ಸೋಮವಾರ, ಫೆಬ್ರವರಿ 9, 2015

ಸಂಪತ್ತು ಸಿಕ್ಕಿದೆ, ಮುಂದೇನು?

ಚಿನ್ನ, ಮುತ್ತು, ರತ್ನ, ವಜ್ರ, ವೈಢೂರ್ಯ...
ಏನುಂಟು ಏನಿಲ್ಲ? ಎಂಬಂತೆ ಅಗೆದಷ್ಟು ಸಿಕ್ಕಿತು ಅನರ್ಘ್ಯ ಆಭರಣಗಳು.
ಇವೆಲ್ಲವನ್ನು ಅಳೆದು ತೂಗಿ ನೋಡುವಷ್ಟರಲ್ಲಿ ತಿರುಪತಿ ತಿಮ್ಮಪ್ಪನಿಂದಲೂ ತಿರುವನಂತಪುರದ ಶ್ರೀ ಅನಂತಪದ್ಮನಾಭ ಸ್ವಾಮಿಯೇ ಶ್ರೀಮಂತ ಅನ್ನಿಸಿಕೊಂಡಿದ್ದಾನೆ!
ಅಲ್ಲಿ ಇದುವೆರೆಗೆ ಸಿಕ್ಕಿದ ಸೊತ್ತುಗಳ ಮೌಲ್ಯವೇ ಲಕ್ಷ ಕೋಟಿ ರೂ.ಗಳಿಗೂ ಮಿಕ್ಕಿದೆ. ಶೋಧ ಇನ್ನೂ ಬಾಕಿ ಉಳಿದಿದೆ. ಒಟ್ಟು ಆಸ್ತಿಯ ವಿವರ ಮುಂದೆ ಗೊತ್ತಾಗಬೇಕಿದೆ.
ಈ ಸಂಪತ್ತಿನ ಬಗ್ಗೆ ತಿಳಿಯದ ಹಿನ್ನೆಲೆಯಲ್ಲಿ ಈ ಬಗ್ಗೆ ತಲೆಕೆಡಿಸಿಕೊಳ್ಳದ ಕೇರಳ ಸರಕಾರ ಈಗ ಲೆಕ್ಕ ಕಂಡು ಬೆಚ್ಚಿಬಿದ್ದಿದೆ. ಅನಂತನ ಈ ಸಂಪತ್ತನ್ನು ಕಾಯುವುದೆಂತು? ಇದು ಸದ್ಯ ಅದರ ಮುಂದಿರುವ ಚಿಂತೆ.
ರಕ್ಷಣೆಯ ಕುರಿತಾಗಿ ತಿರುವನಂತಪುರದ ಎಸ್ಪಿ ಈಗಾಗಲೇ ತಮ್ಮ ಅಸಹಾಯಕತೆಯನ್ನು ತೋಡಿಕೊಂಡಿದ್ದಾರೆ. ನಮ್ಮಲ್ಲಿರುವ ಪೊಲೀಸ್ ಬಲಕ್ಕೆ ಈ ಪರಿಯ ಸಂಪತ್ತನ್ನು ಕಾಯುವ ತರಬೇತಿಯಿಲ್ಲ. ವಿಶೇಷ ಶಸಸ್ತ್ರ ಪಡೆಯನ್ನು ಒದಗಿಸಿ ಎಂದು ಸರಕಾರವನ್ನು ಒತ್ತಾಯಿಸಿದ್ದಾರೆ.
ಸದ್ಯ ದೇವಸ್ಥಾನದ ಇಂಚಿಂಚೂ ಸಿಸಿ ಟೀವಿ ಅಳವಡಿಸಲಾಗಿದೆಯಾದರೂ ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿರುವ ಅನಂತನ ಅನಂತ ಸಂಪತ್ತಿನ ಮೇಲೆ ಅಪಾಯದ ತೂಗುಕತ್ತಿಯಂತೂ ತೂಗುತ್ತಲೇ ಇದೆ.
ಈ ಸಂಪತ್ತು ಹಲವು ತೆರನಾದ ಚರ್ಚೆಗೆ ಗ್ರಾಸವಾಗಿದೆ. ಒಂದೆಡೆ ಇದು ಯಾರಿಗೆ ಸೇರಬೇಕು ಎಂಬ ಚರ್ಚೆ, ಇನ್ನೊಂದೆಡೆ ಇದರ ರಕ್ಷಣೆ ಹೇಗೆ ಎಂಬ ಚರ್ಚೆ, ಮತ್ತೊಂದೆಡೆ ಮುಂದಕ್ಕೆ ಇದನ್ನು ಏನು ಮಾಡಬೇಕು ಎಂಬ ಚರ್ಚೆ. ಈ ನಡುವೆ ಇತಿಹಾಸಕಾರರು ತಮ್ಮೆಲ್ಲಾ ದಾಖಲೆಗಳನ್ನು ತಿರುವತೊಡಗಿದ್ದಾರೆ. ಈ ಸಂಪತ್ತಿನ ಕ್ರೋಢೀಕರಣವಾಗಿದ್ದು ಹೇಗೆ? ಕುತೂಹಲ ಅವರದ್ದು.
ಮುಂದೇನು?
ತಿರುವನಂತಪುರದ ಶ್ರೀ ಅನಂತಪದ್ಮನಾಭ ಸ್ವಾಮಿ ದೇವಸ್ಥಾನದಲ್ಲಿ ಸಿಕ್ಕಿರುವ ಈ ಅಗಾಧ ಐಶ್ವರ್ಯ ಏನಾಗಲಿದೆ?
ಇದು ಸದ್ಯ ಎಲ್ಲರನ್ನೂ ಕಾಡುತ್ತಿರುವ ಪ್ರಶ್ನೆ.
ಹಿಂದೆಲ್ಲಾ ರಾಜ ಮಹಾರಾಜರು ತಾವು ಯುದ್ಧಕ್ಕೆ ತೆರಳುವಾಗಲೋ, ತಮ್ಮ ಮೇಲೆ ಯಾರಾದರೂ ಯುದ್ಧ ಸಾರಿದಾಗಲೋ ಅಥವಾ ರಾಜ್ಯಕ್ಕೆ ಸಂಕಷ್ಟ ಬಂದ ಕಾಲಕ್ಕಿರಲಿ ಎಂದೋ ಆಭರಣಗಳನ್ನು ಅಲ್ಲಲ್ಲಿ ಹೂತಿಡುತ್ತಿದ್ದರು. ಹಾಗೆಯೇ ತಿರುವಾಂಕೂರಿನ ರಾಜರು ದೇಶದಲ್ಲಿ ಬ್ರಿಟೀಷರ ಪ್ರಾಬಲ್ಯ ಹೆಚ್ಚುತ್ತಿರುವುದನ್ನು ಗಮನಿಸಿ ಸಕಲ ಐಶ್ವರ್ಯಗಳನ್ನು ನೆಲಮಾಳಿಗೆಯಲ್ಲಿಟ್ಟು ಬೀಗ ಜಡಿದಿರಬಹುದೆಂಬ ವಾದ ಹುರುಳಿಲ್ಲದ್ದೇನಲ್ಲ. ಅದೇನೇ ಇದ್ದರೂ ಇಂದು ಜಡಿತೆ ಮಾಡಿದಾಗ ಈ ಪ್ರಮಾಣದಲ್ಲಿ ಸಂಪತ್ತು ದೊರಕಿದ್ದಂತೂ ನಿಜ. ಆದರಿದು ನಂದರಾಯರ ಬದುಕು ನರಿನಾಯಿ ಪಾಲಾಯಿತು ಎಂಬಂತಾಗಬಾರದು. ಸುಪ್ರೀಂಕೋರ್ಟ್ ಉಸ್ತುವಾರಿಕೆಯಲ್ಲೇ ಇದರ ಮುಂದಿನ ವಿಲೇವಾರಿಯೂ ಆಗಬೇಕಿದೆ.
ಆಸ್ತಿಕರ ವಾದ ಏನೇ ಇದ್ದರೂ ದೇಶದಲ್ಲಿರುವ ಬಡತನ, ವಿದೇಶದಲ್ಲಿ ನಾವು ಮಾಡಿಕೊಂಡಿರುವ ಸಾಲ, ಅಭಿವೃದ್ಧಿ ಕಾರ್ಯಗಳಿಗೆ ಹಣದ ಅಡಚಣೆ ನಿವಾರಿಸಲು ಇದರಲ್ಲಿ ಕೆಲವಂಶವನ್ನು ವಿನಿಯೋಗಿಸುವುದು ತಪ್ಪಲ್ಲ ಎನ್ನುವುದು ಕೆಲವರ ವಾದ. ಬೆಲೆ ಕಟ್ಟಲಾಗದ ಮೂರ್ತಿಗಳು, ವೈಢೂರ್ಯಗಳು, ರತ್ನಗಳು, ದೇವರ ಸೊತ್ತುಗಳು, ಅತ್ಯಂತ ಪುರಾತನ ಎನ್ನಬಹುದಾದ ಮೂರ್ತಿಗಳನ್ನು ಸುರಕ್ಷಿತವಾಗಿ ಸಂರಕ್ಷಿಸಿಟ್ಟಿಕೊಂಡು, ಉಳಿದಂತೆ ಅಲ್ಲಿ ಸಿಕ್ಕಿರುವ ಉಂಗುರಗಳು, ಚಿನ್ನದ ದಾರಗಳು, ಚಿನ್ನದ ಗಟ್ಟಿಗಳನ್ನು ಬಳಸಿಕೊಳ್ಳಬಹುದಲ್ಲವೇ ಎನ್ನುವುದು ಅವರ ಪ್ರಶ್ನೆ.
ಬಹಳ ಪ್ರಾಚೀನವಾದ ಅಪೂರ್ವ ವಸ್ತುಗಳನ್ನು ಖಂಡಿತವಾಗಿಯೂ ಸಂರಕ್ಷಿಸಬೇಕು. ಹಾಗಂತ ತುಂಬಾ ಭಾವನಾತ್ಮಕವೂ ಸರಿಯಲ್ಲ. ಇಂದು ದೇಶದಲ್ಲಿ ಶ್ರೀಸಾಮಾನ್ಯ ಬದುಕಲು ಅಕ್ಷರಶಃ ಹೋರಾಟಕ್ಕಿಳಿಯುವಂತಾಗಿದೆ. ಡಾಲರ್ ನ ಮುಂದೆ ರೂಪಾಯಿ ಮೊಣಕಾಲೂರಿ ಕುಳಿತು ಅದೆಷ್ಟೋ ಕಾಲವಾಗಿ ಹೋಗಿದೆ. ಇಂದು ಕೆಲವು ಸ್ವಾಮಿಗಳ, ಬಾಬಗಳ ಆಶ್ರಮದಲ್ಲಿ, ಇಂತಹಾ ದೇವಸ್ಥಾನಗಳಲ್ಲಿ ಸಂಪತ್ತು ಹೇರಳವಾಗಿ ಸಿಗುತ್ತಲೇ ಇದೆ. ಇದು ಅವರ ಸಂಪತ್ತು, ಇವರ ಸಂಪತ್ತು ಎನ್ನುವುದಕ್ಕಿಂತ ಇದು ದೇಶದ ಸಂಪತ್ತು ಎಂದು ಪರಿಗಣಿಸುವುದು ಸೂಕ್ತ. ಯಾಕೆಂದರೆ ಆ ಕಾಲದ ಅವಶ್ಯಕತೆಗಳು ಹಾಗಿದ್ದವು. ಎಲ್ಲೆಲ್ಲೂ ಸಮೃದ್ಧಿ ಇದ್ದ ಕಾರಣ ಉಳಿದ ಧನಕನಕಗಳನ್ನು ಹೀಗೆ ತೆಗೆದಿರಿಸುತ್ತಿದ್ದರು. ಈಗಿನ ಅವಶ್ಯಕತೆಗಳು ಬೇರೆ ರೀತಿಯದಾಗಿದೆ. ಇಂದು ಜನಸಾಮಾನ್ಯ ಹಣಕ್ಕಾಗಿ ಬೆವರು ರಕ್ತ ಒಂದು ಮಾಡಬೇಕಾಗಿದೆ. ಆದ್ದರಿಂದ ಇದನ್ನೆಲ್ಲ ಸೂಕ್ತ ಕ್ರಮದಲ್ಲಿ ವಿನಿಯೋಗಿಸಿದರೆ ಪ್ರತಿ ಬಡವನ ಬದುಕಲ್ಲೂ ಒಂದಿಷ್ಟು ನೆಮ್ಮದಿ ಇಣುಕದೇ?
ಇದು ಅವರ ವಾದದ ಮುಂದುವರಿಕೆ.
ಇನ್ನೊಂದು ವಾದವೆಂದರೆ ಹಿಂದೂಗಳ ಪವಿತ್ರ ಕ್ಷೇತ್ರಗಳಲ್ಲೊಂದಾದ ಈ ದೇವಸ್ಥಾನದ ಸಂಪತ್ತನ್ನು ಕಡ್ಡಾಯವಾಗಿ ಸಂರಕ್ಷಿಸಿಡಲೇಬೇಕು ಎನ್ನುವುದು. ಭಾರತದ ಪ್ರಾಚೀನ ಸಮೃದ್ಧಿಗೆ ಬೆಳಕು ಚೆಲ್ಲುವ ಈ ಆಸ್ತಿಗಳಿಗೆ ಎಂದೂ ಬೆಲೆಕಟ್ಟಲು ಹೋಗಬಾರದು. ಅದನ್ನು ಬೇರೆಯದಕ್ಕೆ ವಿನಿಯೋಗಿಸಲೂಬಾರದು. ಇಂದು ಪ್ರತಿಯೊಂದು ದೇಶದ್ಲಲಿಯೂ ಪ್ರಾಚೀನ ಕುರುಹುಗಳನ್ನು ಜತನದಿಂದ ಕಾಪಿಡುತ್ತಾರೆ. ಹಾಗೆಯೇ ನಮ್ಮಲ್ಲೂ ಆಗಬೇಕು. ಅಲ್ಲದೆ ಒಂದು ಧರ್ಮದ ಭಾವನೆಗೆ ಸೀಮಿತವಾದ ಈ ವಿಚಾರದಲ್ಲಿ ಸರಕಾರ ಯಾವತ್ತಿಗೂ ತಲೆಹಾಕಬಾರದು ಎನ್ನುವುದು.
ವಾದ-ಪ್ರತಿವಾದ ಏನೇ ಇರಲಿ, ನ್ಯಾಯಾಲಯದ ಆದೇಶದಂತೆ ಇಂದು ದೇವಸ್ಥಾನದ ಕೊಠಡಿ ತೆರೆದಾಗಿದೆ. ಅಗಾಧ ಸಂಪತ್ತು ದೊರಕಿದ್ದೂ ಆಗಿದೆ. ದೇಶ-ವಿದೇಶಗಳಲ್ಲಿ ಇದೇ ವಿಚಾರವಾಗಿ ಚರ್ಚೆಗಳಾಗುತ್ತಿದೆ. ಸಂಪತ್ತಿನಲ್ಲೇ ಇಂದು ದೇವರುಗಳನ್ನು ಯಾರು ಮೇಲು, ಯಾರು ಕೀಳು ಎಂದು ಅಳತೆಗೆ ಹಚ್ಚಲಾಗುತ್ತಿದೆ.
ಇದೆಲ್ಲಾ ಕೆಲವೇ ದಿನ...?
ಜನರ ನೆನಪು ಶಕ್ತಿ ಕಡಿಮೆ ಅನ್ನುತ್ತಾರೆ. ಒಂದು ಸುದ್ದಿಯನ್ನು ಹೆಚ್ಚು ದಿನಗಳ ಕಾಲ ನೆನಪಿಟ್ಟುಕೊಳ್ಳುವ ಶಕ್ತಿ ಅವರಲ್ಲಿಲ್ಲ. ಎಲ್ಲಾ ಸುದ್ದಿಗಳಂತೆ ದೂರದ ಕೇರಳದಿಂದ ಕೇಳಿಬಂದಿರುವ ಈ ಸುದ್ದಿಯೂ ಕ್ರಮೇಣ ಮರೆತೇ ಹೋಗುತ್ತದೆ.
ಕೆಲವೇ ದಿನಗಳ ಹಿಂದೆ ಅಬ್ಬರದಿಂದ ಕೇಳಿಬಂದ ಸಾಯಿಬಾಬಾರ ಆಸ್ತಿ ಕುರಿತ ಲೆಕ್ಕ ಇಂದು ಮರೆತೇಹೋದಂತೆ...
ಆದರೆ ಯಾವುದೇ ಕಾರಣಕ್ಕೂ ಈ ಸಂಪತ್ತಿನಲ್ಲಿ ತೃಣ ಮಾತ್ರದಷ್ಟು ಪೋಲಾಗಬಾರದು. ಕಳ್ಳಕಾಕರ, ಭ್ರಷ್ಟರ ಪಾಲಾಗಬಾರದು. ಇದರ ಪ್ರತಿಯೊಂದು ಕಣವೂ ಸದ್ವಿನಿಯೋಗವಾಗಬೇಕು. ಆಗಷ್ಟೇ ಎಲ್ಲರಿಗೂ ಸಮಾಧಾನ,
ಅನಂತಪದ್ಮನಾಭನಿಗೂ.!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ