್ಕಳಿಗೆ ಅದರ ರುಚಿ ಹೇಗಿತ್ತು ಎಂದು ವಿವರಿಸುವುದು ಸಾಧ್ಯವೇ?
ಮಳೆ ಹನಿಗಳಿಗೆ ಮೈಬಿಚ್ಚಿ ಅದ್ಭುತ ಅನುಭವ ಪಡೆಯುವ ಅವಕಾಶ ಇಂದು ಬೇಕೆಂದರೂ ಅವರಿಗೆ ದಕ್ಕುತ್ತಿಲ್ಲ. ಅವರ ಆಟಗಳೇನಿದ್ದರೂ ಕಂಪ್ಯೂಟರ್, ಮೊಬೈಲ್ ಗಳಿಗಷ್ಟೇ ಸೀಮಿತವಾಗಿದೆ.
ಮತ್ತೆ ಯಾರಿಗೆ ಗೊತ್ತು? ಅಂದು ನಾವು ಕಾಗದದ ಹಾಳೆಯನ್ನು ಒಂದೊಂದಾಗಿ ಮಡಚಿ ದೋಣಿ ಮಾಡಿ ನೀರಿಗದ್ದುವಾಗ ಸಿಗುತ್ತಿದ್ದ ಖುಷಿ ಇಂದು ಕಂಪ್ಯೂಟರ್ ಎದುರು ಕೂತು  ಬೈಕ್ , ಕಾರ್ ರೇಸ್, ಫಜಲ್ಸ್ ... ಅಂತ ಆಡುವುದರ ಮುಂದೆ ಏನೂ ಅಲ್ಲ ಎಂದು ಇಂದಿನ ಮಕ್ಕಳು ಹೇಳಲೂಬಹುದು!
ಕಾಲಾಯ.... ಅಲ್ವೇ?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ