ಸೋಮವಾರ, ಫೆಬ್ರವರಿ 9, 2015

ಅದಕ್ಕೋ ಏನೋ, ದೇವರಿಗೂ ಮುನ್ನ ನಿನ್ನ ನೆನಪಾಗುತ್ತದೆ!

ಪುಟ್ಟಾ!
ಮಳೆಯ ಮೊದಲ ಹನಿ ಓಡೋಡಿ ಬಂದು ಮುತ್ತಿಕ್ಕಿದಾಗ ಖುಷಿಯಲ್ಲಿ ಇಳೆ ಅರಳಿ ನಿಲ್ಲುವಂತೆ, ಈ ಪತ್ರ ನಿನ್ನ ಕೈಸೋಕಿದಾಗ ಕಣ್ಣಲ್ಲೊಂದು ಮಿಂಚು ಸರಿದಾಡಿ ತುಟಿಯಲ್ಲೊಂದು ನಗೆ ಅರಳಿದರೆ ನಾನು ಧನ್ಯ.
ಅಂಥಾ ವಿಶೇಷವೇನಿಲ್ಲ. ಯಾಕೋ ಬೆಳಗ್ಗಿನಿಂದಲೇ ವಿಪರೀತ ಅನ್ನುವಷ್ಟು ನಿನ್ನ ನೆನಪು. ಯಾಕೆ ಹೀಗೆ? ಗೊತ್ತಾಗುತ್ತಿಲ್ಲ. ಪ್ರೀತಿಯಲ್ಲಿ ಹೀಗೇನಾ ಅಂತ ಮನವನ್ನು ಕೇಳಿದರೆ ಮೊದಲ ಪ್ರೀತಿಯಾದ್ದರಿಂದ ಪಾಪ ಅದಕ್ಕೂ ಉತ್ತರ ಗೊತ್ತಿಲ್ಲ.
ಗಗನವೇ ಬಾಗಿ
ಭುವಿಯನು ಕೇಳಿದಾ ಹಾಗೆ...
ಕಡಲು ಕರೆದಂತೆ
ನದಿಯನು, ಭೇಟಿಗೆ...

ಅದೆಷ್ಟು ಆಕಸ್ಮಿಕವಾಗಿತ್ತಲ್ಲವೇ ನಮ್ಮ ಭೇಟಿ. ಒಂದೇ ಊರು, ಒಂದೇ ದಾರಿ, ಒಂದೇ ಕಾಲೇಜು... ಹೀಗಿದ್ದರೂ ಅದೆಷ್ಟು ದಿನಗಳನ್ನು ಅಪರಿಚಿತರಂತೆ ಕಳೆದುಬಿಟ್ಟೆವು ನೋಡು. ನೆನಪಿಸಿಕೊಂಡರೆ ಇಂದು ನಗೆಯುಕ್ಕುತ್ತದೆ.
ಯಾರೂ ಬಂದಿರದ ಮನಸಲಿ
ನಿನ್ನ ಆಗಮನ ಈ ದಿನ...
ನೀಡುವಾ ಮುನ್ನ
ನಾನೇ ಆಮಂತ್ರಣ...

ಹೌದು ಪುಟ್ಟಾ, ನನಗಿಂದೂ ನೆನಪಿದೆ. ತಿಳಿನೀಲಿ ಜೀನ್ಸಿನ ಮೇಲೊಂದು ಟೀ ಶರ್ಟು ಹಾಕ್ಕೊಂಡು ನೀನಂದು ಕಾಡಾನೆಯಂತೆ ಕ್ಲಾಸ್ ರೂಮೊಳಗೆ ನುಗ್ಗಿದ್ದೆ. ಇಲ್ಲಿ ವಿನು ಯಾರು? ಅಂತ ನೀನು ಕೇಳುತ್ತಿದ್ದರೆ ಕೂತಲ್ಲೇ ನನಗೆ ಸಣ್ಣ ನಡುಕ. ಅಂದು ಕ್ಲಾಸ್ ರೂಮ್ ಪೂರ್ತಿ ನನ್ನನ್ನೇ ನೋಡಿತ್ತು. ಸೀದಾ ಹತ್ತಿರಕ್ಕೆ ಬಂದವನೇ ಹೊರಗೆ ಯಾರೋ ಕರೀತಿದ್ದಾರೆ ನೋಡಿ ಅಂತ ಹೇಳಿ ನನ್ನ ರಿಪ್ಲೈಗೂ ಕಾಯದೆ ಬಿರುಗಾಳಿಯಂತೆ ನೀನು ನಡೆದುಹೋಗಿದ್ದೆ.
ಜೀವನ, ಈ ಕ್ಷಣ
ಶುರುವಾದಂತಿದೆ...
ಕನಸಿನ ಊರಿನ
ಕದ ತೆರೆಯುತ್ತಿದೆ...

ನಿಜ ಹೇಳುತ್ತೇನೆ ಕೇಳು. ಅಂದು ನೀನು ಏನು ಹೇಳಿ ಹೋದೆ ಅನ್ನುವುದು ಪಕ್ಕದ ಗೆಳತಿಯೇ ಹೇಳಬೇಕಾಯಿತು! ಯಾಕೆ ಗೊತ್ತಾ? ನಾನು ನಿನ್ನ ಮತ್ತು ಬರೀ ನಿನ್ನನ್ನಷ್ಟೇ ನೋಡುತ್ತಾ ಕೂತಿದ್ದೆ. ಅಂದ ಹಾಗೆ ನನ್ನಲ್ಲಿ ಪ್ರೀತಿ ಹುಟ್ಟಿದ್ದು ಅಲ್ಲೇನಾ? ಗೊತ್ತಿಲ್ಲ.
ಅಂದು ಕ್ಲಾಸ್ ರೂಮ್ ನಿಂದ ಹೊರಗೆ ಬಂದರೆ ಅಲ್ಲಿ ಚಿಕ್ಕಪ್ಪ ನಿಂತಿದ್ದರು. ನಿನ್ನ ಅಪ್ಪನಿಗೆ ಹುಷಾರಿಲ್ಲ. ಆಸ್ಪತ್ರೆಗೆ ಅಡ್ಮಿಟ್ ಮಾಡಿದ್ದೀವಿ. ಸಾಧ್ಯವಾದರೆ ಈಗಲೇ ಹೊರಟು ಬಾ ಅಂದರು. ಅಂದೂ ಕೂಡಾ ಇಂದಿನ ಹಾಗೆಯೇ. ಕುಂಭದ್ರೋಣ ಮಳೆ. ಬಸ್ ಸ್ಟಾಪ್ ನ ವರೆಗೆ ನಡೆಯೋಣವೆಂದರೆ ಗುಡುಗು ಸಿಡಿಲಿನ ಭಯ. ಕ್ಷಣಕಾಲ ಏನು ಮಾಡಲಿ ಅಂತಾನೇ ತೋಚಲಿಲ್ಲ. ಆದರೆ, ಅದೆಲ್ಲಿದ್ದೆಯೋ ಮಹರಾಯ ನೀನು? ಬಿರಬಿರನೆ ಬಂದವನೇ ನಡಿ... ಅಂತಷ್ಟೇ ಹೇಳಿ ಹೆಗಲಿಗೆ ಜಾಕೆಟ್ ತೊಡಿಸಿ ಬೈಕಲ್ಲಿ ಕೂರಿಸ್ಕೊಂಡು ಹೊರಟೇ ಬಿಟ್ಟಿದ್ದೆ. ಕಣ್ಣುಮುಚ್ಚಿ ತೆರೆಯುವಷ್ಟರಲ್ಲಿ ಆಸ್ಪತ್ರೆ ಕಣ್ಣೆದುರಿಗಿತ್ತು. ಅಚ್ಚರಿಯೆಂದರೆ ಖುದ್ದು ಅಪ್ಪನೇ ಬಂದು ಹಾಯ್ ಮಗಳೇ... ಅಂದಿದ್ದರು. ಬರೀ ಸುಸ್ತು ಇತ್ತು ಕಣಮ್ಮ... ಇವರೆಲ್ಲ ಗಾಬರಿಯಾಗಿ ಬೇಡಬೇಡವೆಂದರೂ ಇಲ್ಲಿಗೆ ಎಳ್ಕೊಂಡು ಬಂದ್ರು, ನೀನ್ಯಾಕೆ ಅಷ್ಟೊಂದು ಗಾಬರಿಯಾದೆ ಅಂತ ಅವರು ಕೇಳುತ್ತಿದ್ದರೆ, ಇಲ್ಲಪ್ಪಾ... ನನಗಿಂತ ಗಾಬರಿ ಈ ಹುಡುಗನಿಗಾಗಿತ್ತು ಅನ್ನಬೇಕು ಅನಿಸಿತು. ನಿಜ ಹೇಳು ಅದಾಗಲೇ ನಿಂಗೂ ನನ್ನ ಮೇಲೆ ಪ್ರೀತಿ ಹುಟ್ಟಿತ್ತಲ್ವಾ?
ಅಳಬೇಕು ಒಮ್ಮೆ
ಅಂತ ಅನಿಸಿದೆ
ಖುಷಿಯೀಗ ಮೇರೆಮೀರಿ...
ಮಧುಮಾಸದಂತೆ ಕೈ ಚಾಚಿದೆ
ಹಸಿರಾಯ್ತು ನನ್ನ ದಾರಿ...

ಅಂದು ನೀನು ನನಗೆ ಎಷ್ಟು ಇಷ್ಟವಾಗಿದ್ದೆ ಅಂದರೆ ನಿನ್ನ ಕೈಗೊಂದು ಮುತ್ತಿಕ್ಕಿ ಐ ಲವ್ ಯೂ ಅನ್ನಬೇಕು ಅನ್ನಿಸಿತ್ತು. ನಂತರದ್ದು ಅದೆಷ್ಟು ಸುಂದರ ದಿನಗಳಾದವಲ್ಲವಾ ನಮ್ಮ ಬದುಕಲ್ಲಿ? ದಿನಾ ಭೇಟಿಯಾಗುತ್ತಿದ್ದೆವು, ದಾರಿಗುಂಟ ಮಾತು, ನೀನು ಮಾತಾಡುತ್ತಲೇ ಇದ್ದೆ, ನಾನು ಬರೀ ಕೇಳುತ್ತಾ ನಿಲ್ಲುತ್ತಿದ್ದೆ.
ಸಾವಿನ ಅಂಚಿನ
ಬದುಕಂತಾದೆ ನೀ...
ಸಾವಿರ ಸೂರ್ಯರ
ಬೆಳಕಂತಾದೆ ನೀ...

ನೋಡ ನೋಡುತ್ತಲೇ ಬದುಕು ಬದಲಾಗಿ ಹೋಯಿತು ನೋಡು, ಒಣಗಿ ಹೋದ ಮರ ಮತ್ತೆ ಚಿಗುರೊಡೆದಂತೆ. ಬದುಕಿನ ಅದಷ್ಟೂ ದುಃಖ, ಸಂತೋಷಗಳನ್ನು ಹಂಚಿಕೊಳ್ಳಲು, ಸೋತಾಗ ಕೈ ಹಿಡಿದು, ಗೆದ್ದಾಗ ಕೈ ತಟ್ಟಿ ಜೊತೆಗಿರಲು ಜೊತೆಗಾರನೋರ್ವ ಸಿಕ್ಕಂತಾಯಿತು. ಮೆಲ್ಲಮೆಲ್ಲನೆ ಬದುಕಲ್ಲೊಂದು ಕನಸು, ಗುರಿ ಸ್ಪಷ್ಟವಾಗತೊಡಗಿತು.
ಕೊನೆಯಾಸೆ ಒಂದೆ
ಈ ಜೀವಕೆ...
ನಿನ್ನ ಕೂಡಿ ಬಾಳಬೇಕು...
ಪ್ರತಿ ಜನ್ಮದಲ್ಲೂ ನೀ ಹೀಗೆಯೇ
ನನ್ನ ಪ್ರೀತಿ ಮಾಡಬೇಕು...

ಹೌದು ಕಣೋ, ಅದೆಷ್ಟು ದೂರದ ಹಾದಿ ಜೊತೆಯಾಗಿ ನಡೆದು ಬಂದೆವು. ಹಿಂದಿರುಗಿ ನೋಡಿದರೆ ನೋವಿಗಿಂತ ನಲಿವುಗಳೇ ಹೆಚ್ಚಿವೆ. ಕಾರಣವಿಷ್ಟೇ ಹುಡುಗ ನಿಜಕ್ಕೂ ಒಳ್ಳೆಯವ. ಪ್ರೀತಿಗೆ ನಿಜವಾದ ಅರ್ಥದಂತಿರುವವ. ಅದಕ್ಕೋ ಏನೋ ದಿನಾ ಬೆಳಗ್ಗೆ ಎದ್ದಾಗ ದೇವರಿಗೂ ಮುನ್ನ ನೀನೇ ನೆನಪಾಗುತ್ತೀಯ! ಏನೇ ಇರಲಿ, ಮತ್ತೊಮ್ಮೆ ಹೇಳುತ್ತೇನೆ ಕೇಳು, ನಾನು ನಿನ್ನ ಪ್ರೀತಿಸ್ತಿದ್ದೀನಿ, ಪ್ರೀತಿಸುತ್ತೀನಿ ಮತ್ತು ಪ್ರೀತಿಸುತ್ತಲೇ ಇರುತ್ತೀನಿ.
ಹುಚ್ಚು ಹುಡುಗಿ ಅಂತೀಯಾ?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ