ಸೋಮವಾರ, ಫೆಬ್ರವರಿ 9, 2015

ನಮ್ಮ ಪೇಪರಿನ ಭಟ್ಟರೆಂದರೆ....

ಸಾದಾ ಅಂಗಿ, ಅಚ್ಚ ಬಿಳಿಬಣ್ಣದ ಲುಂಗಿ, ಮುಖದಲ್ಲಿ ಒಂದಿಷ್ಟು ಕುರುಚಲು ಗಡ್ಡ, ಬಲದ ಕೈಯಲ್ಲಿ ಅಂದಿನ ದಿನಪತ್ರಿಕೆಗಳು, ಜೊತೆಗಿಷ್ಟು ದಾಖಲೆ, ಟಿಪ್ಪಣಿಗಳು...
ಎಡ ಕೈಯಲ್ಲಿ ಲುಂಗಿ ತುದಿ ಹಿಡಿದುಕೊಂಡರೆ ನಡಿಗೆಗೆ ಕ್ಷಣಾರ್ಧದಲ್ಲಿ ಬಿರುಸು!
ಅಂದಹಾಗೆ ಮೊದಲ ಬಾರಿಗೆ ವ್ಯಕ್ತಿ ನನಗೆ ಕಾಣಸಿಕ್ಕಿದ್ದು ಕಾರ್ಕಳ ಬಸ್ ನಿಲ್ದಾಣದಲ್ಲಿ. ಕಂಡ ಅರೆ ಕ್ಷಣದಲ್ಲಿಯೇ ಕುತೂಹಲ ಮೂಡಿಸಿದ್ದು ಅವರ ವ್ಯಕ್ತಿತ್ವ.
ನಾನು ಪ್ರತೀ ಬಾರಿ ಕಾರ್ಕಳಕ್ಕೆ ಭೇಟಿ ನೀಡಿದಾಗಲೂ ಅವರು ಒಂದಲ್ಲಾ ಒಂದು ಕಡೆಯಲ್ಲಿ ಕಣ್ಣಿಗೆ ಬಿದ್ದೇ ಬೀಳುತ್ತಿದ್ದರು. ಯಾಕೋ ಏನೋ, ಅದೊಂದು ದಿನ ಮಾತ್ರ ಕುತೂಹಲ ತಡೆಯಲಾರದೆ ಪಕ್ಕದ ಅಂಗಡಿಯೊಂದರಲ್ಲಿ ’ಅವರ್‍ಯಾರು? ಏನು ಕೆಲಸ?’ ಎಂದು ಅಮಾಯಕನಂತೆ ಕೇಳಿದ್ದೆ.
’ಆರೆನ್ ಗೊತ್ತುಜ್ಜಾ...? ಆರ್ ನಮ್ಮ ಪೇಪರ್‍ದ ಭಟ್ರು, ಈದ್ ದ ಪದ್ಮಾಕರ ಭಟ್ರು’ (ಅವರನ್ನು ಗೊತ್ತಿಲ್ವಾ? ಅವರು ನಮ್ಮ ಪೇಪರಿನ ಭಟ್ರು. ಈದುವಿನ ಪದ್ಮಾಕರ ಭಟ್ರು...) ಎಂದು ಥಟ್ಟನೆ ಉತ್ತರ ಸಿಕ್ಕಿತ್ತು.
ಅಷ್ಟು ಕೇಳಿದ್ದೇ ತಡ, ಕುತೂಹಲ ತಡೆಯಲಾರದೆ ನೇರವಾಗಿ ಅವರನ್ನು ಭೇಟಿಯಾಗಿಯೇಬಿಟ್ಟೆ. ಮುಂದಿನ ಕೆಲವೇ ಕ್ಷಣಗಳಲ್ಲಿ ನಮ್ಮ ನಡುವೆ ಸ್ನೇಹ ಕುದುರಿತು. ದಿನಗಳುರುಳಿದಂತೇ ಒಡನಾಟವೂ ಹೆಚ್ಚಾಯಿತು...
ಈ ನಡುವೆ ಅಚಾನಕ್ ಆಗಿ ಭೇಟಿಯಾಗಿದ್ದು  ಸ್ಥಳೀಯ ಯುವ ಪತ್ರಕರ್ತನನ್ನು.
ನಮ್ಮ ಮಾತಿನ ನಡುವೆ ಇದೇ ಪದ್ಮಾಕರ ಭಟ್ಟರ ವಿಚಾರ ಬಂತು. ತಕ್ಷಣ ಅವರು ಹೇಳಿದ್ದಿಷ್ಟು...
’ಚಿಕ್ಕಂದಿನಿಂದಲೂ ಅವರ ಮೇಲೊಂದು ಕುತೂಹಲ. ಅವರ ವೃತ್ತಿಯೇನು ಎಂಬುದು ನನ್ನ ತಿಳುವಳಿಕೆಗೆ ಬಂದದ್ದು ಹೈಸ್ಕೂಲ್ ಮೆಟ್ಟಿಲು ಏರಿದ ಮೇಲಷ್ಟೇ. ಅವರ ವ್ಯಕ್ತಿತ್ವ, ಸಮಾಜದಲ್ಲಿ ಅವರ ಸ್ಥಾನಮಾನ, ಜನ ಅವರನ್ನು ಗೌರವಿಸುವ ರೀತಿ ಗಮನಿಸಿದ ನನಗೆ ಆಗಲೇ ಪತ್ರಿಕೋದ್ಯಮದ ಕುರಿತು ಸಣ್ಣ ಆಸಕ್ತಿ ಹುಟ್ಟಿಕೊಂಡಿತು. ಅವರು ದಿನಾಲೂ ನಮ್ಮ ಮನೆ ಮುಂದಿನ ದಾರಿಯಲ್ಲಿ ನಡೆದು ಹೋಗುತ್ತಿದ್ದರೆ, ನನ್ನದೊಂದು ಕುತೂಹಲದ ಕಣ್ಣು ಮಾತ್ರ ಅವರ ಮೇಲಿರುತ್ತಿತ್ತು. ನಮ್ಮ ಪದ್ಮಾಕರ ಭಟ್ರೇ ಹಾಗೆ. ಕುತೂಹಲದ ವ್ಯಕ್ತಿ. ನಾನು ಕಂಡ ದಿನದಿಂದ ಅವರು ಎಂತಹವರೊಂದಿಗೂ ಸಿಡುಕಿಟ್ಟು ಮಾತಾಡಿದ್ದೇ ಇಲ್ಲ. ಅವರು ಕಾರ್ಕಳದ ಬಸ್ಸಿಳಿದು ಈದು ಮಾರ್ಗದಲ್ಲಿ ನಡೆಯುವ ಸ್ಟೈಲೇ ಬೇರೆ ಇತ್ತು. ಒಂದು ಕೈಯಲ್ಲಿ ದಿನದ ಎಲ್ಲ ಪತ್ರಿಕೆಗಳ ಕಟ್ಟಿದ್ದರೆ, ಇನ್ನೊಂದು ಕೈ ಅವರ ಲುಂಗಿಯನ್ನು ನೆಲದಲ್ಲಿ ಎಳೆಯದ ರೀತಿ ಹಿಡಿದಿಡುತ್ತಿತ್ತು. ಮುಂದೆ ಅವರ ಜೊತೆ ನಾನು ಪರಿಚಯ ಬೆಳೆಸಿಕೊಂಡೆ. ಕಾರಣ ಪತ್ರಿಕೋದ್ಯಮದ ಸೆಳೆತ. ಪತ್ರಕರ್ತರ್‍ಯಾರು ಪತ್ರಿಕೋದ್ಯಮದ ಗುಟ್ಟು ಬಿಟ್ಟುಕೊಡುವುದಿಲ್ಲ ಎಂದು ಯಾರೋ ನನ್ನಲ್ಲಿ ಹೇಳಿದ್ದರು. ಅದೇ ನಾನು ಹೆದರಿಕೆಯಿಂದ ಭಟ್ರ ಜೊತೆ ಮಾತನಾಡಿದರೆ, ಅವರು ನೀನೂ ಕೂಡಾ ಪತ್ರಿಕೆಗಳಿಗೆ ಬರೆಯಬಹುದು ಎಂದು ತುಂಬು ಉತ್ಸಾಹದಿಂದ ಪ್ರೇರೇಪಿಸಿದರು! ಈ ಭಟ್ರು ಬಿಜೆಪಿಯಲ್ಲಿ ಪ್ರಚಾರ ಭಾಷಣ ಮಾಡುತ್ತಿದ್ದರು ಎಂದು ಕೇಳಿದ್ದೆ. ಹಾಗೆಂದು ಅವರು ಬಿಜೆಪಿಯವರೂ ಅಲ್ಲ, ಕಾಂಗ್ರೆಸಿನವರೂ ಅಲ್ಲ. ಕಮ್ಯೂನಿಷ್ಟಂತೂ ಖಂಡಿತ ಅಲ್ಲ. ಅವರ ರಾಜಕೀಯ ನಿಲುವೇ ಒಂದು ಅಚ್ಚರಿ. ಒಮ್ಮೊಮ್ಮೆ ಕಟ್ಟಾ ಕಮ್ಯೂನಿಷ್ಟರಂತೆ ಮಾತನಾಡುವ ಪದ್ಮಾಕರ ಭಟ್ರು-ಮತ್ತೊಮ್ಮೆ ಇಲ್ಲ, ಇವರು ಆರೆಸೆಸ್ಸ್ ಇರಬೇಕು ಎಂಬಂತೆ ಭಾಸವಾಗುತ್ತಾರೆ. ಭಟ್ರು ಎಷ್ಟು ಸಿಂಪಲ್ ಎಂದರೆ, ಈಗ ಬೇಕಾದರೂ ಒಂದು ಫ್ಯಾಮಿಲಿ ದಿನಕ್ಕೆ ೩೦ ರೂಪಾಯಿಯಲ್ಲಿ ದಿನದೂಡಬಹುದು ಎಂದು ವಾದಿಸುತ್ತಾರೆ. ಅವರ ವಾದ ಒಂದು ರೀತಿಯಲ್ಲಿ ಸರಿಯೇ ಹೌದು ಎಂದು ಅವರೊಂದಿಗಿದ್ದಾಗ ಖಂಡಿತಾ ಅನಿಸುತ್ತದೆ...
ಇಷ್ಟು ಹೇಳುತ್ತಿದ್ದರೆ, ಯುವ ಪತ್ರಕರ್ತನ ಮುಖದಲ್ಲಿ ಅಚ್ಚರಿ ಇನ್ನೂ ಉಳಿದಿತ್ತು!
 ಈದು ಸುತ್ತಮುತ್ತಲಿನ (ನಾರಾವಿ-ಹೊಸ್ಮಾರು) ಜನಕ್ಕೆ ಭಟ್ರು ವಿನಯವಂತ ಎಂಬುದೂ ಗೊತ್ತಿದೆ. ಹಾಗೆಯೇ ಕೋಪಕ್ಕೆ ಬಿದ್ದರೆ ಭಟ್ರು ಏನು ಬೇಕಾದರೂ ಮಾಡಿಯಾರೂ ಎಂಬ ಹೆದರಿಕೆಯೂ ಇದೆ. ಆದರೆ ಆ ಕೋಪವನ್ನು ಅಲ್ಲಿನ ಜನರ್‍ಯಾರೂ ಇದುವರೆಗೆ ಕಂಡದ್ದು ನಾ ಕಾಣೆ.! ಸ್ವಲ್ಪವೇ ಪರಿಚಯವಿದ್ದರೂ ಸಾಕು, ಭಟ್ರು ನಯವಿನಯತೆಯಿಂದ ಮಾತಾಡಲು ಶುರುವಿಡುತ್ತಾರೆ. ಅವರು ಕರೆದು ಮಾತಾಡುವವರೆಂದರೆ ಬಡವರೇ ಆಗಿರುತ್ತಾರೆ. ಇಲ್ಲವಾದಲ್ಲಿ ಕೃಷಿಕರು. ಅವರೊಂದಿಗೆ ಕೃಷಿಯ ಬಗ್ಗೆ, ಮಳೆ, ನುಸಿರೋಗದ ಬಗ್ಗೆ ಮಾತಾಡುತ್ತಲೇ ಅವಷ್ಟನ್ನೂ ಮನದಲ್ಲೇ ಸ್ಟೋರ್ ಮಾಡಿಕೊಳ್ಳುತ್ತಾರೆ. ನಂತರ ಕಾರ್ಕಳಕ್ಕೆ ಬಂದು ವಿವರವಾಗಿ ಬರೆದು ಪತ್ರಿಕಾ ಕಚೇರಿಗೆ ಫ್ಯಾಕ್ಸ್ ಮಾಡಿಬಿಡುತ್ತಾರೆ. ಅಲ್ಲಿಗೆ ಹಳ್ಳಿಯ ಕೃಷಿಕನೊಬ್ಬನ ಅಳಲು ಮರುದಿನ ಮುಖ್ಯಮಂತ್ರಿಯೇ ಓದಿ ತಿಳಿದುಕೊಳ್ಳುವಂತೆ ಮಾಡುತ್ತಾರೆ ಪದ್ಮಾಕರ ಭಟ್ರು.!
ಇವತ್ತಿಗೂ ಭಟ್ರಿಗೆ ಕೃಷಿ, ಹಳ್ಳಿ, ತಮ್ಮದೇ ಊರಾದ ಈದು ಇದರ ಬಗ್ಗೆ ಕುತೂಹಲ ಹಾಗೂ ಆಸಕ್ತಿ ಹಾಗೇ ಉಳಿದುಕೊಂಡಿದೆ. ಇಂದಿಗೂ ಜನ ಅವರನ್ನು ಗುರುತಿಸುತ್ತಾರೆ, ಗೌರವಿಸುತ್ತಾರೆ, ಎದುರು ಸಿಕ್ಕಿದರೆ ಆತ್ಮೀಯವಾಗಿ ಮಾತನಾಡಿಸುತ್ತಾರೆ. ಯೋಗಕ್ಷೇಮ ವಿಚಾರಿಸುತ್ತಾರೆ.
ಒಬ್ಬ ಪತ್ರಕರ್ತನಿಗೆ ಇದಕ್ಕಿಂತ ಸಾರ್ಥಕತೆ ಇನ್ನೇನು ಬೇಕು?
ಅಲ್ವಾ?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ