ಸೋಮವಾರ, ಫೆಬ್ರವರಿ 9, 2015

ಬೆಂಬಲ ಆತನದ್ದೂ ಇರಲಿ...

ಪ್ರೀತಿಯ ಅಜ್ಜಾ, ಹ್ಯಾಪಿ ಬರ್ತ್ ಡೇ!
ನಿಜ ಹೇಳಬೇಕೆಂದರೆ ನಿಮ್ಮ ಬಗ್ಗೆ ನಾನೇನೂ ಹೆಚ್ಚಾಗಿ ತಿಳಿದುಕೊಂಡವನಲ್ಲ.
ಚಿಕ್ಕಂದಿನಲ್ಲಿ ನಿಮ್ಮ ಕುರಿತು ಕೇಳಿರುವ ನೆನಪೂ ಇಲ್ಲ. ಇತಿಹಾಸ ಅಷ್ಟೋ ಇಷ್ಟೋ ಓದಿಕೊಂಡಿದ್ದೇನಾದರೂ ಕ್ಷಮಿಸಿ, ಅದರಲ್ಲಿ ನಿಮ್ಮ ಬದುಕಿನ, ಹೋರಾಟದ, ತ್ಯಾಗದ, ಆದರ್ಶದ ನಡಿಗೆಯನ್ನು ನನಗಲ್ಲಿ ಗುರುತಿಸಲಾಗಿಲ್ಲ.
ಆದರೆ ಅಜ್ಜಾ...
ಕೆಲ ತಿಂಗಳ ಹಿಂದಷ್ಟೇ ನನ್ನಂತಹಾ ಅದೆಷ್ಟೋ ಮಂದಿಗೆ ನಿಮ್ಮ ಪರಿಚಯವಾಯ್ತು. ದೇಶದ ಕುರಿತಾಗಿ ನಿಮಗಿರುವ ಕಾಳಜಿ, ಭ್ರಷ್ಟಾಚಾರ ಒದ್ದೋಡಿಸಲು ನೀವು ಕಂಡುಕೊಂಡ ಸಾತ್ವಿಕ ದಾರಿ ಸಹಜವಾಗಿಯೇ ನನ್ನಲ್ಲಿ ಆಸಕ್ತಿ ಹುಟ್ಟಿಸಿತು.
ಅಣ್ಣಾ ಹಜಾರೆ.. ಅಣ್ಣಾ ಹಜಾರೆ... ಎಂದೇ ಜನ ಪಠಿಸುತ್ತಿದ್ದರೆ, ನಿಮ್ಮ ನಿಜ ನಾಮಧೇಯ ಡಾ. ಕಿಶನ್ ಬಾಬುರಾವ್ ಹಜಾರೆ ಎಂಬುದು ತಿಳಿಯಿತು. ಮಹಾರಾಷ್ಟ್ರದ ಅಹ್ಮದ್ ನಗರ ಜಿಲ್ಲೆಯ ರಾಲೇಗನ್ ಸಿದ್ಧಿ ಎಂಬ ಹಳ್ಳಿಯನ್ನು ಏಕಾಂಗಿಯಾಗಿ ಅಭಿವೃದ್ಧಿ ಮಾಡಿದ್ದಕ್ಕಾಗಿ ಸರಕಾರ ೧೯೯೨ರಲ್ಲಿ ನಿಮಗೆ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿದ್ದು ತಿಳಿದು ಹೆಮ್ಮೆ ಎನಿಸಿತು. ಅದಕ್ಕೂ ಹೆಚ್ಚಿನ ಹೆಮ್ಮೆ ಉಂಟಾಗಿದ್ದು, ನೀವು ಸೈನ್ಯದಲ್ಲಿ ಸೇವೆ ಸಲ್ಲಿಸಿದ್ದೀರಿ ಎಂಬುದು ತಿಳಿದು. ೧೯೬೨ರ ಚೀನೀ ಆಕ್ರಮಣ ಸಮಯದಲ್ಲಿ ಸೈನ್ಯ ಸೇರಿದ ನೀವು, ೧೯೬೨ ಹಾಗೂ ೧೯೬೫ ರ ಯುದ್ಧದಲ್ಲಿ ಪಾಲ್ಗೊಂಡು ದೇಶ ಪ್ರೇಮ ಎಂತದ್ದು ಎಂಬುದನ್ನು ನಿರೂಪಿಸಿಬಿಟ್ಟಿರಿ. ಭೇಷ್. ೧೯೯೮ರಲ್ಲಿ ಮಹಾರಾಷ್ಟ್ರ ಮಂತ್ರಿಯೋರ್ವರೊಂದಿಗೆ ಕಾನೂನು ವ್ಯಾಜ್ಯ ನಡೆದು ಬಂಧನಕ್ಕೊಳಗಾದಾಗ ಈ ದೇಶದ ಜನತೆ ಅದೆಷ್ಟು ನಿಮ್ಮನ್ನು ಪ್ರೀತಿಸಿ, ಬೆಂಬಲಿಸಿ ಬಿಡುಗಡೆಗೆ ಕಾರಣರಾದರೂ ಎಂಬುದನ್ನೂ ನಾನು ಕೇಳಿ ಬಲ್ಲೆ.
ಅಜ್ಜಾ...
ನಮ್ಮ ದೇಶದ ಅಭಿವೃದ್ಧಿಗೆ ಭ್ರಷ್ಟಾಚಾರವೆಂಬುದು ಯಾವ ರೀತಿಯಲ್ಲಿ ತಡೆಯೊಡ್ಡಿದೆ ಎಂಬುದನ್ನು ನಾವೆಲ್ಲರೂ ಅರಿತಿದ್ದೇವೆ. ಇಂದು ಮಕ್ಕಳು ಶಾಲೆಗೆ ಹೋಗಲು ಕೇಳುವುದಿಲ್ಲ ಎಂಬ ಕಾರಣಕ್ಕೆ ಕೈಗೆರಡು ಚಾಕ್ಲೆಟ್ ಕೊಡುವ ಮೂಲಕ ಅಲ್ಲಿಂದಲೇ ಲಂಚದ ಪಾಠ ಹೇಳಿಕೊಡಲಾಗುತ್ತಿದೆ. ಸರಕಾರಿ ಕಚೇರಿಗಳಲ್ಲಿ ಅದೆಷ್ಟು ಭ್ರಷ್ಟಾಚಾರ ವ್ಯಾಪಿಸಿದೆ ಎನ್ನುವುದು ಲೋಕಾಯುಕ್ತರ ತನಿಖೆಗಳೇ ಸಾಕ್ಷಿ ಹೇಳುತ್ತಿವೆ. ಲಂಚಾವತಾರ ಇಂದು ಹಲವು ಮನೆಗಳಿಗೆ ಕೊಳ್ಳಿ ಇಟ್ಟಿದೆ. ಇದನ್ನು ನಾವೂ ಬಲ್ಲೆವು. ಆದರೇನು ಮಾಡೋದು ಹೇಳಿ? ಆಗ ಹೇಳಿದ ಹಾಗೆ ಕಣ್ಣಿದ್ದೂ ಕುರುಡರು, ಬಾಯಿದ್ದೂ ಮೂಕರು... ದೇಶದಲ್ಲಿ ಇಂತವರ ಸಂಖ್ಯೆಯೇ ಅಧಿಕವಾಗಿದೆ.
ಜನ ಕಾಯುತ್ತಿದ್ದಾರೆ ಅಜ್ಜಾ,
ಈಗ ಅವರಿಗೊಂದು ನಾಯಕಬೇಕಿದೆ. ಧ್ವನಿ ಕಳೆದುಕೊಂಡವರಿಗೆ ಧ್ವನಿಯಾಗುವವರು ಬೇಕಿದೆ. ಹಾಗಾಗಿ ಇಂದು ತತ್ವ, ಆದರ್ಶಗಳನ್ನಿಟ್ಟುಕೊಂಡು ಒಬ್ಬಾತ ಮುಂದೆ ನಡೆದರೆ ಲಕ್ಷ, ಕೋಟಿ ಸಂಖ್ಯೆಯಲ್ಲಿ ಜನ ಕಿಂದರಿ ಜೋಗಿ ಹಿಂದೆ ಬಂದಂತೆ ನಡೆದು ಬರುತ್ತಾರೆ. ಲೋಕಾಯುಕ್ತರಿಗೆ ನೀಡಿದ ಬೆಂಬಲ, ನಿಮಗೆ ಸಿಕ್ಕ ಬೆಂಬಲ ಗಮನಿಸಿದರೆ ನಿಮಗೇ ಗೊತ್ತಾದೀತು.
ಮೊನ್ನೆ ಮೊನ್ನೆ ಭ್ರಷ್ಟಾಚಾರ ವಿರೋಧಿ ಲೋಕಪಾಲ ಮಸೂದೆ ಮಂಡನೆಗೆ ತಾವು ಪಟ್ಟು ಹಿಡಿದು ಉಪವಾಸ ಆರಂಭಿಸಿದಾಗ ದೇಶವೇ ನಿಮ್ಮ ಬೆಂಬಲಕ್ಕೆ ನಿಂತಿತು. ಮಾಧ್ಯಮಗಳು ಕೂಡಾ ಭರ್ಜರಿ ಪ್ರಚಾರ ನೀಡಿದವು, ಅಂತರ್ಜಾಲದ ತುಂಬೆಲ್ಲಾ ನಿಮ್ಮದೇ ಚರ್ಚೆ. ಗಣ್ಯರು, ಸಿನಿಮಾ ತಾರೆಯರು, ಕ್ರೀಡಾಪಟುಗಳು, ಜನಸಾಮಾನ್ಯರು ನಿಮ್ಮದೇ ಪರ ನಿಂತು ಬಿಟ್ಟಿರು. ಪರಿಣಾಮ ಏನಾಯಿತು ನೋಡಿ? ದೇಶದ ತುಂಬಾ ಮಿಂಚಿನ ಸಂಚಲನವಾಯಿತು. ಮಸೂದೆ ಮಂಡನೆಯಾಗಲೇಬೇಕೆಂಬ ಸಂದರ್ಭ ನಿರ್ಮಾಣವಾಯಿತು.
ಒಂದು ಗುರಿ ಇರಿಸಿ ಸಾತ್ವಿಕ ಹೋರಾಟಕ್ಕೆ ಧುಮುಕಿದ ನಿಮಗೆ ಎಂಥಾ ಯಶಸ್ಸು ದೊರಕಿತಲ್ಲವಾ ? ಮತ್ತೆ ಹೇಳುತ್ತಿದ್ದೇನೆ, ನಿಜಕ್ಕೂ ನಿಮ್ಮ ಬಗ್ಗೆ ಹೆಮ್ಮೆ ಎನಿಸುತ್ತದೆ.
ಆದರೆ ಒಂದು ಮಾತು.
ಹೂವಿನೊಂದಿಗೆ ದಾರವೂ ದೇವರ ಪಾದ ಸೇರಿತು ಎಂಬಂತೆ ನಿಮ್ಮ ಸಾತ್ವಿಕ ಹೋರಾಟ ಬೆಂಬಲಿಸುತ್ತೇನೆ ಎಂದು ಹೇಳುತ್ತಲೇ ಅದೆಷ್ಟೋ ಮಂದಿ ಇಂದು ದಿನ ಬೆಳಗಾವುದರ ಒಳಗೆ ಲೋಕ ಪ್ರಸಿದ್ಧರಾಗುತ್ತಿದ್ದಾರೆ. ಅಂತವರನ್ನು ಗುರುತಿಸುವುದು ಜನ ಸಾಮಾನ್ಯನಿಗೆ ಕಷ್ಟ ಸಾಧ್ಯ. ಈ ಬಗ್ಗೆ ನೀವು ಹುಷಾರಾಗಿರಬೇಕು. ಇಲ್ಲವಾದಲ್ಲಿ ಹೋರಾಟವೊಂದು ದಾರಿತಪ್ಪಿ ಹಳ್ಳ ಹಿಡಿಯುವ ಸಾಧ್ಯತೆಯಿದೆ. ಭಾರತದ ಲಕ್ಷಾಂತರ ಮಂದಿಯ ಕಣ್ಣಲ್ಲಿ ’ಹೀರೋ’ ಎನಿಸಿಕೊಂಡಿರುವ ನೀವು ಹಾಗೂ ನಿಮ್ಮ ಹೋರಾಟ ವ್ಯರ್ಥವಾಗುವುದು ಯಾರಿಗೂ ಸುತರಾಂ ಇಷ್ಟವಿಲ್ಲ. ಹಾಗಿರುವಾಗ ಯಾವುದೇ ಕಾರಣಕ್ಕೆ ನೀವಾಗಲಿ, ಹೋರಾಟವಾಗಲಿ ಕ್ಷುಲ್ಲಕ ಎನಿಸಿಕೊಳ್ಳಬಾರದು.
ಇಂದು ನಿಮ್ಮ ೭೪ನೇ ಹುಟ್ಟು ಹಬ್ಬ.
ಸಡಗರ, ಗೌಜಿ ಗದ್ದಲಗಳಿಗೆ ನೀವು ಅವಕಾಶ ಕೊಡುವುದಿಲ್ಲ ಎಂಬುದನ್ನು ಬಲ್ಲೆ,
ಅಂತೆಯೇ ಸಸಿ ನೆಡುವುದು, ರಕ್ತದಾನ, ರೋಗಿಗಳಿಗೆ ಹಣ್ಣುಹಂಪಲು ವಿತರಣೆಗಳು ನಡೆಯಲಿದೆ ಎಂಬುದನ್ನೂ ಕೇಳಿಬಲ್ಲೆ. ಪ್ರತಿವರ್ಷವೂ ತಮ್ಮ ಹುಟ್ಟೂರಲ್ಲಿ ಗಿಡನೆಡುವ ಮೂಲಕ ಹುಟ್ಟುಹಬ್ಬದ ಸಂಭ್ರಮ ಪಟ್ಟುಕೊಳ್ಳುತ್ತೀರಿ ಅನ್ನುವುದು ತಿಳಿದು ಭಲೇ ಖುಷಿಯಾಯಿತು.
ಅಂದ ಹಾಗೆ ಇಂದು ಕರಡು ರಚನೆಯ ಜಂಟಿ ಸಮಿತಿ ಸಭೆಯೂ ನಡೆಯುತ್ತಿದೆ. ಅದರಲ್ಲಿ ನೀವು ಪಾಲ್ಗೊಳ್ಳುತ್ತಿದ್ದೀರಿ.
ನಮ್ಮೆಲ್ಲರ ಉದ್ದೇಶ ಈಡೇರಲಿ, ಭಾರತ ಭ್ರಷ್ಟಾಚಾರ ಮುಕ್ತ ದೇಶವಾಗಲಿ. ಭಗವಂತ ನಿಮಗೆ ದೀರ್ಷಾಯುಷ್ಯ ನೀಡಲಿ,
ಎಲ್ಲಕ್ಕಿಂತ ಮಿಗಿಲಾಗಿ ಹೋರಾಟಕ್ಕೆ ಆತನದೂ ಬೆಂಬಲವಿರಲಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ