ಭಾನುವಾರ, ಫೆಬ್ರವರಿ 22, 2015

ಅವರೇಕೆ ಹಾಗೆ, ಮತ್ತೆ ಇವರೇಕೆ ಹೀಗೆ....

internet image
ಪರೀಕ್ಷೆಯಲ್ಲಿ ಕಡಿಮೆ ಅಂಕ: ವಿದ್ಯಾರ್ಥಿ ನೇಣಿಗೆ ಶರಣು...
ಮನೆಯಲ್ಲಿ ಬೈದರೆಂದು ಬಾವಿಗೆ ಹಾರಿದ ಬಾಲಕ...
ಪ್ರೇಮ ವೈಫಲ್ಯ: ಯುವ ಜೋಡಿ ಆತ್ಮಹತ್ಯೆ...
ಇದು ಇಂದು ನಾವು ದಿನನಿತ್ಯ ಸುದ್ದಿ ಪತ್ರಿಕೆಗಳಲ್ಲಿ ನೋಡುತ್ತಿರುವ ಹೆಡ್ಡಿಂಗ್‌ಗಳು.
ಹದಿಹರೆಯದ ಜೀವವೊಂದು ಆತ್ಮಹತ್ಯೆ ಮಾಡಿಕೊಳ್ಳದ ದಿನವೇ ಇಲ್ಲ ಎಂಬಷ್ಟರಮಟ್ಟಿಗೆ ಈ ಆತಂಕಕಾರಿ ಬೆಳವಣಿಗೆಗೆ ಬಂದು ನಿಂತಿದೆ.
ಯಾಕೆ ಹೀಗೆ? ಇಂದಿನ ಮಕ್ಕಳೇಕೆ ಅಷ್ಟು ದುರ್ಬಲ ಮನಸ್ಸಿನವರು?
ಮೊನ್ನೆ ಹಿರಿಯರೊಬ್ಬರು ಹೇಳುತ್ತಿದ್ದರು, ’ನಮ್ಮ ಕಾಲದಲ್ಲಿ ಹೀಗೆಲ್ಲಾ ಇರಲಿಲ್ಲ... ಆತ್ಮಹತ್ಯೆ ಅನ್ನೋದು ಮಹಾಪಾಪ ಎನ್ನುವ ಮನಸ್ಥಿತಿಯಿತ್ತು. ಅನಾರೋಗ್ಯದಲ್ಲಿ ಮೃತಪಡುತ್ತಿದ್ದರೇ ವಿನಹಾ ನಮ್ಮ ಕಾಲದ ಮಕ್ಕಳಾರೂ ಇಂತಹಾ ಕೆಲಸಕ್ಕೆ ಕೈ ಹಾಕುತ್ತಿರಲಿಲ್ಲ...’
ಹೌದು. ಹಿಂದೆ ಇಂತಹಾ ಪ್ರಕರಣಗಳು ಇಲ್ಲವೇ ಇಲ್ಲ ಎಂಬಷ್ಟರಮಟ್ಟಿಗೆ ಕಡಿಮೆ ಇದ್ದವು. ಅಂದಿನ ಕುಟುಂಬ ವ್ಯವಸ್ಥೆ ಇಂದಿಗಿಂತ ಬಲಿಷ್ಟವಾಗಿತ್ತು. ಅವಿಭಕ್ತ ಕುಟುಂಬಗಳಲ್ಲಿ ಅಜ್ಜ-ಅಜ್ಜಿಯಂತಹಾ ಹಿರಿಯರು ನಿತ್ಯ ಮಕ್ಕಳನ್ನು ಎದುರು ಕೂರಿಸಿಕೊಂಡು ನಮ್ಮ ಆಚರಣೆಗಳು, ಕಟ್ಟುಪಾಡುಗಳು, ಸಂಸ್ಕೃತಿ, ಪುರಾಣಗಳ ಪರಿಚಯ ಮಾಡಿಕೊಡುತ್ತಿದ್ದರು. ಇತಿಹಾಸ, ಪುರಾಣಗಳಲ್ಲಿ ವಿಜೃಂಭಿಸಿದ ಮಹಾನುಭಾವರ ಬದುಕಿನ ಚಿತ್ರಣ ಕಣ್ಣಿಗೆ ಕಟ್ಟಿಕೊಟ್ಟು ಉತ್ತಮ ಭವಿಷ್ಯ ರೂಪಿಸುವತ್ತ ಮಾರ್ಗದರ್ಶನ ನೀಡುತ್ತಿದ್ದರು. ಇದರ ಪರಿಣಾಮವಾಗಿ ಮಕ್ಕಳು ಸಹಜವಾಗಿಯೇ ಆತ್ಮವಿಶ್ವಾಸ ಬೆಳೆಸಿಕೊಳ್ಳುತ್ತಿದ್ದರು. ಎಲ್ಲರೂ ಒಗ್ಗಟ್ಟಿನಿಂದ, ತುಂಬು ಕುಟುಂಬದಲ್ಲಿ ಬಾಳುತ್ತಿದ್ದರಾದ್ದರಿಂದ ಧೈರ್ಯವೂ ಅವರ ಜೊತೆಗೂಡುತ್ತಿತ್ತು. ಹಿರಿಯರ ಮಾರ್ಗದರ್ಶನ, ಅಪ್ಪನ ಶಿಸ್ತು, ಅಮ್ಮನ ಮಮತೆ ಅವರನ್ನು ಇನ್ನಷ್ಟು ಬಲಿಷ್ಟರನ್ನಾಗಿಸುತ್ತಿತ್ತು.
ಆದರಿಂದು ಏನಾಗಿದೆ?
ಬೆಳಗಾಗೆದ್ದರೆ ಸ್ಕೂಲ್‌ಗೆ ಹೊರಡುವ ತರಾತುರಿ, ಸಂಜೆ ಮನೆಗೆ ಬಂದು ಬ್ಯಾಗ್ ಕಳಚಿಟ್ಟರೆ ಮತ್ತೆ ಟ್ಯೂಷನ್ನು ಅದು ಮುಗಿಸಿದರೆ ಹೋಂ ವರ್ಕು, ಬಳಿಕ ಕಂಪ್ಯೂಟರು, ಮಕ್ಕಳು ಇನ್ನಷ್ಟು ಜಾಣರಾಗಲು ಕರಾಟೆ, ಸಂಗೀತ, ನೃತ್ಯ, ಸೋರ್ಟ್ಸು, ಕೋಚಿಂಗು...
ಹಾಗಂತ ಇದು ತಪ್ಪು, ಹೀಗೆ ಮಾಡಬಾರದು ಎನ್ನಲು ಸಾಧ್ಯವಿಲ್ಲ. ಏಕೆಂದರೆ ಇಂದಿರುವುದು ಸ್ಪರ್ಧಾತ್ಮಕ ಜಗತ್ತು. ಇಲ್ಲಿ ಸ್ಪರ್ಧೆ ಇದ್ದರೆ ಮಾತ್ರ ಗೆಲುವು. ಯಾವುದೇ ಮಗುವಿನ ಹೆತ್ತವರು ತಮ್ಮ ಮಗು ಬದುಕಿನಲ್ಲಿ ಸೋಲಲಿ ಎಂದು ಬಯಸಲಾರರು. ಹಾಗಾಗಿ ಈ ಕಸರತ್ತೂ ಅನಿವಾರ್ಯವೇ...
ಇಂದು ನಮ್ಮ ಸುತ್ತ ಜರಗುವ ವಿದ್ಯಮಾನಗಳು ಕೂಡಾ ಮಕ್ಕಳ ಮನಸ್ಸು ದುರ್ಬಲಗೊಳಿಸಲು ಕಾರಣವಾಗುತ್ತಿದೆ. ಜಗತ್ತು ಓಡುತ್ತಿರುವ ವೇಗಕ್ಕೆ ಸಹಜವಾಗಿಯೇ ಕೆಲವು ಮಕ್ಕಳಿಗೆ ಹೊಂದಿಕೊಳ್ಳುವುದು ಕಷ್ಟವಾಗುತ್ತದೆ. ಅಂತವರನ್ನು ಪಕ್ಕನೆ ಗುರುತಿಸುವುದೂ ಸಾಧ್ಯವಿಲ್ಲ. ಕೇವಲ ಇಂತಹಾ ಘಟನೆಗಳಿಂದಷ್ಟೇ ಗೊತ್ತಾಗುತ್ತದೆ. ಆದರೆ ಅಷ್ಟರಲ್ಲಾಗಲೇ ಕಾಲ ಮಿಂಚಿರುತ್ತದೆ.
ಮಕ್ಕಳಿಗೆ ಮುಖ್ಯವಾಗಿ ಪ್ರೀತಿಯ ಅವಶ್ಯಕತೆಯಿರುತ್ತದೆ. ಮಾರ್ಗದರ್ಶನ ಬೇಕಿರುತ್ತದೆ. ಅದಕ್ಕಿಂತಲೂ ಮುಖ್ಯವಾಗಿ ಬಾಲ್ಯವನ್ನು ಮುಕ್ತವಾಗಿ ಅನುಭವಿಸುವ ಸ್ವಾತಂತ್ರ್ಯ ಬೇಕಿರುತ್ತದೆ.
ಮೆಟ್ಟಿಲನ್ನು ನಿಧಾನವಾಗಿ ಏರಲು ಯತ್ನಿಸುವ ಮಗುವಿಗೆ, ಇನ್ನೊಂದು ಸ್ಟೆಪ್ ಹತ್ತು ಮಗು ನಾನಿದ್ದೀನಿ ಅನ್ನೋ ತಂದೆಯ ಧೈರ್ಯದ ಮಾತು, ಜೋಪಾನ ಕಣೋ ಹುಷಾರು ಎನ್ನುವ ತಾಯಿಯ ಕಾಳಜಿ, ವೆರಿಗುಡ್... ವೆರಿಗುಡ್... ಎನ್ನುವ ತಾತನ ಪ್ರೋತ್ಸಾಹ ಹೇಗೆ ಸರಸರನೆ ತುದಿ ತಲುಪಲು ಹುಮ್ಮಸ್ಸು ನೀಡುತ್ತದೋ ಹಾಗೆಯೇ ಇಂದಿನ ಮಕ್ಕಳಿಗೆ ಎಲ್ಲಿ ಏನು ಕೊರತೆಯಾಗಿದೆ ಎಂಬ ಬಗ್ಗೆ ಪೋಷಕರು ಚಿಂತಿಸಿ, ಗುರುತಿಸಿ ಅವರಲ್ಲಿ ಧೈರ್ಯ, ಹುರುಪು ತುಂಬಿದರೆ ಖಂಡಿತವಾಗಿಯೂ ಇಂತಹಾ ಕೃತ್ಯಗಳು ಮರುಕಳಿಸದಂತೆ ತಡೆಯಬಹುದು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ